spot_img
spot_img

ನನ್ನ ಗುರುಗಳು (ಇಂದು ಗುರು ಪೂರ್ಣಿಮಾ. ತನ್ನಿಮಿತ್ತ ಈ ಗುರು ನೆನಕೆ)

Must Read

ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ. ಭಗವಂತನ ಕರುಣೆ ಗುರುಗಳ ಮೂಲಕ ಹರಿದು ಬರುತ್ತದೆ. ಗಾಳಿಪಟವು ಸೂತ್ರವಿಲ್ಲದೇ ಸರಿಯಾಗಿ ಹಾರಲಾಗದು. ಹಾಗೆಯೇ ಗುರುವಿನ ಮಾರ್ಗದರ್ಶನವಿಲ್ಲದೇ ನಮ್ಮ ಬದುಕಿನಲ್ಲಿ ನಡೆಯಲಾಗದು. ಮನುಷ್ಯನಿಗೆ ಗುರುವನ್ನು ಬಿಟ್ಟು ಬೇರೆ ಗತಿಯಿಲ್ಲ. ಅಂದರೆ ಮುಕ್ತಿ ಇಲ್ಲ. ಮುಕ್ತಿಯನ್ನು ಹೊಂದುವುದೇ ಮಾನವ ಜನ್ಮದ ಸಾಫಲ್ಯವು. ಇಂಥಹ ಒಂದು ಸಾರ್ಥಕತೆಯನ್ನು ಹೊಂದಬೇಕಾದರೆ ಮುಖ್ಯವಾಗಿ ಗುರುವನ್ನು ಆಶ್ರಯಿಸಬೇಕು. ಹಾಗಾದರೆ ಗುರು ಏನು ಮಾಡುವನು ಎಂದರೆ ಮಾನವರಾದ ನಮ್ಮನ್ನು ದೇವಮಾನವರನ್ನಾಗಿ ಮಾಡುವರು. ಅವರು ನಮ್ಮ ಕಣ್ಣು,ಕಿವಿ.ಮನಸ್ಸುಗಳಿಗೆ ಆಗಾಗ ಕವಿಯುವ ಪೊರೆಯನ್ನು ತಮ್ಮ ಜ್ಞಾನಾಮೃತ ನುಡಿಗಳಿಂದ ಜಿಡ್ಡುಗಳನ್ನು ತಗೆದು ಮುಕ್ತಿ ನೀಡುವರು.

ಗುರು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದಾನೆ. ಹಾಗಾದರೆ ನಾವು ಯಾರನ್ನು ಗುರುಗಳು ಎಂದು ಕರೆಯಬೇಕು.

ಉಪಾಧ್ಯಾಯಃ
ಪಿತಾ,ಜೇಷ್ಠ ಬ್ರಾತಾ ಚೈವ
ಮಹೀಪತಿಃ
ಮಾತುಲಃ ಶ್ವುಶುರಸ್ತ್ರಾತಾ ಮಾತಾಮಹಪಿತಾಮಹೌ
ವರ್ಣಜೇಷ್ಠ
ಪಿತೃವ್ಯಶ್ಚಪುಂಸ್ಯೇತೇ ಗುರವಃ
ಸ್ಮೃತಾಃ

ವಿದ್ಯೆಯನ್ನು ಹೇಳಿಕೊಟ್ಟವರು, ತಂದೆ, ಹಿರಿಯ ಅಣ್ಣ, ಧರ್ಮವರಿತ ರಾಜ, ಸೋದರ ಮಾವ, ಹೆಣ್ಣುಕೊಟ್ಟ ಮಾವ, ತಾಯಿಯ ತಂದೆ, ತಂದೆಯ ತಂದೆ, ಸ್ವಭಾವಾಚರಣೆಗಳಲ್ಲಿ ಹಿರಿಯ ದೊಡ್ಡಪ್ಪ ಮಾತೃದೇವೋಭವ ಎನಿಸಿಕೊಂಡ ತಾಯಿ ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಗುರುಗಳು. ನನ್ನ ಜೀವನದಲ್ಲೂ ನನಗೆ ಸ್ಪೂರ್ತಿಯಾದ ಗುರುಗಳಿಗೆ ನನ್ನ ನಮನಗಳನ್ನು ಸಲ್ಲಿಸಲು ಇಚ್ಚಿಸುತ್ತೇನೆ. ನನ್ನ ಪ್ರಾಥಮಿಕ ಶಿಕ್ಷಣ ಜರುಗಿದ್ದು ಸವದತ್ತಿಯಲ್ಲಿ. ಆಗ ನಮ್ಮ ಮನೆಯ ಹತ್ತಿರ “ಅಡ್ಡೆಸಾಲಿ” ಎಂದು ಕರೆಯುತ್ತಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿತ್ತು.

