ಇತಿಹಾಸ ಸೃಷ್ಟಿಸಿದ ಮೂಡಲಗಿ ಪುರಸಭೆಯ ಸದಸ್ಯರ ಸಭೆ
ಮೂಡಲಗಿ – ಮೂಡಲಗಿ ಪುರಸಭೆಯಲ್ಲಿ ಅಧ್ಯಕ್ಷರು ಹಾಗೂ ಕೆಲವೇ ಸದಸ್ಯರ ದುರಾಡಳಿತ ಮಿತಿ ಮೀರಿದ್ದು ಬೇರೆಯವರಿಗೆ ಬೆಲೆಯಿಲ್ಲದಂತಾಗಿದೆ ಎಂದು ಪುರಸಭೆಯ ಜನತಾ ದಳ ಪಕ್ಷದ ಸದಸ್ಯರಲ್ಲದೆ ಆಡಳಿತ ಪಕ್ಷದವರು ಕೂಡ ಅಸಮಾಧಾನ ವ್ಯಕ್ತಪಡಿಸಿದ ಸಂದರ್ಭ ಜರುಗಿತು.
ಶುಕ್ರವಾರದಂದು ಪುರಸಭೆಯಲ್ಲಿ ಕರೆಯಲಾಗಿದ್ದ ಸದಸ್ಯರ ಸಭೆಯಲ್ಲಿ ಕೇವಲ ಎಂಟು ಜನ ಸದಸ್ಯರು ಹಾಜರಿದ್ದದ್ದು ಈ ಮಾತಿಗೆ ಪುಷ್ಠಿ ಕೊಡುವಂತಿದ್ದು ಈ ಬಗ್ಗೆ ಮುಖ್ಯಾಧಿಕಾರಿಯವರನ್ನು ಸಂಪರ್ಕಿಸಿದಾಗ ಒಂದುಮೂರಾಂಶ ಸದಸ್ಯರ ಹಾಜರಾತಿ ಇದ್ದರೆ ಆಯ್ತು ಎಂಬ ಉಡಾಫೆಯ ಮಾತನಾಡಿ ಫೋನ್ ಇಟ್ಟು ಬಿಟ್ಟರು. (ತುರ್ತು ಪರಿಸ್ಥಿತಿ ಇದ್ದಾಗ ಒಂದು ಮೂರಾಂಶ ಹಾಜರಾತಿ ನಡೆಯುತ್ತದೆ ಆದರೆ ಸಭೆಗೆ ನಿಜವಾಗಲೂ ಅರ್ಧಕ್ಕಿಂತ ಹೆಚ್ಚು ಸದಸ್ಯರ ಹಾಜರಾತಿ ಇರಬೇಕು. ಇವತ್ತು ಯಾವುದೇ ತುರ್ತು ಸ್ಥಿತಿ ಅಂತೂ ಇರಲಿಲ್ಲ)
ನಗರದ ಅಭಿವೃದ್ಧಿಗೆ ಕೋಟ್ಯಂತರ ರೂ. ಗಳ ಅನುದಾನ ಬಂದಿದ್ದು ಯಾವುದೇ ಪಕ್ಷದವರೆನ್ನದೆ, ತಾರತಮ್ಯ ಮಾಡದೆ ಎಲ್ಲಾ ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡಬೇಕೆಂದು ಶಾಸಕರೇ ಹೇಳಿದ್ದರೂ ಅಧ್ಯಕ್ಷ ಹನುಮಂತ ಗುಡ್ಲಮನಿಯವರು ತಮ್ಮ ಅಧಿಕಾರ ಚಲಾಯಿಸಿ ತಾರತಮ್ಯ ಮಾಡಿದ್ದು