ಸಿಂದಗಿ: ಇತ್ತೀಚಿನ ಮದುವೆಗಳಲ್ಲಿ ಸಸಿಗಳ ವಿತರಣೆ, ಪುಸ್ತಕಗಳ ಲೋಕಾರ್ಪಣೆ, ಸರ್ವಧರ್ಮಗಳ ಸಮ್ಮೇಳನ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಮೂಹಿಕ ವಿವಾಹಗಳು ಸೇರಿದಂತೆ ಹಲವು ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಮಾದರಿ ಮದುವೆ ಎನಿಸಿಕೊಂಡಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಆರಕ್ಷಕನ ಮದುವೆಯಲ್ಲಿ ಆತನ ಸ್ನೇಹಿತರು ಪ್ರತಿಭಾನ್ವಿತ ಸಂಗೀತ ಕಲಾವಿದರನ್ನು ಕರೆ ತಂದು ಗಾನ ಕಲಾರತ್ನ ಪ್ರಶಸ್ತಿ ಜೊತೆಗೆ 10 ಸಾವಿರ ನಗದು ನೀಡಿ ಗೌರವಿಸಿ ಕಲಾ ಪ್ರೇಮ ಮೆರೆದಿದ್ದಾರೆ.
ತಾಲೂಕಿನ ಬೋರಗಿ ಗ್ರಾಮದ ಅಬಕಾರಿ ಆರಕ್ಷಕ (ಬೆಂಗಳೂರು) ಮಹಾಂತೇಶ್ ಮೂಲಿಮನಿ ಅವರ ಸಹೋದರ ರವಿ ಮೂಲಿಮನಿ ಇವರ ವಿವಾಹ ಯರಗಲ್ ಗ್ರಾಮದ ಕೀರ್ತಿ, ಬೋರಗಿಯ ಜ್ಯೋತಿ ಇವರ ಜೊತೆಗೆ ಬೋರಗಿ ವಿಶ್ವಾರಾಧ್ಯ ಮಠದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪ್ರತಿಭಾನ್ವಿತ ಸಂಗೀತ ಕಲಾವಿದರಿಗೆ ಗಾನ ಕಲಾರತ್ನ ಪ್ರಶಸ್ತಿ ನೀಡಲಾಯಿತು. ಜೊತೆಗೆ 10 ಸಾವಿರ ನಗದು ನೀಡಿ ಗೌರವಿಸಿ ಕಲಾ ಪ್ರೇಮಿ ಪ್ರಸ್ತುತ ಬೆಂಗಳೂರಿನಲ್ಲಿ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಾಂತೇಶನ ಸ್ನೇಹಿತ ಮೌಲಾಲಿ ಕೆ ಆಲಗೂರ, ಮಹೇಶ ಕೋಟಾರಗಸ್ತಿ, ಚೇತನ ಗುರಶೆಟ್ಟಿ, ಸುರೇಶ್ ನಾಯ್ಕೋಡಿ ಇವರೆಲ್ಲರೂ ಸಂಗೀತ ಪ್ರೇಮಿಗಳು ಆದ್ದರಿಂದ ತಮ್ಮ ಗೆಳೆಯನ ಮದುವೆಯಲ್ಲಿ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ವಧು ವರರಿಗೆ ಹರಿಸಲು ಬಂದ ಸಾವಿರಾರು ಜನರು ಪ್ರೇಮ ಮೆಲೋಡಿಸ್ ನ ಗಾಯಕ ಪ್ರಹ್ಲಾದ ಮತ್ತು ಸಿಂದಗಿಯ ಪ್ರತಿಭಾನ್ವಿತ ಯುವ ಗಾಯಕಿ ಪೂಜಾ ಹಿರೇಮಠ ಇವರ ಗಾಯನ ಸುಧೆ ಕೇಳಿ ಖುಷಿಯಿಂದ ತಲೆದೂಗಿದರು.
ಆರಕ್ಷಕ ಮೌಲಾಲಿ ಕೆ. ಆಲಗೂರ ಮಾತನಾಡಿ, ನಮ್ಮ ನಾಡು, ಕಲೆ, ಸಾಹಿತ್ಯ, ಸಂಗೀತಕ್ಕೆ ಜಗತ್ ಪ್ರಸಿದ್ಧಿ ಪಡೆದಿದೆ ಆದರೆ ನಾವುಗಳೇ ಕಲೆ ಮತ್ತು ಕಲಾವಿದರು ಗುರುತಿಸಿ ಗೌರವಿಸುವಲ್ಲಿ ಹಿಂದುಳಿದಿದ್ದೇವೆ. ಸಮಾಜದಲ್ಲಿ ಅದೆಷ್ಟು ಕಲಾವಿದರು ಸರಿಯಾದ ಪ್ರೋತ್ಸಾಹ, ಮಾರ್ಗದರ್ಶನ, ಹಾಗೂ ವೇದಿಕೆ ಸಿಗದೇ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಆಗದೆ ಕಲೆಯನ್ನು ಕೊಲ್ಲುತ್ತಿದ್ದಾರೆ. ಆದ್ದರಿಂದ ಎಲೆ ಮರೆಕಾಯಿಯಂತಿರುವ ಯುವ ಪ್ರತಿಭಾನ್ವಿತ ಕಲಾವಿದರನ್ನು ಪ್ರೋತ್ಸಾಹಿಸಿ ಗೌರವಿಸಲು ನಾವೆಲ್ಲರೂ ಶ್ರಮಿಸಿ ಕಲಾವಿದರ ಕಲೆಗೆ ಬೆಲೆ ನೀಡಬೇಕು ಎಂದರು.
ವೇದಿಕೆ ಮೇಲೆ ವಧು ವರ ಸ್ನೇಹಿತರಾದ ನೀಲಮ್ಮ, ನರ್ಗಿಸ್ ಬಾನು, ಭಾಗ್ಯಶ್ರೀ, ಮೌಲಾಲಿ, ಪರಶುರಾಮ, ಮುತ್ತು, ಮಹೇಶ್, ಅಪ್ಪಾಜಿ ಪುರದಾಳ ಇದ್ದರು. ಕಲಾವಿದರನ್ನು ಗೌರವಿಸಿದ್ದಕ್ಕೆ ಗಾಯಕರಾದ ಪ್ರಹ್ಲಾದ್ ಮತ್ತು ಪೂಜಾ ಹಿರೇಮಠ ಕೃತಜ್ಞತೆ ಸಲ್ಲಿಸಿದರು. ಒಟ್ಟಿನಲ್ಲಿ ಸ್ನೇಹಿತನ ಮದುವೆಯಲ್ಲಿ ಕಲಾ ಪ್ರೇಮ ಮೆರೆದ ಆತನ ಸ್ನೇಹಿತರು ವಿವಾಹ ಮಹೋತ್ಸವದಲ್ಲಿ ಸಂಗೀತೋತ್ಸವ ನೆರವೇರಿಸಿ ಗೆಳೆಯ ಮದುವೆ ಸಮಾಜಕ್ಕೆ ಮಾದರಿ ಮದುವೆಯಾಗಿ ಯಶಸ್ವಿಗೊಳಿಸಿದರು.