ರಾಮನವಮಿ ಅಂಗವಾಗಿ ಮುನವಳ್ಳಿ ಸೂಲಕಟ್ಟಿ ಅಗಸಿಯಲ್ಲಿ ವಿಶೇಷ ಕಾರ್ಯ ಕ್ರಮಗಳು ಜರುಗುತ್ತಿವೆ.ಈ ಸಂದರ್ಭದಲ್ಲಿ ಮುನವಳ್ಳಿ ಪುರಾತನ ಹನುಮಾನ್ ವಿಗ್ರಹಗಳನ್ನು ಹಾಗೂ ಕೋದಂಡರಾಮ ದೇಗುಲದ ಇತಿಹಾಸ ದೊಡನೆ ಪರಿಚಯಿಸುವ ಒಂದು ಪುಟ್ಟ ಪ್ರಯತ್ನ
ನಾನು ಹೇಳಹೊರಟಿರುವುದು ಮುನವಳ್ಳಿಯ ಹಲವು ಹನುಮಂತ ದೇವರ ವಿಗ್ರಹಗಳು ಕೂಡ ವ್ಯಾಸರಾಜರಿಂದ ಪ್ರತಿಷ್ಠಾಪಿತವಾದವುಗಳು ಎಂಬಂತೆ ಲಕ್ಷಣವನ್ನು ಹೊಂದಿವೆ. ಶ್ರೀ ಪಂಚಲಿಂಗೇಶ್ವರ ದೇವಾಲಯದ ಪ್ರಾಣದೇವರು ಮುನವಳ್ಳಿಯ ಪಂಚಲಿಂಗೇಶ್ವರ ದೇವಾಲಯವು ದೇವಗಿರಿಯ ಯಾದವರಿಂದ ಜೀರ್ಣೋದ್ಧಾರಗೊಂಡ ದೇವಾಲಯಗಳ ಸಮುಚ್ಚಯವನ್ನು ಹೊಂದಿದ ದೇವಾಲಯ.
ಇಲ್ಲಿ ಪಂಚಲಿಂಗೇಶ್ವರ ಮುಖ್ಯವಾದರೂ ಕೂಡ ವಿವಿಧ ದೇವಾಲಯಗಳು ಕೂಡ ಗಮನ ಸೆಳೆಯುತ್ತವೆ. ಮುಖ್ಯ ದ್ವಾರದಿಂದ ದೇವಾಲಯ ಒಳ ಪ್ರವೇಶಿಸಿದರೆ ರೇಣುಕಾದೇವಿಯ ದೇವಾಲಯವಿದೆ. ಅದರ ಪಕ್ಕದಲ್ಲಿ ಹಲವು ಶಿಲ್ಪಗಳನ್ನು ಹೊಂದಿದ ಪುಟ್ಟ ದೇವಾಲಯವಿದ್ದು ಅಲ್ಲಿ ಎರಡು ಹನುಮಾನ್ ವಿಗ್ರಹಗಳನ್ನು ಕಾಣಬಹುದು. ಅವೆರಡೂ ಕೂಡ ವಿಶಿಷ್ಟವಾಗಿವೆ.
ಅಲ್ಲಿ ಎರಡು ವಿಗ್ರಹಗಳನ್ನು ಗಮನಿಸಿದಾಗ ಒಂದು ಬಿಳಿ ಶಿಲೆಯಲ್ಲಿದ್ದರೆ ಇನ್ನೊಂದು ಕಪ್ಪು ಶಿಲೆಯಲ್ಲಿದೆ. ಒಂದು ಎತ್ತರದ ಮೂರ್ತಿ ಇನ್ನೊಂದು ಪುಟ್ಟ ವಿಗ್ರಹ.ಪುಟ್ಟ ವಿಗ್ರಹದ ಮುಂದೆ ಪಾದಗಳಿವೆ.ಇವೆರಡೂ ವಿಗ್ರಹಗಳ ಬಾಲದಲ್ಲಿ ಗಂಟೆ ಇರುವುದು ವಿಶೇಷ.
