ತಿಮ್ಮಾಪೂರ – ಹಿಂದೂ ಮುಸ್ಲಿಂ, ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ದಿನಾಂಕ:-೧೭ ಬುಧವಾರದಂದು ಭಕ್ತಿಭಾವದ ಮಧ್ಯೆ ತೆರೆಕಂಡಿತು.
ಐದು ದಿನಗಳ ವರೆಗೆ ಪ್ರತಿಷ್ಠಾನಗೊಂಡ ಹಸೇನ ಹುಸೇನರ ಪಾಂಜಾ ಹಾಗೂ ಡೋಲಿಗೆಗಂಧರಾತ್ರಿ ಹಾಗೂ ಕತಲ್‌ರಾತ್ರಿಯ ದಿನ ಹಿಂದೂ ಹಾಗೂ ಮುಸ್ಲಿಂರು ಜಯಘೋಷದೊಂದಿಗೆ ಮಸೀದಿಗೆ ತೆರಳಿ ವಿವಿಧ ಪಾನಕಾ ಹಾಗೂ ನಾನಾ ಹರಕೆಗಳನ್ನು ನೀಡಿ ಲಾಡಿಗಳನ್ನು ಭಕ್ತಿ ಪೂರಕವಾಗಿ ಕೊರಳಲ್ಲಿ ಹಾಕಿಕೊಂಡು ನಮನ ಸಲ್ಲಿಸಿದರು.
ಹಿಂದೂ ಬಾಂಧವರೂ ಕೂಡ ಸಕ್ಕರೆ ಊದುಬತ್ತಿ ಹಚ್ಚಿ ಭಕ್ತಿಯ ನಮನ ಸಲ್ಲಿಸಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದರು. ಕತಲ್‌ರಾತ್ರಿ ಅಗ್ನಿ ಕುಂಡಕ್ಕೆ ಹಾಯುವದರೊಂದಿಗೆ ಹೇಳಿಕೆಗಳು ನಡೆದವು. ಮೊಹರಂ ಹಬ್ಬದ ಕೊನೆಯ ದಿನ ಮಸೀದಿಯ ಹಸೇನ್ ಹುಸೇನರ ಡೋಲಿಗಳು ಹಾಗೂ ಪಾಂಜಾಗಳು ಮೆರವಣಿಗೆಗಳ ಮೂಲಕ ಹೊಳೆಗೆ ಕಳುಹಿಸಲಾಯಿತು. ಸಂಜೆ ಮಸೀದಿಯ ಮುಂಭಾಗದಲ್ಲಿ ವಿಲೀನಗೊಂಡ ಪಾಂಜಾ ಹಾಗೂ ಡೋಲಿಗಳ ಮೆರವಣಿಗೆಗೆ ಗ್ರಾಮದ ಯುವಕರ ಹೆಜ್ಜೆಕುಣಿತ ಹಾಗೂ ಹಲಿಗೆ ಮೇಳದ ಯುವಕರ ತಂಡಗಳು ಮೊಹರಂ ಹಬ್ಬಕ್ಕೆ ಕಳೆಕಟ್ಟಿದವು. ನಂತರ ರಾತ್ರಿ ಊರ ಮುಂದಿನ ಬಾವಿಗೆ ತೆರಳಿ ಮೆರವಣಿಗೆಯ ಮೂಲಕ ಸಾಗಿ ಪೂಜೆ ಮುಗಿಸಿ ಮುಸ್ಲಿಂ ಹಿರಿಯರು ಮರಳಿ ಮಸೀದಿಗೆ ಬರುವಾಗ ಹಸೇನ ಹುಸೇನ್‌ರು ಪ್ರಾಣತೆತ್ತ ಸಂಕೇತವಾಗಿ ಶೋಕ ಗೀತೆಗಳನ್ನು ಹಾಡಿದರು. ಮೊಹರಂ ಹಬ್ಬಕ್ಕೆ ಹುಲಿ ವೇಷ, ಹಳ್ಳೋಳ್ಳಿ ಬವ್ವ, ವೇಷಧಾರಿಗಳು ಮೆರಗು ನೀಡಿದವು, ಮೆರವಣಿಗೆ ಉದ್ದಕ್ಕೂ ಹಲಿಗೆಯ ನಾದಕ್ಕೆ ಯುವಕರು ಕುಣಿದು ಕುಪ್ಪಳಿಸಿ ಹರ್ಷಪಟ್ಟರು.