ಜೆಡಿಎಸ್ ಸದಸ್ಯರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಪುರಸಭೆಯ ನಿವೇಶನಗಳನ್ನು ಕೆಲವು ಸಮುದಾಯಗಳಿಗೆ ಬಿಟ್ಟುಕೊಟ್ಟು ಅನುದಾನ ಕೂಡ ನೀಡುತ್ತಿದ್ದಾರೆ. ಅಲ್ಲದೆ ಪುರಸಭೆಯ ಆಸ್ತಿಗಳನ್ನು ಅಕ್ರಮವಾಗಿ ಬೇಕಾದವರಿಗೆ ಬರಕೊಡುವ ಕೆಲಸ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಇಂದು ನಡೆದ ಸಭೆ ೧೧ ಕ್ಕೆ ಆರಂಭವಾಗಬೇಕು. ೧೧.೩೦ ಕ್ಕೆ ಕೋರಮ್ ಭರ್ತಿಯಾಗದಿದ್ದರೆ ಸಭೆಯನ್ನು ಮುಂದೂಡಬೇಕು. ಇಂದು ಕೇವಲ ಹತ್ತು ಜನ ಇದ್ದು ಅದರಲ್ಲಿ ಐವರು ನಾಮಿನೇಟ್ ಸದಸ್ಯರು. ಯಾರೂ ಬರದೇ ಇದ್ದಾಗ ಇವರು ಮಧ್ಯಾಹ್ನ ೧೨.೩೦ ರ ನಂತರ ಸದಸ್ಯರ ಮನೆ ಮನೆಗೆ ಹೋಗಿ ಸಹಿ ಮಾಡಿಸುವ ಪ್ರಯತ್ನ ಮಾಡಿದರು.
ಹಾಗೆ ನೋಡಿದರೆ ಇಂದು ಆಯವ್ಯಯ ಮಂಡನೆ ಮಾಡುವ ಸಭೆ ಹಾಗೂ ಕೆಲವು ಟೆಂಡರ್ ಗಳಿಗೆ ಸಮ್ಮತಿ ನೀಡುವ ಸಭೆ. ಆದ್ದರಿಂದಲೇ ನಮ್ಮನ್ನು ಉದ್ದೇಶಪೂರ್ವಕ ದೂರ ಮಾಡಿ ಸಭೆ ನಡೆಸಲು ಪ್ರಯತ್ನ ಮಾಡಿದ್ದಾರೆ ಇದರಿಂದ ಅಸಮಾಧಾನಗೊಂಡ ಕೆಲವು ಸದಸ್ಯರು ಸಭೆಗೆ ಬಹಿಷ್ಕಾರ ಹಾಕಿದರು. ಬಹುಶಃ ಇದು ಪುರಸಭೆಯ ಇತಿಹಾಸದಲ್ಲಿಯೇ ಮೊದಲಿರಬಹುದು ; ಕೇವಲ ೧೦ ಜನ ಸದಸ್ಯರ ಸಭೆ ನಡೆಸಿ ಕೋರಮ್ ಭರ್ತಿಯಾಗಿದೆ ಎಂದು ಉಡಾಫೆ, ಉದ್ದ್ಟತನ, ನಿರ್ಲಕ್ಷ್ಯ ತೋರಿದ ಇತಹಾಸ ಎಂದು ಅವರು ಅಭಿಪ್ರಾಯಪಡುತ್ತಾರೆ.
