ಸಿರಿವಂತ ಶೀನಪ್ಪ ಹರಿದಾಸ ತಾನಾದ
ಹೆಂಡತಿಯ ಮೂಗುತಿಯ ಮಹಿಮೆಯಿಂದ
ಇಂಥ ಸತಿಯರ ಸಂಖ್ಯೆ ಬೆಳೆಯಲೆಂದಾಸಿಸಿದ
ಸತಿಗಿಂತ ಗುರುವುಂಟೆ ? – ಎಮ್ಮೆತಮ್ಮ
ತಾತ್ಪರ್ಯ
ವರದಪ್ಪ ನಾಯಕ ಮತ್ತು ರುಕ್ಮಿಣಿಯರ ಗರ್ಭದಲ್ಲಿ ಆಗರ್ಭ
ಶ್ರೀಮಂತನಾಗಿ ತಿರುಪತಿ ತಿಮ್ಮಪ್ಪನ ವರದಿಂದ ಶ್ರೀನಿವಾಸ ಜನಿಸಿದನು. ತಂದೆಯಂತೆ ಲೇವಾದೇವಿ ಮಾಡುತ್ತ ಬಹಳ ಜಿಪುಣನಾಗಿದ್ದ. ಪುರಂದರಗಢದಲ್ಲಿದ್ದು ವ್ಯಾಪಾರ ಮಾಡುವ
ಸಂದರ್ಭದಲ್ಲಿ ಕೃಷ್ಣ ಒಬ್ಬ ಬ್ರಾಹ್ಮಣನ ವೇಷದಲ್ಲಿ ಬಂದು
ಮಗನ ಉಪನಯನಕ್ಕಾಗಿ ಆತನ ಸತಿ ಸರಸ್ವತಿಯಲ್ಲಿ
ಸಹಾಯ ಕೇಳುತ್ತಾನೆ. ಆಗ ಆಕೆ ತನ್ನ ತವರವರು ಕೊಟ್ಟಿದ್ದ
ಮೂಗುತಿಯನ್ನು ಕೊಡುತ್ತಾಳೆ. ಅದನ್ನು ಆ ಬ್ರಾಹ್ಮಣ
ಶ್ರೀನಿವಾಸನಲ್ಲಿ ಒತ್ತಿ ಇಟ್ಟು ಹಣ ಕೇಳುತ್ತಾನೆ.ಆ ಮೂಗುತಿ
ಗುರ್ತಿಸಿ ಅದನ್ನು ಡಬ್ಬಿಯಲ್ಲಿಟ್ಟು ಮನೆಗೆ ಬಂದು ಸತಿಗೆ
ಕೇಳುತ್ತಾನೆ. ಆಗ ಆಕೆ ಸ್ನಾನಮಾಡುವಾಗ ಬಿಚ್ಚಿಟ್ಟಿರುವೆನೆಂದು ಬಚ್ಚಲಿನಲ್ಲಿ ಹೆದರಿ ವಿಷಕುಡಿಯಲು ಹೊರಡುತ್ತಾಳೆ. ವಿಷದ ಬಟ್ಟಲಿನಲ್ಲಿ ಮೂಗುತಿ ಬಂದು ಬೀಳುತ್ತದೆ. ಅದನ್ನು ತಂದು ಗಂಡನಿಗೆ ಕೊಡುತ್ತಾಳೆ. ತನ್ನ ಅಂಗಡಿಗೆ ಹೋಗಿ ಡಬ್ಬಿ ತೆಗೆದು ನೋಡಿದರೆ ಮಾಯವಾಗಿರುತ್ತದೆ. ನಿಜವಾಗಿ ಇದು
ದೇವರ ಲೀಲೆ ಎಂದು ತಿಳಿದು ವೈರಾಗ್ಯ ತಾಳಿ ಪುರಂದರದಾಸ
ಎಂದು ಬದಲಾಗಿ ಈ ಕೆಳಗಿನ ಹಾಡು ಹಾಡುತ್ತಾನೆ.
“ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು; ದಂಡಿಗೆ ಬೆತ್ತ ಹಿಡಿಯೊದಕ್ಕೆ ಮಂಡೆ ಮಾಚಿ ನಾಚುತಲಿದ್ದೆ, ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯ!” ಹೆಂಡತಿಯೆ ಗುರುವಾಗಿ ಆತನ ಕಣ್ಣು ತೆರೆಸಿದ ಕಾರಣ ಇಂಥ ಸತಿಯರ ಸಂತತಿ ಹೆಚ್ಚಲೆಂದು ಪುರಂದರದಾಸರು ಬಯಸಿದ್ದಾರೆ. ಸತಿಯೆ ನಿಜವಾದ ಗುರು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990