ಮೂಡಲಗಿ: ತಾಲೂಕಿನ ಪಟಗುಂದಿಯಿಂದ ಮೂಡಲಗಿಗೆ ಬರುವ ಪದವಿ, ಪದವಿಪೂರ್ವ, ಹಾಗೂ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಸ್ ಬೇಡಿಕೆ ಬಹು ದಿನಗಳಿಂದ ಇದ್ದದ್ದನ್ನು ಗಮನಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುತುವರ್ಜಿಯಿಂದ ಮಂಜೂರು ಆಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಮಂಗಳವಾರ ಪಟಗುಂದಿಯ ಉರ್ದು ಪ್ರಾಥಮಿಕ ಶಾಲೆಯ ಬಳಿ ಇರುವ ಬಸ್ ತಂಗುದಾಣದಲ್ಲಿ ನೂತನ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರಮಿಸಿದ ಎಲ್ಲರಿಗೂ ಹಾಗೂ ಕೆಸ್ಎಸ್ಆರ್ಟಿಸಿ ಘಟಕದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಪಟಗುಂದಿಯಲ್ಲಿನ ಉರ್ದು ಪ್ರಾಥಮಿಕ ಶಾಲೆ ತೇರ್ಗಡೆಗೊಂಡ ವಿದ್ಯಾರ್ಥಿಗಳು ಮೂಡಲಗಿಯ ಉರ್ದು ಫ್ರೌಡ ಶಾಲೆಗೆ ತೆರಳಬೇಕಾದರೆ ಬಸ್ ಸೌಕರ್ಯವಿಲ್ಲದೆ ಶಿಕ್ಷಣದಿಂದ ವಂಚಿತರಾಗಬಾರದೆಂದು ಮತ್ತು ಪದವಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗಾಗಿ ಈ ನೂತನ ಬಸ್ ಸೇವೆ ಪ್ರಾರಂಭಿಸಲಾಗಿದೆ ವಿದ್ಯಾರ್ಥಿಗಳು,ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕೆಂದ ಅವರು, ಶಿಕ್ಷಣವು ಶ್ರೇಷ್ಠ ಮಟ್ಟದ ಜೀವನ ರೂಪಿಸುತ್ತದೆ. ಪಾಲಕರು ಬಾಲ್ಯ ವಿವಾಹವೆಂಬ ಅನಿಷ್ಠ ಪದ್ದತಿಯಿಂದ ದೂರವಿದ್ದು ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆ ಉತ್ತಮ ಶಿಕ್ಷಣ ನೀಡಿ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು ಎಂದರು.
ಉರ್ದು ಫ್ರೌಡಶಾಲಾ ಶಿಕ್ಷಕ ಎ ಎಲ್ ತಹಶೀಲ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷ ಕಾಶೀಮಸಾಬ ಪೀರಜಾದೆ, ಮೀರಾಸಾಬ ಮುಲ್ತಾನಿ,ತಾಲೂಕಾ ಘಟಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ ಎ ಡಾಂಗೆ, ಪುರಸಭೆ ಸದಸ್ಯ ಗಫಾರ ಡಾಂಗೆ, ಎಸ್ ಡಿ ಎಮ್ ಸಿ ಅಧ್ಯಕ್ಷ ಇಮ್ತಿಯಾಜ ಕಲಾರಕೊಪ್ಪ, ಸಿಆರ್ಪಿ ಆರೀಫ್ ಟೋಪಿಚಾಂದ, ಎಲ್ ಎ ಮೇಕನಮರ್ಡಿ, ಜುಬೇರ ಪೆಂಡಾರಿ ಹಾಗೂ ಬಸ್ ಚಾಲಕ, ನಿರ್ವಾಹಕ, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.