ಅಣಕವಾಡು : ಮದನಾರಿ ಸತಿ ರೇಣುಕೆ

0
159

ಮದನಾರಿ ಸತಿ ರೇಣುಕ

ಮದ‌ವೇರಿದ ತುಂಬಿದ ತನು
ತಂದಳು ಸತಿ ರೇಣುಕೆ
ಮನೆಮುಂದಿನ ಅಂಗಳದಲಿ
ಕಸಬಳಿದಳು‌ ಬಳಲಿಕೆ
ಏದುಸಿರನು‌ ಬಿಡುಬಿಡುತಲಿ
ನೀರನು ಚಳೆಹೊಡೆದಳು
ಆಯಾಸದಿ ಬಾಗುತ್ತಲಿ
ರಂಗೋಲಿಯ ಬರೆದಳು

ಮಹಾಮನೆಯ ಮಹಾದೇವಿ
ಮಹಾಕಾಯ ಹೊತ್ತಳು
ಬೇಸರದಲಿ ಬುಸುಗುಡುತಲಿ
ನಿಟ್ಟುಸಿರನು‌ ಬಿಟ್ಟಳು
ಹಾದಾಡುವ ಹೊಸತಿಲಲ್ಲಿ
ಬಂದಳು ಹೊಯ್ದಾಡುತ
ಮನೆಬಾಗಿಲ ತುಂಬ ತಾನೆ
ನಿಂದಳು ತುಳುಕಾಡುತ

ಬಂಗಾರದ ಆಭರಣ‌ವ
ಮೈಯ್ಯತುಂಬ ತೊಟ್ಟಳು
ಇಲಕಲ್ಲಿನ ಕೈಮಗ್ಗದ
ಭಾರಿಸೀರೆ ಉಟ್ಟಳು
ಬಿಳಿಬಣ್ಣದ ಪರಿಮಳ ಪುಡಿ
ಬಳಿದಳು ಚೆಲುವದನಕೆ
ದಟ್ಟವಾದ ಕೆಂಬಣ್ಣವ
ಲೇಪಿಸಿದಳು ಅಧರಕೆ

ಸಿಂಗರಿಸಿದ ಮೈಸೂರಿನ
ಮದದಾನೆಯ ತೆರದಲಿ
ಬೈಗು ವಾಯು ವಿಹಾರಕ್ಕೆ
ಹೊರಹೊರಟಳು ಜವದಲಿ
ದಪ್ಪ‌ಮೈಯ್ಯ ಬಳುಕಿಸುತ್ತ
ಮಂದಗಮನಿ ನಡೆದಳು
ಸೊಂಡಿಲಗೈ ತಿರುಗಿಸುತ್ತ
ಸಾವಕಾಶ ಹೋದಳು

ನಾಯಿ ದಣಿದು ತೇಕುವಂತೆ
ಏಗುತ್ತಲಿ ಹೊರಟಳು
ಬಳಲಿ ಬಳಲಿ ಬೆಂಡಾದಳು
ಬೇಗನೆ ಬೇಸತ್ತಳು
ನಡೆದು‌ನಡೆದು ಮೈಬೆವೆತಳು
ಉಸಿರಾಟವು ಹೆಚ್ಚಿತು
ಮೈಯ್ಯಿಕೈಯ್ಯಿಕಾಲಿನಲ್ಲಿ
ನೋವುಜಾಸ್ತಿಯಾಯಿತು

ಕಾಲ್ಸೋತವು ಕೆಳಕುಳಿತಳು
ಕಣ್ಕತ್ತಲು ಚಕ್ಕರು
ನಡೆದಾಡುವ ಹಾದಿಯಲ್ಲಿ
ನೋಡಿದ ಜನ ನಕ್ಕರು
ಎದ್ದು ಬಿದ್ದು ಸಾವರಿಸುತ
ಮೇಲಕೆದ್ದು ನಿಂತಳು
ಮದನಾರಿಯು ಮನಸಿನಲ್ಲಿ
ನಾಚುತ ನೀರಾದಳು
++++00++++
(ಚೆನ್ನವೀರ ಕಣವಿಯವರ “ನೀಲಾಂಬಿಕೆ” ಕವನ
“ಸದುವಿನಯದ ತುಂಬಿದ ಕೊಡ
ತಂದಳು ನೀಲಾಂಬಿಕೆ” ಧಾಟಿಯಲ್ಲಿ)

ರಚನೆ: ಎನ್.ಶರಣಪ್ಪ‌ ಮೆಟ್ರಿ