spot_img
spot_img

ಭಕ್ತರ ಬೇಡಿಕೆಗಳನ್ನು ಈಡೇರಿಸುವ ಮುಳಮುತ್ತಲ ಕಾಮದೇವ; ಮಾರ್ಚ್ 06 ರಂದು ಜಾತ್ರೆ

Must Read

spot_img
- Advertisement -

ಧಾರವಾಡ: ಅನಾದಿ ಕಾಲದಿಂದಲೂ ಜಾನಪದ ಕಲೆಗಳು ನಮ್ಮಲ್ಲಿ ಬೇರೂರಿ ಉತ್ತರ ಕರ್ನಾಟಕದಾದ್ಯಂತ ಹಸಿರಾಗಿ ನಿಂತಿವೆ. ಸಾಂಸ್ಕೃತಿಕ ಹಿನ್ನೆಲೆಯ ಅನೇಕ ಕಲೆಗಳು, ಆಚರಣೆಗಳಿವೆ. ಅಂತಹ ಆಚರಣಾತ್ಮಕ ಕಲೆಗಳಲ್ಲಿ ಹೋಳಿಯು ಒಂದಾಗಿದೆ.

ಯಾವುದೇ ಅಶ್ಲೀಲ ಪದಗಳ ಬಳಕೆ ಇಲ್ಲದೆ, ಮದ್ಯಪಾನವಿಲ್ಲದೆ, ಬಣ್ಣದೋಕುಳಿ ಇಲ್ಲದೆ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವದು   ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದ ಕಾಮದೇವರ ಜಾತ್ರೆಯ ವಿಶೇಷವಾಗಿದೆ.

ಹೋಳಿ ಹಬ್ಬದಂದು ಈ ಗ್ರಾಮದಲ್ಲಿ ಪ್ರತಿಷ್ಠಾಪಿಸುವ ಶ್ರೀ ಕಾಮದೇವರ ದರ್ಶನಕ್ಕಾಗಿ ಹಿಂದು ಮುಸ್ಲಿಂ, ಬಡವ ಬಲ್ಲಿದ, ಮೇಲು ಕೀಳುಗಳೆಂಬ ಯಾವುದೇ ಜಾತಿ ಭೇದ ಭಾವವಿಲ್ಲದೇ ಆಗಮಿಸುವ ಅಪಾರ ಸಂಖ್ಯೆಯ ಭಕ್ತರೆಲ್ಲರೂ ಸೇರಿ ಶಾಂತಿ, ಸೌಹಾರ್ದತೆಯಿಂದ ಹಾಗೂ ಶೃದ್ಧಾ ಭಕ್ತಿಯೊಂದಿಗೆ ಹೋಳಿ ಹಬ್ಬವನ್ನು ಇಲ್ಲಿ ಆಚರಿಸುತ್ತಾರೆ. ಪ್ರತಿ ವರ್ಷ ಹುಬ್ಬಾ ನಕ್ಷತ್ರದ ದಿನದಂದು ಈ ಗ್ರಾಮದಲ್ಲಿ ಕಾಮ ದಹನವಾಗುವದು ಇಲ್ಲಿಯ ಹೋಳಿ ಹಬ್ಬದ ವಿಶೇಷಗಳಲ್ಲೊಂದಾಗಿದೆ.

- Advertisement -

ಮುಳಮುತ್ತಲ ಗ್ರಾಮದಲ್ಲಿ ವಿಶಿಷ್ಟವಾಗಿ ಆಚರಿಸುವ ಹೋಳಿ ಹಬ್ಬವನ್ನು ದಿನಾಂಕ 06-03-2023 ಸೋಮವಾರದಂದು ಆಚರಿಸಲಾಗುತ್ತಿದ್ದು, ಮಂಗಳವಾರ ದಿನಾಂಕ 07-03-2023 ರಂದು ಬೆಳಿಗ್ಗೆ 5-00 ಘಂಟೆಗೆ ಕಾಮದಹನ ನೆರವೇರುವದು.

