ಕಾಸಿ ನೋಡು ಅಪ್ಪಟ ಬಂಗಾರ
ಕಡಿಮೆ ಆಗದು ಎಂದಿಗೂ ಸಾರ
ಅದಕ್ಕಿಂತಲೂ ಸುಂದರ ಹೊಳಪು
ಈ ನಮ್ಮ ಗುರುಗಳ ನೆನಪು
ಮನುಷ್ಯನಿಗೆ ಶಿಕ್ಷಣ ತುಂಬಾ ಅವಶ್ಯಕವಾದದು. ಮನುಷ್ಯ ದಿನದಿನಕ್ಕೂ ಕ್ಷಣ ಕ್ಷಣಕ್ಕೂ ಕಲಿಯುತ್ತಲೇ ಇರುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯ ಏಳಿಗೆಗೂ ಒಬ್ಬ ಗುರು ಇರಲೇಬೇಕು. ಪ್ರತಿ ಮಗುವಿಗೂ ತಾಯಿಯೇ ಮೊದಲ ಗುರು.. ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಾತ್ರ ಆ ವ್ಯಕ್ತಿ ಬದುಕಲ್ಲಿ ಯಶಸ್ಸನ್ನು ಹೊಂದುವನು.
ಮನುಷ್ಯನು ಬದುಕಲು ಹಲವಾರು ಮೂಲಭೂತ ಸೌಕರ್ಯಗಳು ಬೇಕು ಗಾಳಿ ಬೆಳಕು ನೀರು ವಸತಿ ಎಲ್ಲವೂ ಬೇಕು ಇವೆಲ್ಲವೂಗಳಿಗಿಂತ ಹೆಚ್ಚಾಗಿ ಬದುಕಲು ಒಂದು ವೃತ್ತಿ ಬೇಕು ಎಲ್ಲ ವ್ಯತ್ತಿಗಳಲ್ಲಿಯೂ ಮನುಷ್ಯ ತನ್ನ ಬದುಕನ್ನು ತಾನು ರೂಪಿಸಿಕೊಳ್ಳುತ್ತಾನೆ ಆದರೆ ಶಿಕ್ಷಕ ವೃತ್ತಿಯಲ್ಲಿ ಮಾತ್ರ ಒಬ್ಬ ಶಿಕ್ಷಕ ಮತ್ತೊಬ್ಬರ ಬದುಕನ್ನು ರೂಪಿಸುತ್ತಾನೆ
ಚಂಚಲ ಚಿತ್ತವಾದ ಮಕ್ಕಳ ಮನಸ್ಸನ್ನು ಒಂದುಗೂಡಿಸಿ ತಿದ್ದಿ ಹದಗೊಳಿಸಿ ಅವರಲ್ಲಿ ಸನ್ನಡತೆಯನ್ನು ಬೆಳೆಸುವ ಮತ್ತು ಉತ್ತಮ ಚಾರಿತ್ರ್ಯವನ್ನು ರೂಪಿಸುವ ಒಂದು ಪವಿತ್ರ ವೃತ್ತಿಯ ಶಿಕ್ಷಕ ವೃತ್ತಿ ಒಬ್ಬ ಶಿಲ್ಪಿ ಒಂದು ಮೂರ್ತಿ ಮಾಡುವಾಗ ಒಂದು ಕಲ್ಲು ಯೋಗ್ಯವಾಗಿ ಇರದಿದ್ದರೆ ಅದನ್ನು ಬದಲಿಸಿ ಬೇರೆ ಕಲ್ಲನ್ನು ಆಯ್ದುಕೊಳ್ಳುತ್ತಾನೆ ಆದರೆ ಶಿಕ್ಷಕ ಹಾಗಲ್ಲ ಮಕ್ಕಳಲ್ಲಿರುವ ಅಯೋಗ್ಯ ಗುಣಗಳನ್ನು ತೆಗೆದುಹಾಕಿ ಯೋಗ್ಯ ವ್ಯಕ್ತಿತ್ವವನ್ನು ರೂಪಿಸುತ್ತಾನೆ ಇದೇ ಶಿಕ್ಷಕನ ವೈಶಿಷ್ಟವಾಗಿದೆ
ಮಗು ಕುಟುಂಬದಿಂದ ಶಾಲೆಗೆ ಬರುತ್ತದೆ ಅದು ಶಾಲೆಗೆ ಬಂದ ನಂತರ ತಂದೆ ತಾಯಿಯ ಪ್ರೀತಿಯನ್ನು ಬಯಸುತ್ತದೆ ಹಾಗೆಯೇ ಅದನ್ನು ಶಿಕ್ಷಕರಿಂದಲೇ ಪಡೆಯುತ್ತದೆ ಮಗು ಪ್ರತಿಯೊಂದು ಸಮಯದಲ್ಲೂ ಶಿಕ್ಷಕರನ್ನು ಅನುಸರಿಸುತ್ತದೆ ಶಿಕ್ಷಕರ ಮಾತನ್ನ ವೇದವಾಕ್ಯ ಎಂದು ಭಾವಿಸುತ್ತದೆ ಶಿಕ್ಷಕರ ಪ್ರತಿಯೊಂದು ಮಾತುಗಳು ಮಗುವಿನ ಮನಸ್ಸಿನಲ್ಲಿ ಹಸಿ ಗೋಡೆಗೆ ಹಳ್ಳ ಎಸೆದಂತೆ ಗಟ್ಟಿಯಾಗಿ ಬೇರೂರಿರುತ್ತವೆ.
ಅದೇ ರೀತಿ ಮಕ್ಕಳ ಮನಸ್ಸನ್ನು ಬಿಳಿ ಹಾಳೆಗೆ ಹೋಲಿಸಬಹುದು ಏಕೆಂದರೆ ಮಗುವಿನ ಮನಸ್ಸು ಕೂಡ ಬಿಳಿಯ ಹಾಳೆಯ ತರಹ ಸ್ವಚ್ಛ ನಿರ್ಮಲ ಮತ್ತು ನಿಷ್ಕಪಟವಾಗಿರುತ್ತದೆ ಆ ಬಿಳಿ ಹಾಳೆಯಲ್ಲಿ ಯಾರು ಹೇಗೆ ಬರೆಯುವರೋ ಅದು ಹಾಗೆ ಮೂಡುತ್ತದೆ.
ಒಬ್ಬ ವೈದ್ಯ ತಪ್ಪು ಮಾಡಿದರೆ ಒಬ್ಬ ವ್ಯಕ್ತಿ ಸತ್ತು ಹೋಗುವನು ಆದರೆ ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಇಡೀ ಸಮಾಜವೇ ನಾಶಗೊಳ್ಳುತ್ತದೆ. ಎಂಬುದರ ಮೂಲಕ ಶಿಕ್ಷಕರ ಮಹತ್ವವನ್ನು ಅರಿಯಬಹುದು. ಅಂತಹ ಒಂದು ಶ್ರೇಷ್ಠ ಸ್ಥಾನವೇ ಗುರುವಿನ ಸ್ಥಾನ. ಇಂತಹ ಅಗಾಧವಾದ ಮಹಿಮೆಯನ್ನು ಹೊಂದಿದ ಗುರುವಿಗೆ ಎಷ್ಟು ಸೇವೆ ಮಾಡಿದರೂ ಅವರ ಋಣ ತೀರದು..
ಆದರೆ ಇತ್ತೀಚಿನ ದಿನಮಾನದಲ್ಲಿ ಮಕ್ಕಳಲ್ಲಿ ಬರ ಬರುತ್ತಾ ಶಿಕ್ಷಕರ ಬಗ್ಗೆ ಇರುವ ಗೌರವ ಭಾವನೆ ಕಡಿಮೆಯಾಗುತ್ತಲಿದೆ.
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
ಎಂದು ಹಿಂದೊಂದು ದಿನ ಗುರುವನ್ನು ಪೂಜಿಸುತ್ತಿದ್ದರು. ಆದರೆ ಗುರುವೇ ನಮಃ ಎನ್ನುವ ಬದಲಾಗಿ ಮಕ್ಕಳು ಇಂದಿನ ದಿನಗಳಲ್ಲಿ ಗುರು ಏನು ಮಹಾ.? ಎನ್ನುವ ಪರಿಸ್ಥಿತಿ ಬಂದಿದೆ. ಇಲ್ಲಿ ಶಿಕ್ಷಕರ ತಪ್ಪಿದೆಯೋ?ಅಥವಾ ಮಕ್ಕಳ ತಪ್ಪಿದೆಯೋ? ತಿಳಿಯುತ್ತಿಲ್ಲ
“ಯಥಾ ರಾಜ ತಥಾ ಪ್ರಜೆ ” As is the teacher,,So is the Student “. ಎಂಬಂತೆ ಮೊದಲು ಶಿಕ್ಷಕರು ಸರಿಯಾಗಿದ್ದರೆ ಮಕ್ಕಳು ಸಹ ಅವರನ್ನೇ ಅನುಸರಿಸುತ್ತಾರೆ. ಶಿಕ್ಷಕ ಈ ಹುದ್ದೆಯು ಒಂದು ಪವಿತ್ರವಾದ ಹುದ್ದೆ ಈ ಹುದ್ದೆಗೆ ಬಂದ ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕತೆ ದಕ್ಷತೆ ನಿಷ್ಪಕ್ಷಪಾತತನ ಹಾಗೂ ಕಾರ್ಯನಿಷ್ಟೆಯಿಂದ ಕಾರ್ಯನಿರ್ವಹಿಸಬೇಕು. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಬದಲಾವಣೆಯನ್ನು ತರಬಹುದು ಅಪೇಕ್ಷಿತ ಫಲಿತಾಂಶವನ್ನು ಪಡೆಯಬಹುದು ಇಂತಹ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರಿಗೆ ಇದೆ ಇವರು ಮುಂದಿನ ಭಾವಿ ಭವಿಷ್ಯದ ನಾಗರೀಕರ ನಿರ್ಮಾತ್ರಗಳಾಗಿದ್ದಾರೆ. ಇಂಥಹ ಪವಿತ್ರ _ಸ್ಥಾನಕ್ಕೆ_ ನಾವೆಲ್ಲ ತಲೆಬಾಗಲೇಬೇಕು.
ಸುಮಾ ದೊಡಮನಿ (ಶಿಕ್ಷಕಿ )
ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ರುಕ್ಮಿಣಿ. ನಗರ ಬೆಳಗಾವಿ.
….