ಇವರ ಮನೆಯಿಂದ ತಂದು ಕೊಡ್ತಾರಾ ಇವರು ? – ಗಡಾದ ಪ್ರಶ್ನೆ
ಮೂಡಲಗಿ – ನೂತನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಮಂಜೂರಾತಿ ಪತ್ರದ ಮೇಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆಶಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಇವರ ಭಾವಚಿತ್ರ ಹಾಕಿಕೊಂಡಿದ್ದು ಇವರೆಲ್ಲ ತಮ್ಮ ಸ್ವಂತ ಹಣದಿಂದ ಈ ಗ್ಯಾರಂಟಿಗಳನ್ನು ಕೊಡುತ್ತಾರೆಯೇ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ ಈ ಭಾವಚಿತ್ರಗಳನ್ನು ತೆಗೆದು ಹಾಕದಿದ್ದರೆ ಸರ್ಕಾರ ಮತ್ತು ಸಚಿವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸುವುದಾಗಿ ಅವರು ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಪ್ರಕರಣ ಸಂಖ್ಯೆ ೨೩/೨೦೦೩, ೧೯೭/೨೦೦೪ ಹಾಗೂ ೩೦೨/೨೦೧೨ ಇವುಗಳಲ್ಲಿ ಸರ್ಕಾರದ ಜಾಹೀರಾತು ಮತ್ತು ಯೋಜನೆಗಳಲ್ಲಿ ಸಚಿವರ ಭಾವಚಿತ್ರಗಳನ್ನು ಹಾಕಲು ಅವಕಾಶವಿಲ್ಲವೆಂದು ಐತಿಹಾಸಿಕ ತೀರ್ಪು ನೀಡಿದೆ ಅಲ್ಲದೆ ಈ ಸಂಬಂಧ ನ್ಯಾಯಾಲಯದ ತೀರ್ಪನ್ನು ಕಟ್ಟು ನಿಟ್ಟಾಗಿ ಪಾಲಿಸಲು ದಿ. ೧೭.೦೯.೨೦೨೧ ರಂದು ಸರ್ಕಾರಕ್ಕೆ ನಿರ್ದೇಶನ ಕೂಡ ನೀಡಿದೆ. ಈ ವಿಷಯ ರಾಜ್ಯ ಸರ್ಕಾರಕ್ಕೆ ಗೊತ್ತಿದ್ದರೂ ಸರ್ಕಾರದ ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮಿ ಯೋಜನೆಗಳ ಮಂಜೂರಾತಿ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿವಕುಮಾರ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಫೋಟೋ ಹಾಕಲು ಅವಕಾಶ ನೀಡಿದ್ದೇಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸರ್ಕಾರದ ಈ ನಡೆಯನ್ನು ಖಂಡಿಸಿರುವ ಗಡಾದ ಅವರು, ಸರ್ಕಾರದ ಯೋಜನೆಗಳಿಗೆ ಜನರ ತೆರಿಗೆಯ ಹಣ ಉಪಯೋಗಿಸಲಾಗುತ್ತದೆ ಆದರೆ ಈ ನಾಯಕರು ತಮ್ಮ ಮನೆಯಿಂದ ತಂದು ಕೊಟ್ಟಂತೆ ಯೋಜನೆಗಳಿಗೆ ತಂತಮ್ಮ ಭಾವಚಿತ್ರ ಹಾಕಿಕೊಂಡಿದ್ದು ಖಂಡನೀಯ. ಇವುಗಳನ್ನು ತೆಗೆದು ಹಾಕದಿದ್ದರೆ ನ್ಯಾಯಾಲಯ ನಿಂದನೆ ಪ್ರಕರಣದ ಅಡಿಯಲ್ಲಿ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.