ಕೊಡದಿದ್ದರೇನೊಂದು ಮನೆಯಿಂದ ಕೈಯಿಂದ
ನಿಂದಕರಿಗಾನಂದವುಂಟಾದರೆ
ನಷ್ಟವೊಂದಿಷ್ಟಿಲ್ಲ ಲಾಭವುಂಟದರಿಂದ
ನಿಂದಿಸಲಿಬಿಡು ನಿನ್ನ – ಎಮ್ಮೆತಮ್ಮ
ಶಬ್ಧಾರ್ಥ
ನಿಂದಕ = ತೆಗಳುವವ, ಬೈಯ್ಯುವವ
ತಾತ್ಪರ್ಯ
ನಮ್ಮನ್ನು ಬೈಯ್ಯುವವರಿಗೆ ಧನ್ಯವಾದ ಹೇಳಬೇಕು. ಏಕೆಂದರೆ ನಮ್ಮ ಗುಣದೋಷಗಳ ತೋರಿ ಅವುಗಳನ್ನು ತಿದ್ದಿಕೊಳ್ಳಲಿಕ್ಕೆ ಆಸ್ಪದಮಾಡಿಕೊಡುತ್ತಾರೆ. ನಮ್ಮ ಬೆನ್ನು ಕಾಣುವುದಿಲ್ಲ. ನಮ್ಮ ದೋಷಗಳು ನಮ್ಮ ಅರಿವಿಗೆ ಬರುವುದಿಲ್ಲ. ಅವುಗಳನ್ನ ಬೈಯ್ಗಳ ಮುಖಾಂತರ ಹೇಳಿ ನಮಗೆ ಉಪಕಾರ ಮಾಡುತ್ತಾರೆ. ನಾವು ಮನೆಯಿಂದಾಗಲಿ ಕೈಯ್ಯಿಂದಾಗಲಿ ಏನನ್ನು ಕೊಡದಿದ್ದರು ಅವರಿಗೆ ನಮ್ಮನ್ನು ಬೈಯ್ಯುವುದರಿಂದ ಸಂತೋಷವುಂಟಾಗುತ್ತದೆ ಎಂದರೆ ಬೈಯ್ಯಲಿ ಬಿಡು. ಕಲ್ಯಾಣದಲ್ಲಿ ರೊಕ್ಕ ಕೊಟ್ಟು ಬೈಯ್ಯಿಸಿ ಕೊಳ್ಳುತ್ತಾರಂತೆ ಎಂಬುವ ನಾಣ್ನುಡಿ ಇದೆ. ಆದರೆ ಅವರು ಉಚಿತವಾಗಿ ಬೈಯ್ಯುತ್ತಾರೆ. ಅದರಿಂದ ನಮಗೆ ಲಾಭವೇ ಹೊರತು ನಷ್ಟವಿಲ್ಲ. ಬೈಯ್ದು ಹೇಳಿದವರು ಒಳ್ಳೆಯದಕ್ಕೆ ಹೇಳಿದರು ಎಂದು ಭಾವಿಸಬೇಕು. ಅದಕ್ಕಾಗಿ ಪುರಂದರದಾಸರು ಒಂದು ಹಾಡು ಹೀಗೆ ಹೇಳಿದ್ದಾರೆ.”ನಿಂದಕರಿರಬೇಕು ಇರಬೇಕು ನಿಂದಕರಿರಬೇಕು ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ ಅಂದಂದು ಮಾಡಿದ ಪಾಪದ ಮಾಮಲ ತಿಂದು ಹೋಗುವರಯ್ಯ ನಿಂದಕರು.” ನಿಂದಕರು ನಾವು ಮಾಡಿದ ಪಾಪಕರ್ಮಗಳನ್ನು ತೆಗೆದುಕೊಂಡು ಹೋಗುತ್ತಾರೆ.ಅವರು ಬೈಯ್ದ ನುಡಿ ನಿಜವಿದ್ದರೆ ತಿದ್ದಿಕೊಳ್ಳಬೇಕು.ಇಲ್ಲದಿದ್ದರೆ ಕೋಪಿಸಿಕೊಳ್ಳದೆ ನಕ್ಕುಬಿಡಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990