ಮೃದುವಚನಕಿಂತಧಿಕ ಜಪತಪಗಳುಂಟೇನು ?
ಮೃದುವಚನ ಗೆಲ್ಲುವುದು ಲೋಕವನ್ನೆ
ಮತ್ತೆ ನಡೆನುಡಿಯಲ್ಲಿ ಸದುವಿನಯ ಸೇರಿದರೆ
ಮಹದೇವ ಮೆಚ್ಚುವನು – ಎಮ್ಮೆತಮ್ಮ
ಶಬ್ಧಾರ್ಥ
ಮೃದುವಚನ = ಮಧುರವಾದ ಮಾತು.
ಜಪ = ಮಂತ್ರೋಚ್ಚಾರ. ತಪ – ತಪಸ್ಸು
ತಾತ್ಪರ್ಯ
ಮಧುರವಾಗಿ ಮಾತನಾಡುವುದರಿಂದ ಎಲ್ಲ ಜನರಿಗೆ
ಸಂತೋಷವಾಗುತ್ತದೆ. ಸಂತೋಷಪಡಿಸುವುದೆ ನಿಜವಾದ ಜಪ,ತಪ ಮತ್ತು ದೇವಪೂಜೆ. ಪ್ರಿಯವಾಕ್ಯ ಪ್ರದಾನೇನ
ಸರ್ವ ತುಷ್ಯಂತಿ ಜೀವಿನಃ | ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ | ಎಂದು ಸುಭಾಷಿತ ಹೇಳುತ್ತದೆ. ಅಂದರೆ ಪ್ರಿಯವಾದ ಮಾತಾಡುವುದರಿಂದ ಎಲ್ಲ ಜೀವಿಗಳಿಗೆ
ಸಂತಸವಾಗುತ್ತದೆ.ಆದಕಾರಣ ಪ್ರಿಯವಾದ ಮಾತನ್ನೆ
ಮಾತನಾಡು. ಮಾತಿಗೇತಕೆ ಬಡತನ ? ಮತ್ತೆ ಮಾತಿನಲ್ಲಿ
ನಯವಿನಯ ತುಂಬಿದ್ದರೆ ದೇವರು ಮೆಚ್ಚುತ್ತಾನೆ. ಸದುವಿನಯವೆ ಸದಾಶಿವನೊಲುಮೆಯಯ್ಯ ಎಂದು
ಬಸವಣ್ಣನವರು ಹೇಳುತ್ತಾರೆ. ಮಾತಿನಲ್ಲಿ ಕಠಿಣತೆ ಠೇಂಕಾರ
ತುಂಬಿರಬಾರದು. ಕೆಟ್ಟ ಮಾತುಗಳಾಡುವುದು ಕೂಡ
ಮಾತಿನಿಂದ ಮಾಡುವ ಹಿಂಸೆ. ಅದರಿಂದ ನಮಗೆ ಕರ್ಮ
ಅಂಟುತ್ತದೆ. ಮಾತು ಮೃದುವಾಗಿದ್ದರೆ ಮುತ್ತು ಅದು
ಕಠೋರವಾಗಿದ್ದರೆ ಮೃತ್ಯು. ಅದಕೆ ಚೆನ್ನವೀರ ಕಣವಿ
ಹೀಗೆ ಹೇಳುತ್ತಾರೆ.”ನಾವು ಆಡುವ ಮಾತು ಹೀಗಿರಲಿ ಗೆಳೆಯ, ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ, ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ, ಮೂರು ಘಳಿಗೆಯ ಬಾಳು ಮಗಮಗಿಸುತಿರಲಿ!”
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990