ನನಗಿಂದಿಗೂ ನೆನಪಿದೆ ನನ್ನ ಶಿಕ್ಷಕರೆಲ್ಲ ಹೇಗಿದ್ದರೆಂದರೆ ಎಲ್ಲರೂ ಅಂದಿನ ಕಾಲದ ನಾಲ್ಕನೇ ತರಗತಿ ಮತ್ತು ಏಳನೆಯ ತರಗತಿ ಓದಿದವರು.ಅಲ್ಲಿ ಯಾರೂ ವಿಷಯ ಶಿಕ್ಷಕರು ಅಂತಾ ಇರಲಿಲ್ಲ.ಎಲ್ಲರಲ್ಲೂ ಒಂದೊಂದು ಪ್ರತಿಭೆಯಿತ್ತು. ಗಣಿತವನ್ನು ಮುತ್ತಗಿ ಸರ್ ಹೇಳಿದರೆ ಇಂಗ್ಲೀಷ ವಿಷಯವನ್ನು ಸರದಾರ ಸರ್ ಹೇಳುತ್ತಿದ್ದರು.ವಿಷಯದ ಜೊತಗೆ ಸಾಂಸ್ಕೃತಿಕ ಚಟುವಟಿಕೆಗಳು ಬಂದರೆ ಕಾಂತನವರ ಸರ್,ಅವರು ಹೇಗಿದ್ದರೆಂದರೆ ಸ್ವತಃ ಹಾರ್ಮೋನಿಯಂ ನುಡಿಸುತ್ತ ಸಂಗೀತ ಕಲಿಸುತ್ತಿದ್ದರು.ಹೆಬ್ಬಳ್ಳಿ ಸರ್ ಕಿರಿಯ ಪ್ರಾಥಮಿಕದ ಎಲ್ಲ ಮಕ್ಕಳಿಗೆ ಅಚ್ಚುಮೆಚ್ಚು ಪಾಟೀಲ ಸರ್ ಶಿಸ್ತಿನ ಸಿಫಾಯಿ. ಅವರು ಓದಿನ ಜೊತೆಗೆ ಆಟಕ್ಕೂ ಸೈ. ಇಂದು ಅವರು ನಮ್ಮೊಡನಿಲ್ಲ. ಆದರೆ ಅವರು ನಮಗೆ ಕೊಟ್ಟ ಆದರ್ಶದ ಗುಣಗಳು ನಮ್ಮೊಡನಿವೆ ಎಂದರೆ ಅತಿಶಯೋಕ್ತಿಯಲ್ಲ.

ನನಗೆ ಹೆಬ್ಬಳ್ಳಿ ಸರ್ ಹಾಡುಗಳನ್ನು ಕಲಿಸಿದ್ದು. ಇಂದಿಗೂ ಆ ಹಾಡುಗಳು ನೆನಪಿವೆ. ಒಂದಕ್ಷರ ತಪ್ಪದಂತೆ ಹೇಳಬಲ್ಲೆ ಕೂಡ. ಅವರು ಒಂದನೇ ತರಗತಿಯಿಂದ ನಾಲ್ಕನೆಯ ತರಗತಿಯವರೆಗೂ ನಮಗೆ ತರಗತಿ ಶಿಕ್ಷಕರಾಗಿದ್ದರು. ಕುಳ್ಳಗಿನ ವ್ಯಕ್ತಿತ್ವ. ಧೋತರ ಅಂಗಿ ಧರಿಸುತ್ತಿದ್ದರು. ತಮ್ಮ ಮನೆಯಲ್ಲಿಯೇ ಪ್ರತಿ ರವಿವಾರ ಎರಡು ತಾಸು ಗಣಿತವನ್ನು ಹೇಳಿಕೊಡುತ್ತಿದ್ದರು.

ಆಗಿನ ಕಾಲದಲ್ಲಿ(೧೯೭೮-೭೯) ಟ್ಯೂಷನ್ ಶಬ್ದವೇ ಇರಲಿಲ್ಲ. ಎಲ್ಲ ವಿದ್ಯಾರ್ಥಿಗಳೂ ಅವರ ಮನೆಗೆ ಹೋಗುತ್ತಿದ್ದೆವು. ಯಾರಿಗೂ ಹಣವನ್ನು ಕೇಳುತ್ತಿರಲಿಲ್ಲ. ಉಚಿತ ಬೋಧನೆ ಮನೆಯಲ್ಲಿ ಸಾಗುತ್ತಿತ್ತು ಅಷ್ಟೇ ಅಲ್ಲ ಅವರ ಮನೆಯಲ್ಲಿ ಅಂದು ಮಾಡಿದ್ದ ಅಡುಗೆಯ ರುಚಿಯನ್ನು ಅವರ ಪತ್ನಿ ನಮಗೆ ಉಣ ಬಡಿಸುತ್ತಿದ್ದರು.ನನಗಿನ್ನೂ ನೆನಪಿದೆ, ನನಗೆ ಟೈಪಾಯ್ಡ ಕಾಯಿಲೆ ಬಂದಾಗ ಜ್ವರದಿಂದ ಮಲಗಿದ್ದೆ. ಏಳಲೂ ಆಗದ ಸ್ಥಿತಿಯದು.

 

ಅಂತಹ ಪರಿಸ್ಥಿತಿ ನಮ್ಮ ಮನೆಗೆ ಬಂದು ಜ್ವರವನ್ನು ಪರೀಕ್ಷಿಸಿ. ”ನೀನು ಪೂರ್ಣ ಅರಾಮವಾಗುವರೆಗೂ ಶಾಲೆಗೆ ಬರಬೇಡ. ನಿನ್ನ ಅಭ್ಯಾಸಕ್ಕೆ ಏನು ಬೇಕು ಅದನ್ನ ಒದಗಿಸುವೆ.” ಎಂದು ಪ್ರತಿ ದಿನದ ಗೃಹಪಾಠದ ವಿವರ ಮನೆಗೆ ಬಂದು ಹೇಳಿದ ಪುಣ್ಯಾತ್ಮರವರು. ಅವರು ಅಂದು ನನಗೆ ನೀಡಿದ ಪ್ರೋತ್ಸಾಹ ನನ್ನ ಶಿಕ್ಷಣಕ್ಕೆ ಸಿಕ್ಕ ಪ್ರೋತ್ಸಾಹವೇ ಎಂದು ಭಾವಿಸುತ್ತೇನೆ.

ಮುನವಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ನನ್ನ ೭ ನೆಯ ತರಗತಿ ವ್ಯಾಸಂಗ ಜರುಗಿತು. ಈ ಸಂದರ್ಭದಲ್ಲಿ ಚುಳಕಿಮಠ ಗುರುಗಳು ನಮಗೆ ಕನ್ನಡ ವಿಷಯವನ್ನು ಬೋಧಿಸಿದರು. ಮಾಟನವರ ಸರ್ ಹುಲಿಗೊಪ್ಪ ಸರ್ ಅಸೂಟಿ ಸರ್.ಕಡೇಮನಿ ಸರ್,ಇವರನ್ನು ಇಂದು ನೆನೆಯಲೇ ಬೇಕು ಪ್ರೌಢಶಾಲೆಯಲ್ಲಿ ಕನ್ನಡವನ್ನು ಶಿರೂರ ಗುರುಗಳು ಇತಿಹಾಸವನ್ನು ಬಾನಿ ಗುರುಗಳು. ಇಂಗ್ಲೀಷ ಐನಾಪೂರ ಗುರುಗಳು. ಗಣಿತವನ್ನು ಮೋಹರೆ ಗುರುಗಳು ಬೋಧಿಸಿದರೆ.ಪಿ.ಯು.ಸಿಯಲ್ಲಿ ನಮಗೆ ಎಸ್.ವ್ಹಿ.ಚೌಡಾಪುರ ಗುರುಗಳು. ಬೆನಕಟ್ಟಿಯ ಪೂಜೇರ ಗುರುಗಳು ಕನ್ನಡವನ್ನು, ಇತಿಹಾಸವನ್ನು ಬಿ.ಎಸ್.ಬಾನಿ ಗುರುಗಳು ಶಿಕ್ಷಣ ಶಾಸ್ತ್ರವನ್ನು ಪಿ.ವ್ಹಿ.ಮೋಹರೆ ಗುರುಗಳು, ಎಸ್.ಪಿ.ಬಾಳಿ ತತ್ವಶಾಸ್ತ್ರವನ್ನು, ಭೂಗೋಳವನ್ನು ದೇಸಾಯಿ ಸರ್.ರಾಜ್ಯಶಾಸ್ತ್ರ ದಿವಂಗತ ಎಮ್.ಎಮ್.ಹನಸಿ ಗುರುಗಳು ಬೋಧಿಸಿದರು.

