spot_img
spot_img

ನನ್ನ ಮತ ಮಾರಾಟಕ್ಕಿಲ್ಲ… ನಿಮ್ಮದು…

Must Read

- Advertisement -

“ನನ್ನ ಮತ ಮಾರಾಟಕ್ಕಿಲ್ಲ” ಒಂದೇ ಮಾತು. ಸೋಲುವ ಮಾತೇ ಇಲ್ಲ. ಈ ಒಂದು ಮಾತು ಸರ್ವರಿಗೂ ಅರ್ಥವಾಗಿದೆ ಎಂದುಕೊಳ್ಳುತ್ತೇನೆ.

ಹೌದು. ನಿಜವಾದ ಮೌಲ್ಯವುಳ್ಳ ಜನಪ್ರತಿನಿಧಿಯಾಗಿದ್ದರೆ, ಚುನಾವಣೆಯಲ್ಲಿ ಪ್ರಚಾರ ಬೇಕಿಲ್ಲ. ಜನರು ತಾವೇ ಅರ್ಥಮಾಡಿಕೊಂಡು ಮತ ಚಲಾಯಿಸುತ್ತಾರೆ. ಒಳ್ಳೆಯ ಕೆಲಸ ಮಹತ್ಕಾರ್ಯಗಳನ್ನು ಮಾಡಿ ತೋರಿಸಿದವರು ದೇವಾಲಯಕ್ಕೆ ಹೋಗುವ ಪ್ರಮೆಯವೇ ಇಲ್ಲ.ಏನಾದರೂ ತಿಂದು ತೇಗಿದ್ದರೆ, ಅನಾಚಾರಗಳನ್ನು ಎಸಗಿದ್ದರೆ ಪ್ರಾಯಶ್ಚಿತ್ತಕ್ಕಾಗಿ ದೇವರ ಮೊರೆ ಹೋಗುತ್ತಾರೆ. ಒಮ್ಮೊಮ್ಮೆ  ಜನಪ್ರತಿನಿಧಿಯಾದವರು ಒಳ್ಳೆಯವನೆಂದು ಸಾಬೀತುಪಡಿಸಲು, ಗುಡಿಸಲ ಮನೆಯ ಕೂಸಿನ ಸಿಂಬಳ ತೆಗೆದಂತೆ ದೃಶ್ಯ ಮಾಧ್ಯಮದ ಮುಂದೆ  ಕಾಣಿಸಿಕೊಳ್ಳುವುದಕ್ಕೆ ರೂಢಿಗತ ಮಾಡಿಕೊಂಡಿರುತ್ತಾರೆ. ಯಾರು ನಿಜವಾದ ಜನಪರ ಕಾಳಜಿಗೆ ಸ್ಪಂದಿಸಿದ್ದಾರೋ?  ಯಾರು ಕುಳಿತಲ್ಲೆ ಪರ್ಸಂಟೇಜ್ ತಿಂದು ನಿದ್ದೆಯಲ್ಲಿ ಕೆಟ್ಟರೋ? ಎಂಬುದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಬೆಳ್ಳಗಿದ್ದದ್ದೆಲ್ಲಾ ಹಾಲು ಎಂದು ನಂಬುವವರು ನಾವುಗಳೆ. ನಮ್ಮ ದೇಶದಲ್ಲಿ  ಅಧಿಕಾರದ ಗದ್ದುಗೆ ಏರಲು ,ತಮ್ಮ ತಮ್ಮ ಕಾರ್ಯಕ್ಕಾಗಿ ಕತ್ತೆ ಕಾಲು ಹಿಡಿಯಲಿಕ್ಕೂ ಸಿದ್ಧರಿದ್ದಾರೆ.

