ಮೂಡಲಗಿ: ಸ್ಥಳೀಯ ಶತಮಾನದ ಕನ್ನಡ ಶಾಲೆಯಲ್ಲಿ ಅಧ್ವಾನಗಳು ಸಾಕಷ್ಟಿದ್ದು ಎಲ್ಲಕ್ಕೂ ಕಾರಣವಾಗಿರುವ ಮೂಡಲಗಿ ಪುರಸಭೆ ಅಕ್ಷರಶಃ ಕಣ್ಮುಚ್ಚಿ ಕುಳಿತಿರುವುದರಿಂದ ಶಾಲಾ ಆವರಣ ಹಾಗೂ ಶೌಚಾಲಯದಲ್ಲಿ ಗಬ್ಬು ತುಂಬಿಕೊಂಡು ಮಕ್ಕಳಿಗೆ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ.
ಮೂಡಲಗಿ ಕನ್ನಡ ಮತ್ತು ಉರ್ದು ಶಾಲಾ ಆವರಣದ ಒಂದು ಮೂಲೆಯಲ್ಲಿ ಕಸ ಕಡ್ಡಿ ತುಂಬಿಕೊಂಡಿದ್ದು ಅದನ್ನು ಸ್ವಚ್ಛಮಾಡಲು ಸ್ವಚ್ಛ ಭಾರತ ಯೋಜನೆಯ ಪ್ರಶಸ್ತಿ ವಿಜೇತ ಮೂಡಲಗಿ ಪುರಸಭೆಗೆ ಸಮಯವೇ ಇಲ್ಲದಾಗಿದೆ ! ಅಲ್ಲದೆ ಶಾಲೆಗೆ ಒಳಚರಂಡಿ ಯೋಜನೆ ಸಮರ್ಪಕವಾಗಿಲ್ಲ ಆದ್ದರಿಂದ ಇಲ್ಲಿನ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ.
ಇಲ್ಲಿನ ಅಲ್ಪ ಸಂಖ್ಯಾತ ಅಬ್ದುಲ್ ಕಲಾಮ್ ಶಾಲೆಯ ಹುಡುಗರ ಶೌಚಾಲಯದ ಬಾಗಿಲುಗಳು ಮುರಿದಿವೆ, ಶೌಚದ ಬಾಂಡೆಗಳು ಹೊಲಬುಗೆಟ್ಟಿವೆ. ಮೂತ್ರದ ಪಾತ್ರೆಗಳು ಬ್ಲಾಕ್ ಆಗಿವೆ. ಇವುಗಳನ್ನು ಸ್ವಚ್ಛ ಮಾಡಬೇಕಾದ ಕಾರ್ಯ ಆಗಿಯೇ ಇಲ್ಲ.
ಮೂಡಲಗಿಯ ಈ ಕನ್ನಡ ಮಾಧ್ಯಮ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ, ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಹಾಗೂ ಉರ್ದು ಮಾಧ್ಯಮ ಶಾಲೆಯಲ್ಲಿ ಸುಮಾರು ೧೨೦೦ ಮಕ್ಕಳು ಕಲಿಯುತ್ತಿದ್ದು ಮಕ್ಕಳ ಆರೋಗ್ಯದ ಬಗ್ಗೆ ಗಮನಕೊಡಬೇಕಾದ ಪುರಸಭೆ ಅಕ್ಷರಶಃ ನಿರ್ಲಕ್ಷ್ಯ ವಹಿಸಿದೆ. ಶತಮಾನದ ಇತಿಹಾಸ ಹೊಂದಿರುವ ಕನ್ನಡ ಶಾಲೆಯಲ್ಲಿನ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕಾದ ಅಗತ್ಯವಿದೆ.
ಉಮೇಶ ಬೆಳಕೂಡ, ಮೂಡಲಗಿ