ಮಾರ್ಚ 06 ರಂದು ಸಂಜೆ ಅಮ್ಮಿನಬಾವಿಯ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಉಪ್ಪಿನ ಬೆಟಗೇರಿಯ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ನಯಾನಗರದ ಸುಖದೇವಾನಂದ ಮಠದ ಶ್ರೀ ಗುರುಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಮಹಾರಾಷ್ಟ್ರದ ನಾಗಣಸೂರು ಜ.ಬಸವಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಅಭಿನವ ಬಸವಲಿಂಗ ಮಹಾಸ್ವಾಮಿಗಳು, ಯಾದವಾಡದ ಶ್ರೀ ಆನಂದಗುರು ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಎಲ್ಲ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ.

ಹೋಳಿ ಹಬ್ಬಕ್ಕೆ ಐತಿಹಾಸಿಕವಾದ ಹಿನ್ನೆಲೆ:

- Advertisement -

ಮುಳಮುತ್ತಲ ಗ್ರಾಮವು ಚಾಲುಕ್ಯರ ಆಡಳಿತಕ್ಕೊಳಪಟ್ಟಿದ್ದ ಕಾಲದಲ್ಲಿ ಗ್ರಾಮದಲ್ಲಿ ಬೆಂಡಿಗೇರಿ ಎಂಬ ಮನೆತನದಲ್ಲಿ ಸಣ್ಣಧರೆಪ್ಪ ಹೆಸರಿನ ಜಟ್ಟಿ ಪ್ರತಿ ದಿನ ಬೆಳಿಗ್ಗೆ ಗ್ರಾಮದ ಹತ್ತಿರ ಇರುವ ದೊಡ್ಡ ಬಾವಿಯಲ್ಲಿ ಸ್ನಾನ ಮಾಡಲು ಹೋಗುತ್ತಿದ್ದನಂತೆ.

ಆ ಸಮಯದಲ್ಲಿ ಈ ಜಟ್ಟಿಗೆ ಸಪ್ತ ಋಷಿಗಳ ದರ್ಶನವಾಗುವದು. ಮಹಾ ಮಹಿಮರಾಗಿದ್ದ ಸಪ್ತಋಷಿಗಳು ಜಟ್ಟಿಗೆ ನಾವು ನಿನಗೆ ದರ್ಶನ ತೋರಿದ ವಿಷಯವನ್ನು ಯಾರಿಗೂ ತಿಳಿಸಬೇಡ ಎಂದು ಹೇಳಿದರು. ಒಂದು ವೇಳೆ ನೀನು ತಿಳಿಸಿದರೆ ಅಂದೇ ನಿನ್ನ ಮರಣವಾಗುವದು ಎಂದು ಅವರು ಹೇಳಿದರು.

ಆಗ ಸಣ್ಣಧರೆಪ್ಪನು ಪೂಜ್ಯರೇ ನಾನು ನಿಮ್ಮ ದರ್ಶನದ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಾನು ಮರಣ ಹೊಂದುತ್ತೇನೆ ಎಂದು ನೀವು ಹೇಳಿದಿರಿ, ಆದರೆ ನಾನು ಮರಣವಾದರೂ ನನ್ನ ಹೆಸರು ಅಜರಾಮರವಾಗಿರುವಂತೆ ನನಗೆ ಆಶೀರ್ವದಿಸಿರಿ ಎಂದು ಅವರಲ್ಲಿ ಭಿನ್ನವಿಸಿಕೊಂಡನು.

ಆಗ ಸಪ್ತಋಷಿಗಳು ನೀನು ಮುಂದಿನ ಜನ್ಮದಲ್ಲಿ ನಿಮ್ಮೂರಿನ ಹರಿಜನಕೇರಿಯ ಕಣವಿ ಮನೆತನದಲ್ಲಿ ಜನಿಸಿ ಅಣ್ಣಿಗೇರಿಯ ಪ್ರಸಿದ್ಧ ಕಾಮಣ್ಣನ ಕರಿಯನ್ನು (ರುಂಡ) ನಿಮ್ಮೂರಿಗೆ ತಂದು ಪ್ರಸಿದ್ಧಿಯಾಗುವೆ ಎಂದು ಆಶೀರ್ವದಿಸಿದರು ಎಂಬ ಐತಿಹ್ಯವಿದೆ.