ವೆಂಕಟೇಶ್ವರ ದೇವಾಲಯ ಆವರಣದಲ್ಲಿದೇವಾಲನ ಮಂದಿರ
ಮುನವಳ್ಳಿಯ ಮಲಪ್ರಭಾ ನದಿ ದಡದಲ್ಲಿ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯವುಂಟು. ಉತ್ತರಾಭಿ ಮುಖವಾಗಿರುವ ಈ ದೇಗುಲವು ತನ್ನ ಸುತ್ತ ಹಲವು ದೇವಾಲಯಗಳ ಸಮುಚ್ಚಯವನ್ನು ಒಳಗೊಂಡಿದೆ ದೇವಾಲಯದ ಬಲ ಭಾಗದಲ್ಲಿ ವಿಠ್ಠಲ ರುಕ್ಮಿಣಿ ಮಂದಿರ ಮತ್ತೊಂದೆಡೆ ಅಂಜನೇಯ ದೇವಾಲಯ ಹೊಂದಿದೆ.
ಇಲ್ಲಿನ ಆಂಜನೇಯ ದೇವಾಲಯದ ವಿಗ್ರಹವು ಕಪ್ಪು ಶಿಲೆಯಿಂದ ಕೂಡಿದೆ.ಇಲ್ಲಿ ಸುತ್ತು ಪ್ರದಕ್ಷಿಣಾ ಪಥವನ್ನು ನಿರ್ಮಿಸಲಾಗಿದೆ. ಇದೂ ಕೂಡ ಬಾಲದಲ್ಲಿ ಗಂಟೆಯನ್ನು ಹೊಂದಿದ ಶಿಲ್ಪವಾಗಿರುವುದು ವಿಶೇಷ.
ಕೋದಂಡರಾಮ ದೇವಾಲಯ
ಈ ದೇವಾಲಯ ಅಂಜನೇಯ ದೇವಾಲಯ ಎದುರಿನಲ್ಲಿದೆ ಇದೊಂದು ಪುಟ್ಟ ದೇಗುಲ. ಇದನ್ನು ಕೋದಂಡರಾಮ ದೇವಾಲಯ ಎನ್ನುವರು. ಇದು ಸೀತಾ, ರಾಮ, ಲಕ್ಷ್ಮಣ ಅಜಂನೇಯರ ಸೊಗಸಾದ ಮೂರ್ತಿಯನ್ನು ಹೊಂದಿದೆ.
ಇದರ ಕೆತ್ತನೆ ಕೂಡ ವೈಶಿಷ್ಟ್ಯಪೂರ್ಣವಾಗಿರುವುದು.ಶ್ರೀ ರಾಮಚಂದ್ರನ ಎಡಬದಿಯಲ್ಲಿ ಸೀತಾಮಾತೆಯಿದ್ದರೆ ಬಲಬಡಿಯಲ್ಲಿ ಪ್ರಣಾಮ ಭಂಗಿಯಲ್ಲಿರುವ ಲಕ್ಷ್ಮಣನ ಮೂರ್ತಿಯಿದೆ ಮತ್ತು ಎರಡೂ ಬದಿಗಳಲ್ಲಿ ಚಾಮರಗಳಿರುವುದು ವಿಶೇಷ.
ಶ್ರೀರಾಮನ ಪಾದದ ಬಳಿ ಮಾರುತಿಯು ಭಕ್ತಿ ಭಾವದಿಂದ ಕುಳಿತಿರುವುದನ್ನು ಗಮನಿಸಬಹುದು.ಇಂತಹದೇವಾಲಯಗಳು ಅಪರೂಪ.ಕೋದಂಡರಾಮನ ದೇವಾಲಯ ಮುನವಳ್ಳಿಯಲ್ಲಿ ಇರುವುದು ವಿಶೇಷ.
ಕೋಟೆ ಆಂಜನೇಯ
ನಮ್ಮ ಬದುಕಿನ ಭೌಗೋಳಿಕ ಪರಿಸರವು ಮಾನವನ ನಾಗರಿಕತೆಯ ಮತ್ತು ಸಂಸ್ಕೃತಿಯ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಸಾಮ್ರಾಜ್ಯ ಕಟ್ಟುವ ಗುರುತರ ಜವಾಬ್ದಾರಿ ವಹಿಸಿದ ಕನ್ನಡಿಗ ಅರಸರೆಲ್ಲ ಅನೇಕ ಕೋಟೆಗಳ ನಿರ್ಮಾಣದಲ್ಲೂ ತಮ್ಮದೇ ಕಲಾಕೌಶಲ್ಯವನ್ನು ಹೊಂದಿದ್ದಾರೆ. ಒಂದು ಕೋಟೆಯೆಂದರೆ ತಮ್ಮ ಆಳ್ವಿಕೆಯ ಅವಧಿ ಬೇರಾರಿಗೂ ಅಷ್ಟು ಸುಲಭವಾಗಿ ಒಳನುಸುಳಲು ಅವಕಾಶ ನೀಡದಂತೆ ಎಲ್ಲ ಸೌಕರ್ಯಗಳನ್ನು ಒಳಗೊಂಡಂತೆ ನಿರ್ಮಾಣಗೊಂಡ ವ್ಯವಸ್ಥಿತ ಕೋಟೆಗಳು ಕರ್ನಾಟಕದಲ್ಲಿವೆ.
