ಮನೆಯೊಳಗೆ ಕಸಬಳಿದು ನೀರಿಂದ ನೆಲದೊಳೆದು
ಅಂಗಳದಿ ರಂಗವಲ್ಲಿಯನು ಹಾಕಿ
ಬಾಗಿಲನು ತೆರೆದಿಟ್ಟು ಸಂಭ್ರಮದಿ ಸ್ವಾಗತಿಸು
ಒಳಬರುವನಾಗತಿಥಿ – ಎಮ್ಮೆತಮ್ಮ
ತಾತ್ಪರ್ಯ
ಮನೆಯ ಒಳಗೆಹೊರಗೆ ಕಸಗೂಡಿಸಿ ಸ್ವಚ್ಛವಾಗಿಡಬೇಕು.
ಮತ್ತೆ ನೀರಿನಿಂದ ಮನೆಯಲ್ಲಿಯ ನೆಲದ ಬಂಡೆಗಳನ್ನು
ಬಟ್ಟೆಯಿಂದ ಚೆನ್ನಾಗಿ ಒರೆಸಿ ಥಳಥಳ ಹೊಳೆಯುವಂತೆ
ಮಾಡಬೇಕು. ಹಾಗೆ ಮನೆಯ ಮುಂದಿನ ಅಂಗಳಕ್ಕೆ ನೀರು
ಚಿಮುಕಿಸಿ ಚಳೆಕೊಡಬೇಕು. ಮತ್ತೆ ಅಂಗಳದಲ್ಲಿ ರಂಗೋಲಿ
ಬರೆದು ಸಿಂಗರಿಸಬೇಕು. ಬಾಗಿಲಿನ ಹೊಸತಿಲು ತೊಳೆದು
ಅರಿಷಿಣ ಕುಂಕುಮ ಹಚ್ಚಬೇಕು. ಮತ್ತೆ ಸುವಾಸನೆಭರಿತ ಊದುಬತ್ತಿಯನ್ನು ಹಚ್ಚಿ ಬಾಗಿಲಿಗೆ ಇಡಬೇಕು.ಬಾಗಿಲಿನ ಕದ ತೆಗೆದು ಇಡಬೇಕು. ಆಗ ರವಿಯ ಹೊಂಬೆಳಕು ಮತ್ತು ತಂಗಾಳಿ ಮನೆಯಲ್ಲಿ ಪ್ರವೇಶಿಸಿ ಆಹ್ಲಾದವನ್ನು ಉಂಟುಮಾಡುತ್ತದೆ.
ಆಗ ಅತಿಥಿಗಳು ಬಂದರೆ ಸಂತೋಷದಿಂದ ಮನೆಯೊಳಗೆ
ಕರೆದು ಕೂಡಿಸಬೇಕು. ಹಾಗೆ ದೇಹ ಕೂಡ ಒಂದು ಮನೆಯಿದ್ದಂತೆ. ಬಹಿರಂಗ ಮತ್ತು ಅಂತರಂಗದಲ್ಲಿಯ ದುರ್ಗುಣ ಕಸವನ್ನು ಗೂಡಿಸಬೇಕು. ಬಹಿರಂಗದಲ್ಲಿ ದೇಹವನ್ನು ನೀರಿನಿಂದ ಸ್ನಾನಮಾಡಿಸಬೇಕು.
ಅಂತರಂಗದಲ್ಲಿ ಮನಸನ್ನು ಶುದ್ಧವಾಗಿಡಬೇಕು. ಒಳ್ಳೆಯ
ಪರಿಶುದ್ಧ ಬಟ್ಟೆಗಳನ್ನು ತೊಡಿಸಬೇಕು. ಮುಖಮೈಕೈಗೆ
ಭಸ್ಮ ಗಂಧ ಕುಂಕುಮ ಲೇಪಿಸಿ ಅಲಂಕರಿಸಬೇಕು. ಆಗ
ಅತಿಥಿಯಂತೆ ದೇವ ದೇಹದಲ್ಲಿ ಬಂದು ಸೇರುತ್ತಾನೆ.
ಅವನನ್ನು ಸಂಭ್ರಮದಿಂದ ಆದರಿಸಿ ಸ್ವಾಗತಿಸಬೇಕು
ಏಕೆಂದರೆ ಅತಿಥಿ ದೇವೋಭವ ಎಂಬ ವೇದೋಕ್ತಿ ಮತ್ತು Cleanliness is next to Godliness(ಸ್ವಚ್ಛತೆಯೆ ಮುಂದಿನ ದೈವಭಕ್ತಿ) ಎಂಬ ಆಂಗ್ಲೋಕ್ತಿ ಇದನ್ನೆ ಹೇಳುತ್ತಿದೆ.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990