ಎಂಥಾ ನಯ ನಾಜೂಕುಗಳಲ್ಲೂ ನಟಿಸುವುದು ಗೊತ್ತು ಅವರಿಗೆ. ಒಂದೇ ಒಂದು ಬಾರಿ ಚುನಾಯಿತರಾದರೆ, ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇನು? ಎನ್ನುವ ರಾಜಕಾರಣಿಗಳನ್ನು ನಾವು ಕಂಡಿದ್ದೇವೆ. ಚುನಾವಣೆಯ ದಿನಗಳಲ್ಲಿ ಒಬ್ಬರನ್ನು ಇನ್ನೊಬ್ಬರು ಅನುಕರಿಸಿ ಬೈದಾಡಿ ಮಾತಾಡುವುದೂ ಕಂಡಿದ್ದೇವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ದೃಶ್ಯ ಮಾಧ್ಯಮದ ತೆರೆಯಲ್ಲಿ ನಟಿಸುವುದು ಕೇವಲ ಹಣಕ್ಕಾಗಿ, ಅಧಿಕಾರಕ್ಕಾಗಿ, ಆಸೆಗಾಗಿ, ಕೀರ್ತಿಗಾಗಿ ಮತ್ತು ಜನಪ್ರಿಯತೆ ಗಳಿಸಿಕೊಳ್ಳುವದಕ್ಕಾಗಿ ಮಾತ್ರ ತಮ್ಮ ಹಿರಿಮೆ ಗರಿಮೆಗಳನ್ನು ತಮಗೆ ತಾವೇ ಕೊಂಡಾಡಿಕೊಳ್ಳುತ್ತಾ ಆತ್ಮಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಹೀಗಿರುವಾಗ ಇಲ್ಲಿ ಮತದಾರ ಯಾರಿಗೆ ಮತ ಹಾಕಬೇಕು? ಯಾರಿಗಾಗಿ ಮತ ಚಲಾಯಿಸಬೇಕು? ಯಾತಕ್ಕೋಸ್ಕರ ಮತ ಹಾಕಬೇಕು? ಎನ್ನುವ ಪ್ರಶ್ನೆಗಳು ಮತದಾರರನ್ನು ಕಾಡದೇ ಇರುವುದಿಲ್ಲ. ನಮ್ಮದು ಹೇಳಿ ಕೇಳಿ ಪ್ರಜಾಪ್ರಭುತ್ವ ರಾಷ್ಟ್ರ. ಮತ ಚಲಾಯಿಸದಿದ್ದರೆ ಬಲ್ಲವರು ದೂರುತ್ತಾರೆ. ಮತದಾನ ಮಾಡಬೇಕೆಂದರೆ ಈಗಿನ ಜನಪ್ರತಿನಿಧಿಗಳು ಸಾಕಷ್ಟು ನೆಲ ಮುಗಿಲನ್ನು  ನುಂಗಿದ ಪುರಾವೆಗಳಿವೆ. ಚುನಾಯಿಸುವುದು ನಮ್ಮ ಹಕ್ಕು ಸರಿ.ಯಾರನ್ನು ನಂಬಬೇಕು? ಯಾರನ್ನು ನಂಬಬಾರದು?ಯಾರು ಹೇಳಿದ್ದು ಸರಿ? ಯಾರು ಹೇಳದಿರುವುದು ಸರಿ? ಈ ಎಲ್ಲಾ ಪೇಚಾಟದ ಪರಿಸ್ಥಿತಿಯಲ್ಲಿ,ಇದ್ದ ಸುಸ್ಥಿತಿಯೂ ಕೆಡುತ್ತದೆ.ಆಗ ಮತದಾರ ಯಾರಿಗೆ ಮತ ನೀಡಿದರೆ ಆಪರಾಧವಾಗುವುದಿಲ್ಲ ಎಂದು ಯೋಚಿಸುವ ಹೊತ್ತಿಗೆ ಚುನಾವಣೆ ದಿನ ಹತ್ತಿರ ಬಂದಿರುತ್ತದೆ.

