ಮೂಡಲಗಿ: ಮನುಷ್ಯನ ಸ್ವಭಾವವನ್ನು ಒಂದೇ ಸಲ ತಿದ್ದಲು ಸಾಧ್ಯವಿಲ್ಲ. ಪ್ರತಿನಿತ್ಯ ಪ್ರವಚನ, ಆಧ್ಯಾತ್ಮಿಕ ಚಟುವಟಿಕಗಳಿಗೆ ನಮ್ಮನ್ನು ನಾವೇ ತೊಡಗಿಸಿಕೊಳ್ಳುವುದರ ಮುಖಾಂತರ ಪೂಜ್ಯರು ಹೇಳಿದ ಮಾತನ್ನು ನಮ್ಮ ವೈಯಕ್ತಿಕ ಬದುಕಿಗೆ ಅಳವಡಿಸಿಕೊಳ್ಳುವ ಮೂಲಕ ಒಂದು ಸ್ವಲ್ಪ ಬದಲಾವಣೆಯಾಗಲಿಕ್ಕೆ ಸಾಧ್ಯವಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಗುರುವಾರ ತಾಲೂಕಿನ ಶಿವಾಪುರ (ಹ) ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಿದ ಬಸವ ದರ್ಶನ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಅಧ್ಯಾತ್ಮದ ಅಂತರಾಳ ಮೌಲ್ಯವನ್ನು ಉಳಿಸುವವ ಗುರು. ಗುರುವಿನ ಆರಾಧನೆ ಶ್ರೇಷ್ಠವಾದುದು ಅವರ ಮಾರ್ಗದರ್ಶನ ಅವಶ್ಯವಿದೆ ಎಂದರು.
ಸಮಾಜದ ಎಲ್ಲ ಜನರು ಒಂದುಗೂಡಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಬೇಕು ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಂದುಗೂಡುವ ಅವಕಾಶ ಸಿಗುತ್ತದೆ ಎಂದರಲ್ಲದೇ ಅಡವಿಸಿದ್ದೇಶ್ವರ ಅಜ್ಜನ ಜಾತ್ರೆಯಲ್ಲಿ ಮಹಿಳೆಯರು ಟಿವಿ ಬಿಟ್ಟು ಪ್ರವಚನ ಕೇಳಲು ಬಂದಿರುವುದು ಖುಷಿ ಸಂಗತಿ ಎಂದರು.
ಕೃಷಿ ತಂತ್ರಜ್ಞಾನದಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರನ್ನು ಕಂಡು ಕೃಷಿಯಲ್ಲಿ ಸಾಧನೆ ಮಾಡಬೇಕು. ಇದರಿಂದ ಪ್ರತಿಯೊಬ್ಬರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಎಲ್ಲರೂ ಸರ್ಕಾರದ ಯೋಜನೆಗಳ ಸವಲತ್ತುಗಳನ್ನು ಪಡೆಯಬೇಕೆಂದರು.
ಅಡವಿಸಿದ್ದೇಶ್ವರ ಮಠಕ್ಕೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 25 ಲಕ್ಷ ಮತ್ತು ಮುಜರಾಯಿ ಇಲಾಖೆಯಿಂದ ರೂ. 5 ಲಕ್ಷ ಅನುದಾನವನ್ನು ನೀಡಲಾಗಿದೆ. ಶಿವಾಪುರ (ಹ) ಗ್ರಾಮವು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ರಸ್ತೆ, ಶೌಚಾಲಯ, ಕುಡಿಯುವ ನೀರು, ಶಾಲೆಗಳು ಸೇರಿದಂತೆ ಅನೇಕ ಅಭಿವೃದ್ದಿ ಕಾಮಗಾರಿಗಳು ಗ್ರಾಮದಲ್ಲಿ ನಡೆಯುತ್ತಿವೆ ಎಂದರು.
ಅಡವಿಸಿದ್ದೇಶ್ವರ ಮಠದ ಪೂಜ್ಯರಾದ ಅಡವಿಸಿದ್ದರಾಮ ಮಹಾಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಪೂಜ್ಯ ಚಂದ್ರಶೇಖರ್ ಸ್ವಾಮೀಜಿಗಳು, ಅಭಿನವ ಚೆನ್ನಬಸವ ಮಹಾಸ್ವಾಮೀಜಿಗಳು, ಪಂಡಿತ ಪಂಚಾಕ್ಷರಿ ಶಾಸ್ತ್ರಿಗಳು ಉಪಸ್ಥಿತರಿದ್ದರು.
ಪ್ರಮುಖರಾದ ಕೆಂಪಣ್ಣ ಮುಧೋಳ, ಶಂಕರಗೌಡ ಪಾಟೀಲ, ಪ್ರಕಾಶ ಮಾದರ, ಮಲ್ಲಪ್ಪ ಜುಂಜರವಾಡ, ಶಿವಬಸು ಜುಂಜರವಾಡ, ಸತೀಶ ಜುಂಜರವಾಡ, ಮಹಾಂತೇಶ ಕುಡಚಿ, ಉಮೇಶ ಮುಧೋಳ, ನಾಗಪ್ಪ ಚಿನಪ್ಪಗೋಳ, ಬಸಪ್ಪ ಶೀಳನ್ನವರ, ಪರಪ್ಪ ಗಿರೆಣ್ಣವರ, ಎನ್. ಜಿ ಹೆಬ್ಬಾಳ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.