ಮುನವಳ್ಳಿಯ ಕೋಟೆ ಕೂಡ ಹಾಳಾಗಿದ್ದರೂ ಕೂಡ ತನ್ನದೇ ಆದ ಐತಿಹ್ಯದೊಂದಿಗೆ ಭಗ್ನಾವಶೇಷಗಳಿಂದ ಚರಿತೆ ಹೇಳುವಂತಿದೆ.ಈ ಕೋಟೆ ಸಿಂಧೆ ಮಹಾರಾಜನ ಕಾಲಕ್ಕೆ ಕಟ್ಟಲ್ಪಟ್ಟಿತೆಂದು ಇಪ್ಪತ್ತೆರಡು ಎಕರೆಯಷ್ಟು ವಿಸ್ತಾರವಾಗಿರುವ ಈ ಕೋಟೆಯಲ್ಲಿ ದೇವಗಿರಿ ಯಾದವ ಕಾಲದ ಶಾಸನ ಉಡಚವ್ವ ದೇವಾಲಯ ಹಾಗೂ ಮಾರುತಿ ದೇವಾಲಯಗಳಿದ್ದು ಅರಮನೆ ಯ ಅವಶೇಷಗಳೆಲ್ಲ ಹಾಳಾಗಿವೆ.
ನದಿದಡದ ಸುತ್ತಲೂ ಎಲ್ಲೆಡೆ ಕೋಟೆಯ ಅವಶೇಷಗಳು ಕಾಣುತ್ತವೆ. ಮುನವಳ್ಳಿ ಗ್ರಾಮ ಈ ಕೋಟೆಯ ಮೂಲಕ ಎಲ್ಲ ಕಡೆಗೆ ಅಗಸಿ ಬಾಗಿಲು ಹೊಂದಿದ್ದು ಸೂಲಕಟ್ಟಿ ಅಗಸಿ ಹಾಗೂ ಹಿರೇ ಅಗಸಿ(ಮುಖ್ಯ ದ್ವಾರ) ತೊರಗಲ್ ಅಗಸಿಗಳಿದ್ದು ಮುಖ್ಯದ್ವಾರ ಅಗಸಿ ಬಾಗಿಲನ್ನು ತಗೆದು ಆಧುನಿಕ ಕಟ್ಟಡ ವಿನ್ಯಾಸದಲ್ಲಿ ಇತ್ತೀಚಿಗೆ ನಿರ್ಮಿಸಲಾಗಿದ್ದು ಯಾವುದೇ ದಿಕ್ಕಿನಿಂದ ಪಯಣಿಸಿದರೂ ಬುರುಜುಗಳು ಹೊಂದಿದ್ದ ಕೋಟೆಯ ಅವಶೇಷಗಳು ಕಾಣುತ್ತವೆ.ಇದು ಎರಡು ಸುತ್ತಿನ ಕೋಟೆ.
