spot_img
spot_img

ಮುನಿಪುರಾಧೀಶ ಮುರುಘೇಂದ್ರ ಮಹಾಸ್ವಾಮಿಗಳು

Must Read

spot_img
- Advertisement -

ಇಂದು ಮುನವಳ್ಳಿ ಶ್ರೀ ಸೋಮಶೇಖರ ಮಠದಲ್ಲಿ ಪರಮಪೂಜ್ಯ ಶ್ರೀ ಮುರುಘೇಂದ್ರ ಸ್ವಾಮೀಜಿಯವರ ಜನ್ಮ ದಿನದ ಸಂಭ್ರಮ ಈ ಸಂಭ್ರಮ ಮುನವಳ್ಳಿ ಹಾಗೂ ಸುತ್ತ ಮುತ್ತಲಿನ ಜನತೆಯ ಅಭಿಮಾನ ಮತ್ತಿ ಭಕ್ತಿಯ ಸಡಗರವೋ ಸಡಗರ.

ಪೂಜ್ಯರ ಹುಟ್ಟು ಹಬ್ಬವೆಂದರೆ ಅದು ವೈಶಿಷ್ಟ್ಯಪೂರ್ಣ  ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಮುನ್ನುಡಿ ಕೂಡ. ಇಂದು ಬೆಳಿಗ್ಗೆ ೧೦.೩೦ ಕ್ಕೆ ಶ್ರೀಮಠದಲ್ಲಿ ಗುರುವಂದನೆ ಕಾರ್ಯಕ್ರಮ ಜರುಗುತ್ತಿದ್ದು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಭಕ್ತಿಯ ಗುರುವಂದನೆ ಈ ಸಂದರ್ಭದಲ್ಲಿ ಜರುಗಿಸುತ್ತಿರುವುದು ವಿಶೇಷ,ತನ್ನಿಮಿತ್ತ ಪೂಜ್ಯರ ಕುರಿತು ನನ್ನ ಕಿರು ಬರಹ.

ನಾನು ೨೦೧೪ ರಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಬಿ.ಈಡಿ ವ್ಯಾಸಂಗಕ್ಕೆ ಸಂಪರ್ಕ ತರಗತಿಗೆ ಹೋಗುವ ಮುಂಚೆ ಪೂಜ್ಯರ ಆಶೀರ್ವಾದ ಪಡೆಯಲು ಶ್ರೀಮಠಕ್ಕೆ ತೆರಳಿದ ಸಂದರ್ಭವನ್ನು ಇಂದು ನೆನೆಯುವೆ. ನನ್ನ ಬರವಣಿಗೆಯು ಕುರಿತು ಸದಾ ತಮ್ಮ ಮಾರ್ಗದರ್ಶನ ನೀಡುವ ಪೂಜ್ಯರು. ಆ ದಿನ ನನಗೆ ಮೈಸೂರಿನಲ್ಲಿ ಎಲ್ಲಿ ಉಳಿದುಕೊಳ್ಳುವಿರಿ ಎಂದು ಕೇಳಿದರು.

- Advertisement -

ನಾನು ಇನ್ನೂ ಈ ಕುರಿತು ಯೋಚಿಸಿಲ್ಲ ಎಂದೆನು. ಪೂಜ್ಯರು ತಕ್ಷಣ ಸುತ್ತೂರು ಮಠಕ್ಕೆ ಪೋನ್ ಮಾಡಿ ನನ್ನ ಕುರಿತು ತಿಳಿಸಿ ರೂಮಿನ ವ್ಯವಸ್ಥೆ ಮಾಡಿಕೊಡಲು ತಿಳಿಸಿದರು. ಆಗ ಸುತ್ತೂರು ಮಠದವರು ನನಗೆ ವಿಶ್ವವಿದ್ಯಾಲಯಕ್ಕೆ ಹತ್ತಿರ ಇರುವ ನೂರೊಂದು ಗಣಪತಿ ದೇವಾಲಯದ ಹತ್ತಿರ ಇದ್ದ ಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಟ್ಟರು.

