ಕದಿಯದಿರು ಕಿನಿಯದಿರು ಹಳಿಯದಿರು ಹುಸಿಯದಿರು
ಕರುಬದಿರು ಪರರೇಳ್ಗೆಯನ್ನು ಕಂಡು
ಕೊಲ್ಲದಿರು ಜೀವಿಗಳ ಕೊಳ್ಳದಿರು ಸುರೆಮಾಂಸ
ಸದ್ಧರ್ಮ ಸೂತ್ರವಿದು – ಎಮ್ಮೆತಮ್ಮ
ಶಬ್ಧಾರ್ಥ
ಕಿನಿ = ಕೋಪಿಸು, ಮುನಿ. ಹಳಿ = ದೂಷಿಸು, ನಿಂದಿಸು
ಹುಸಿ = ಸುಳ್ಳು ಹೇಳು. ಕರುಬು = ಹೊಟ್ಟಕಿಚ್ಚುಪಡು
ತಾತ್ಪರ್ಯ
ಇನ್ನೊಬ್ಬರ ವಸ್ತುಗಳನ್ನು ಕಳ್ಳತನ ಮಾಡಬಾರದು. ಅದರಿಂದ
ಕಳೆದುಕೊಂಡವರ ಶಾಪ ತಗುಲುತ್ತದೆ. ಬೇರೆಯವರ ಮೇಲೆ
ಕೋಪಿಸಿಕೊಳ್ಳಬಾರದು. ಕೋಪದಿಂದ ದೇಹದಲ್ಲಿ ರಕ್ತದ
ಏರೊತ್ತಡ ಉಂಟಾಗಿ ಆರೋಗ್ಯದಲ್ಲಿ ಏರುಪೇರಾಗುತ್ತದೆ.
ಇನ್ನೊಬ್ಬರನ್ನು ದೂಷಿಸಿ ನಿಂದೆ ಮಾಡಬಾರದು. ಏಕೆಂದರೆ
ನಮ್ಮ ನುಡಿದ ನುಡಿಗಳೆ ತಿರುಗುಬಾಣವಾಗಿ ನಮ್ಮ ಕಡೆಗೆ
ಬರುತ್ತದೆ. ಸುಳ್ಳು ಹೇಳಬಾರದು. ಅದರಿಂದ ಜನರಲ್ಲಿ
ನಂಬಿಕೆ ಕಳೆದುಕೊಂಡು ಮರ್ಯಾದೆ ಸಿಗುವುದಿಲ್ಲ.ಅಲ್ಲದೆ
ಆತ್ಮಸಾಕ್ಷಿ ಸದಾ ನೀನು ಸುಳ್ಳು ಹೇಳುತ್ತಿರುವೆ ಎಂದು
ಜಾಗ್ರಗೊಳಿಸುತ್ತಿರುತ್ತದೆ. ಅದನ್ನು ಮೀರಿ ನುಡಿವುದರಿಂದ
ಕಷ್ಟ ಬಂದೊದಗುತ್ತವೆ. ಇನ್ನೊಬ್ಬರ ಏಳ್ಗೆಯನ್ನು ಕಂಡ
ಅಸೂಯಪಡಬಾರದು. ಅದರಿಂದ ಹೊಟ್ಟೆಯಲ್ಲಿ ಅತ್ಯಧಿಕ ಜಠರರಸ ಉತ್ಪತ್ತಿಯಾಗಿ ಹೊಟ್ಟೆಯಲ್ಲಿ ಉರಿ ಉಂಟಾಗಿ ಹೊಟ್ಟೆಹುಣ್ಣುಗಳು ಉಂಟಾಗುವ ಸಂಭವ ಇರುತ್ತದೆ. ಯಾವ ಜೀವಿಗಳನ್ನು ಕಾಯಾ ವಾಚಾ ಮನಸಾ ಹಿಂಸೆಮಾಡಬಾರದು. ಅದರಿಂದ ಕೊಂದ ಪಾಪ ತಗುಲುತ್ತದೆ. ಮತ್ತೆ ಆರೋಗ್ಯ ಹಾಳು ಮಾಡುವ ಮದ್ಯಮಾಂಸಮೀನ ಸೇವಿಸಬಾರದು.
ಈ ಏಳು ಸದ್ಧರ್ಮದ ಸೂತ್ರಗಳಾಗಿವೆ.ಈ ಸೂತ್ರಗಳನ್ನು ಆಚರಿಸಿದರೆ ಶಾಂತಿ ನೆಮ್ಮದಿ ದೊರಕುತ್ತದೆ.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990