spot_img
spot_img

ಆಧುನಿಕ ಕೃಷಿ ತಂದ ವಿಷಣ್ಣತೆಗಳು

Must Read

- Advertisement -

ಮಳೆ ಕೈಕೊಟ್ಟುಬಿಟ್ಟರೆ ಯಾಕಪ್ಪ ಹಿಂಗೆ ಅಟ್ಟ ಸೇರ್ಕೊಂಡಿದ್ದಿಯಾ, ನಿನ್ನ ಕಣ್ಣು ಇಂಗೋಗಿದ್ದಾವಾ, ಕಣ್ಣು ಬಿಟ್ಟು ನೋಡಪ್ಪಾ ಎಂದು ಆಕ್ಷೇಪಣೆಯನ್ನು ಮಾಡತಾ ಇದ್ರು ಅಪ್ಪ. ಇಷ್ಟಾಗಿಯೂ ಮಳೆ ಕೈಕೊಟ್ಟೇ ಬಿಟ್ಟಿತೆನ್ನಿ, ಆಗ ಅಪ್ಪ ಮತ್ತು ಊರಿನ ಹಿರೀಕರು ಸೇರಿ ಮಾತನಾಡಿಕೊಳ್ತ ಇದ್ದದ್ದು ಏನಂದ್ರೆ, ಜನರ ದುರ್ನಡತೆ ಹೆಚ್ಚಾಯಿತು. ಕೆಲ್ಸದಮೇಲೆ ನಿಗಾ ಇಲ್ಲ.

ಮೋಸ ವಂಚನೆ ಹೆಚ್ಚಾಯಿತು, ಕಲಿಕಾಲ ಎಂದೆಲ್ಲ ಸ್ವವಿಮರ್ಶೆಗೆ ಒಳಪಡಿಸಿಕೊಳ್ತಾ ಇದ್ರು. ಆದರೆ ಈಗ ಕೃಷಿಕರು ತಮ್ಮ ಕೃಷಿ ಬದುಕಿಗೆ ಸಕಲೆಂಟು ವಸ್ತುಗಳಿಗೆ ಒಂದೋ ಪೇಟೆಯ ಮೇಲೆ ಅವಲಂಬಿತರಾಗಿದ್ದರೆ, ಇಲ್ಲಾ  ಕೃಷಿ ಇಲಾಖೆ, ಬ್ಯಾಂಕು ಮತ್ತು ಬಿತ್ತನೆ ಬೀಜ, ರಸಗೊಬ್ಬರ ಹಲವಾರು ಲಾಭಕೋರ ಕಂಪನಿಗಳನ್ನು ನಿಂದಿಸುತ್ತಲೆ ಅಪ್ಪಿಕೊಂಡಿದ್ದಾರೆ.

ನಿಜವಾಗಲು ಅವೆಲ್ಲವುಗಳು ವಿಷವರ್ತುಲಗಳೇ ಬಿಡಿ. ನಿಸರ್ಗದ ಯಾವ ಮೂಲಗಳ ಮೇಲೂ ಕೃಷಿಕರಾಗಲಿ, ಕೃಷಿಯಾಗಲಿ ಅವಲಂಬಿತವಾಗದೇ ಇರುವುದನ್ನು ಈಗ ಎಲ್ಲಲ್ಲೂ ನಾವು ಕಾಣಬಹುದು. ಇದನ್ನು ಗಮನಿಸಿದಾಗ ನಮ್ಮ ಕೃಷಿ ನಿಸರ್ಗದಿಂದ ಬಹುದೂರ ಸಾಗಿರುವುದನ್ನು ಅರ್ಥಮಾಡಿಕೊಳ್ಳಬಹುದು.

- Advertisement -

ಈಗಿನ ದಿನಮಾನಗಳಲ್ಲಿ ಬ್ಯಾಂಕಲ್ಲಿ ಸಿಕ್ಕುವ ಸಾಲ, ಪೇಟೆಯಿಂದ ಹೇರಳವಾಗಿ  ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ತಂದು ಧಾರಾಳವಾಗಿ ಗದ್ದೆಗಳಿಗೆ ಸುರಿಯಲು ಪ್ರಾರಂಭಿಸಿದ್ದನ್ನು ತಡೆದು ನಿಲ್ಲಿಸಲು ಯಾರಿಂದಲೂ ಸಾಧ್ಯವಾಗುವುದೇ ಇಲ್ಲ. ಮೇಲಾಗಿ ಆಗ ಹಸಿರು ಕ್ರಾಂತಿ ಕಹಳೆ ಬೇರೆ! ಹೀಗಾಗಿ ಕೃಷಿ, ಕೃಷಿಕರ ಅವನತಿ ಬಹುಬೇಗ ಆರಂಭಗೊಂಡಿತು.

