ಸಿಂದಗಿ: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಖಬ್ರಸ್ಥಾನದ ಜಾಗ ಎಂದು ದಾಖಲೆಯಲ್ಲಿ ಇದ್ದರೆ ಅದು ಸ್ಮಶಾನಕ್ಕೆ ಮಾತ್ರ ಬಳಕೆಯಾಗಬೇಕು. ಅಲ್ಲಿ ಸಮಾಧಿ ಇರಲಿ ಬಿಡಲಿ, ಬೇರೆ ಯಾವುದೇ ಚಟುವಟಿಕೆ ನಡೆಸಬಾರದು. ಹೀಗಿರುವಾಗ ಇಲ್ಲಿ ೩೮೦ ಅಂಗಡಿಗಳನ್ನು ನಿರ್ಮಿಸಲು ನೀಲಿನಕ್ಷೆಯನ್ನು ಸಿದ್ಧಪಡಿಸಿ, ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ವಕ್ಫ್ ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ದಸ್ತಗೀರ ಮುಲ್ಲಾ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿನ ಸರ್ವೇ ನಂಬರ್ ೧೦೨೯ರಲ್ಲಿರುವ ಖಬ್ರಸ್ಥಾನ ಜಾಗ ಖಬ್ರಸ್ಥಾನಕ್ಕೆ ಉಪಯೋಗಿಸಬೇಕೆಂದು ಆಗ್ರಹಿಸಿ, ವಕ್ಸ್ ಆಸ್ತಿ ಸಂರಕ್ಷಣಾ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಸಮಿತಿಯವರ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಪದಾಧಿಕಾರಿಗಳು, ನಕಲಿ ಕಮಿಟಿಯವರು ಸರ್ವೇ ನಂಬರ್ ೧೦೨೯ಕ್ಕೆ ಏನು ಸಂಬಂಧ ಎಂದು ಪ್ರಶ್ನಿಸಿದರು.
ಇಲ್ಲಿ ಕಳೆದ ೩೦-೪೦ ವರ್ಷಗಳಿಂದ ಗೂಡಂಗಡಿಗಳನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದವರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಇದರ ಮಾಲೀಕರು ತಾವು ಎಂದು ಬಿಂಬಿಸಿ ಅವರನ್ನು ಹತ್ತಿಕ್ಕುವಂತಹ ಕೆಲಸ ಮಾಡಿದರು. ಖಬ್ರಸ್ಥಾನ ಜಾಗ ಖಬ್ರಸ್ಥಾನ ಆಗಿಯೇ ಉಳಿಯಬೇಕು ಅನ್ನೋದು ಸುಪ್ರೀಂ ಕೋರ್ಟ್ ಆದೇಶ. ಆದರೆ, ಇವರು ಮತ್ತೆ ಇಲ್ಲಿ ಅನಧಿಕೃತ ಮಳಿಗೆಗಳನ್ನು ನಿರ್ಮಿಸಲು ಹೊರಟಿದ್ದಾರೆ. ವಕ್ಫ್ ಬೋರ್ಡ್ ಇವರಿಗೆ ಕಮಿಟಿ ಮಾಡಿ ಕೊಟ್ಟಿದ್ದು ಸರ್ವೇ ನಂಬರ್ ೮೩೪ ಹಾಗೂ ೧೦೨೦ರಲ್ಲಿ ನಿರ್ವಹಣೆ ಮಾಡಲು. ಆದರೆ, ಸರ್ವೇ ೧೦೨೯ರಲ್ಲಿ ಶೆಡ್ ನಿರ್ಮಿಸಲು