ಸಿಂದಗಿ: ಬಡತನದಲ್ಲಿರುವ ತಾಯಂದಿರಿಗೆ ಬೇರೆ ಊರುಗಳಿಗೆ ಹೋಗಿ ಕೆಲಸ ಮಾಡಬೇಕಾದರೆ ಅನುಕೂಲವಾಗಬೇಕು ಎಂದು ಕಾಂಗ್ರೆಸ್ ಸರಕಾರ ಮೊಟ್ಟ ಮೊದಲು ಶಕ್ತಿ ಯೋಜನೆ ಪ್ರಾರಂಭಿಸಿ ನುಡಿದಂತೆ ನಡೆದುಕೊಂಡಿದೆ. ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು, ದುರುಪಯೋಗವಾಗಬಾರದು ಎಂದು ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ “ಶಕ್ತಿ ಯೋಜನೆಗೆ” ಚಾಲನೆ ನೀಡಿ ಮಾತನಾಡಿ, ಇದು ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥ ಯೋಜನೆಯಾಗಿದೆ ಏಕೆಂದರೆ ಬೇರೆ ಬೇರೆ ರಾಜ್ಯಗಳಲ್ಲಿ ಮಹಿಳೆಯರಿಗೆ ಅರ್ಧ ಚಾರ್ಜ್ ಇದೆ ಆದರೆ ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಉಚಿತ ಪ್ರಯಾಣ ಮಾಡಿದ್ದು ಇತಿಹಾಸವೇ ಸರಿ ಇದರಿಂದ ಮಹಿಳೆಯರು ಯಾವುದೇ ಖರ್ಚಿಲ್ಲದೇ ದೊಡ್ಡ ಶಹರಿಗೆ ಹೋಗಿ ವ್ಯಾಪಾರ ಮಾಡಬಹುದು ಇದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ ಮನಗೂಳಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲ ಗ್ಯಾರಂಟಿಗಳನ್ನು ಕೊಡಲಿಕ್ಕೆ ಆಗಲ್ಲ ಎನ್ನುವ ಗೊಂದಲಗಳನ್ನು ವಿರೋಧ ಪಕ್ಷಗಳು ಸೃಷ್ಟಿಸಿದ್ದವು ಆದರೆ ನಮ್ಮ ಸರಕಾರ ನುಡಿದಂತೆ ಕ್ಯಾಬಿನೆಟ್ ರಚನೆಯಾದ ಕೆಲ ಗಂಟೆಗಳಲ್ಲಿ 5 ಗ್ಯಾರಂಟಿಗಳನ್ನು ಅನುಮೋದನೆ ಮಾಡಿ ಮೊಟ್ಟ ಮೊದಲು ಮಹಿಳೆಯರಿಂದ ಪ್ರಾರಂಭವಾಗಬೇಕು ಎಂದು ಶಕ್ತಿ ಯೋಜನೆಗೆ ಪ್ರಾರಂಭ ನೀಡಿದೆ. ಅಲ್ಲದೆ ನಾಳೆ ಜು 1 ರಿಂದ ಅನ್ನಭಾಗ್ಯ ಯೋಜನೆಗೆ ಚಾಲನೆ ದೊರಕಲಿದೆ ಮತ್ತು ಅಗಷ್ಟ 15 ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆಯಲಿದ್ದು ಗೃಹಜ್ಯೋತಿಗೆ ಚಾಲನೆ ದೊರಕಲಿದೆ ಅದಕ್ಕೆ ಮಹಿಳೆಯರಿಂದಲೇ ಪ್ರಾರಂಭಿಸಬೇಕು ಎಂದು ಶಕ್ತಿ ಯೋಜನೆ ಪ್ರಾರಂಭಿಸಲಾಗಿದೆ ಕಾರಣ ಶಾಲಾ-ಕಾಲೇಜಿಗೆ ಬರುವ ಹೆಣ್ಣು ಮಕ್ಕಳು ಪ್ರತಿವರ್ಷ ಪಾಸ್ ಪಡೆಯಲು ಹರಸಾಹಸ ಪಡೆಯಬೇಕಾಗಿತ್ತು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಶಕ್ತಿ ಯೋಜನೆ ದೊರೆತಿದೆ ಇದರ ಸರಿಯಾದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೆ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಪಿಎಸ್‍ಐ ಸೋಮೇಶ ಗೆಜ್ಜೆ, ಘಟಕ ವ್ಯವಸ್ಥಾಪಕ ರೇವಣಸಿದ್ದಪ್ಪ ಖೈನೂರ, ಅಂಕಿ ಅಂಶ ಅಧಿಕಾರಿ ದೇವಪ್ಪ ಜಯವಂತ, ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಹಾನಂದಾ ಬಮ್ಮಣ್ಣಿ, ಸೇರಿದಂತೆ ಮಹಿಳೆಯರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.