ಶಾಸಕರ ಆಪ್ತರಿಗಷ್ಟೇ ಅನುದಾನ ಬಿಡುಗಡೆಯಾಗುತ್ತಿದೆ. ಜೆಡಿಎಸ್ ವಾರ್ಡ್ ಗಳಿಗೆ ಸರಿಯಾದ ಅನುದಾನ ನೀಡುವುದಿಲ್ಲ. ಏನಾದರೂ ಕೇಳಬೇಕೆಂದರೆ ಮುಖ್ಯಾಧಿಕಾರಿ ಇರುವುದಿಲ್ಲ, ಇಂಜಿನೀಯರ್ ಮುಖದ ದರ್ಶನವೇ ಇಲ್ಲ. ಮೀಟಿಂಗ್ ಗಳನ್ನು ಕೂಡ ನಾಲ್ಕು ತಿಂಗಳಿಗೊಮ್ಮೆ ಕರೆಯುತ್ತಾರೆ. ಉದಾಹರಣೆಗೆ ದಿ. ೨೨.೩.೨೦೨೨, ೨.೭.೨೦೨೨, ೨೯.೧೧.೨೦೨೨ ಹಾಗೂ ಇಂದು ದಿ.೧೭.೨.೨೦೨೩ ರಂದು ಮೀಟಿಂಗ್ ಕರೆದಿದ್ದು ಊರ ಅಭಿವೃದ್ಧಿ ಕಾರ್ಯದ ಚರ್ಚೆ ಯಾವಾಗ ಆಗುತ್ತದೆಯೋ ಗೊತ್ತಿಲ್ಲ. ಎಲ್ಲ ಮುಗಿದ ಮೇಲೆ, ಎಲ್ಲವನ್ನೂ ತಾವೇ ನಿರ್ಧಾರ ಮಾಡಿದ ಮೇಲೆ ನಮಗೆ ಹೇಳುತ್ತಾರೆ ಎಂದು ಸದಸ್ಯರೊಬ್ಬರು ಹೇಳಿಕೊಂಡರು.
ಇನ್ನೊಬ್ಬ ಸದಸ್ಯರು ಪತ್ರಿಕೆಯೊಡನೆ ಮಾತನಾಡಿ, ಇತ್ತೀಚೆಗೆ ೧೦ ಕೋಟಿ ಕ್ರಿಯಾ ಯೋಜನೆ ಬಿಡುಗಡೆಯಾದರೆ ನಾಲ್ಕನೇ ವಾರ್ಡಿಗೆ ಏನೂ ಕೊಟ್ಟಿಲ್ಲ. ಇದೇ ರೀತಿ ಕೆಲವು ವಾರ್ಡ್ ಗಳಿಗೆ ಯಾವುದೇ ಅನುದಾನ ಹಂಚಿಲ್ಲ. ಈ ಬಗ್ಗೆ ನಾವು ಕೇಳಬೇಕೆಂದರೆ ಇವತ್ತೇ ಉದ್ದೇಶಪೂರ್ವಕವಾಗಿ ಮುಖ್ಯ ಇಂಜಿನೀಯರ್ ಸಭೆಗೆ ಬಂದಿಲ್ಲ. ತಾನು ಆಸ್ಪತ್ರೆಯಲ್ಲಿ ಇರುವುದಾಗಿ, ನಾಗನೂರಿಗೆ ಹೋಗುವುದಾಗಿಯೂ ನೆಪ ಹೇಳುತ್ತಾರೆ. ಮೊನ್ನೆ ಒಂದು ವಾರದ ಸಹಿಗಳನ್ನೆಲ್ಲ ಇಂಜಿನೀಯರ್ ಒಂದೇ ದಿನ ಮಾಡಿದರು ಎಂದರು.
ಪುರಸಭೆಯ ಮಹಿಳಾ ಸದಸ್ಯರ ಬದಲಿಗೆ ಅವರ ಗಂಡಂದಿರು ಬರುತ್ತಾರೆ ಎಂದು ಇತ್ತೀಚೆಗೆ ಪತ್ರಿಕೆ ವರದಿ ಮಾಡಿದ್ದರ ಬಗ್ಗೆ ಪುರಸಭೆಗೆ ಈಗ ಎಚ್ಚರವಾಗಿದ್ದು ಸಂಬಂಧಪಟ್ಟವರಿಗೆ ಈಗ ನೋಟೀಸು ನೀಡಿದ್ದಾರಂತೆ ! ಇದು ಪುರಸಭೆಯ ಕಾರ್ಯವೈಖರಿ ! ಬದಲಾವಣೆ ಏನೆಂದರೆ ಮಹಿಳಾ ಸದಸ್ಯರು ಸಭೆಗೆ ಬರುತ್ತಾರೆ, ಕಾರಬಾರು ಮಾತ್ರ ಅವರ ಗಂಡಂದಿರು ಮಾಡುತ್ತಾರೆ….!!