ಹೀಗೆ ಮುನವಳ್ಳಿಯಿಂದ ಯಾರೇ ತಮ್ಮ ವಿದ್ಯಾರ್ಜನೆ ಇರಬಹುದು ತಮ್ಮ ವೈಯುಕ್ತಿಕ ಕಾರ್ಯಗಳಿರಬಹುದು ಹೊರಟಾಗ ಪೂಜ್ಯರ ಆಶೀರ್ವಾದ ಪಡೆಯಲು ಬಂದರೆ ತಮ್ಮಿಂದ ಯಾವ ರೀತಿಯ ಸಹಕಾರ ಅವರಿಗೆ ಮಾಡಲು ಸಾಧ್ಯ ಎಂಬುದನ್ನು ಅವರು ಮಾಡುವ ಮೂಲಕ ತಮ್ಮ ಹೃದಯವೈಶಾಲ್ಯತೆ ಮೆರೆಯುವ ಪೂಜ್ಯರೆಂದರೆ ಅತಿಶಯೋಕ್ತಿಯಲ್ಲ.

- Advertisement -

ನಾವಿಂದು ಮುನವಳ್ಳಿ ಪೂಜ್ಯರ ಅನುಗ್ರಹದಿಂದ ಕಮತಗಿ.ಉಪ್ಪಿನ ಬೆಟಗೇರಿ.ಅಮರೇಶ್ವರ ದೇವರು ಅಂಕಲಗಿ ಹೀಗೆ ಅನೇಕ ಪೂಜ್ಯರ ಅನುಭಾವದಲ್ಲಿ ಬೆಳೆಯಲು ಕಾರಣೀಕರ್ತರಾಗಿರುವರು. ಪ್ರತಿ ವರ್ಷ ಸುತ್ತೂರು ಮಠದ ಜಾತ್ರೆಗೆ ಮುನವಳ್ಳಿಯ ಸದ್ಬಕ್ತರೊಡನೆ ತೆರಳುವ ಪೂಜ್ಯರು ಅಲ್ಲಿನ ವೈಶಿಷ್ಟ್ಯತೆಯನ್ನು ನಮಗೂ ಕೂಡ ಕಣ್ತುಂಬಿಕೊಳ್ಳುವಂತೆ ಮಾಡಿರುವರು.

ಆರೇನೆಂದಡೂ ಓರಂತಿಪ್ಪುದೇ ಸಮತೆ,ಆರು ಜರಿದರೂ

ಅವರೆನ್ನ ಮನದ ಕಾಳಿಕೆಯ ಕಳೆದರೆಂಬುದೇ ಸಮತೆ

ಆರು ಸ್ತುತ್ಯ ಮಾಡಿದರೂ ಅವರೆನ್ನ ಜನ್ಮಜನ್ಮದ ಹಗೆಗಳೆಂಬುದೇ ಸಮತೆ

ಇಂತಿದು ಗುರುಕಾರುಣ್ಯ,ಮನ ವಚನ ಕಾಯದಲ್ಲಿ ಅವಿತತವಿಲ್ಲದಿರ್ದೆಡೆ

ಕಪಿಲ ಸಿದ್ದಮಲ್ಲಿಕಾರ್ಜುನಾ,ನಿನ್ನವರ ನೀನೆಂಬುದೇ ಸಮತೆ.