- Advertisement -

ಹೇಗಾದರೂ ಬದುಕುವುದು. ಯಾರೋ ಹಣ ನೀಡಿದರೆ ಮತ ನೀಡುವುದು. ಇಂದಿನ ಬಾಳು ನನ್ನದು. ನಾಳೆ ಹೇಗೋ ಇದ್ದೇ ಇದೆ ದುಡಿದು ತಿನ್ನುವುದು. ಎಂಬ ನಮ್ಮ ನಿಮ್ಮ ಅನಿಸಿಕೆಯಿದ್ದರೆ, ತಳಮಳ, ಹೇಳಲಾರದ, ಪರಿಹರಿಸಲಾಗದ ಆತಂಕದ ಪ್ರಶ್ನೆಗಳಿದ್ದರೆ, ನನ್ನ ಮತ ಮಾರಾಟಕ್ಕಿಲ್ಲ ಎಂಬ ಪುಸ್ತಕವೇ ಉತ್ತರ ಹೇಳುತ್ತದೆ. ಡಾll ಶಿವಕುಮಾರ್ ಮಾಲಿ ಪಾಟೀಲರು ವೃತ್ತಿಯಲ್ಲಿ ದಂತ ವೈದ್ಯರು.ಪ್ರವೃತ್ತಿಯಲ್ಲಿ ಸಾಹಿತಿಗಳು. ನನ್ನ ಮತ ಮಾರಾಟಕ್ಕಿಲ್ಲ ಎಂಬ ಕೃತಿಯು, ಡಾ.ಬಿ.ಆರ್ ಅಂಬೇಡ್ಕರ್ ಅವರ ಜನುಮ ದಿನದ ಪ್ರಯುಕ್ತ,ಅವರ ಪ್ರತಿಮೆ ಎದುರು, ಎಪ್ರೀಲ್ ಹದಿನಾಲ್ಕರಂದು ಗಂಗಾವತಿಯಲ್ಲಿ  ಲೋಕಾರ್ಪಣೆಗೊಂಡಿದ್ದು ವಿಶೇಷವಾಗಿದೆ. ಈ ಸೃಜನಾತ್ಮಕ ಕೃತಿ ನೀಡಿದ ಇವರು ಸಮಾಜದ ಜವಾಬ್ದಾರಿ ಕಾರ್ಯವನ್ನು ನಿರ್ವಹಿಸಿದ್ದಾರೆ. ಮತದಾನದ ಕುರಿತು ಎಚ್ಚರಿಸಿದ್ದಾರೆ. ಉಚ್ಚರಿಸಿದ್ದಾರೆ. ಒತ್ತಿ ಹೇಳಿದ್ದಾರೆ.

(ಭಾರತೀಯರು ಎಂದು ಪ್ರಜಾಪ್ರಭುತ್ವವನ್ನು ಅರ್ಥ ಮಾಡಿಕೊಳ್ಳುತ್ತಾರೋ, ಅಂದು ರಾಜಕಾರಣಿಗಳು ಭಿಕಾರಿಯಾಗುತ್ತಾರೆ. ಸ್ವತಹಃ ಈ ಮಾತನ್ನು  ಡಾ.ಬಿ.ಆರ್ ಅಂಬೇಡ್ಕರ್ ಅವರೆ ಹೇಳಿದ್ದಾರೆ.)

ಡಾ.ಬಿ.ಆರ್.ಅಂಬೇಡ್ಕರ್ ಅವರ ಧ್ಯೇಯ ಸಾಧನೆಯನ್ನು ಅಧ್ಯಯನದಲ್ಲಿ ತೊಡಗಿಸಿಕೊಂಡ ಡಾll ಶಿವಕುಮಾರ್ ಮಾಲಿ ಪಾಟೀಲರು ಸಮಸ್ಯೆಗಳನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡಿ ವಿವಿಧ ಶೋಷಣೆಯ ಪ್ರವಾಹಕ್ಕೆ ಸಾಧ್ಯವಾದಷ್ಟು ಒಡ್ಡು ಕಟ್ಟುವ ಪ್ರಯತ್ನ ಮಾಡಿದ್ದಾರೆ.

- Advertisement -

ಲೇಖಕರು ಈ ಕಾಲಮಾನದಲ್ಲಿದ್ದ  ಸಮಾಜದ ಸಮಸ್ಯೆಗಳೆನ್ನೆಲ್ಲಾ ಎಲ್ಲರ ಕಿವಿಗೆ ತಲುಪಿಸಲಾಗದಿದ್ದಕ್ಕೆ ಈ ಕೃತಿಯ ಮೂಲಕ ಅಪೂರ್ವ ಕೊಡುಗೆ ನೀಡಿದ್ದಾರೆ. ಸಮುದಾಯದ ಅಸ್ತಿತ್ವದ ವಿಷಯದಲ್ಲಿ ಪ್ರಶ್ನಿಸಿದ್ದಾರೆ. ಇಲ್ಲಿರುವ ಪ್ರಶ್ನೆಯು, ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಸರಳವಿರಬೇಕು.

ಅಧಿಕಾರ ಬಂದಾಗ ಅಭಿವೃದ್ಧಿಯ ಕಾರ್ಯ ಮಾಡುತ್ತಾ, ಸರ್ಕಾರದ  ಸೌಕರ್ಯಗಳನ್ನು ಜನರಿಗೆ ಮುಟ್ಟಿಸಬೇಕು. ಲಭಿಸಿದ ಅಧಿಕಾರವನ್ನು  ತಮ್ಮ ಮನೆತನದ ಸಹೋದರ, ಮಗ, ಮಗಳು, ಹೆಂಡತಿಗೆ ಚಲಾಯಿಸಲು ವರ್ಗಾಯಿಸಬಾರದು. ಅಧಿಕಾರದ ಚುಕ್ಕಾಣಿ ಹಿಡಿದ ಶಾಸಕರು ಐದು ವರ್ಷದತನಕ ಜನಸೇವಕನಾಗಿರಬೇಕು ಹೊರತು ಮತ ಕ್ಷೇತ್ರದಲ್ಲಿ ರಾಜನಂತೆ ಮೆರೆಯಬಾರದು. ಜನತೆ ನೀಡಿದ ಕೊಡುಗೆಯನ್ನು,ಆದೇಶದಂತೆ  ಪರಿಪಾಲಿಸಬೇಕು.

ಮತೀಯ ಸೌಹಾರ್ದತೆಯನ್ನು ಕಾಪಾಡುತ್ತಾ, ನಿರಾಪೇಕ್ಷೆಯ ವ್ಯಕ್ತಿಯಾಗಿರಬೇಕು. ತನ್ನ ಕಾರ್ಯದ ಹೊಣೆಯನ್ನು ಪರಿಹಾರ ರೂಪದಲ್ಲಿ ನಿಗದಿಪಡಿಸಿದ ಸಮಯದಲ್ಲಿ ನೈತಿಕ ಶಿಸ್ತು ಸ್ಥೈರ್ಯಗಳೊಂದಿಗೆ ಕಾರ್ಯಗತ ಮಾಡುವವರಿಗೆ ಮತ ಚಲಾಯಿಸಬೇಕು.

ಗೆದ್ದ ನಂತರ ತನ್ನ ಸೇವಾ ಋಣದ ವಿಸ್ತೃತ ಪರಿಜ್ಞಾನ  ಅರಿವು ಇರುವವರಿಗೆ ಮತ ಚಲಾಯಿಸಬೇಕು. ಹಣ ಸ್ವಾಹ ಮಾಡಿ, ಕಾರ್ಯವಿಳಂಬ ಮಾಡುವವರಿಗೆ ಮತ ಮಾರಾಟ ಮಾಡಬೇಡಿರಿ ಎಂದು ಡಾll ಶಿವಕುಮಾರ ಮಾಲಿ ಪಾಟೀಲರು ವಿವರವಾದ ಪ್ರಸ್ತಾವನೆಗಳ  ವಿಮರ್ಶಾತ್ಮಕ ಮಾಹಿತಿಗಳನ್ನು ಒಕ್ಕಣಿಸಿದ್ದಾರೆ.

ಈ ಕೃತಿಯೊಳಗೆ ರಾಜಕೀಯ ಬೆಳವಣಿಗೆಗೆ ಪೂರಕವಾದ ವಿಷಯ ವಸ್ತುಗಳು ಶಾಸನದ ಕೈಗನ್ನಡಿಯಾಗಿವೆ. ವಿಶೇಷವೆನಂದರೆ, ಯಾವುದೇ ಪಕ್ಷ,ಪಂಗಡ,ವ್ಯಕ್ತಿಗತವಾದ ಯಾವುದೇ  ಅನ್ಯ ವಿಚಾರವನ್ನು ಕಲ್ಪಿಸಿಲ್ಲ. ಭವ್ಯ ಭಾರತದ ಭದ್ರ ಬುನಾದಿಗೆ ನಮ್ಮ ನೆಲದ ರಾಜಕಾರಣಿಗಳ ಹೆಸರು ಸೂಚಿಸಿ  ಚುನಾಯಿಸಲು ಯಾವ ಗೊಂದಲದ ಅಭಿಪ್ರಾಯವಿಲ್ಲದ್ದಕ್ಕೆ ಈ ಕೃತಿಗೆ ಮಹತ್ತರ ಅರ್ಥದಕ್ಕಿದೆ. ಮತದಾರನು ಚುನಾಯಿಸುವ ನೀತಿಯ ಸಮರ್ಥನೆ ಮಾತ್ರ ಬುದ್ಧಿಶಾಲಿಗಳು ಓದುವಂತೆ  ರಚಿಸಿದ್ದಾರೆ.