ಇಂದಿಗೂ ನಾವು ಈ ಗುರುಗಳ ಸಂಪರ್ಕದಲ್ಲಿದ್ದೇವೆ. ಅದರಲ್ಲಿ ಪ್ರೊ.ಎಸ್.ವ್ಹಿ.ಚೌಡಾಪೂರ ಗುರುಗಳನ್ನು ಅವರು ನಮಗೆ ತಮ್ಮ ಮನೆಯಲ್ಲಿ ಯಾವುದೇ ಟ್ಯೂಷನ್ ಫಿ ಪಡೆಯದೇ ಇಂಗ್ಲೀಷ ವಿಷಯವನ್ನು ಬೋಧನೆ ಮಾಡಿದ ದಿನಗಳನ್ನು ಎಂದಿಗೂ ಮರೆಯಲಾರೆ. ನಮಗೆ ಇಂಗ್ಲೀಷ ಅಷ್ಟಕಷ್ಟೇ ಇದ್ದಂತಹ ದಿನಗಳವು. ಆಗ ನಮಗೆ ತಮ್ಮ ಮನೆಗೆ ಬರಲು ತಿಳಿಸಿ ಮನೆಯಲ್ಲಿ ನಮಗೆ ಇಂಗ್ಲೀಷ ಬೋಧಿಸುವ ಜೊತೆಗೆ ಪರೀಕ್ಷೆ ಎದುರಿಸುವ ರೀತಿ ಇಂಗ್ಲೀಷ ವ್ಯಾಕರಣ ಬರವಣಿಗೆಯನ್ನು ಕಲಿಸಿದರು. ಇಂದು ಅವರು ನಿವೃತ್ತರಾಗಿ ಬಾಗಲಕೋಟೆಯಲ್ಲಿದ್ದರೂ ಕೂಡ ಅವರ ನಿರಂತರ ಸಂಪರ್ಕ ನನ್ನ ಬರವಣಿಗೆಯ ಜೊತೆಗೆ ವೃತ್ತಿ ಬದುಕಿನ ಮಾರ್ಗದರ್ಶನದಲ್ಲಿ ಸಾಗಿದೆ.

ಪದವಿ ಮಹಾವಿದ್ಯಾಲಯ ಕೆ.ಎಲ್.ಇ.ಸಂಸ್ಥೆಯ ಧಾರವಾಡದ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದೆನು. ಇಲ್ಲಿ ಡಾ.ಡಿ.ಎಂ.ಹಿರೇಮಠ ಮತ್ತು ಶ್ರೀಮತಿ ವಿಜಯಶ್ರೀ ಹಿರೇಮಠ ಕನ್ನಡ ವಿಷಯವನ್ನು ಬೋಧಿಸುವ ಜೊತೆಗೆ ನನ್ನ ಬದುಕಿನ ಮಹತ್ವದ ಸಂಗತಿಗಳಲ್ಲಿ ನನಗೆ ಪ್ರೋತ್ಸಾಹ ನೀಡಿದ್ದನ್ನು ಮರೆಯಲಾರೆ.

ಕಾಲೇಜಿನ ಕನ್ನಡ ಸಂಘಟನೆಗೆ ನನ್ನನ್ನು ಕಾರ್ಯದರ್ಶಿ ಜವಾಬ್ದಾರಿ ನೀಡುವ ಜೊತೆಗೆ ನನ್ನಲ್ಲಿರುವ ಲೇಖಕನನ್ನು ಹೊರತಂದರು. ನನ್ನ ಬರಹಗಳನ್ನು ಕಾಲೇಜಿನಲ್ಲಿ ಪ್ರಕಟಣಾ ಫಲಕದಲ್ಲಿ ಪ್ರಕಟಿಸುವ ಜೊತೆಗೆ ವಿವಿಧ ಸ್ಫರ್ದೆಗಳು ಆಶುಭಾಷಣ ಕಾವ್ಯಗಾಯನ ಹೀಗೆ ಎಲ್ಲದರಲ್ಲೂ ಅವಕಾಶವನ್ನು ಒದಗಿಸಿ ಕಾಲೇಜಿನ ವಾರ್ಷಿಕ ಸಂಚಿಕೆಗಳಲ್ಲಿ ನನ್ನ ಬರಹಗಳು ಪ್ರಕಟವಾಗಲು ಪ್ರೇರಕ ಶಕ್ತಿಯಾದರು.

ಇಂದಿಗೂ ನಾನು ಇವರ ಮಾರ್ಗದರ್ಶನ ಪಡೆಯುತ್ತಿರುವೆ ಎಂದರೆ ಅತಿಶಯೋಕ್ತಿಯಾಗದು. ಅಂದು ಪ್ರಾಚಾರ್ಯರಾಗಿದ್ದವರು. ಸಿ.ವ್ಹಿ.ಮಠದ. ನಮಗೆ ರಾಜ್ಯಶಾಸ್ತ್ರವನ್ನು ಬೋಧಿಸಿದವರು ಹನಗವಾಡಿಮಠ ಗುರುಗಳು ಇಂಗ್ಲೀಷನ್ನು ಕನವಳ್ಳಿ ಗುರುಗಳು, ಬೋಧಿಸುತ್ತಿದ್ದರು.