ಎಂಬ ಶಿವಯೋಗಿ ಸಿದ್ದರಾಮನ ಸಮತಾದೃಷ್ಟಿಯ ವಚನವನ್ನು ನೆನೆಯುತ್ತ ಮುನವಳ್ಳಿಯ ನಡೆದಾಡುವ ದೇವರೆಂದೇ ಜನರಲ್ಲಿ ಬಿಂಬಿತವಾದ ಮುರುಘೇಂದ್ರ ಮಹಾಸ್ವಾಮಿಗಳ ಬದುಕು ಕೂಡ ಕಾಯಕಯೋಗಿಗಳಾಗಿ,ಶ್ರೀ ಮಠದ ಹೆಸರನ್ನು ಇಂದು ಜನಮಾನಸದಲ್ಲಿ ಚಿರಸ್ಥಾಯಿಗೊಳಿಸುವ ಜೊತೆಗೆ ಮುನವಳ್ಳಿ ಮುನಿಗಳ ಹಳ್ಳಿ ಎಂಬ ಪರಂಪರೆಯನ್ನು ಉಳಿಸಿಕೊಂಡು ಬರುವಲ್ಲಿ ತಮ್ಮದೇ ಆದ ಕಾಯಕದಲ್ಲಿ ಬದುಕುತ್ತಿರುವ ಇತ್ತೀಚಿಗಷ್ಟೇ ಮುರುಘೇಂದ್ರ ಶ್ರೀಗಳು ಮುನಿಪುರದ ನಡೆದಾಡುವ ದೇವರು.

ಮುನವಳ್ಳಿ ಸೋಮಶೇಖರ ಮಠಕ್ಕೆ ಬಹುದೊಡ್ಡ ಪರಂಪರೆಯಿದೆ. ಈ ಮಠಕ್ಕೆ ೧೫ ಜನ ಮಹಾಸ್ವಾಮಿಗಳು ಆಗಿ ಹೋಗಿದ್ದಾರೆ. ಇಂತಹ ಸತ್ಪರಂಪರೆ ಹೊಂದಿದ ಮಠಕ್ಕೆ ೧೬ ನೇ ಪೀಠಾಧಿಕಾರಿಗಳಾಗಿ ಬಂದವರು ಶ್ರೀ ಮ.ನಿ.ಪ್ರ.ಮುರುಘೇಂದ್ರ ಸ್ವಾಮಿಗಳು, ಮಠಕ್ಕೆ ಬಂದ ಕೆಲವೇ ದಿನಗಳಲ್ಲಿ ಭಕ್ತರ ಪ್ರೀತಿಯನ್ನು ಸಂಪಾದಿಸಿ ತಮ್ಮ ಪೂಜಾಬಲ, ಹಾಗೂ ಕಾಯಕದಿಂದ ಮುನವಳ್ಳಿಯ ನಡೆದಾಡುವ ದೇವರೆಂದು ಜನರಿಂದ ಬಿಂಬಿತವಾದರು.

ಮುನವಳ್ಳಿಯ ಸುತ್ತಮುತ್ತಲಿನ ಅನೇಕ ಸ್ಥಳಗಳಲ್ಲಿ ಹಾಗೂ ಮುನವಳ್ಳಿಯಲ್ಲಿ ಯಾವುದೇ ಕರ‍್ಯಕ್ರಮಗಳಿರಲಿ, ಯಾವುದೇ ಜಾತಿ ಜನಾಂಗದ ಸಭೆ ಸಮಾರಂಭಗಳಿರಲಿ ಅಲ್ಲಿ ಪೂಜ್ಯರ ಸಾನಿಧ್ಯ ಇದ್ದದ್ದೇ, ಅಷ್ಟರಮಟ್ಟಿಗೆ ಇಂದು ಜನಮಾನಸದಲ್ಲಿ ಚಿರಸ್ಥಾಯಿಯಾಗಿರುವರು ಎಂದರೆ ಅತಿಶಯೋಕ್ತಿಯೇನಲ್ಲ.