ಸಪ್ತಋಷಿಗಳು ದರ್ಶನವಾದ ವಿಷಯವನ್ನು ಈತ ತನ್ನ ತಾಯಿಯ ಮುಂದೆ ತಿಳಿಸಿ ಮರಣಹೊಂದುತ್ತಾನೆ. ನಂತರ ಈತ ಪುನರ್ಜನ್ಮ ಹೊಂದಿ ಹರಿಜನ ಕೇರಿಯ ಕಣವಿ ಮನೆತನದಲ್ಲಿ ಬುಡ್ಡಣ್ಣ ಎಂಬ ಹೆಸರಿನೊಂದಿಗೆ ಜನಿಸುತ್ತಾನೆ. ಈತ ಹದಿನೆಂಟು ವಯಸ್ಸಿನವನಾದಾಗ ಹೋಳಿ ಹುಣ್ಣಿಮೆ ದಿನದಂದು ಕ್ಷೌರ ಮಾಡಿಸಿಕೊಂಡು ಮನೆಗೆ ಬಂದು ತನ್ನ ಅತ್ತಿಗೆಗೆ ಅವಸರವಸರವಾಗಿ ನೀರು ಕೊಡಲು ಹೇಳುತ್ತಾನೆ. ಆಗ ಆತನ ಅತ್ತಿಗೆ ನಿಲ್ಲು ನೀರು ತರುವೆ ಏಕೆ ಅವಸರ ಪಡುತ್ತೀ, ನೀನೇನು ಅಣ್ಣಿಗೇರಿಯ ಕಾಮಣ್ಣನ ರುಂಡವನ್ನು ತಂದಿದ್ದೀಯಾ ಎಂದು ಮೂದಲಿಸಿದಳು. ಆಗ ಹಿಂದಿನ ಜನ್ಮದ ವಿಷಯ ಈತನಿಗೆ ನೆನಪಾಗಿ, ಅತ್ತಿಗೆ ನಾನು ಅಣ್ಣಿಗೇರಿಯ ಕಾಮಣ್ಣನ ರುಂಡವನ್ನು ತಂದಾಗ ನನಗೆ ನೀನು ನೀರು ಕೊಡುವೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ಹೋಗುವಾಗ ಮುಳಮುತ್ತಲ ಸೀಮೆಯ ಶ್ರೀ ಬಂಡೆಮ್ಮನ ದರ್ಶನ ಪಡೆದು ತಾಯಿ ನಾನು ಮರಳಿ ಬಂದು ನಿನಗೆ ನನ್ನ ರಕ್ತವನ್ನು ಅರ್ಪಿಸುವೆ ಎಂದು ದೇವಿಯ ಆಶೀರ್ವಾದ ಪಡೆದು ಅಣ್ಣಿಗೇರಿಗೆ ಹೊರಡುತ್ತಾನೆ.

