ಜೇಡಬಲೆ ಕಟ್ಟುತಿದೆ ಕಸತುಂಬಿ ತುಳುಕುತಿದೆ
ಇಲಿಗಳೋಡಾಡುತಿವೆ ತೂತುಕೊರೆದು
ಇರುವೆಗಳು ಹರಿದಾಡಿ ಮಾಳಿಗೆಯು ಸೋರುತಿದೆ
ಮನೆಯೊಡೆಯನಲ್ಲಿಲ್ಲ – ಎಮ್ಮೆತಮ್ಮ
ಶಬ್ಧಾರ್ಥ
ಮನೆಯೊಡೆಯ = ಮನೆಯ ಮಾಲಕ
ತಾತ್ಪರ್ಯ
ಮನೆ ಮಾಡದೆ ಹೋಯ್ತು ಹೊಲ ನೋಡದೆ ಹೋಯ್ತು
ಎಂಬ ಒಂದು ಗಾದೆ ಮಾತಿದೆ. ಮನೆಯೊಳಗೆ ಒಡೆಯನಿದ್ದು ಮನೆಯನ್ನು ಸದಾ ಶುಚಿಯಾಗಿ ಇಟ್ಟುಕೊಳ್ಳದಿದ್ದರೆ ಪಾಳುಬಿದ್ದು ಹೋಗುತ್ತದೆ. ಆ ಮನೆಯಲ್ಲಿ ಜೇಡರ ಹುಳುಗಳು ಬಲೆ ಕಟ್ಟುತ್ತವೆ. ದಿನ ನಿತ್ಯ ಕಸತುಂಬಿ
ತುಳುಕಾಡುತ್ತದೆ. ಇಲಿಹೆಗ್ಗಣಗಳು ಗೋಡೆ ನೆಲದಲ್ಲಿ ಬಿಲ
ಕೊರೆದು ಮಣ್ಣನ್ನು ಚೆಲ್ಲಾಪಿಲ್ಲಿ ಹರಡುತ್ತವೆ. ಇನ್ನು ಮಾಳಿಗೆ
ತುಂಬೆಲ್ಲ ಇರುವೆಗಳು ಹರಿದಾಡಿ ತೂತುಕೊರೆಯುತ್ತವೆ.
ಮಳೆ ಬಂತೆಂದರೆ ಆ ತೂತಿನ ಮುಖಾಂತರ ನೀರು ಜಂತೆಯಿಂದ ಸೋರತೊಡಗುತ್ತದೆ. ಇಲ್ಲಿ ಮನೆಯೆಂದರೆ
ಈ ದೇಹದ ಸಂಕೇತವಾಗಿ ಬಳಸಲಾಗಿದೆ. ಈ ದೇಹದ
ಮನೆಯಲ್ಲಿ ಮನವೆಂಬ ಮಾಲಕ ಜಾಗ್ರತವಾಗಿರದಿದ್ದರೆ
ಅನೇಕ ಮಾಯೆಮೋಹದ ಜೇಡರ ಬಲೆ ಕಟ್ಟುತ್ತವೆ.ಅಜ್ಞಾನ
ಎಂಬ ಕಸ ತುಂಬಿಕೊಳ್ಳುತ್ತದೆ. ಇನ್ನು ಇಂದ್ರಿಯಗಳೆಂಬ
ಇಲಿ ಹೆಗ್ಗಣ ಓಡಾಡುತ್ತ ಮನೆಯನ್ನು ಹಾಳುಗೆಡುವುತ್ತವೆ.
ಹಾಗೆ ತಲೆಯಲ್ಲಿ ಚಿಂತೆಯೋಚನೆಗಳೆಂಬ ಇರುವೆಗಳು
ದೇಹಮನೆಯನ್ನು ಕೊರೆದು ಶಕ್ತಿ ಸೋರಿಹೋಗುವಂತೆ
ಮಾಡುತ್ತವೆ. ಇದಕ್ಕೆಲ್ಲ ಕಾರಣ ಮನವೆಂಬ ಮಾಲಕ
ಜಾಗ್ರತವಾಗಿಲ್ಲ. ಅದನ್ನೆ ಬಸವಣ್ಣನವರು ಮನೆಯೊಳಗೆ
ಮನೆಯೊಡೆಯನಿದ್ದಾನೊ ಇಲ್ಲವೋ ಎಂದು ಪ್ರಶ್ನಿಸುತ್ತಾನೆ.
ರಚನೆ ಮತ್ತು ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990