ಇಂತಹ ಶ್ರೀಗಳ ಕಿರುಪರಿಚಯದ ನೋಟ ಬಸವವಾಣಿ ಓದುಗರಿಗಾಗಿ.ಮುರುಘೇಂದ್ರ ಶರಣರು ಮೂಲತ: ಸವದತ್ತಿ ತಾಲೂಕಿನ ಕುಶಲಾಪುರ ಎಂಬ ಗ್ರಾಮದ ಶರಣ ದಂಪತಿಗಳಾದ ಲಿಂ.ವೀರಯ್ಯಾ ಮತ್ತು ಸಿದ್ದಮ್ಮನವರ ಉದರದಲ್ಲಿ ೧೦ ಜೂನ್ ೧೯೭೪ ರಲ್ಲಿ ಜನ್ಮ ತಾಳಿದರು.ಇವರ ಮನೆಯಲ್ಲಿ ಮೊದಲಿನಿಂದಲೂ ಅಥಣಿಯ ಮುರುಘೇಂದ್ರ ಸ್ವಾಮಿಗಳ ಬಗ್ಗೆ ಅಪಾರ ಭಕ್ತಿ,ಮಮತೆ, ಹೀಗಾಗಿ ಇವರಿಗೆ ಮುರುಘೇಂದ್ರ ಎಂಬ ನಾಮಕರಣ ಮಾಡುವ ಮೂಲಕ ಇವರ ಮಾತಾಪಿತರು ಮುರುಘೇಂದ್ರರ ಹೆಸರು ಕರೆದರು.

ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿನ ಇವರ ತೇಜಸ್ಸು ಮುಂದೊಂದು ದಿನ ಈ ವ್ಯಕ್ತಿ ಸಮಾಜದಲ್ಲಿ ಹೆಸರುವಾಸಿಯಾಗುತ್ತಾನೆ ಎಂಬಂತಿತ್ತು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಕಲಿತು ಮುಂದೆ ಪ್ರೌಢ ಶಿಕ್ಷಣವನ್ನು ಯಕ್ಕುಂಡಿ ಗ್ರಾಮದಲ್ಲಿ ಪೂರೈಸಿದರು. ಬೆಳಗಾವಿಯ ಶ್ರೀ ಶಿವಬಸವ ಮಹಾಸ್ವಾಮಿಗಳು ಹಾಗೂ ಯಕ್ಕುಂಡಿಯ ಶ್ರೀ ವಿರುಪಾಕ್ಷ ಪೂಜ್ಯರ ಅನುಗ್ರಹದ ಮೇರೆಗೆ ಮತ್ತು ಗ್ರಾಮದ ಗುರುಹಿರಿಯರು ಹಿತೈಷಿಗಳು ಇವರನ್ನು ಧಾರ್ಮಿಕ ಶಿಕ್ಷಣ ಪಡೆಯಲು ಶಿವಯೋಗ ಮಂದಿರಕ್ಕೆ ಕಳುಹಿಸಿದರು. ಶಿವಯೋಗಮಂದಿರದ ಪ್ರಭೆಯಲ್ಲಿ ಮಿಂದ ಇವರು ವಚನ ಸಾಹಿತ್ಯದ ದೀರ್ಘ ಅಧ್ಯಯನ, ಶಾಸ್ತ್ರ, ಅಧ್ಯಾತ್ಮ ಯೋಗ, ಸಂಸ್ಕೃತವನ್ನು ಸತತ ಮೂರು ವರ್ಷಗಳವರೆಗೆ ಅದ್ಯಯನಗೈಯದರು.