ಕೋಟೆಯ ದಕ್ಷಿಣಕ್ಕೆ ಹರಿಯುವ ಮಲಪ್ರಭಾ ನದಿ ಹರಿದು ವೈರಿಗಳ ಆಕ್ರಮಣ ತಡೆಗಟ್ಟಿ ನೈಸರ್ಗಿಕ ರಕ್ಷಣೆ ನೀಡಿದೆ. ಸುಮಾರು 500 ಅಡಿ ಕೋಟೆಯ ಗೋಡೆ ಚಾಚಿಕೊಂಡಿದ್ದು ಮುಖ್ಯ ರಹದಾರಿ ಪೂರ್ವದ ಅಂಚಿನಲ್ಲಿ “ವಾಡೆ” ಅರಮನೆ ಭಗ್ನಾವಸ್ಥೆ ಹೊಂದಿದ್ದು ಅಚ್ಚುಕಟ್ಟಾದ ಕೆಂಪುಕಲ್ಲು, ನಚ್ಚುಗಾರೆಗಳಿಂದ ಸುವ್ಯವಸ್ಥಿತವಾಗಿ ಕಟ್ಟಲಾದ ಗೋಡೆ.ಅಲ್ಲಲ್ಲಿ ಜೋಡಿಸಿರುವ ಬುರುಜುಗಳು (15-20 ಅಡಿ ಎತ್ತರ, ಕೆಳಭಾಗದಲ್ಲಿ 10 ಅಡಿ ಅಗಲ) ಮಲಪ್ರಭಾ ನದಿಯಿಂದ ಒಳಸೇರುವ ನೀರಿನ ಕಂದಕವು ಪೂರ್ವ ದಕ್ಷಿಣ ಮತ್ತು ಉತ್ತರ ದಿಶೆಗಳಲ್ಲಿ ಅಳವ ಡಿಸಲ್ಪಟ್ಟಿದ್ದು ಕೋಟೆಗೆ ರಕ್ಷಣೆ ನೀಡಿದೆ.
ಒಂದು ಕಡೆ ನೀರು, ಮೂರುಕಡೆ ನೆಲ ಇದ್ದು ಇದೊಂದು ಮಹತ್ವದ ಕೋಟೆಯಾಗಿದೆ. ಕೋಟೆಯೊಳಗೆ ಪ್ರವೇಶಿಸಲು ಕೂಡ ಮಹಾದ್ವಾರವಿದ್ದು ಕೋಟೆಯಲ್ಲಿ ಪುರಾತನ ಬಾವಿಯಿದೆ. ಶಿಲಾಶಾಸನದಲ್ಲಿ ಶಕೆ 1174 ಜೇಷ್ಟ ತಿಥಿಯಂದು ಲಾಕುಲ ಶೈವ ಪದ್ದತಿಯ ಉಡಚವ್ವ ದೇವಾಲಯ ನಿರ್ಮಾಣವಾಗಿತ್ತಂದು. ಈ ಕೋಟೆಯಲ್ಲಿ ಸುಂದರ ಹೂ ತೋಟವನ್ನು ನಿರ್ಮಿಸುವ ಮೂಲಕ ರಾಜರ ವಿಶ್ರಾಂತಿ ತಾಣವಾಗಿ ಇದನ್ನು ಬಳಸಲಾಗುತ್ತಿತ್ತು ಎಂಬ ವಿವರಗಳಿವೆ.
ಇಲ್ಲಿ ಪುರಾತನವಾದ ಬಾವಿಯಿದೆ.ಅದು ಈಗ ಶಿಥಿಲಾವಸ್ಥೆ ಯಲ್ಲಿದೆ.ಬಾವಿಯ ಹತ್ತಿರ ಅದ್ಬುತ ಶಿಲ್ಪಕಲೆ ಹೊಂದಿದ ಅಂಜನೇಯ ದೇವಾಲಯವಿದೆ.ಈ ದೇವಾಲಯ ಕೆತ್ತನೆ ಶಿಲ್ಪಕಲೆ ಎಂತಹವನ್ನು ಬೆರಗಾಗಿಸುವಂತಿದೆ. ಇಲ್ಲಿನ ಹೂ ಗೊಂಚಲಾಕೃತಿ ಕೆತ್ತನೆ.ನುಣುಪಾದ ಕಂಬ.ಪ್ರದಕ್ಷಿಣ ಪಥದಲ್ಲಿ ಕಂಡು ಬರುವ ಗೋಡೆಯ ಮೇಲಿನ ಕೆತ್ತನೆ.ನಿಜಕ್ಕೂ ಮನಮೋಹಕ.ಇಲ್ಲಿರುವ ಅಂಜನೇಯ ವಿಗ್ರಹವೂ ಕೂಡ ಕಪ್ಪು ಶಿಲೆಯಿಂದ ಕೂಡಿದೆ.
ಇಷ್ಟೆಲ್ಲ ವೈಶಿಷ್ಟ್ಯತೆ ಹೊಂದಿದ ಹನುಮಾನ ಮಂದಿರಗಳು ಮುನವಳ್ಳಿಯಲ್ಲಿ ಇರುವುದು ವಿಶೇಷ. ಬಾಲದಲ್ಲಿ ಗಂಟೆಯನ್ನು ಹೊಂದಿದ್ದರೆ ಅವುಗಳು ವ್ಯಾಸರಾಜರು ಪ್ರತಿಷ್ಠಾಪಿತ ಪ್ರಾಣದೇವರುಗಳು ಎಂಬ ಪ್ರತೀತಿ.
