ವಿಧಿ ಕೊಟ್ಟ ಪಾತ್ರಗಳ ಚೆನ್ನಾಗಿಯಭಿನಯಿಸು
ಲೋಕವಿದೆ ನಾಟಕದ ರಂಗಸ್ಥಳ
ಮನಸಿನಾಲಯದೊಳಗೆ ನೀನೆ ನೀನಾಗಿದ್ದು
ನಿಜದ ನೆಲೆಯರಿತುಕೋ – ಎಮ್ಮೆತಮ್ಮ
ಶಬ್ಧಾರ್ಥ
ವಿಧಿ = ಬ್ರಹ್ಮ, ಸೃಷ್ಟಿಕರ್ತ
ತಾತ್ಪರ್ಯ
ಈ ಜಗತ್ತು ಒಂದು ನಾಟಕದ ರಂಗಸ್ಥಳ. ಸೂರ್ಯಚಂದ್ರರೆ
ದೀಪಗಳು. ಆಕಾಶವೆ ದೃಶ್ಯಾವಳಿಯ ಪರದೆ. ಸೃಷ್ಟಿಕರ್ತನು ಒಬ್ಬೊಬ್ಬರಿಗೊಂದೊಂದು ಪಾತ್ರ ಕೊಟ್ಟಿದ್ದಾನೆ. ನಾವೆಲ್ಲರು ಪಾತ್ರಧಾರಿಗಳು. ಸೃಷ್ಟಿಕರ್ತನೆ ತರಬೇತುದಾರನು. ಅವನು
ಕೊಟ್ಟ ಪಾತ್ರಗಳನ್ನು ಚೆನ್ನಾಗಿ ಅಭಿನಯಿಸಬೇಕು. ತಂದೆ
ತಾಯಿಯ ಪಾತ್ರ, ಅಣ್ಣತಮ್ಮರ ಪಾತ್ರ, ಅಕ್ಕತಂಗಿಯರ ಪಾತ್ರ, ಗಂಡಹೆಂಡರ ಪಾತ್ರ, ಮಗಮಗಳ ಪಾತ್ರ, ಗೆಳೆಯಗೆಳೆತಿಯರ ಪಾತ್ರ, ಶತ್ರುಮಿತ್ರರ ಪಾತ್ರ, ಒಕ್ಕಲಿಗನ ಪಾತ್ರ, ನೌಕರನ ಪಾತ್ರ, ವ್ಯಾಪಾರಿಯ ಪಾತ್ರ, ಸಾಹಿತಿಯ ಪಾತ್ರ, ವೈದ್ಯನ ಪಾತ್ರ, ಹೀಗೆ ಹಲವಾರು ಪಾತ್ರಗಳನ್ನು ಕೊಟ್ಟಿದ್ದಾನೆ. ಕೊಟ್ಟ ಪಾತ್ರಗಳನ್ನು ಅವನು ಮೆಚ್ಚುವಂತೆ ಅಭಿನಯಿಸಬೇಕು. ಆದರೆ ಮನವೆಂಬ ಮನೆಯಲ್ಲಿ ಮಾತ್ರ ನೀನು ನೀನಾಗಿ ಬೇರೆಯಾಗಿರಬೇಕು. ನಾಟಕದಲ್ಲಿ ಮಾತ್ರ ಪಾತ್ರಧಾರಿ. ಬಣ್ಣ ಅಳಿಸಿಕೊಂಡು ಹೊರಬಂದರೆ ನಿಜವಾದ ಮೂಲ ಪುರುಷ. ಒಳಗೆ ನಿನ್ನ ನಿಜ ಸ್ವರೂಪವನ್ನು ತಿಳಿದುಕೊಳ್ಳಬೇಕು. ಆಗ ನಾನು ನಾಟಕಪಾತ್ರಧಾರಿ ಎಂಬುದು ನಿಮಿತ್ತ ಮಾತ್ರ ಎಂದು ಗೊತ್ತಾಗುತ್ತದೆ. ಅದರಿಂದ ಮಾನಸಿಕ ತುಮುಲವಿಲ್ಲದೆ ಪರಮಾನಂದದ ಸುಖ ದೊರಕುತ್ತದೆ. ನಿನಗೆ ಸತ್ಯದ ಅರಿವು ಮೂಡಿ ಸಾಕ್ಷಾತ್ಕಾರವಾಗುತ್ತದೆ.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990