ಅಣ್ಣಿಗೇರಿಯಲ್ಲಿ ಸಡಗರದಿಂದ ಕಾಮಣ್ಣನ ಹಬ್ಬ ನಡೆದಿತ್ತು. ಕಾಮದಹನದ ಸಮಯವಾಗಿತ್ತು. ಆಗ ದೇವಿಯ ಆಶೀರ್ವಾದ ಪಡೆದು ಬಂದಿದ್ದ ಶರಣ ಬುಡ್ಡಣ್ಣ ದೇವಿ ಸ್ವರೂಪದಲ್ಲಿ ಕಾಮದೇವನಿಗೆ ಪೂಜಿಸಿ ಅಣ್ಣಿಗೇರಿ ಜನತೆಗೆ ಬುಡ್ಡಣ್ಣ ಹೇಳುತ್ತಾನೆ. ನಾನು ಮುಳಮುತ್ತಲ ಹರಿಜನ ಕೇರಿಯವ ನಿಮ್ಮೂರಿನ ಕಾಮಣ್ಣನ ರುಂಡವನ್ನು (ಕರಿ) ತೆಗೆದುಕೊಂಡು ನಾನು ಹೋಗುತ್ತಿದ್ದೇನೆ, ನನ್ನನ್ನು ಹಿಡಿಯುವವರಿದ್ದರೆ ಹಿಡಿಯಿರಿ ಎಂದು ಹೇಳಿ ಅಲ್ಲಿ ಯಾರಿಗೂ ಸಿಗದೇ ಓಡೋಡಿ ಬರುತ್ತಾನೆ. ಇದನ್ನು ನೋಡಿದ ಜನ ಇವನನ್ನು ಹಿಡಿಯಲು ಬೆನ್ನು ಹತ್ತುತ್ತಾರೆ.

ಕಲ್ಲು ಮುಳ್ಳುಗಳನ್ನು ತುಳಿಯುತ್ತಾ ಶರಣ ಬುಡ್ಡಪ್ಪನು ಅವರಿಗೆ ಸಿಗದೇ ಓಡೋಡಿ ಮುಳಮುತ್ತಲ ಸೀಮೆಯ ಬಂಡೆಮ್ಮನ ದೇವಸ್ಥಾನದ ಹತ್ತಿರ ಬರುತ್ತಾನೆ. ಆಗ ಆತನ ಕಾಲಿಗೆ ಕಲ್ಲು ಮುಳ್ಳುಗಳು ಚುಚ್ಚಿದ್ದರಿಂದ ಆತ ನಡೆಯಲು ಬಾರದೇ ದೇವಸ್ಥಾನದ ಹತ್ತಿರ ಕುಳಿತುಕೊಳ್ಳುತ್ತಾನೆ. ವೃದ್ಧ ರೂಪದ ದೇವಿಯು ಆತನಿಗೆ ದರ್ಶನ ನೀಡುತ್ತಾಳೆ. ಅಣ್ಣಿಗೇರಿಯ ಜನ ತನ್ನನ್ನು ಕೊಲ್ಲಲು ಬೆನ್ನಟ್ಟಿ ಬಂದಿದ್ದಾರೆ ನಾನು ಇಲ್ಲಿರುವದನ್ನು ಅವರಿಗೆ ಹೇಳಬೇಡವೆಂದು ವೃದ್ಧೆಯಲ್ಲಿ ಆತ ವಿನಂತಿಸಿಕೊಳ್ಳುತ್ತಾನೆ.

ಆದರೆ ಆ ವೃದ್ಧೆಯು ಅಣ್ಣಿಗೇರಿಯ ಜನರಿಗೆ ಬುಡ್ಡಣ್ಣ ಇಲ್ಲಿರುವ ವಿಷಯ ತಿಳಿಸುತ್ತಾಳೆ. ಆಗ ಶರಣ ಬುಡ್ಡಣ್ಣನು ಅಣ್ಣಿಗೇರಿಯ ಜನರ ಕೈಯಲ್ಲಿ ನಾನು ಸಾಯಬಾರದು ಎಂದು ನಿರ್ಧರಿಸಿ ‘ಅಣ್ಣಿಗೇರಿಯ ಸಣ್ಣೇರಿ ಮುಳಮುತ್ತಲ ಕಲ್ಲು ಮಸಾರಿ’ ಸಮನಾಗಿ ಬೆಳೆಯಲಿ ಎಂದು ಹೇಳಿ ತನ್ನ ರುಂಡವನ್ನು ದೇವಿಗೆ ಸಮರ್ಪಿಸಿ, ತನ್ನ ರುಂಡ ಹಾಗೂ ಅಣ್ಣಿಗೇರಿಯ ಕಾಮಣ್ಣನ ರುಂಡ ಮುಳಮುತ್ತಲ ಸೀಮೆಯ ಒಳಗೆ ಎಸೆದು ವೀರ ಮರಣವನ್ನು ಹೊಂದುತ್ತಾನೆ ಎಂಬ ಐತಿಹಾಸಿಕ ಹಿನ್ನೆಲೆಯಿದೆ.

