ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

0
140

 

ಸಕಲರಿಗೆ ಸಮನಾಗಿ ಬೆಳಕು ನೀಡುವ ಸೂರ್ಯ
ಎಲ್ಲರನು ಸಲಹುವಳು ಭೂಮಿತಾಯಿ
ಅಖಿಲರಿಗೆ ಸಮನಾಗಿ ಸೂಸುತಿವೆ ಮಳೆಗಾಳಿ
ಸಮಭಾವ ನಿನಗಿರಲಿ – ಎಮ್ಮೆತಮ್ಮ

ಶಬ್ಧಾರ್ಥ
ಅಖಿಲ‌ = ಸಕಲ, ಎಲ್ಲ

ಜಗವ ಬೆಳಗುವ ಸೂರ್ಯನು ಇವರು ಕೆಟ್ಟವರು ಇವರು ಒಳ್ಳೆಯವರು ಎಂದು ವಿಚಾರ ಮಾಡಿ ಬೆಳಕು ಕೊಡುವುದಿಲ್ಲ. ಎಲ್ಲರಿಗೆ ಸೂರ್ಯಸಮಾನವಾಗಿ ಬೆಳಕು ನೀಡುತ್ತಾನೆ. ಹಾಗೆ ಭೂಮಿ ಯಾರಲ್ಲಿ‌ ಭೇದವೆಣಿಸದೆ ಎಲ್ಲರಿಗೂ ಅನ್ನ‌ನೀರನ್ನು ಕೊಟ್ಟು ಪೋಷಣೆಮಾಡುತ್ತಾಳೆ. ಎಲ್ಲಾ ಕಡೆಗೆ ಮೋಡ ಮಳೆ ಸುರಿಸುತ್ತದೆ. ಎಲ್ಲರಿಗೆ ಉಸಿರಾಡಕ್ಕೆ ಪ್ರಾಣವಾಯುವನ್ನು ಗಾಳಿ ಕೊಡುತ್ತದೆ. ಹೀಗೆ ಸೂರ್ಯ ಭೂಮಿ ಗಾಳಿ‌ ಮಳೆ ಮುಖ ನೋಡಿ ಮಣೆ ಹಾಕದೆ ಎಲ್ಲರಿಗೆ ಸಮನಾಗಿ ಬೆಳಕು, ಆಹಾರ , ಉಸಿರು‌‌ ಮತ್ತು ನೀರನ್ನು ಕೊಡುತ್ತವೆ. ಅವು ಯಾವ ವರ್ಗವರ್ಣ, ಪಂಥಪಂಗಡ, ಕುಲಜಾತಿ, ಮತಧರ್ಮ, ಬಡವಬಲ್ಲಿದ ಎನ್ನದೆ ಎಲ್ಲ‌ ಜೀವರಾಶಿಗಳನ್ನು ಸಲಹುತ್ತವೆ. ಹೀಗಿರುವಾಗ ನೀನು ತರತಮ‌ಭಾವನೆಯನ್ನು ಮಾಡದೆ ಎಲ್ಲರನ್ನು‌ ಸಮಭಾವದಿಂದ‌ ನೋಡುವ ವಿಶಾಲ‌ ಗುಣ ನಿನ್ನಲ್ಲಿ ಬರಲಿ. ಅವರಿವರನ್ನು ಕೀಳಾಗಿ ಕಾಣದೆ ಅವರು ನಮ್ಮಂತೆ
ಮಾನವರು ಎಂದು‌ ಮಾನವೀಯತೆಯಿಂದ ಗೌರವಿಸಬೇಕು.
ಇದನ್ನೆ‌ ಬಸವಣ್ಣನವರು‌ ಇವನಾರವ ಇವನಾರವ ಎಂದೆನಿಸದಿರಯ್ಯ‌.ಇವ‌ ನಮ್ಮವ ಇವ‌ ನಮ್ಮವ ಎಂದೆನಿಸಯ್ಯ ಎಂದು ಹೇಳಿದ್ದಾರೆ. ವಿಶ್ವಮಾನವ ಪ್ಪಜ್ಞೆಯಿಂದ‌ ಬಾಳಿದರೆ ಜಗತ್ತಿನಲ್ಲಿ‌ ಜಗಳ, ಯುದ್ಧಗಳು ನಿಂತುಹೋಗಿ‌ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ. ವಿಶ್ವಧರ್ಮದ ಮುಖ್ಯ ಉದ್ಧೇಶ ಶಾಂತಿ ಸಂದೇಶವನ್ನು‌ ಸಾರುವುದು. ವಿಶ್ವಧರ್ಮದಿಂದ ವಿಶ್ವಕ್ಕೆ ಶಾಂತಿ.

ರಚನೆ ಮತ್ತ ವಿವರಣೆ
ಎನ್ .ಶರಣಪ್ಪ‌ ಮೆಟ್ರಿ
ಮೊ: 9449030990