ಮತಕ್ಕಾಗಿ ಹಣ, ಹಣಕ್ಕಾಗಿ ಮತ ಎಂದಾದರೆ,ಹಣವುಳ್ಳ  ಅಭ್ಯರ್ಥಿ ಧಾರಾಳವಾಗಿ ಹಣ ಖರ್ಚು ಮಾಡಿಕೊಂಡು ಗೆಲ್ಲುತ್ತಾನೆ.ಮತ್ತೆ…ಮತ್ತೆ…ಗೆದ್ದು ಹಣ,ಅಧಿಕಾರದ ಅಧಿಪತಿಯಾಗುತ್ತಾನೆ. ಅಂತವರು ಅಧಿಪತಿಯಾದರೆ, ನಮಗೆ ಪ್ರಶ್ನಿಸುವುದು ಆಕ್ಷೇಪನೀಯವಾಗುತ್ತದೆ. ದೇಶದ ಧ್ಯೇಯೋಧ್ಯೇಶ, ಗುರಿ ತಲುಪಲು ಅಸಾಧ್ಯ. ಹೀಗಿರುವಾಗ ಸಮುದಾಯ, ಪ್ರಜಾಪ್ರಭುತ್ವ ಸುಧಾರಣೆಯಾಗಬೇಕೆಂದರೆ, ಚುನಾವಣೆಯಲ್ಲಿ ಹಣ ಪಡೆದು ನಾವುಗಳು ಮತ ಚಲಾಯಿಸಬೇಕೆ? ಸತ್ಯದ ವೇಷದಲ್ಲಿ ಭಂಡತನ ಬಾಳಬೇಕೆ? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ

ಮತದಾರರಿಗೊಂದು ಕಾನೂನು.,ಜನ ಪ್ರತಿನಿಧಿಗೊಂದು ಕಾನೂನು? ಎಂಬ ಮಾತು , ಕೂಗು, ದೇಶದಲ್ಲಿ ಸರ್ವವ್ಯಾಪಿಯಾಗಿದೆ. ಸಂವಿಧಾನದಲ್ಲಿ ಲಿಖಿತವಾಗಿರುವ ನ್ಯಾಯ ಎಲ್ಲರಿಗೂ ಒಂದೆ.ಆದರೆ ಸಾಮಾನ್ಯ ನಾಗರೀಕನಿಗೆ ಪ್ರಮಾಣಬದ್ಧವಾಗಿಲ್ಲದ್ದು ವಿಷಾದವೆನಿಸುತ್ತದೆ.

ಡಾll ಶಿವಕುಮಾರ ಮಾಲಿ ಪಾಟೀಲರು ಹೇಳುವ ಹಾಗೆ , ‘ಯಾರಾದರೂ ಒಂದು ಸಲ ಜೈಲಿಗೆ ಹೋದರೆ ಮತ್ತೆ ಜೀವನ ಪರ್ಯಂತ ಸರಕಾರಿ ನೌಕರಿ ಸಿಗುವುದಿಲ್ಲ.ಆದರೆ ರಾಜಕಾರಣಿಗಳು,ರೌಡಿಗಳು, ಎಷ್ಟೇ ಸಲ ಜೈಲಿಗೆ ಹೋಗಿ ಬಂದರೂ,ಅವರು ಬಯಸಿದ ಹಾಗೆ ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಬಹುದು.

ರಾಜಕೀಯ ಪರಂಪರೆಯಲ್ಲಿ ಇಂತಹ ಗಂಭೀರ ವಿಚಾರಗಳು ಮೌನವಾಗಿರುವದೇತಕೆ?

ಇಂತಹ  ತರತಮ ಅನ್ಯಾಯಗಳು ಕಾನೂನಲ್ಲಿ ಪ್ರತಿಬಂಧಕವಾಗಬೇಕು. ಶಿಕ್ಷಣ ವಿಚಾರದಲ್ಲೂ ಅಷ್ಟೆ. ವೃತ್ತಿಪರ ಶಿಕ್ಷಣದಲ್ಲಿ ರಾಜಕೀಯ ಹಿಡಿತವಿದೆ. ಜಾತಿ, ಧರ್ಮ, ವಂಶಿಕ ರಾಜಕಾರಣ ಪ್ರಭಲವಾಗದಂತೆ ತಡೆಯುವ ಶಕ್ತಿ ಕಾನೂನು ಮತ್ತು ಸರ್ಕಾರಕ್ಕಿದೆ.

