ಅನ್ನ ನೀರಿನ ಚಿಂತೆ ಬಟ್ಟೆಬರೆಗಳ ಚಿಂತೆ
ಹೆಣ್ಣುಹೊನ್ನಿನ ಚಿಂತೆ ಮಣ್ಣ ಚಿಂತೆ
ಇಂತೆಲ್ಲ ಚಿಂತೆಯಲಿ ಬಾಳು ಮುಗಿಸುವ ಮುನ್ನ
ಪರಚಿಂತೆ ಮಾಡಿನಿತು – ಎಮ್ಮೆತಮ್ಮ
ಶಬ್ಧಾರ್ಥ
ಪರಚಿಂತೆ = ಉತ್ತಮವಾದ ಚಿಂತೆ. ಪರಮಾತ್ಮನ ಚಿಂತೆ
ತಾತ್ಪರ್ಯ
ಮನುಷ್ಯನಿಗೆ ಹಲವಾರು ಚಿಂತೆಗಳಿವೆ. ಒಂದು ಚಿಂತೆ
ಪರಿಹಾರವಾದರೆ ಮತ್ತೊಂದು ಚಿಂತೆ ಉಂಟಾಗುತ್ತದೆ.
ಹಸಿವೆಯಾದರೆ ಊಟದ ಚಿಂತೆ, ನೀರಡಿಕೆಯಾದರೆ
ನೀರಿನ ಚಿಂತೆ. ಬಟ್ಟೆ ಹರಿದರೆ ಬಟ್ಟೆಯ ಚಿಂತೆ. ಹೀಗೆ
ಯೌವ್ವನಕ್ಕೆ ಬಂದರೆ ಹೆಣ್ಣನ್ನು ಮದುವೆಯಾಗುವ ಚಿಂತೆ.
ಮತ್ತೆ ಸಂಸಾರ ನಡೆಸಲು ಹೊನ್ನಿನ ಚಿಂತೆ. ಆಶ್ರಯಕ್ಕೆ
ಹೊಲಮನೆಗಳ ಚಿಂತೆ. ಹೀಗೆ ಚಿಂತೆಗಳು ಒಂದಾದ ಮೇಲೊಂದು ಬರುತ್ತವೆ. ಇಂಥ ಚಿಂತೆಗಳಿಂದ
ಆರೋಗ್ಯ ಆಯುಷ್ಯ ಕ್ಷೀಣಿಸುತ್ತದೆ. ಚಿಂತೆಯೇ ಮುಪ್ಪು ಸಂತೋಷವೇ ಯೌವ್ವನ ಎನ್ನುತ್ತದೆ ಗಾದೆ. ಈ ಚಿಂತೆಗಳ ಬಿಟ್ಟು ಪರಮಾತ್ಮನ ಚಿಂತೆಮಾಡಿದರೆ ಸುಖಸಂತೋಷವಿದೆ.
ಬದುಕಿದ್ದಾಗ ಸಾಯುವ ಮುನ್ನ ಸ್ವಲ್ಪವಾದರು ಆಧ್ಯಾತ್ಮದ ಚಿಂತೆ ಮಾಡಬೇಕು.
ಚಿಂತ್ಯಾಕೆ ಮಾಡುತಿದ್ದಿ ಚಿನ್ಮಯನಿದ್ದಾನೆ |ಸ್ವಾಮಿ ಚಿನ್ಮಯನಿದ್ದಾನೆ | ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ ||ಎಳ್ಳು ಕೊನೆಯು ಮುಳ್ಳುಮೊನೆಯು |ಪೊಳ್ಳು ಬಿಡದೆ ಒಳಗೆ ಹೊರಗೆ |ಎಲ್ಲ ಠಾವಿನಲ್ಲಿ ಗೌರಿ ವಲ್ಲಭನಿದ್ದಾನೆ ||ಹಿಂದೆ ನಿನ್ನ ಸಲಹಿದರ‍್ಯಾರೋ ಮುಂದೆ ನಿನ್ನ ಸಲಹುವರ‍್ಯಾರೋ ಅಂದಿಗೂ ಇಂದಿಗೂ ಎಂದಿಗೂ ನಂದಿ ವಾಹನನಿದ್ದಾನೆ || ಎಂದು ತತ್ತ್ವಪದಕಾರರು ಹಾಡಿದ್ದಾರೆ.
ರಚನೆ ಮತ್ತ ವಿವರಣೆ
ಎನ್ .ಶರಣಪ್ಪ ಮೆಟ್ರಿ
ಮೊ: 9449030990