ಮೊದಲ ಬಾರಿಗೆ ದೆಹಲಿ ಶಾಸಕರಾಗಿ ಆಯ್ಕೆಯಾದ ಒಬ್ಬ ಮಹಿಳೆಯನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ನಾರಿ ಶಕ್ತಿ ವಂದನ್ ಮಸೂದೆಗೆ ಬಹು ದೊಡ್ಡ ಶಕ್ತಿ ತುಂಬಿದಂತಾಗಿದೆ. ಭಾರತೀಯ ಜನತಾ ಪಾರ್ಟಿ ಕೇಂದ್ರೀಯ ನಾಯಕತ್ವ ಮತ್ತೊಮ್ಮೆ ಸಾಬೀತು ಮಾಡಿದೆ ಇದು ಕಾರ್ಯಕರ್ತರ ಆಧಾರಿತ ಪಾರ್ಟಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.
ಶ್ರೀಮತಿ ರೇಖಾ ಗುಪ್ತಾ ಅವರನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಮೂಲಕ ದೇಶದ 70 ಕೋಟಿ ಮಹಿಳೆಯರಿಗೆ ಒಂದು ಸ್ಪಷ್ಟ ಸಂದೇಶವನ್ನು ನೀಡಿದಂತಾಗಿದೆ. ಬರುವ ದಿನಗಳಲ್ಲಿ ವಿಧಾನ ಸಭೆ ಮತ್ತು ಲೋಕಸಭೆಯಲ್ಲಿ ಶೇ 33 ರಷ್ಟು ಮಹಿಳೆಯರಿಗೆ ಆಧ್ಯತೆ ನೀಡುವ ತನ್ನ ವಾಗ್ದಾನಕ್ಕೆ ದೇಶದ ನೆಚ್ಚಿನ ಪ್ರಧಾನಿ ಕಟಿಬದ್ದರಾಗಿದ್ದಾರೆ ಎಂಬ ಸಂದೇಶವನ್ನು ನೀಡಲಾಗಿದೆ. ಭಾರತೀಯ ಜನತಾ ಪಾರ್ಟಿ ದೇಶದ ನಾರಿ ಶಕ್ತಿಗೆ ಗೌರವ ನೀಡಿದಂತಾಗಿದೆ ಎಂದರು.
ದೇಶದ ರಾಜಧಾನಿ ದೆಹಲಿ ಭ್ರಷ್ಟಾಚಾರ ಮುಕ್ತ, ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿ ಎಂದು ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಅವರಿಗೆ ಶುಭ ಹಾರೈಸಿದ್ದಾರೆ.
ಈ ಆಯ್ಕೆಗೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ, ಗೃಹ ಸಚಿವರಾದ ಅಮಿತ್ ಶಾ ಸೇರಿದಂತೆ ಕೇಂದ್ರೀಯ ನಾಯಕತ್ವಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.