ಜಾತಿಯನ್ನು ಪ್ರೀತಿಸಿದರೆ,ಆ ಜಾತಿಯ ಜನರು ಸಿಗುತ್ತಾರೆ. ಧರ್ಮವನ್ನು ಪ್ರೀತಿಸಿದರೆ, ಆ ಧರ್ಮದ ಜನರು ಸಿಗುತ್ತಾರೆ.ಮನುಷ್ಯರನ್ನು ಪ್ರೀತಿಸಿದರೆ ಸರ್ವರೂ ಸಿಗುತ್ತಾರೆ; ಇಂತಹ ನುಡಿಗಳನ್ನು ಬರೆದು ನೀಡಿದ ಡಾllಶಿವಕುಮಾರ ಮಾಲಿ ಪಾಟೀಲರ ವಿಚಾರ ಧಾರೆಯು ಓದುಗರ ಮನದಲ್ಲಿ ಸ್ಥಿರವಾಗಿ ಉಳಿಯುತ್ತವೆ.

ದೇಶವೆಂದರೆ ಕಲ್ಲಲ್ಲ., ಮಣ್ಣಲ್ಲ.,ಗಡಿಯಲ್ಲ., ಬಾವುಟವಲ್ಲ., ಜಾತಿಯಲ್ಲ., ಧರ್ಮವಲ್ಲ., ಪಕ್ಷವಲ್ಲ.,ನಾಯಕರಲ್ಲ.,ಗುಡಿ ಚರ್ಚು ಮಸೀದಿಯಲ್ಲ., ದ್ವೇಷವಲ್ಲ., ದೊಂಬಿಯಲ್ಲ.,ಇದ್ಯಾವುದೂ ಅಲ್ಲವೇ ಅಲ್ಲ.,ದೇಶವೆಂದರೆ ಇಲ್ಲಿ ಬದುಕುವ ಜನ.

ನಾವೆಲ್ಲರೂ ಒಂದುಗೂಡಲು ಜಾತಿ, ಮತ, ಧರ್ಮ, ಪಂಥ, ಮತೀಯ ಬೆಸುಗೆ ಬಿಡಬೇಕು. ಆ ಮತ,ಈ ಪಂಥ ಬಿಟ್ಟು ಮತ್ತೊಂದು ಪಂಥ ಸೇರುವುದು ಸಮಂಜಸವಲ್ಲ ಎನ್ನುವ ಅರಿವು, ತಾತ್ಪರ್ಯ ಅಭಿಮಾನದ ಸೂಕ್ತ ಪರಿಪಾಠಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ  ವ್ಯವಸ್ಥೆಯಲ್ಲಿನ ಪರಿವರ್ತನೆಗಾಗಿ ನನ್ನ ಮತ ಮಾರಾಟಕ್ಕಿಲ್ಲ ಪುಸ್ತಕವು ಒಂದು ನಿದರ್ಶನವಾಗಿದೆ. ಬಹುತೇಕ ಅಧ್ಯಾಯಗಳು ಓದಬಹುದಾಗಿದೆ. “ಚುನಾವಣೆಯಲ್ಲಿ ಭ್ರಷ್ಟಾಚಾರಕ್ಕೆ ಕಾರಣಗಳು”, “ಚುನಾವಣೆ ಆಯೋಗ ತಂದಿರುವ ಸುಧಾರಣೆಗಳು” ,”ರಾಜಕೀಯದಲ್ಲಿ ಅಪರಾಧಿ ಬೇಡ”.,”ವಿಶ್ವವಿದ್ಯಾಲಯಗಳಲ್ಲಿ ಭ್ರಷ್ಟಾಚಾರ” “ರಾಜಕಾರಣದಲ್ಲಿ ಭಂಡತನ”.,”ನಮ್ಮ ವ್ಯವಸ್ಥೆ ಸರಿಪಡಿಸುವುದು ಹೇಗೆ?”.,”ನಮಗೆ ಪುಕ್ಕಟೆ ಯೋಜನೆ ಬೇಡ”.,”ಜಾತಿವಾದಿಗಳೇ ದೇಶದ ಮೊದಲ ದೇಶದ್ರೋಹಿಗಳು” ಹೀಗೇ ಈ ನೆಲದ ಅಸ್ತಿತ್ವ,ಬದುಕು ಮತ್ತು ರಕ್ಷಣೆಯ ಕುರಿತಾಗಿ ನಾಜೂಕಿನ ವ್ಯಖ್ಯಾನ ನೀಡಿ ಪ್ರಶ್ನಾತೀತವಾದ ಸಮಾಜದ ಕಟ್ಟು ಕಟ್ಟಳೆ,ಅನಾಗರೀಕ ಕುರುಹುಗಳನ್ನು ಲಘುವಾಗಿಸಿದ್ದಾರೆ.