ಇಂದಿಗೂ ನನ್ನನ್ನು ನನ್ನ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದಲ್ಲಿ ಸ್ಥಾನವನ್ನು ನೀಡುವ ಮೂಲಕ ನನ್ನ ಹಳೆಯ ನೆನಪುಗಳಿಗೆ ಶ್ರೀಮತಿ ಎನ್.ಎಸ್.ಪಾಟೀಲ ಉಪನ್ಯಾಸಕರು ಮತ್ತು ಸದ್ಯದ ಪ್ರಾಚಾರ್ಯರು ಅವಕಾಶ ನೀಡಿರುವರು. ಹೀಗೆ ನನ್ನ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ಶಿಕ್ಷಣದವರೆಗಿನ ಎಲ್ಲ ನನ್ನ ಗುರುವೃಂದ ಒಂದಲ್ಲ ಒಂದು ರೀತಿಯ ನನ್ನ ಶೈಕ್ಷಣಿಕ ಮತ್ತು ವೈಯುಕ್ತಿಕ ಬದುಕಿಗೆ ಪ್ರೇರಕ ಶಕ್ತಿಯಾಗಿರುವರು.

ಗುರು ಪೂರ್ಣಿಮೆಯ ಈ ಸಂದರ್ಭದಲ್ಲಿ ನನ್ನೆಲ್ಲ ಗುರುಗಳ ಸ್ಮರಣೆಯನ್ನು ಸದಾ ಮಾಡುವ ಜೊತೆಗೆ ಅಧ್ಯಾತ್ಮಿಕ ಬದುಕಿನಲ್ಲಿ ನಿತ್ಯಾನಂದ ಸತ್ಸಂಗ ಆಶ್ರಮದ ವಿಜಯಾನಂದ ಪೂಜ್ಯರನ್ನು ಸ್ಮರಿಸದೇ ಇರಲಾರೆ. ನಮಗವರು ಪಿ.ಯು.ಸಿ ಸಂದರ್ಭದಲ್ಲಿ ಮಠದಲ್ಲಿ ವಾಸ್ತವ್ಯ ಮಾಡಲು ಹೇಳಿ ಬೆಳಗಿನ ಜಾವ ಓದಲು ಎಚ್ಚರಿಸುವ ಜೊತೆಗೆ ಯೋಗದ ಮಹತ್ವವನ್ನು ತಿಳಿಸಿರುವರು. ಇಂದು ಈ ಮಠದ ಸತ್ಸಂಗದಲ್ಲಿ ಸೋಮವಾರ ಮತ್ತು ಶುಕ್ರವಾರದಂದು ಸತ್ಸಂಗಿಗಳಾದ ಯಶವಂತ ಗೌಡರ, ಬಸವರಾಜ ಹಲಗತ್ತಿ, ಚನಬಸು ನಲವಡೆಯವರು ನಡೆಸಿಕೊಡುವ ಸತ್ಸಂಗ ಕೂಡ ಅಧ್ಯಾತ್ಮಕ ಸಂಗತಿಗಳ ಗುರುಗಳನ್ನು ನನಗೆ ನೀಡಿದೆ.

ಇದು ನನ್ನ ಪೂರ್ವಜನ್ಮದ ಫಲ ಎಂದು ಸ್ಮರಿಸುವೆ.ಜೊತೆಗೆ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಪೂಜ್ಯರು ನಮಗೆ ತಿಳಿಸುವ ಭಾಗವತ ವಿಷಯವು ದೈನಂದಿನ ಬದುಕಿನಲ್ಲಿ ಮಹತ್ವವನ್ನು ನೀಡಿದೆ. ಗುರು ಪೂರ್ಣಿಮೆಯ ಈ ದಿನ ಎಲ್ಲ ಗುರುಗಳನ್ನು ಸ್ಮರಿಸುವ ಜೊತೆಗೆ ನಮ್ಮ ಮುಂದಿರುವ ವಿದ್ಯಾರ್ಥಿ ಪೀಳಿಗೆಗೆ ನಮ್ಮ ಗುರುತರ ಜವಾಬ್ದಾರಿಯನ್ನು ಕಾಯಾ ವಾಚಾ ಮನಸಾ ನೀಡುವ ಸಂಕಲ್ಪವನ್ನು ಹೊಂದುವ ನಮ್ಮ ಕಾರ್ಯ ಸಫಲಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿರುವುದು.ಈ ಎಲ್ಲ ನನ್ನ ಗುರುಗಳ ಪ್ರೇರಕ ಶಕ್ತಿಯಿಂದ.

ಮುನವಳ್ಳಿ ಸೋಮಶೇಖರ ಮಠದ ಪರಮಪೂಜ್ಯ ಮುರುಘೇಂದ್ರ ಸ್ವಾಮೀಜಿಯವರ ಬಗ್ಗೆ ಎರಡು ನುಡಿಗಳನ್ನು ಹೇಳದಿದ್ದರೆ ಬರಹ ಅಪೂರ್ಣ ವಾದೀತು. ಮುನವಳ್ಳಿ ಯ ಸಮಸ್ತ ಶಿಕ್ಷಕ ವೃಂದಕ್ಕೆ ಅವರು ಗುರುಗಳು. ಪ್ರತಿ ವರ್ಷ ಸೆಪ್ಟೆಂಬರ್ 5 ಶಿಕ್ಷಕ ದಿನಾಚರಣೆ ಅಂಗವಾಗಿ ಶ್ರೀ ಮಠದಲ್ಲಿ ಶಿಕ್ಷಕರನ್ನು ಆಹ್ವಾನಿಸಿ ಅವರಿಗೆ ಗುರು ರಕ್ಷೆ ನೀಡುತ್ತಿರುವರು.ಜೊತೆಗೆ ನನಗೆ ವೈಯಕ್ತಿಕ ವಾಗಿ ನನ್ನ ಎಲ್ಲಾ ಕಾರ್ಯ ಗಳ ಹಿಂದಿನ ಪ್ರೇರಕ ಶಕ್ತಿ ಯಾಗಿರುವರು ಹಾಗೆಯೇ ಲೂಸಿ ಸಾಲ್ಡಾನಾ ಗುರು ಮಾತೆಯ ಕುರಿತು ನನ್ನ ಎಲ್ಲಾ ಕೃತಿಗಳಿಗೆ ಆಶೀರ್ವಾದ ನೀಡಿ ಆ ಕೃತಿಗಳ ಬಿಡುಗಡೆ ದಿನದಂದು ಆಗಮಿಸಿ ನನ್ನ ಬರಹಕ್ಕೆ ಪ್ರೋತ್ಸಾಹ ನೀಡುತ್ತಿರುವ ಉಪ್ಪಿನ ಬೆಟಗೇರಿ ಯ ಪರಮಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳವರು. ಕುಂದರಗಿ ಪೂಜ್ಯರು. ಸವದತ್ತಿ ಯ ಎಲ್ಲಾ ಮಠ ಮಾನ್ಯಗಳ ಪರಮಪೂಜ್ಯ ರುಗಳ ಆಶೀರ್ವಾದ ನನಗೆ ದೊರೆತಿರುವುದು ನನ್ನ ಭಾಗ್ಯ. ಗುರು ಪೂರ್ಣಿಮೆ ಯ ಈ ದಿನ ಎಲ್ಲ ಪರಮಪೂಜ್ಯ ರಿಗೆ ನನ್ನ ನಮನಗಳು.

ಇನ್ನು ನನ್ನ ಜನ್ಮವಿತ್ತ ತಂದೆ ಕೂಡ ನನ್ನ ಗುರುವಿನ ಸ್ಥಾನ ನೀಡಿದ್ದರು.ಗುರು ಪೂರ್ಣಿಮೆಯಂದೇ ನನ್ನನ್ನು ಅಗಲುವ ಮೊದಲು ನನಗೆ ಮನೆತನದ ಜವಾಬ್ದಾರಿ ನಾಳೆಯಿಂದ ನಿನ್ನದು ಎಂದು ನನ್ನ ಹೆಗಲಿಗೇರಿಸಿದ ಮಾತುಗಳನ್ನಾಡಿ ಇನ್ನು ಮುಂದಿನ ದಿನಗಳ ಜವಾಬ್ದಾರಿಯೊಂದಿಗೆ ನಿನ್ನ ಮಕ್ಕಳು ತಾಯಿ ಪತ್ನಿಯ ಬದುಕು ನಿನ್ನದು ಎಂದು ಹೇಳಿ ಗುರು ಪೂರ್ಣಿಮೆಯ ರಾತ್ರಿ ನಮ್ಮನ್ನು ಅಗಲಿದ ನೆನಪು ಪ್ರತಿ ವರ್ಷ ಗುರು ಪೂರ್ಣಿಮೆ ಬಂದಾಗ ಆ ನೆನಪುಗಳ ಜವಾಬ್ದಾರಿ ಉಳಿಸಿ ಹೋದ ನನ್ನ ತಂದೆ ನನ್ನ ಗುರು. ನನಗೆ ನಿತ್ಯದ ಬದುಕಿನಲ್ಲಿ ನನ್ನಲ್ಲಿನ ಬರಹಗಾರನಿಗೆ ಎಲ್ಲ ವಿಧದಲ್ಲಿ ಸ್ಪೂರ್ತಿ ತುಂಬುತ್ತ ನನ್ನನ್ನು ಚಿಕ್ಕ ಮಗುವಿನ ರೀತಿಯಲ್ಲಿ ಬೆಳೆಸಿದ ನನ್ನ ತಂದೆ ನನಗೆ ಗುರು.

ಕಳೆದ ವರ್ಷ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಹಿರಿಯ ಸತ್ಸಂಗಿಗಳಾದ ಯಶವಂತ ಗೌಡರು ಹೇಳಿದ ಒಂದು ದೃಷಾಂತವನ್ನು ಇಂದು ಸ್ಮರಿಸುವ ಮೂಲಕ ಗುರುವಿನ ಮಹಿಮೆಯನ್ನು ತಮ್ಮ ಮುಂದೆ ಇಡುವೆನು.

ಹಿರಿಯರಾದ ಸತ್ಸಂಗಿಗಳಾದ ಯಶವಂತ ಗೌಡರ ಅಂದು ಮಾತನಾಡುತ್ತ “ ನಮ್ಮ ಆಲೋಚನೆಗಳು ಉಪಯೋಗವಿಲ್ಲದ ವಿಚಾರಗಳತ್ತ ಯೋಚಿಸದೇ ಗುರುವಿನ ಮುಖೇನ ಒಳ್ಳೆಯ ಆಲೋಚನೆಯನ್ನು ಹೊಂದೋಣ ಎನ್ನುತ್ತ ಹಿಂದೆ ಬಲ್ಕ ಒಂದು ರಾಜ್ಯವಿತ್ತು. ಅಲ್ಲಿ ಒಬ್ಬ ರಾಜನಿದ್ದ. ಸುಭೀಕ್ಷವಾದ ರಾಜ್ಯವಾಗಿತ್ತು.ಸೂಫಿ ಸಂತರ ನಾಡು. ರಾಜ ಅಂತಪುರದಲ್ಲಿ ಮಲಗಿದ್ದಾಗ ಮಹಡಿಯ ಮೇಲೆ ಯಾರೋ ಓಡಾಡಿದಂತೆ ಸದ್ದು ಕೇಳಿ ‘ಯಾರವರು.?” ಎಂದು ಪ್ರಶ್ನಿಸಿದ. ಆಗ ಮಹಡಿಯ ಮೇಲಿದ್ದ ವ್ಯಕ್ತಿ ‘ನಾನು ಮಹಡಿಯ ಮೇಲೆ ಓಡಾಡುತ್ತಿದ್ದುದು ಬಹಳ ದಿನವಾಗಿದೆ.’ ಎಂದು ಹೇಳಿದ. ಆಗ ರಾಜ ಪ್ರತಿಕ್ರಯಿಸಿ ‘ಅದು ಸರಿ ನೀನು ಬಹಳ ದಿನಗಳಿಂದ ಓಡಾಡುತ್ತಿರಬಹುದು. ನನಗೆ ಇವತ್ತು ಗೊತ್ತಾಗಿದೆ. ಮೇಲೆ ಓಡಾಡಲು ಕಾರಣ.?” ಎಂದ. ಆಗ ಆತ ‘ನನ್ನ ಒಂಟೆ ಕಳುವಾಗಿದೆ. ಅದನ್ನು ಹುಡುಕುತ್ತಿರುವೆ.’ ಎಂದನು.ರಾಜನಿಗೆ ಆಶ್ಚರ್ಯ ‘ಹುಚ್ಚಪ್ಪ ಮಹಡಿಯ ಮೇಲೆ ಒಂಟೆ ಹತ್ತುತ್ತದೆಯೇ,?’ ಎಂದ ಆಗ ಆತ ‘ ಬೋಗ ಐಶ್ಚರ್ಯ ಅಧಿಕಾರದಿಂದ ಸುಖ ಸಿಗುತ್ತದೆ ಎಂದರೆ ಮಹಡಿಯ ಮೇಲೆ ಒಂಟೆ ಸಿಗಬಾರದೇ.?”ಎಂದು ಹೇಳಿ ಕಣ್ಮರೆಯಾದ.

ರಾಜನಿಗೆ ಈ ಮಾತು ವಿಚಿತ್ರವೆನಿಸಿದರೂ ಅದರ ತಾತ್ಪರ್ಯ ತಿಳಿಯಲು ರಾತ್ರಿಯಿಡೀ ನಿದ್ರಿಸಲಿಲ್ಲ. ಮರುದಿನ ಅಂತಃಪುರದಲ್ಲಿ ಮಂತ್ರಿಗಳ ಸಭೆ ಸೇರಿತ್ತು. ಒಬ್ಬ ವ್ಯಕ್ತಿ ದ್ವಾರ ಬಾಗಿಲಿನಲ್ಲಿ ನಿಂತಿದ್ದ ರಾಜಭಟರನ್ನು ಲೆಕ್ಕಿಸದೇ ಅಂತಃಪುರ ಪ್ರವೇಶಿಸಿದ.ಹಿಂದಿನಿಂದ ರಾಜಭಟರು ಓಡಿ ಬಂದರೂ ಅವನು ನಿಲ್ಲದೇ ರಾಜನೆದುರಿಗೆ ಬಂದು ನಿಂತ. ಆಗ ರಾಜ ‘ ಈ ರೀತಿ ಹೇಳದೇ ಕೇಳದೇ ಒಳ ನುಗ್ಗಲು ಇದೇನು ಧರ್ಮಶಾಲೆಯೇನು.? ಎಂದ. ಆಗ ಆ ಅಪರಿಚಿತ ‘ ಹೌದು ಇದೊಂದು ಧರ್ಮಶಾಲೆ. ಈ ಹಿಂದೆ ನಾನು ಬಂದಾಗ ಬೇರೊಬ್ಬ ರಾಜನಿದ್ದ. ನಂತರ ಹಲವು ದಶಕ ಕಳೆದು ಬಂದಾಗ ಮತ್ತೊಬ್ಬ ರಾಜನಿದ್ದ ಈಗ ನೀವಿರುವಿರಿ.ಮತ್ತೆ ಇದೊಂದು ಧರ್ಮಶಾಲೆಯಲ್ಲದೇ ಬೇರೇನು.? ಬಂದು ಹೋಗುವ ಮನುಜನಿಗೆ ಇದೊಂದು ಧರ್ಮಶಾಲೆಯಲ್ಲದೇ ಮತ್ತೇನು.?” ಎನ್ನಲು ರಾಜನಿಗೆ ಜ್ಞಾನೋದಯವಾಯಿತು. ಒಂಟೆ ಹುಡುಕಲು ಬಂದ ಮಹಾತ್ಮ ಇವರು. ಇವರ ಮಾತುಗಳು ಸತ್ಯ. ಈ ಶರೀರ ಶಾಶ್ವತವಲ್ಲ.ಇದು ನಶ್ವರ ಎಂದು ತಿಳಿದು ಅವರನ್ನು ಉಪಚರಿಸಿದ. ರಾಜ ತನ್ನ ಸಾಮ್ರಾಜ್ಯವನ್ನು ತೊರೆದು ಸೂಫಿ ಸಂತನಾದನು” ಇದು ಗುರು ಮಹಿಮೆ ಎಂದು ತಿಳಿಸಿದರು.

ಹೀಗೆ ಪುರಾಣ ಶಾಸ್ತ್ರಗಳಲ್ಲಿ ನಾವು ಗುರುಗಳ ಮಹತ್ವವನ್ನು ಸಾರುವ ಅನೇಕ ದೃಷ್ಟಾಂತಗಳನ್ನು ಕಾಣುತ್ತೇವೆ. ನಾರದ ಮಹರ್ಷಿಗಳು ಧ್ರುವ, ದ್ರೋಣ ಮತ್ತು ಅರ್ಜುನ.ವಿಶ್ವಾಮಿತ್ರ ಶ್ರೀರಾಮ. ಕೃಷ್ಣ ಪರಮಾತ್ಮ ಸಾಂದೀಪಿನಿ. ಇವರುಗಳ ಬದುಕಿನ ದೃಷ್ಟಾಂತಗಳನ್ನು ನಾವಿಂದು ನೆನೆಯಬೇಕು. ಗುರುಕುಲವಾಸ. ಗುರುಗಳ ಜತೆಗಿರುವುದು. ಅನುಸರಿಸುವುದು.ಕೇಳಿ ತಿಳಿಯುವ ಬಯಕೆಯಿಂದ ಸೇವೆಗೈಯುವುದು. ಗುರುಭಕ್ತಿ, ಗುರುಗಳು ತೋರಿದ ಮಾರ್ಗದರ್ಶನ, ಗುರು ಅನುಗ್ರಹ ಕುರಿತು ನಾವು ನಮ್ಮ ನಿತ್ಯದ ಬದುಕಿನಲ್ಲಿ ಗುರು ಕರುಣೆಯ ಮಾಹಿತಿ ಹೊಂದುವುದು ಇಂದಿನ ಅವಶ್ಯಕತೆ ಮತ್ತು ನಮ್ಮ ಸಂಸ್ಕೃತಿಯ ಸಂಸ್ಕಾರದ ಅರಿವಿನ ಮೂಲಕ ಜೀವನ ರೂಪಿಸಿಕೊಳ್ಳುವುದು ಅತ್ಯವಶ್ಯ. ಈ ದಿಸೆಯಲ್ಲಿ ನಾವು ನಮ್ಮ ಬದುಕಿನಲ್ಲಿ ನಮ್ಮ ಗುರುಗಳನ್ನು ಸ್ಮರಿಸುವ ಜೊತೆಗೆ ಗುರು ಪೂರ್ಣಿಮೆಯನ್ನು ಮಹಾತ್ಮರ ಸ್ಮರಣೆಯೊಂದಿಗೆ ಆಚರಿಸುವುದು ಸೂಕ್ತ.


ವೈ.ಬಿ.ಕಡಕೋಳ
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!