ಸಿಂದಗಿ; ನಗರದಲ್ಲಿ ಯುವಜನತೆ ಹಾಗೂ ವಿದ್ಯಾರ್ಥಿಗಳು ಸುಲಭವಾಗಿ ದೊರಕುವ ಸಲ್ಯೂಷನ್, ಕಾಪ್ಸಿರಪ್, ವೈಟ್ನರ್ ಹಾಗೂ ಇನ್ನಿತರ ದಿನನಿತ್ಯದ ವಸ್ತುಗಳನ್ನು ಮಾದಕ ವಸ್ತುಗಳಾಗಿ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಮನೆಯಲ್ಲಿ ಪೊಷಕರು ಶಾಲೆಯಲ್ಲಿ ಶಿಕ್ಷ ಕರು ಮಗುವಿನ ಮೇಲೆ ನಿಗಾ ಇಟ್ಟರೆ ಇಂತಹ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕು ಆಡಳಿತ ಹಾಗೂ ಎಲ್ಲ ಶಾಲಾ-ಕಾಲೇಜುಗಳ ಸಹಯೋಗದೊಂದಿಗೆ ಶ್ರೀ ಮ. ನಿ. ಪ. ಡಾ. ಶ್ರೀ ಮಹಾಂತ ಶಿವಯೋಗಿಗಳು ಜನ್ಮ ದಿನದ ನಿಮಿತ್ತವಾಗಿ ವ್ಯಸನ ಮುಕ್ತ ಜಾಥಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಿನ್ನುವ ಪದಾರ್ಥದಲ್ಲಿ ಸಣ್ಣ ಕಲ್ಲು ಸಿಕ್ಕರೂ ಅದನ್ನು ತಿರಸ್ಕರಿಸುವ ಜನರು ದೇಹಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಸಿಗರೇಟ್, ಗುಟುಕ ಸೇವನೆ, ಮದ್ಯಪಾನದಂತ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವ ಬಗ್ಗೆ ಎಲ್ಲರೂ ಚಿಂತನೆ ನಡೆಸಬೇಕಿದೆ. ಇದರ ಬಗ್ಗೆ ಎಷ್ಟು ಜಾಗೃತಿ ಕಾರ್ಯಗಳು ನಡೆದರೂ ಮಾದಕ ವ್ಯಸನಿಗಳ ಸಂಖ್ಯೆ ಕಡಿಮೆಯಾಗದಿರುವುದಕ್ಕೆ ಪ್ರಮುಖ ಕಾರಣ ಅವರ ಮನಸ್ಸು ವ್ಯಸನ ಮುಕ್ತವಾಗಿಲ್ಲ ಎಂದರು.
ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ ಆರ್ ಹೆಗ್ಗಣದೊಡ್ಡಿ ಉಪನ್ಯಾಸ ನೀಡಿ, ಎಷ್ಟೆ ಜಾಗೃತಿ ಮೂಡಿಸಿದರೂ ಮನಸ್ಸು ವ್ಯಸನ ಮುಕ್ತವಾಗದೇ ವ್ಯಸನ ಮುಕ್ತ ಸಮಾಜವನ್ನು ಕಾಣಲು ಸಾಧ್ಯವಿಲ್ಲ. ಇಂದು ಮಾದಕ ವ್ಯಸನದಿಂದಾಗುವ ಪರಿಣಾಮಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಆದರೂ ಅದಕ್ಕೆ ಹೆಚ್ಚಿನ ಜನರು ದಾಸರಾಗುತ್ತಿದ್ದಾರೆ. ಕ್ಷಣಿಕ ಸುಖಕ್ಕಾಗಿ ಎಷ್ಟು ಹಣ ಕೊಟ್ಟರು ಮರಳಿ ಸಿಗದ ಪ್ರಾಣವನ್ನೇ ಬಲಿ ಕೊಡುತ್ತಿದ್ದಾರೆ. ಭವಿಷ್ಯದ ವಿವೇಚನೆ ಮಾಡದೆ ಮಾಡುವ ತಾತ್ಕಾಲಿಕ ಆಕ್ರೋಶ ಆಲೋಚನೆ ಮತ್ತು ಅಪರಾಧಗಳು ನಮ್ಮ ಜೀವನವನ್ನು ಸಂಕಟಕ್ಕೆ ತಳ್ಳುತ್ತದೆ. ಮಾದಕ ವಸ್ತುಗಳು ಮನುಷ್ಯನ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ವ್ಯಸನಿಯನ್ನಾಗಿ ಪರಿವರ್ತಿಸಿ ಆತ ಮಾದಕ ವಸ್ತುಗಳನ್ನು ಕೊಳ್ಳಲು ಕಳ್ಳತನ ಹಾಗೂ ಇನ್ನಿತರ ಕಾನೂನುಬಾಹಿರ ಮಾರ್ಗವನ್ನು ಹಿಡಿಯುವಂತೆ ಮಾಡುತ್ತದೆ. ಇದರಿಂದಾಗಿ ವ್ಯಕ್ತಿ ಸಮಾಜದಲ್ಲಿ ಅಗೌರವಕ್ಕೆ ಪಾತ್ರನಾಗುತ್ತಾನೆ. ಕೌಟುಂಬಿಕ ಕಲಹ ಹಾಗೂ ತನ್ನ ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಮೂಲಕ ತನ್ನ ಬದುಕನ್ನ ಅಂತಿಮಗೊಳಿಸಿಕೊಳ್ಳುತ್ತಾನೆ ಎಂದರು.
ಜೀವನದಲ್ಲಿ ಉತ್ತಮ ಆಲೋಚನೆಗಳಿಗೆ ತೆರೆದುಕೊಳ್ಳಬೇಕು, ಒಳ್ಳೆಯ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು. ತನ್ನ ಗುರಿಯತ್ತ ಸಾಗಲು ಪರಿಶ್ರಮಪಡಬೇಕು. ಆಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ನಮ್ಮ ಎಲ್ಲ ಶಕ್ತಿಯನ್ನು ಉತ್ತಮ ಕೆಲಸಗಳಿಗೆ ವಿನಿಯೋಗಿಸಿದಾಗ ಸಮಾಜದಲ್ಲಿ ಯಶಸ್ಸನ್ನು ಹೊಂದಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ನಂತರ ತಾಲೂಕು ಆಡಳಿತದಿಂದ ಪಟ್ಟಣದ ಬಸವೇಶ್ವರ ವೃತದ ಮಾರ್ಗವಾಗಿ, ವಿವೇಕಾನಂದ ವೃತ್ತ, ಡಾ. ಸಿದ್ದಲಿಂಗ ತೊಂಟಾದಾರ್ಯ ರಸ್ತೆ, ಟಿಪ್ಪು ಸುಲ್ತಾನ ವೃತ್ತ ಹಾಗೂ ಡಾ. ಅಂಬೇಡ್ಕರ ವೃತ್ತದವೆರೆಗೆ ವಿದ್ಯಾರ್ಥಿಗಳಿಂದ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ನಿಂಗಣ್ಣ ಬಿರಾದಾರ, ಮಾಜಿ ತಾಪಂ ಅಧ್ಯಕ್ಷ ಸಿದ್ದಣ್ಣ ಹರನಾಳ, ರೈತ ಸಂಘದ ಪೀರು ಕೆರೂರ, ತಾಪಂ ಇಓ ಬಿ.ಆರ್. ರಾಟೋಡ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ವಿದ್ಯಾರ್ಥಿಗಳು ಇದ್ದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಪ್ರತಿನಿಧಿ ಬೋಧಿಸಿದರು. ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.