ಡಾllಶಿವಕುಮಾರ ಮಾಲಿ ಪಾಟೀಲರು ಈ ಕೃತಿಯೊಳಗೆ ವೈಚಾರಿಕ, ಆರ್ಥಿಕ, ರಾಜಕೀಯ ನೆಲೆಗಳ ವಿಶ್ಲೇಣಾತ್ಮಕ ಬರಹಗಳನ್ನು,ಸಾಹಿತ್ಯ ಸಂದರ್ಭಕ್ಕೆ ಹೊಂದಿಕೊಳ್ಳುವ ಪ್ರಬಂಧಗಳನ್ನು, ವಿಶಾಲ ಅರ್ಥದಲ್ಲಿ ಹೆಸರಾಂತ  ವ್ಯಕ್ತಿ ಚಿತ್ರಗಳು ಮತ್ತು ಅವರ ನುಡಿಯ ಮಾತು, ನೆನಪು, ಪುಸ್ತಕದೊಳಗೆ ಚೆಲ್ಲಿಕೊಂಡಿವೆ.ಅನೇಕ ಸಾಧ್ಯಾನು ಸಾಧ್ಯತೆಗಳನ್ನು ಬರಹದ ಪ್ರಕಾರದಲ್ಲಿ ಆಳವಾದ ಆಧ್ಯಯನದ ಶಿಸ್ತನ್ನು  ಒಳ್ಳೆಯ ಓದಾಗಿ ಕಂಡಿವೆ.

ಅವರ ನಿರಂತರ ಬರಹವು ಸಾಮಾಜಿಕ ಜೀವನದ ಅಂಗವಾಗಿದೆ ಸ್ಥಿರ ಮತ್ತು ಅಸ್ಥಿರ ಸಂಗತಿಗಳನ್ನು ವಿವೇಕದಿಂದ ಮಾನದಂಡವೆಂಬಂತೆ ನನ್ನ ಮತ ಮಾರಾಟಕ್ಕಿಲ್ಲ ಕೃತಿಯು ಆಧುನಿಕ ಪ್ರಜಾಪ್ರಭುತ್ವದ ಚಾಲ್ತಿಗೆ ಅಧ್ಯಯನವಾಗಿದೆ. ಈ ಕೃತಗೆ ದರ ನಿಗದಿಯಾಗಿಲ್ಲ. ಬೆಲೆ ಎನ್ನುವ ಜಾಗದಲ್ಲಿ ಮರು ಮುದ್ರಣಕ್ಕೆ ಪ್ರೋತ್ಸಾಹಿಸುವಷ್ಟು ಎಂದು ಬರೆಯಲಾಗಿದೆ. ಇದು ಒಂದು ವಿಶೇಷ

 ಪ್ರಸ್ತುತ ಕಾಲಘಟ್ಟಕ್ಕೆ ಈ ಪುಸ್ತಕವು ಒಂದು ಸೇವೆ ಮಾಡುತ್ತದೆ. ನನ್ನ ಮತ ಮಾರಾಟಕ್ಕಿಲ್ಲ ಎಂದು ಅವರು ಹೇಳಿದಂತೆ ನನ್ನದು ಸಹಮತವಿದೆ. “ನನ್ನ ಮತವೂ ಮಾರಾಟಕ್ಕಿಲ್ಲ ಎಂದು ಪ್ರತಿಜ್ಞೆ ಮಾಡುತ್ತೇನೆ.ಲೇಖಕರಾದ ಡಾllಶಿವಕುಮಾರ ಮಾಲಿ ಪಾಟೀಲರ ಬರಹದ ಪ್ರಭಾವ ಬಹು ಎತ್ತರಕ್ಕೇರಲಿ ಎಂದು ಆಶಿಸುತ್ತೇನೆ.


ಶರಣಪ್ಪ ತಳ್ಳಿ, ಕುಪ್ಪಿಗುಡ್ಡ

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!
Join WhatsApp Group