ಬೀಳದೇಳದೆ ಕೂಸು ನಡಿಗೆ ಕಲಿಯುವುದೇನು ?
ಇಕ್ಕುವುದು ಮೊದಮೊದಲು ತಪ್ಪುಹೆಜ್ಜೆ
ಹಿಡಿದ ಗುರಿಯನು ಬಿಡದೆ ಸಾಧಿಸುವ ಛಲಬೇಕು
ಸೋಲು ಗೆಲುವಿನ ಮೂಲ – ಎಮ್ಮೆತಮ್ಮ
ಶಬ್ಧಾರ್ಥ
ಕೂಸು – ಮಗು
ತಾತ್ಪರ್ಯ
ಪುಟ್ಟ ಮಗು ಮೊದಲು ಅಂಬೆಗಾಲಿಟ್ಟು ನಡೆಯುತ್ತ ನಿಧಾನವಾಗಿ ಎರಡು ಕಾಲುಗಳ ಮೇಲೆ ಎದ್ದುನಿಲ್ಲುತ್ತದೆ.
ನಂತರ ಜೋಲಿಹೊಡೆಯುತ್ತ ತಪ್ಪು ಹೆಜ್ಜೆ ಹಾಕುತ್ತ ನಡೆಯುತ್ತದೆ. ಒಮ್ಮೆ ನಿಂತು ಬೀಳುತ್ತದೆ ಮತ್ತೊಮ್ಮೆ ಬಿದ್ದು ಮೇಲೇಳುತ್ತದೆ. ಬಿದ್ದು ಎದ್ದು ಕೊನೆಗೆ ಚೆನ್ನಾಗಿ ನಡೆಯುದನ್ನು ಕಲಿಯುತ್ತದೆ. ಹಾಗೆ ನಾವು ಯಾವುದೆ ಗುರಿಯನ್ನು ತಲುಪಲು ಪ್ರಯತ್ನಿಸಿ ಒಮ್ಮೆ ಸೋತುಹೋಗುತ್ತೇವೆ. ಮತ್ತೊಮ್ಮೆ ಗುರಿಯ ಕಡೆಗೆ ಚಲಿಸುತ್ತೇವೆ. ಹೀಗೆ ಸೋಲು ಗೆಲುವುಗಳಿಂದ ಪಾಠಕಲಿಯುತ್ತ ಸ್ಪಷ್ಟವಾದ ಗುರಿ ತಲುಪಬೇಕು. ಸೋಲುವುದು ಗೆಲುವಿಗೆ ಸೋಪಾನವಿದ್ದಂತೆ.
ಒಂದು ಕಥೆ ನೆನಪಾಗುತ್ತದೆ. ಒಬ್ಬ ರಾಜ ಯುದ್ದದಲ್ಲಿ ಸೋತು ಬಂದು ಒಂದು ಗುಹೆಯಲ್ಲಿ ಅಡಗಿಕೂಡುತ್ತಾನೆ. ಆಗ ಒಂದು ಜೇಡರಹುಳು ಬಲೆ ನೇಯಲು ಏಳು ಸಲ ಕೆಳಗೆ ಬಿದ್ದು ಎಂಟನೆಯ ಸಲ ಬಲೆಯನ್ನು ಸ್ಥಿರವಾಗಿ ಕಟ್ಟುತ್ತದೆ. ಅದರಿಂದ ಸ್ಫೂರ್ತಿಪಡೆದ ರಾಜ ಯುದ್ಧ ಮಾಡಿ ಜಯಿಸುತ್ತಾನೆ. ಸೋಲದೆ ಯಾವ ಕೆಲಸವು ಒಮ್ಮಿಂದೊಮ್ಮಗೆ ಯಶಸ್ವಿಯಾಗುವುದಿಲ್ಲ.ಪಟ್ಟುಬಿಡದೆ ಗುರಿಯ ಸಾಧಿಸುವ ಛಲವಿದ್ದರೆ ಗುರಿ ತಲುಪಿಯೇ ತಲುಪುತ್ತೇವೆ.ಸೋಲದವನು ಮೇಲಾಗಲಾರ ಎಂದು ಹೇಳಬಹುದು. ನಮ್ಮ ಗೆಲುವಿನ ಬುನಾದಿ ಸೋಲು. ಅಲ್ಲಿಂದ ಕಟ್ಟಡ ಪ್ರಾರಂಭವಾಗುವುದು.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