ಮನಸೊಬು ಫುಕುವೊಕಾ ಒಂದು ಆಶಾಕಿರಣ:

( 02.02.1913—16.08.2008 )

ವಿಶ್ವದಲ್ಲಿ ಸಹಜ ಕೃಷಿಗೊಂದು ಆಯಾಮವನ್ನು ತಂದು ಕೊಟ್ಟ ಹಿರಿಮೆ ಜಪಾನ ದೇಶದ ನೈಸರ್ಗಿಕ ಕೃಷಿ ಪ್ರತಿಪಾದಕ, ಕೃಷಿ ವಿಜ್ಞಾನಿ ಮನಸೊಬು ಫುಕುವೊಕಾ ಅವರಿಗೆ ಸಲ್ಲಬೇಕು.

- Advertisement -

ಫುಕುವೊಕಾರು ಜಪಾನಿನ ಶಿಕೋಕು ಎಂಬ ದ್ವೀಪದಲ್ಲಿನ ಇಯೋ ಎಂಬ ಪುಟ್ಟ ಹಳ್ಳಿಯಲ್ಲಿನ ಒಬ್ಬ ಕೃಷಿ ಕುಟುಂಬದಲ್ಲಿ ಜನಿಸಿದವರು. ಎಲ್ಲ ಯುವಕರಂತೆ ಇವರು ವಿದ್ಯಾಭ್ಯಾಸದ ಕಡೆಗೆ ಮುಖಮಾಡಿದರು.

ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸರಕಾರಿ ಹುದ್ದೆಗೂ ಸೇರಿದರು. ಅಲ್ಲಿ ಸಸ್ಯಗಳಿಗೆ ಬರುವ ರೋಗಗಳನ್ನು ಪರೀಕ್ಷಿಸುವ, ರೋಗ ಪತ್ತೆ ಹಚ್ಚುವ ಕೆಲಸ ಪ್ರಾರಂಭಿಸಿದರು. ಈ ಏಕತಾನತೆಯಿಂದ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡು ಕೆಲಸಕ್ಕೆ ರಾಜಿನಾಮೆ ನೀಡಿ ಹೊರನಡೆದರು.

ತಂದೆಯವರು ಮಾಡುತ್ತಿದ್ದ ತೋಟದ ಕೃಷಿ ಮಾಡುತ್ತೇನೆಂದು ಹೋದರು. ತಂದೆ ತನ್ನ ಮಗ ನನ್ನ ಹೆಸರು ಉಳಿಸಲು ಬಂದನಲ್ಲಾ ಎಂದು ಸಂತೋಷಪಟ್ಟರು.

ಯುವಕ ಫುಕುವೊಕಾ ಹಣ್ಣಿನ ತೋಟದ ಉಸ್ತುವಾರಿ ವಹಿಸಿಕೊಂಡು ಅವುಗಳು ಸಹಜವಾಗಿ ಬೆಳೆಯಬೇಕು, ಕಾಡುಗಳಲ್ಲಿ ಮರಗಿಡಗಳು ಸಹಜವಾಗಿ ಬೆಳೆಯುವಂತೆ ತೋಟದಲ್ಲಿನ ಗಿಡಗಳು ಸಹ ಬೆಳೆಯುವುದು ಒಳ್ಳೆಯದೆಂದು ನಿರ್ಧಾರ ತೆಗೆಕೊಂಡರು. ಕೆಲವೇ ದಿನಗಳಲ್ಲಿ ಕಿತ್ತಲೆ ಹಣ್ಣಿನ ಗಿಡಗಳು ಅಡ್ಡಾದಿಡ್ಡಿ ಬೆಳೆದು ನಿಂತವು.

ಹುಳುಗಳು ಆಕ್ರಮಣ ಮಾಡಿದವು. ಫಸಲು ಕೈಗೆಟುಕಲಿಲ್ಲ. ಇದನ್ನು ನೋಡಿದ ತಂದೆ ಗಾಬರಿಯಾಗಿ , ಅಪ್ಪಾ ನೀನು ಕೃಷಿ ಮಾಡುವುದು ಸಾಕು, ನಗರದಲ್ಲೊಂದು ಉದ್ಯೋಗ ಹಿಡಿದು ಬದುಕು ಹೋಗೆಂದರು. ಪುನಃ ಫುಕುವೊಕಾ ನಗರದಲ್ಲಿ ನೌಕರಿ ಸೇರಿದರು. ಅವರ ಮನಸ್ಸು ಪ್ರಯೋಗಾಲಯದಲ್ಲಿನ ಕೆಲಸದಲ್ಲಿ ತೊಡಗಲು ಸಹಕರಿಸಲಿಲ್ಲ.

ಹಾಗಾಗಿ ಹೇಳದೆ ಕೇಳದೆ ಕೆಲಸಬಿಟ್ಟು ಹೊರನಡೆದರು. ನ್ಯುಮೋನಿಯಾ ಕಾಯಿಲೆಗೆ ತುತ್ತಾದರು. ಆಸ್ಪತ್ರೆಯಲ್ಲಿ ಕೆಲಕಾಲವಿದ್ದು ಸುಧಾರಿಸಿಕೊಂಡರು. ಸ್ವಲ್ಪ ಗೆಲುವಾದ ಕೂಡಲೇ ಆಸ್ಪತ್ರೆಯಿಂದ ಹೊರನಡೆದರು. ಹಳ್ಳಿಗಳಲ್ಲಿ ಸುತ್ತಾಡಿದರು.