ಇನ್ನೂ ಹೆಚ್ಚಿನ ಅದ್ಯಯನ ಮಾಡಬೇಕೆಂಬ ಹಂಬಲದಿಂದ  ಕಮತಗಿಯ ಪೂಜ್ಯರಾದ ಶ್ರೀ ಹುಚ್ಚೇಶ್ವರ ಸ್ವಾಮಿಗಳ ಹಾಗೂ ಅಲ್ಲಿಯ ಭಕ್ತರ ಬಳಿ ಬಂದಾಗ ಮೈಸೂರಿನ ಸುತ್ತೂರು ಮಠಕ್ಕೆ ಸಂಸ್ಕೃತದಲ್ಲಿ ಹೆಚ್ಚಿನ ವ್ಯಾಸಾಂಗ ಪಡೆಯಲು ಕಳುಹಿಸಿದರು, ಇಲ್ಲಿಯ ಜೆ,ಎಸ್,ಎಸ್,ಗುರುಕುಲ ವಿದ್ಯಾಪೀಠದಲ್ಲಿದ್ದುಕೊಂಡು ಶಕ್ತಿವಿಶಿಷ್ಟಾದ್ವೈತವನ್ನು ಮಹಾರಾಜ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಪೂರೈಸಿದರು. ಸುತ್ತೂರು ಮಠ ಅಧ್ಯಾತ್ಮಿಕ ಒಲವಿನ ತಾಣ.ಮೈಸೂರು ರಾಜ ಮನೆತನದ ಗುರುಗಳಾದ ಲಿಂ.ಶಿವರಾತ್ರೀಶ್ವರರ ಭಕ್ತಿಯ ಬಿಲ್ವವೇ ಈ ಮಠ.ಇಂತಹ ಮಠದಲ್ಲಿ ಜ್ಞಾನ ಸಂಪಾದನೆ ಕೂಡ ವಿಶಿಷ್ಟವೇ ಅದು ಮುರುಘೇಂದ್ರಸ್ವಾಮೀಜಿಯವರಿಗೆ ಸಿದ್ದಿಸುವ ಜೊತೆಗೆ ಜ್ಞಾನದ ಪ್ರಸರಣಕ್ಕೂ ಪ್ರೇರಣೆ ನೀಡಿತು.

೧೯೯೯ ನೇ ಜನೇವರಿ ೨೪ ರಂದು ಮುನವಳ್ಳಿಯ ಸೋಮಶೇಖರ ಮಠಕ್ಕೆ ಪರಮಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ಅಪ್ಪಣೆಯ ಮೇರೆಗೆ ಹಾಗೂ ಇದೇ ಮಠದ ೧೫ ನೆಯ ಪೀಠಾಧಿಪತಿಗಳಾಗಿದ್ದ ಶ್ರೀ ಚನ್ನಬಸವ ಮಹಾಸ್ವಾಮಿಗಳ ಸದಿಚ್ಚೆಯ ಮೇರೆಗೆ ಹಾನಗಲ್ಲ ಪರಮಪೂಜ್ಯರಾದ ಶ್ರೀ ಕುಮಾರ ಸ್ವಾಮಿಗಳು ಅಂದರೆ ಈಗಿನ ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರುಗಳಾದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಅವರಿಂದ ಅಧಿಕಾರ ಪಡೆದು ಮುನವಳ್ಳಿಯ ಸೋಮಶೇಖರ ಮಠಕ್ಕೆ ಪೀಠಾಧಿಪತಿಗಳಾದರು.

ಸತ್ಪರಂಪರೆ ಹೊಂದಿದ ಶ್ರೀಮಠಕ್ಕೆ ಆಗಮಿಸಿದ ಸ್ವಾಮೀಜಿ ಗ್ರಾಮದ ಎಲ್ಲ ಹಿರಿಯರು, ಯುವಕರು, ಮಕ್ಕಳು, ಅಕ್ಕನ ಬಳಗದ ಮಾತೆಯರು ಹೀಗೆ ಎಲ್ಲರನ್ನು ಗಮನಕ್ಕೆ ತೆಗೆದುಕೊಂಡು ಕಾಯಜದಾಸೋಹದ ಅರಿವು ಮೂಡಿಸುವ ಜೊತೆಗೆ ಯಾವ ಜಾತಿ ಜಂಜಾಟಕ್ಕೆ ಸಿಲುಕದೇ ಎಲ್ಲ ಸಮಾಜದವರೊಂದಿಗೆ ಬೆರೆತು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಜನಹಿತ ಧಾರ್ಮಿಕ ಚಿಂತನೆಗಳನ್ನು ಮಾಡುತ್ತ ಮುನವಳ್ಳಯಲ್ಲಿ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ, ಶ್ರೀ ಅನ್ನದಾನೇಶ್ವರ ಸ್ವತಂತ್ರಪೂರ್ವ ಮಹಾವಿದ್ಯಾಲಯ,ಶ್ರೀ ಅನ್ನದಾನೇಶ್ವರ ಗ್ರಾಮೀಣ ಅಭಿವೃದ್ದಿ ಸಂಘ, ಶ್ರೀ ಅಕ್ಕನ ಬಳಗ,ಶ್ರೀ ಶರಣ ಬಳಗ, ಬ್‌ಲಹೊಂಗಲದಲ್ಲಿ ಶ್ರೀ ವಿರುಪಾಕ್ಷ ಸ್ವಾಮಿ ವಿದ್ಯಾರ್ಥಿ ನಿಲಯ, ಭಂಡಾರಹಳ್ಳಿಯಲ್ಲಿ ಶ್ರೀಮತಿ ಅಂದಾನೆಮ್ಮ ಯಕ್ಕುಂಡಿಮಠ ಕನ್ನಡ ಪೂರ್ವಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಸ್ಥಾಪಿಸುವ ಮೂಲಕ ಅನ್ನದಾಸೋಯ ಜ್ಞಾನದಾಸೋಹ ಕರ‍್ಯಗಳಿಗೆ ಚಾಲನೆ ನೀಡಿರುವರು.