ಅದಕ್ಕೆ ಅವರು ಮುನವಳ್ಳಿಯಲ್ಲಿಯೂ ತಮ್ಮ ದೇಶಪರ್ಯಟನೆ ಕಾಲಕ್ಕೆ ಬಂದಿರಬಹುದು ಎನ್ನುವುದನ್ನು ಈ ಪ್ರಾಣದೇವರುಗಳ ವಿಗ್ರಹಗಳನ್ನು ನೋಡಿದಾಗ ಅನಿಸದಿರದು. ಅದರಲ್ಲೂ ಮುನವಳ್ಳಿ ಮುನಿಪುರ.ಇಲ್ಲಿನ ಪಂಚಲಿಂಗೇಶ್ವರ ದೇವಾಲಯದ ಶಾಸನ ಮತ್ತು ಉಡಚವ್ವ ದೇವಾಲ ಯದ ಶಾಸನಗಳಲ್ಲಿ ಮುನವಳ್ಳಿಯನ್ನು ಮುನೀಂದ್ರವಳ್ಳಿ ಮುನಿಪಳ್ಳಿ ಎಂದು ಕರೆಯಲಾಗಿದೆ.
ಇಂದಿಗೂ ಮುನಿಪರಂಪರೆಯನ್ನು ಮಠ ಮಾನ್ಯಗಳನ್ನು ಮುನವಳ್ಳಿ ಹೊಂದಿದೆ. ಅದರಲ್ಲೂ ತಪೋನುಷ್ಠಾನಕ್ಕೆ ಹೇಳಿ ಮಾಡಿಸಿದ ಮಲಪ್ರಭಾ ನದಿ ದಡವೂ ಕೂಡ ಕಾರಣ. ವಿಷ್ಣುತೀರ್ಥರು ಅನುಷ್ಠಾನ ಗೈದ ತಪೋಭೂಮಿ ಮುನವಳ್ಳಿ.
ಈ ಹಿನ್ನಲೆಯಲ್ಲಿ ಮುನವಳ್ಳಿಯ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವೂ ಇರುವುದು.ರಾಮನ ವನವಾಸಕ್ಕೆ ಕುರುಹಾಗಿ ಹತ್ತಿರದ ಶಭರಿಕೊಳ್ಳ ಐತಿಹಾಸಿಕ ಕುರುಹಾಗಿದೆ.ಸಮರ್ಥ ರಾಮದಾಸರು ಸಂಚರಿಸಿದ ಸ್ಥಳ ಮೂಡಲಗಿ ಸಮೀಪದ ಕಲ್ಲೋಳಿ ಅಂಜನೇಯನ ದೇವಾಲಯ ವನ್ನು ಹತ್ತಿರದಲ್ಲಿ ಮುನವಳ್ಳಿ ಹೊಂದಿದೆ.
ಕೊಲ್ಲಾಪುರದ ಸಿಂಧೆ ಮಹಾರಾಜರ ನಂಟನ್ನೂ ಕೂಡ ಮುನವಳ್ಳಿ ಹೊಂದಿರುವ ಕಾರಣ ಮರಾಠ ಸಾಮಂತರು ಭೇಟಿ ನೀಡುತ್ತಿದ್ದ ಸ್ಥಳ. ಹೀಗಾಗಿ ಸರ್ವಧರ್ಮಗಳ ಸಮನ್ವಯ ತಾಣದಲ್ಲಿ ವೈಶಿಷ್ಟ್ಯಪೂರ್ಣ ಹನುಮಾನ್ ಮಂದಿರಗಳು ಗಮನಸೆಳೆ ಯುತ್ತಿವೆ. ಎಲ್ಲ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಜರಗುವ ಮೂಲಕ ಇಂದಿಗೂ ಭಕ್ತಿ ಸಂಗಮದ ತಾಣವಾಗಿ ಮುನವಳ್ಳಿ ಕಂಗೊಳಿಸುತ್ತಿರುವುದು.
ವೈ ಬಿ ಕಡಕೋಳ
ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ 591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