ಅಂದಿನಿಂದ ಇಂದಿನವರೆಗೆ ಶರಣ ಬುಡ್ಡಣ್ಣನ ಶೌರ್ಯದ ದ್ಯೋತಕವಾಗಿ ಈ ಗ್ರಾಮದಲ್ಲಿ ಪ್ರತಿ ವರ್ಷ ‘ಹುಬ್ಬಾ ನಕ್ಷತ್ರ’ದಂದು ಕಾಮದಹನವಾಗುವದು. ಶರಣ ಬುಡ್ಡಣ್ಣನ ಇಚ್ಛೆಯಂತೆ ಶೃದ್ಧಾ, ಭಕ್ತಿಯಿಂದ ಮೇಲು ಕೀಳುಗಳೆಂಬ ಭೇದವಿಲ್ಲದೇ ವಿಜೃಂಭಣೆಯಿಂದ ಹೋಳಿ ಹಬ್ಬವನ್ನು ಇಲ್ಲಿ ಆಚರಿಸುತ್ತಾರೆ.

ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಇಲ್ಲಿಗೆ ಆಗಮಿಸುವ ಅಪಾರ ಸಂಖ್ಯೆಯ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಹಲವಾರು ಸದ್ಭಕ್ತರು ತಮ್ಮ ಈಡೇರಿದ ಬಯಕೆಯ ಹರಕೆಯನ್ನು ಇಲ್ಲಿ ತೀರಿಸುತ್ತಾರೆ. ಭಕ್ತಾದಿಗಳಿಂದ ಕಾಮದೇವರಿಗೆ ದೀಡ ನಮಸ್ಕಾರ, ಎತ್ತುಗಳ ಮೆರವಣಿಗೆ ಹಾಗೂ ಮಹಾಪ್ರಸಾದ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. 

ಧಾರವಾಡ ಜಿಲ್ಲಾ ಬಸ್ ನಿಲ್ದಾಣದಿಂದ ಮುಳಮುತ್ತಲ ಗ್ರಾಮಕ್ಕೆ ವಿಶೇಷ ಜಾತ್ರಾ ಬಸ್ ಸೇವೆ ಕಲ್ಪಿಸಲಾಗಿದೆ, ಹಾಗೂ ಬೈಲಹೊಂಗಲ ಕಡೆಯಿಂದ ಬರುವ ಭಕ್ತಾದಿಗಳು ಬೈಲಹೊಂಗಲ- ಧಾರವಾಡ ವಾಯಾ ಉಪ್ಪಿನ ಬೆಟಗೇರಿ ಬಸ್ ನಲ್ಲಿ ಪ್ರಯಾಣಿಸಿ ಯಾದವಾಡ ಗ್ರಾಮಕ್ಕೆ ಇಳಿದು ಮುಳಮುತ್ತಲ ಗ್ರಾಮ ತಲುಪಬಹುದು.


ವರದಿ:

ಗುರು ಅರಳಿಮರದ

ಹವ್ಯಾಸಿ ಬರಹಗಾರರು ಹಾಗೂ ಜವಳಿ ವ್ಯಾಪಾರಸ್ಥರು ದೊಡವಾಡ.

- Advertisement -
- Advertisement -

Latest News

ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ

ಬೆಳಗಾವಿ - ತಾಲೂಕಿನ ಹೊಸ ಇದ್ದಲಹೊಂಡ ಶಿವಾಪೂರ ಸರಕಾರಿ ಪ್ರೌಢ ಶಾಲೆಯ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆ ಶ್ರೀಮತಿ ಜಿ ಬಿ ಸುಗತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group