ಮುಂದುವರೆದ ಆ ಸದಸ್ಯರು ಹೇಳಿದ್ದು…ಬರುವ ಎಪ್ರಿಲ್ ನಲ್ಲಿ ಈ ಅಧ್ಯಕ್ಷರ ಅವಧಿ ಮುಗಿಯುತ್ತಲಿದ್ದು ಅಷ್ಟರಲ್ಲಿಯೇ ಹೀಗೆ ಅಕ್ರಮಗಳನ್ನು ಮಾಡುತ್ತಿದ್ದಾರೆ. ಕೆಇಬಿ ಪ್ಲಾಟ್ ನಲ್ಲಿ ಒಂದು ಘಟನೆ ನಡೆದಿತ್ತು, ಅದಲ್ಲದೆ ಕೇವಲ ಕೆಲವೆ ಸಮುದಾಯಗಳಿಗೆ ನಿವೇಶನ ನೀಡುವುದು ಮಾಡುತ್ತಿದ್ದಾರೆ ಆದರೆ ಸಾರ್ವಜನಿಕರಿಗೆ ಬೇಕಾದ ಒಂದು ರಸ್ತೆ ಬಲ್ಬ್ ತೆಗೆದು ಹಾಕಲು ಇವರಿಂದ ಆಗುತ್ತಿಲ್ಲ ಎಂದು ಹೇಳಿದರು.
ಪುರಸಭಾ ಸದಸ್ಯರ ಇಂದಿನ ಸಭೆಯು ಪುರಸಭೆಯ ಹಲವು ಕಾಂಡಗಳನ್ನು ಹೊರಹಾಕಿದೆ. ಇಷ್ಟುದಿನ ಮೂಡಲಗಿ ಅಭಿವೃದ್ಧಿ ಯಾಕಾಗುತ್ತಿಲ್ಲ ಎಂದು ನಾವು ನಾಗರಿಕರು ತಲೆ ಕೆಡಿಸಿಕೊಂಡಿದ್ದರೆ ಇದರ ಒಳ ಹೂರಣವೇ ಬೇರೆ ಇದೆಯೆಂಬುದು ಈಗ ಗೊತ್ತಾಗಿದೆ. ಶಾಸಕರು ಇದಕ್ಕೆ ಕಡಿವಾಣ ಹಾಕಬೇಕಿತ್ತು. ಖಾಲಿ ಜಾಗಗಳನ್ನೇ ಇವರು ಮಾಯ ಮಾಡುತ್ತಾರೆ ಎಂದರೆ ಭ್ರಷ್ಟಾಚಾರದ ತಾಂಡವವೆ ಇಲ್ಲಿ ನಡೆದಿದೆ ಎನ್ನಬಹುದು. ನಕಲಿ ಲೇಔಟ್ ಸೃಷ್ಟಿ ಮಾಡಿರುವ ಮುಖ್ಯಾಧಿಕಾರಿಯ ಕರ್ಮ ಕಾಂಡವೇ ನಮ್ಮ ಕಣ್ಣ ಮುಂದಿದೆ. ಇದೇ ರೀತಿಯಲ್ಲಿ ಪುರಸಭೆಯ ಯಾವ ಸದಸ್ಯರು, ಅಧಿಕಾರಿಗಳು ಯಾವ ಕರ್ಮಕಾಂಡದಲ್ಲಿ ಸಿಲುಕಿದ್ದಾರೆಯೋ ಹುಡುಕಿ ತೆಗೆಯಬೇಕಾಗಿದೆ.
ಉಮೇಶ ಬೆಳಕೂಡ, ಮೂಡಲಗಿ