ಕೃಷಿಕರೊಂದಿಗೆ ಕೆಲಸ ಮಾಡಿದರು. ಒಮ್ಮೆ ಸಮುದ್ರ ದಂಡೆಯಲ್ಲಿ ಸುತ್ತಾಡುವಾಗ ಪ್ರಜ್ಞೆತಪ್ಪಿಬಿದ್ದರು. ರಾತ್ರಿಯಿಡೀ ಸಮುದ್ರ ದಂಡೆಯಲ್ಲಿ ಬೀಸಿ ಬರುತ್ತಿದ್ದ ತಂಗಾಳಿಯಲ್ಲಿ ಮಲಗಿದರು. ಬೆಳಿಗ್ಗೆ ಎದ್ದಾಗ ಅವರಲ್ಲೊಂದು ಚೈತನ್ಯ ಕಾಣಿಸಿತು.

ಮನಸ್ಸಲ್ಲಿದ್ದ ಗೊಂದಲಗಳೆಲ್ಲ ಬಗೆಹರಿದಂತಾಯಿತು. ಎದ್ದು ಸೀದಾ ಹಳ್ಳಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಂಡರು. ಸತತವಾಗಿ 35 ವರ್ಷಗಳಿಗೂ ಹೆಚ್ಚುಕಾಲ ಕೃಷಿ ಭೂಮಿಯಲ್ಲಿ ಕೆಲಸಮಾಡುತ್ತ ಸಹಜಕೃಷಿಯನ್ನು ಸಾಕ್ಷಾತ್ಕರಿಸಿಕೊಂಡರು. ಕೃಷಿಲೋಕದ ಬೆಳಕಾದರು.

ವಿಶ್ವದ ನಾನಾಭಾಗಗಳಿಂದ ಕೃಷಿಕರು ಫುಕುವೊಕರ ಕೃಷಿಭೂಮಿಗೆ ಭೇಟಿಕೊಡತೊಡಗಿದರು. ಕೆಲವರು ವರ್ಷಾನುಗಟ್ಟಲೆ ಅಲ್ಲಿದ್ದು ಅಧ್ಯಯನ ಕೈಗೊಂಡರು. ಫುಕುವೊಕರು ಆಸಕ್ತರಿಗೆ ಸಹಜಕೃಷಿಯ ಗುಟ್ಟುಗಳನ್ನು ತಿಳಿಸಿಕೊಟ್ಟರು. ಇದಾದನಂತರ ಫುಕುವೊಕರು ಪ್ರಪಂಚದ ಹಲವಾರು ದೇಶಗಳಲ್ಲಿ ಪ್ರವಾಸಕೈಗೊಂಡು ಸಹಜಕೃಷಿಯ ಪ್ರಯೋಗಗಳನ್ನು ನಡೆಸಿಕೊಟ್ಟರು.

ನೈಸರ್ಗಿಕ ಕೃಷಿ ಬರಿ ಬೆಳೆಗಳನ್ನು ಬೆಳೆಯುವುದು ಮಾತ್ರವಲ್ಲ, ನೈಸರ್ಗಿಕ ಕೃಷಿ ಮಾಡುವುದೆಂದರೆ ಮನುಷ್ಯ ತನ್ನ ಜೀವನದಲ್ಲಿ ಪರಿಪೂರ್ಣತೆಯನ್ನು ಕಾಣುವುದೇ ಆಗಿರುತ್ತದೆ ಎಂದರು. ಏನೂ ಮಾಡದ ಕೃಷಿ ( Do Nothing ) ಎಂದು ತಮ್ಮ ಪದ್ಧತಿಯನ್ನು ಕರೆದುಕೊಂಡರು. ಇದರ ಬಗ್ಗೆ ಅನೇಕರು ಆಗ ಅಪಹಾಸ್ಯಮಾಡಿ ನಕ್ಕರು. ಅವರು ಎದೆಗುಂದಲಿಲ್ಲ. ಆದರೆ ನಂತರದ ದಿನಗಳಲ್ಲಿ ಸಹಜ ಕೃಷಿಯ ಕುರಿತು ಚಿಂತನೆಗಳು ನಡೆದವು. ಸಹಜ ಕೃಷಿಯು ಕೃಷಿಕರ ಆಶಾಕಿರಣವಾಯಿತು.


ಅಮರೇಗೌಡ ಪಾಟೀಲ ಜಾಲಿಹಾಳ

- Advertisement -
- Advertisement -

Latest News

ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ

ಮುಧೋಳ:  ನಗರ ಶಾಮೇಲ್ಸ್ ಪ್ರೌಢ ಶಾಲೆಯ  ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group