“ಮಠದಿಂದ ಘಟವಲ್ಲ ಘಟದಿಂದ ಮಠ” ಎಂಬ ಮಾತಿಗೆ ನಿದರ್ಶನರಾದ ಸ್ವಾಮೀಜಿಯವರು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಬೆಳಗಿನ ಜಾವ ಧಾರ್ಮಿಕ ಪಥಸಂಚಲನ ನಡೆಸುವ ಪರಂಪೆಗೆ ನಾಂದಿ ಹಾಡಿದ್ದು ಈ ಸಂದರ್ಭದಲ್ಲಿ”ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬ ಬಸವ ಮಂತ್ರದಧ್ವನಿ ಎಲ್ಲೆಡೆ ಮೊಳಗುವಂತೆ ಮಾಡಿರುವರು.

ತಾಲೂಕಿನಾದ್ಯಂತ ಧಾರ್ಮಿಕ ಪ್ರವಚನಗಳು,ಸಾಂಸ್ಕೃತಿಕ ಕರ‍್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಮುನವಳ್ಳಿಯ ನಾಡಹಬ್ಬ, ಹಾಗೂ ಜೇವೂರ ಗುರುಗಳ ಪ್ರತಿಷ್ಠಾನ ಸಮಾರಂಭಗಳಲ್ಲಿ ಅಲ್ಲದೇ ನಾಡುನ ಕ್ಷಾಮ.ಬೂಕಂಪ, ನೆಸಂತೃಸ್ತ ಘಟನೆಗಳು ನಡೆದಾಗ ಗ್ರಾಮದ ಹಿರಿಯರು ಯುವgಕರೊಡನೆ ಸೇರಿ ಸಂತ್ರಸ್ತ ಜನರಿಗೆ ನೆರವು ನೀಡುವ ಕಾರ‍್ಯಕೆ ಧಾನ್ಯ,ಹಣ ಸಂಗ್ರಹಿಸಿ ನೀಡುವ ಜೊತೆಗೆ ಜನಪರ ಕಾಳಜಿಯುಳ್ಳ ಕರ‍್ಯಗಳನ್ನು ಸಂಘಟಿಸುತ್ತ ನಾಡು ನುಡಿಯ ಬಿತ್ತರಿಸುವಲ್ಲಿ ಕಾಳಜಿವಹಿಸಿರುವರು. ಪ್ರತಿವರ್ಷ ವರವಿಕೊಳ್ಳ ಸುಕ್ಷೇತ್ರದಲ್ಲಿ ಜನಸಾಮಾನ್ಯರೊಡನೆ ಶರಣರು ಎಂಬ ತತ್ವದಡಿಯಲ್ಲಿ ಇಷ್ಟಲಿಂಗಪೂಜಾ ವಿದಾನ,ಅದರ ಮಹಿಮೆ ಹಾಗೂ  ಕಾಯಕನಿಷ್ಠೆ ಕುರಿತ  ಕರ‍್ಯದಲ್ಲಿ ತೊಡಗಿರುವರು.

