ಮೂಡಲಗಿ: ‘ಭಗತ್‍ಸಿಂಗರು ದೇಶ ಪ್ರೇಮಕ್ಕಾಗಿ, ದೇಶ ರಕ್ಷಣೆಗಾಗಿ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡು ದೇಶಕ್ಕಾಗಿ ಹುತಾತ್ಮರಾದ ಅಪ್ಪಟ ದೇಶಭಕ್ತ’ ಎಂದು ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.
ಇಲ್ಲಿಯ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಆತಿಥ್ಯದಲ್ಲಿ ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರದವರು ಆಚರಿಸಿದ ಭಗತ್‍ಸಿಂಗ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಭಗತ್‍ಸಿಂಗರ ದೇಶಾಭಿಮಾನವು ಯುವಕರಿಗೆ ಪ್ರೇರಣಾ ಶಕ್ತಿಯಾಗಿದೆ ಎಂದರು.
ಭಾರತಕ್ಕೆ ಸ್ವಾತಂತ್ರ್ಯಕ್ಕಾಗಿ ನನ್ನ ಪ್ರಾಣವನ್ನು ನೀಡುತ್ತೇನೆ, ಹತ್ತು ಜನ್ಮ ಇದ್ದರೂ ಭಾರತದಲ್ಲಿ ಜನಿಸಿ ದೇಶಕ್ಕಾಗಿ ಪ್ರಾಣವನ್ನು ನೀಡಲು ಸಿದ್ದ ಎಂದು ಹೇಳಿದ ಭಗತ್‍ಸಿಂಗನ ದೇಶಭಕ್ತಿ ಅಪ್ರತಿಮವಾದದ್ದು ಎಂದರು.
ಭಗತ್‍ಸಿಂಗರ ಜನ್ಮ ಮತ್ತು ಬಲಿದಾನವು ಎರಡೂ ಜಾಗತಿಕ ಪುಟದಲ್ಲಿ ಅಚ್ಚಳಿಯದ ದಾಖಲೆಯಾಗಿದೆ. ಕೇವಲ 23 ವರ್ಷಗಳ ಅವಧಿಯಲ್ಲಿ ಇಡೀ ದೇಶವೇ ಬೆರಗು ಆಗುವಂತೆ ದೇಶಕ್ಕಾಗಿ ತ್ಯಾಗಿ ಎಂದು ಹೆಸರು ಪಡೆದಿರುವ ಧೀಮಂತ ಯುವ ನಾಯಕ ಎಂದರು.
ಮುಖ್ಯ ಅತಿಥಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ, ಕಿರಿಯ ವಯಸ್ಸಿನಲ್ಲಿ ಹಿರಿದಾದ ಸಾಧನೆಯನ್ನು ಭಗತ್‍ಸಿಂಗ ಮಾಡಿ ತೋರಿಸಿದ್ದು, ಅವರದು ಅಮರ ಬಲಿದಾನವಾಗಿದೆ ಎಂದರು.
ಶ್ರೀಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿ, ಯುವಕರು ಭಗತ್‍ಸಿಂಗರ ದೇಶಾಭಿಮಾನದ ಬಗ್ಗೆ ತಿಳಿದು ರಾಷ್ಟ್ರಕ್ಕಾಗಿ ವಿಧೇಯರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಾತನಾಡಿ ಲಯನ್ಸ್ ಕ್ಲಬ್‍ದಿಂದ ಸೈನಿಕ ಪ್ರಶಿಕ್ಷಣಾರ್ಥಿಗಳಿಗೆ ಭಗತ್‍ಸಿಂಗರ ಸಾಧನೆ, ತ್ಯಾಗವನ್ನು ತಿಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ ಎಂದರು.
ಲಯನ್ಸ್ ಕ್ಲಬ್ ಪ್ರಾಂತೀಯ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಸಂಗಮೇಶ ಕೌಜಲಗಿ, ವಕೀಲ ಸುರೇಶ ಸಣ್ಣಕ್ಕಿ, ಮಂಜುನಾಥ ಕುಂಬಾರ ವೇದಿಕೆಯಲ್ಲಿ ಇದ್ದರು.
ಐಶ್ವರ್ಯ ತಳವಾರ, ಜುನೇದ ಡಾಂಗೆ, ಸುರೇಶ ಸಣ್ಣಕ್ಕಿ ಅವರು ಹಾಡಿದ ದೇಶ ಭಕ್ತಿ ಗೀತೆಗಳು ಗಮನಸೆಳೆದವು.
ಶಶಿಧರ ಕಾರ್ಯಕ್ರಮ ನಿರೂಪಿಸಿದರು.