ಶಿವಶಕ್ತಿ ಹರಿಲಕ್ಷ್ಮಿ ವಿಧಿವಾಣಿ ವಿಘ್ನೇಶ
ಜಿನಬುದ್ಧ ಪೈಗಂಬರೇಸುಯೆಂದು
ನೂರಾರು ಹೆಸರಿಂದ ಪೂಜೆಗೊಳ್ಳುವುದೊಂದೆ
ದೈವಕ್ಕೆ ಶಿರಬಾಗು – ಎಮ್ಮೆತಮ್ಮ
ಶಬ್ಧಾರ್ಥ
ಶಕ್ತಿ = ಪಾರ್ವತಿ. ಹರಿ = ವಿಷ್ಣು,ಕೃಷ್ಣ . ವಿಧಿ = ಬ್ರಹ್ಮ
ವಾಣಿ = ಸರಸ್ವತಿ
ತಾತ್ಪರ್ಯ
ಶಿವ,ಪಾರ್ವತಿ,ವಿಷ್ಣು,ಲಕ್ಷ್ಮಿ, ಬ್ರಹ್ಮ,ಸರಸ್ವತಿ, ಗಣಪತಿ, ಜಿನ, ಬುದ್ಧ, ಪೈಗಂಬರ್,ಏಸುಕ್ರಿಸ್ತ,ಅಲ್ಲಾ, ಖುದಾ, ಗಾಡ್, ದೇವ,
ಯಹೋವ, ಹೀಗೆ ನೂರಾರು ಹೆಸರಿಂದ ಕರೆಸಿಕೊಳ್ಳವ ದೇವರು ಒಬ್ಬನೆ. ಋಗ್ವೇದದಲ್ಲಿ ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ ಎಂಬ ಮಂತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಂದರೆ ಸತ್ಯವೊಂದೆ ಇದೆ. ಅದನ್ನು ಜ್ಞಾನಿಗಳು ಹಲವಾರು ಹೆಸರಿಂದ ಕರೆಯುತ್ತಾರೆ. ಅದನ್ನೇ ಬಸವಣ್ಣನವರು ‘ದೇವನೊಬ್ಬ ನಾಮ ಹಲವು’ ಅಂತ ಕನ್ನಡಿಸಿದ್ದಾರೆ. ಅಲ್ಲಾ ತುಮ್‌ಹೋ, ಈಶ್ವರ್ ತುಮ್‌ಹೋ, ತುಮ್ ಹೀ ಹೋ ರಾಮರಹೀಂ ಎಂಬ ಹಾಡು ಇದೆ.ಗಾಂಧೀಜಿ ಕೂಡ ಈಶ್ವರ ಅಲ್ಲಾ ತೇರೆ ನಾಮ ಸಬ್ ಕೋ ಸನ್ಮತಿ ದೇ ಭಗವಾನ್ ಎಂದು ಹಾಡಿದ್ದಾರೆ.
ಒಬ್ಬ ಮನುಷ್ಯ ಹೆಂಡತಿಗೆ ಗಂಡ, ತಾಯಿಗೆ ಮಗ, ಅಣ್ಣನಿಗೆ ತಮ್ಮ ,ತಂಗಿಗೆ ಅಣ್ಣ, ಮಗನಿಗೆ ತಂದೆ, ಮೊಮ್ಮಕ್ಕಳಿಗೆ ತಾತ, ಸೊಸೆಗೆ ಮಾವ, ಆಳಿಗೆ ಯಜಮಾನ ಹೀಗೆ ಹಲವಾರು ಸಂಬಂಧ ಸೂಚಕ ಶಬ್ಧಗಳಿಂದ ಕರೆಸಿಕೊಳ್ಳುವಂತೆ ಒಬ್ಬ ದೇವರು ಸಹ ಹಲವಾರು ದೇಶ, ಭಾಷೆ, ಧರ್ಮದ ಜನಗಳಿಂದ ಕರೆಸಿಕೊಳ್ಳವನು. ಹಾಗಿರುವ ಒಬ್ಬ ದೇವನಿಗೆ ಯಾವ ಹೆಸರಿರಲಿ ಆತನಿಗೆ ಮೊದಲು ಶರಣಾಗಬೇಕು. ಅವನಿಗೆ ಎಲ್ಲವನ್ನು ಕೊಟ್ಟಿದ್ದಕ್ಕೆ ಧನ್ಯವಾದ ಹೇಳಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990