ಶ್ರೀಮಠದಲ್ಲಿ ಅನೇಕ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ಪ್ರತಿವರ್ಷ ತಮ್ಮ ಹಿಂದಿನ ಗುರುಗಳಾದ ಲಿಂ.ಬಸವಲಿಂಗ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವವನ್ನು ಹಮ್ಮಿಕೊಳ್ಳುತ್ತ ಬಂದಿದ್ದು  ಮುನವಳ್ಳಿಯ ಸಕಲ ಸದ್ಬಕ್ತರು,ಶಾಸಕರು,ಸಂಸದರ ಸಹಾಯ ಸಹಕಾರಗಳಿಂದ ಅನ್ನದಾನೇಶ್ವರ ದಾಸೋಹ ಭವನ ನಿರ್ಮಿಸಿದ್ದು. ಶ್ರೀ ಮಠದಲ್ಲಿನ ಕರ್ತೃ ಗದ್ದುಗೆಗೆ ನಿತ್ಯವೂ ಪೂಜೆ,ಅಭಿಷೇಕ,ಬಿಲ್ವಾರ್ಚನೆ ಕಾರ‍್ಯಗಳು ನಡೆಯುವಂತೆ ಮಾಡಿದ್ದು ಪೂಜಾನಿಷ್ಠರಾಗಿ ವೀರಶೈವ ತತ್ವದ ಪ್ರಕಾರ ಅಷ್ಟಾವರಣ. ಪಂಚಾಚಾರಗಳನ್ನು ಅಳವಡಿಸಿಕೊಂಡು ಇವುಗಳನ್ನು ಜನರಲ್ಲಿ ಬಿತ್ತಲು ಪ್ರಯತ್ನಿಸುತ್ತಿರುವರು.

 ನಡೆಯೊಳಗೆ ನುಡಿತುಂಬಿ,ನುಡಿಯೊಳಗೆ ನಡೆ ತುಂಬಿ ನಡೆ ನುಡಿ ಎರಡನು ಪರಿಪೂರ್ಣ ತುಂಬಿ ಲಿಂಗವ ಕೂಡಬಲ್ಲಾತನೇ ಶರಣ ನೋಡಾ ಅಖಂಡೇಶ್ವರಾ”

ನಡೆ ನುಡಿ ಎರಡೂ ಸಮಪ್ರಮಾಣದಲ್ಲಿ ಪರಿಪೂರ್ಣ ತುಂಬಿ ಮಾನವತ್ವದಿಂದ ಶರಣತ್ವಕ್ಕೆ ,ಪ್ರೀತಿ ತುಂಬಿದ ನುಡಿಯಿಂದ ಸಕಲಕ್ಕೂ ಕಾರಣರು ಮುನವಳ್ಳಿಯ ನಡೆದಾಡುವ ದೇವರು ಮುನಿಪುರಾಧೀಶರಾದ ಶ್ರೀ,ಮ.ನಿ,ಪ್ರ,ಮುರುಘೇಂದ್ರ ಮಹಾಸ್ವಾಮಿಗಳು.ಇಂದು ಅವರ ಜನ್ಮ ದಿನ ಮುನಿಪುರದ ಸಡಗರದೊಳು ವಿಭಿನ್ನ ಕಾರ್ಯಕ್ರಮಗಳು ಜರಗುತ್ತಿರುವುದು ಹುಟ್ಟು ಹಬ್ಬದ ಈ ದಿನ ಪೂಜ್ಯರಿಗೆ ನನ್ನ ನುಡಿನಮನದ ಮೂಲಕ ಅವರ ಪಾದಗಳಿಗೆರಗಿ ಜನ್ಮದಿನಕ್ಕೆ ಶುಭ ಕೋರುವೆನು.


ವೈ.ಬಿ.ಕಡಕೋಳ

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group