ಸವದತ್ತಿ: ಇಲ್ಲಿನ ಶಿವಬಸವ ನಗರದ ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ಅವರ ‘ಕಾಡುವ ಕವಿತೆ’ ವಿಮರ್ಶಾ ಸಂಕಲನಕ್ಕೆ ನಾಡಿನ ಪ್ರತಿಷ್ಠಿತ ರಾಜ್ಯಮಟ್ಟದ ‘ಅಮ್ಮ ಪ್ರಶಸ್ತಿ’ ಯನ್ನು ಘೋಷಿಸಲಾಗಿದೆ.
ಕಲ್ಬುರ್ಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಪ್ರತಿಷ್ಠಾನದಿಂದ ನೀಡುವ 23 ನೇ ವರ್ಷದ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಗೆ ನಾಗೇಶ್ ಜೆ. ನಾಯಕ ಅವರ ‘ಕಾಡುವ ಕವಿತೆ’ ವಿಮರ್ಶಾ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿಯು 5 ಸಾವಿರ ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಜಿಲ್ಲೆಯ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ.
ಇದೇ ನ. 26ರಂದು ಸಂಜೆ 5.30ಕ್ಕೆ ಸೇಡಂನ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಉಡಿಕೇರಿಯ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕರಾಗಿರುವ ನಾಗೇಶ್ ಜೆ. ನಾಯಕ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡುತ್ತಿದ್ದು ಇದುವರೆಗೆ 23 ಸಂಕಲನಗಳನ್ನು ಪ್ರಕಟಿಸಿದ್ದಾರೆ. ನಾಡಿನ ಎಲ್ಲ ಪತ್ರಿಕೆಗಳಲ್ಲೂ ಇವರ ಕವಿತೆ, ಕತೆ, ಗಜಲ್, ಬಿಡಿ ಬರಹಗಳು ಪ್ರಕಟವಾಗಿವೆ. ಪ್ರತಿವಾರ ಉದಯಕಾಲ ದಿನಪತ್ರಿಕೆಗೆ ಕಾಡುವ ಕವಿತೆ ಅಂಕಣದ ಮೂಲಕ ಅತ್ಯುತ್ತಮ ಕವಿತೆಯನ್ನು ಓದುಗರಿಗೆ ಪರಿಚಯಿಸುತ್ತಿದ್ದಾರೆ. ಸಂಚಯ ಕಾವ್ಯ ಪುರಸ್ಕಾರ, ಸಂಕ್ರಮಣ ಕಾವ್ಯ ಪ್ರಶಸ್ತಿ, ಆಜೂರು ಪುಸ್ತಕ ಪ್ರಶಸ್ತಿ, ಕಸಾಪ ದತ್ತಿ ಪ್ರಶಸ್ತಿ, ಇಂಚಲ ಕಾವ್ಯ ಪ್ರಶಸ್ತಿ, ಅಡ್ವೈಸರ್ ಪ್ರಶಸ್ತಿ, ದಸಾಪ ಪುಸ್ತಕ ಪ್ರಶಸ್ತಿ, ಸಿರಿಗನ್ನಡ ಪುಸ್ತಕ ಪ್ರಶಸ್ತಿ, ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ, ತಾಲೂಕಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಒಳಗೊಂಡಂತೆ ನಾಡಿನ ಪ್ರಮುಖ ಪುರಸ್ಕಾರಗಳನ್ನು ಪಡೆದಿದ್ದಾರೆ.