ಅಳಿಸುವುದು ನಗಿಸುವುದು ನಡೆಸುವುದು ನುಡಿಸುವುದು
ಕುಣಿಸುವುದು ಮಲಗಿಸುವುದಾಟವಾಡಿ
ಸೂತ್ರವಿಲ್ಲದೆ ಜಗದ ಜೀವಿಗಳನಾಡಿಸುವ
ವಿಧಿವಿಲಾಸಕೆ ನಮಿಸು – ಎಮ್ಮೆತಮ್ಮ
ಶಬ್ಧಾರ್ಥ
ಸೂತ್ರ = ದಾರ . ವಿಧಿ = ಸೃಷ್ಟಿಕರ್ತ. ವಿಲಾಸ = ಆಟ
ಸೃಷ್ಟಿಕರ್ತ ಒಮ್ಮೆ ದುಃಖಿಸಿ ಅಳುವಂತೆ ಮಾಡುತ್ತಾನೆ. ಮತ್ತೊಮ್ಮೆ ಸಂತೋಷದಿಂದ ನಗುವಂತೆ ಮಾಡುತ್ತಾನೆ. ಮಗುದೊಮ್ಮೆಆಚಾರವಿಚಾರದಲ್ಲಿ ನಡೆಯುವಂತೆ ಮಾಡುತ್ತಾನೆ. ಇನ್ನೊಮ್ಮೆ ನಡೆದಂತೆ ನುಡಿಯುವಂತೆ ಮಾಡುತ್ತಾನೆ. ಮತ್ತೊಮ್ಮೊಮ್ಮೆ ಖುಷಿಯಿಂದ ನರ್ತಿಸಿ ಕುಣಿದಾಡುವಂತೆ ಮಾಡುತ್ತಾನೆ. ಕಡೆಗೊಮ್ಮೆ ನೆಲದ ಮೇಲೆ ಮಲಗುವಂತೆ ಮಾಡುತ್ತಾನೆ. ಸೂತ್ರದ ಗೊಂಬೆಗೆ
ದಾರವಿರುತ್ತದೆ . ಆದರೆ ಸೂತ್ರವೆ ಇಲ್ಲದೆ ಜಗದ ಜನರನ್ನು ಆಟವಾಡಿಸುವ ಸೃಷ್ಟಿಕರ್ತನ ವಿನೋದ ಆಟವನ್ನು ಕಂಡು
ಅವನಿಗೆ ಮೊದಲು ನಮಸ್ಕರಿಸಬೇಕು. ಒಬ್ಬರೆ ಇಬ್ಬರೆ
ಕೋಟಿಗಟ್ಟಲೆ ಜನರನ್ನು ದಿನನಿತ್ಯವು ಉಣಿಸುತ್ತಾನೆ, ಕುಣಿಸುತ್ತಾನೆ, ನುಡಿಸುತ್ತಾನೆ, ನಡೆಸುತ್ತಾನೆ, ಅಳಿಸುತ್ತಾನೆ,
ನಗಿಸುತ್ತಾನೆ, ಮಲಗಿಸುತ್ತಾನೆ ಮತ್ತು ಏಳಿಸುತ್ತಾನೆ. ಆತನ
ಅದ್ಭುತ ಶಕ್ತಿಯನ್ನು ಕಂಡು ಬೆರಗಾಗುತ್ತದೆ. ಇರುವುದೊಬ್ಬ
ಬ್ರಹ್ಮ ಇದೆಲ್ಲವನ್ನು ಮಾಡುವ ಸಾಮರ್ಥ್ಯ ಸಾಮಾನ್ಯವಲ್ಲ.
ಅಂಥ ಶಕ್ತಿಗೆ ಶರಣಾಗತನಾಗಿ ನಮಿಸಲೇಬೇಕು. ಅವನಿಗೆ
ಕೃತಜ್ಞತೆಯನ್ನು ಸಲ್ಲಿಸಬೇಕು. ಯಾರಾದರು ಸ್ವಲ್ಪ ಸಹಾಯ
ಮಾಡಿದರೆ ಅವರಿಗೆ ಧನ್ಯವಾದವನ್ನು ಹೇಳುತ್ತೇವೆ. ಆದರೆ
ತೆರೆಮರೆಯಲ್ಲಿದ್ದು ದೇಹ, ಮನಸು, ಬುದ್ಧಿ, ದೇಶ, ಸಂಪತ್ತು,ಆಹಾರ, ನೀರು, ಗಾಳಿ, ಬಿಸಿಲು, ಮಳೆ, ಬೆಳೆ ಕೊಟ್ಟ ಅವನನ್ನು ನಿತ್ಯ ನೆನೆಯಬೇಕು ಮತ್ತು ಕೃತಜ್ಞತೆಯನ್ನು ಸಲ್ಲಿಸಬೇಕು.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990