ಪರವಾನಿಗೆ ಕೊಟ್ಟಿದ್ದು ಯಾರು? ಇದೊಂದು ನಕಲಿ, ಬೋಗಸ್ ಕಮಿಟಿ, ಗೆಜೆಟ್ ನಲ್ಲಿನ ಫಾರ್ಮ್ ನಂಬರ್ ೪೨ನಲ್ಲಿ ಸರ್ವೇ ನಂಬರ್ ೧೦೨೦ ಇರುವುದನ್ನು ೧೦೨೯ ಎಂದು ನೀವು ತಿದ್ದಿದ್ದೀರಿ. ಇದರ ದಾಖಲೆಗಳನ್ನು ಕೊಡುತ್ತೇವೆ. ಸಿರಿಯಲ್ ನಂಬರ್ ೯೬ರಲ್ಲಿ ಸರ್ವೇ ನಂಬರ್ ೧೦೨೯ ಇದ್ದರೆ ನಾವು ಹೋರಾಟ ಕೈ ಬಿಡುತ್ತೇವೆ ಎಂದರು
ಮುಸ್ಲಿಂ ಖಬ್ರಸ್ಥಾನ ಕಮಿಟಿ ಸಿಂದಗಿ ಎಂದು ಹೇಳಿ ಕೊಟ್ಟಿರುವ ಸ್ವಯಂ ಘೋಷಣಾ ಪತ್ರದಲ್ಲಿ ಈ ಕಮಿಟಿ ಆಡಳಿತ ಮಂಡಳಿಯ ಸದಸ್ಯರ ಪೈಕಿ ಯಾರ ಮೇಲೆ ಅಪರಾಧ ಪ್ರಕರಣಗಳಿಲ್ಲ. ವಕ್ಫ್ ಸಂಸ್ಥೆಯ ಬಾಡಿಗೆದಾರರಿಲ್ಲ ಕಬ್ಬಾದಾರರಿಲ್ಲ ಎಂದು ಹೇಳಿದ್ದಾರೆ. ನಿಮ್ಮ ಸದಸ್ಯರ ಮೇಲೆ ಅಪರಾಧ ಪ್ರಕರಣಗಳು ಇರುವ ಎಫ್‌ಐಆರ್ ದಾಖಲೆಗಳನ್ನು ನಾವು ಕೊಡುತ್ತೇವೆ. ನಿಮಗೆ ಧಮ್ಮು, ತಾಕತ್ತು ಇದ್ದರೆ ನೀವು ಜನರಿಗೆ ಏನು ಹೇಳಲು ಹೊರಟಿದ್ದೀರಿ ಅದನ್ನು ಸತ್ಯ ಎನ್ನುವುದು ಸಾಬೀತು ಪಡಿಸಿ ಎಂದು ದಸ್ತಗೀರ ಮುಲ್ಲಾ ಅವರು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ರಹಿಮ ದುದ್ದನಿ ಮಾತನಾಡಿ, ತಮ್ಮ ವಿರುದ್ದ ಕೇಳಿ ಬಂದಿರುವ ರೂ ೩ಲಕ್ಷ ವಸೂಲಿ ಅಲ್ಲಗಳೆದರು. ಇದು ಸತ್ಯಕ್ಕೆ ದೂರವಾದದ್ದು ಇದನ್ನು ಸಾಬೀತು ಪಡಿಸಬೇಕು ಇಲ್ಲದಿದ್ದರೆ ಅವರಿಗೆ ನೋಟೀಸ ಕಳಿಸುತ್ತೇನೆ ಎಂದರು.
ಮಹಿಬೂಬ ಸಿಂದಗಿಕರ ಮಾತನಾಡಿ, ಸಿಂದಗಿಯಲ್ಲಿನ ಮುಸ್ಲೀಂ ಸಮುದಾಯದ ಗಮನಕ್ಕೆ ತರದೇ ಕಳ್ಳತನದಿಂದ ಕಮೀಟಿ ಕೆಲ ೧೧ ಜನರು ಖಬ್ರಸ್ಥಾನ ಕಮಿಟಿ ಮಾಡಿಕೊಂಡು ಬಂದಿದ್ದು ಯಾಕೆ ಅನ್ನೋದು ಹೇಳಬೇಕು ಎಂದು ಪ್ರಶ್ನಿಸಿದರು.
ಈ ವೇಳೆ ಸಮಿತಿ ಉಪಾಧ್ಯಕ್ಷ ಯಾಕೂಬ ನಾಟೀಕಾರ, ಅಬ್ದುಲರಜಾಕ ದುದ್ದನಿ, ತಾಲೀಬ ಗುಂದಗಿ, ಅಬ್ದುಲ್ ರಜಾಕ ದುದನಿ, ಜಾಫರ್ ಇನಾಮದಾರ, ಮಹಿಬೂಬ ಹಸರಗುಂಡಗಿ, ಅಸ್ಪಾಕ ಕರ್ಜಗಿ, ಸೇರಿದಂತೆ ಅನೇಕರಿದ್ದರು.