ಮೂಡಲಗಿ:-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ನಗುವ ನಕ್ಷತ್ರಗಳು ಕವನ ಸಂಕಲನ ಬಿಡುಗಡೆ ಸಮಾರಂಭ ಕಾರ್ಯಕ್ರಮ ಜರುಗಿತು.
ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ಘಟಕ ಹಾಗೂ ಸಾಗರ ಪ್ರಕಾಶನ ಆಶ್ರಯದಲ್ಲಿ ಸಾಹಿತಿ ವೈ. ಬಿ. ಕಳ್ಳಿಗುದ್ದಿಯವರ “ನಗುವ ನಕ್ಷತ್ರಗಳು” ಚುಟುಕು ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಸ್ಥಳೀಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡಲಗಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಆರ್. ಪಿ. ಸೋನವಾಲ್ಕರ ರವರು ಸಾಹಿತ್ಯ ಕಾರ್ಯಕ್ರಮಗಳಿಗೆ ತಾವು ಸದಾ ಕಾಲ ಅವಕಾಶ ನೀಡಲು ಸಿದ್ದರಾಗಿದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೃತಿಗಳು ಹೊರ ಬರಬೇಕು ಎಂದರು.
ಪುಸ್ತಕ ಪರಿಚಯ ಮಾಡಿದ ಸವದತ್ತಿಯ ಹಿರಿಯ ಸಾಹಿತಿ ವೈ. ಎಂ. ಯಾಕೊಳ್ಳಿಯವರು ಚುಟುಕು ಗುಟುಕಾಗಿ ಜನರ ಮನ ತಲುಪುವ ಹಾಗೆ ಇರಬೇಕು. ಸಮಾಜಕ್ಕೆ ಉತ್ತಮ ಸಂದೇಶ ತಲುಪುವ ಹಾದಿಯಲ್ಲಿ ಚುಟುಕುಗಳನ್ನು ರಚಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಪ್ರೊ. ಎಸ್. ಎಂ. ಕಮದಾಳ, ಪ್ರೊ. ಸಂಗಮೇಶ ಗುಜಗೊಂಡ ರವರು ಪುಸ್ತಕ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಚು.ಸಾ.ಪ ಅಧ್ಯಕ್ಷರಾದ ಚಿದಾನಂದ ಹೂಗಾರ, ಕ. ಸಾ. ಪ ಅಧ್ಯಕ್ಷರಾದ ಡಾ. ಸಂಜಯ ಸಿಂಧಿಹಟ್ಟಿ, ಹಿರಿಯ ಸಾಹಿತಿಗಳಾದ ಬಾಲಶೇಖರ ಬಂದಿ, ಸಿದ್ರಾಮ ದ್ಯಾಗಾನಟ್ಟಿ, ಡಾ. ಮಹಾದೇವ ಜಿಡ್ಡಿಮನಿ, ಜಯಾನಂದ ಮಾದರ, ