ಮೂಡಲಗಿ: ಕೋವಿಡ್ ಬಂದಿದ್ದೆ ಬಂದಿದ್ದು, ಸರ್ಕಾರ ನಿರ್ವಹಣೆ ಜೊತೆಗೆ ಒಂದಿಲ್ಲೊಂದು ಎಡವಟ್ಟು ಮಾಡುತ್ತಲೇ ಬಂದಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಗಳ ಯಡವಟ್ಟೂ ಸೇರಿಕೊಂಡು ನಾಗರಿಕರು ಪರದಾಡುವಂತಾದ ಹಲವಾರು ಉದಾಹರಣೆಗಳನ್ನು ನೋಡಿದ್ದೇವೆ. ಇದೀಗ ಮೂಡಲಗಿಯ ಸರ್ಕಾರಿ ಆಸ್ಪತ್ರೆ ಲಸಿಕೆ ವಿಷಯದಲ್ಲಿ ಯಡವಟ್ಟು ಮಾಡಿದೆ.
ಹೌದು, ಲಸಿಕೆ ಪಡೆಯದಿದ್ದರೂ ಇಲ್ಲೊಬ್ಬರಿಗೆ ಸರ್ಟಿಫಿಕೇಟ್ ದೊರೆತಿದೆ ! ಕೆಲವರಿಗೆ ಕೋವಿಡ್ ಲಸಿಕೆ ಪಡೆದರೂ ಪ್ರಮಾಣಪತ್ರ ಬಾರದಿರುವ ಪ್ರಕರಣಗಳಿವೆ. ಇಲ್ಲಿ ವ್ಯಕ್ತಿಯೊಬ್ಬರು ಇನ್ನೂ ಲಸಿಕೆಯನ್ನೇ ಹಾಕಿಸಿಕೊಂಡಿಲ್ಲ. ಆಗಲೇ ಅವರ ಹೆಸರಿನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರ ಬಂದಿದೆ.
2ನೇ ಡೋಸ್ ಪಡೆಯದೆ ಸಂದೇಶ ನೋಡಿ ಶಾಕ್ ಆಗಿದೆ. ಮೂಡಲಗಿ ಪಟ್ಟಣದ ಗಾಂಧಿ ಚೌಕ ನಿವಾಸಿ ಈಶ್ವರ ಢವಳೇಶ್ವರ ಜುಲೈ 30, 2021ಕ್ಕೆ ಲಸಿಕಾ ಕೇಂದ್ರದಲ್ಲಿ ಮೊದಲ ಡೋಸ್ ಲಸಿಕೆ ಪಡೆದಿದ್ದರು. 2ನೇ ಡೋಸ್ ಅನಿವಾರ್ಯ ಕಾರಣಗಳಿಂದಾಗಿ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಶುಕ್ರವಾರ ಎರಡನೇ ಡೋಸ್ ಲಸಿಕೆಯನ್ನು ಅವರು ಪಡೆದಿರುವುದಾಗಿ ಆಸ್ಪತ್ರೆಯವರು ಅವರ ಮೊಬೈಲ್ ಲ್ಲಿಯೇ ಪ್ರಮಾಣ ಪತ್ರ ಡೌನ್ಲೋಡ್ ಮಾಡಿ ತೋರಿಸಿದ್ದಾರೆ.
ಇದರಿಂದ ಈಶ್ವರ ಅವರಿಗೆ ಆಶ್ಚರ್ಯವಾಗಿದೆ. ನಾನು ಇನ್ನೂ ಎರಡನೇ ಡೋಸ್ ತೆಗೆದುಕೊಂಡಿಲ್ಲ. ನಂತರ ಈಶ್ವರ ಎರಡು ಡೋಸ್ ಹಾಕಿಸಿಕೊಂಡಿದ್ದರೇ ನಾನೇಕೆ ಮತ್ತೆ ಲಸಿಕೆ ತೆಗೆದುಕೊಳ್ಳಲು ಬರುತ್ತಿದ್ದೆ. ಸರಕಾರವಾಗಲಿ, ವೈದ್ಯರಾಗಲಿ ಮೂರನೇ ಡೋಸ್ಗೆ ಅವಕಾಶ ನೀಡಿದ್ದಾರೆಯೇ..? ನಾನೇಕೆ ಹೆಚ್ಚಿನ ಡೋಸ್ ಪಡೆಯಲಿ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತಾಳಿದ್ದು ಹಾರಿಕೆಯ ಉತ್ತರ ನೀಡಿದ್ದಾರೆ.
ಈಗ ಢವಳೇಶ್ವರ ಅವರು ಕೋವಿಡ್ ಎರಡನೇ ಡೋಸ್ ಪಡೆಯಬೇಕೆ ಬೇಡವೆ ಎಂಬುದು ಪ್ರಶ್ನೆ. ಲಸಿಕೆ ಹಾಕಿಸಿಕೊಳ್ಳಲು ಹೋದರೆ ತಂತ್ರಾಂಶ ಅನುಮತಿ ನೀಡುವುದಿಲ್ಲ. ಹಾಗೇ ಬಿಟ್ಟರೆ ಹೊಸ ತಳಿ ಓಮಿಕ್ರಾನ್ ಭೀತಿ ! ಒಟ್ಟಿನಲ್ಲಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಈಶ್ವರ ಅವರ ಪರಿಸ್ಥಿತಿ.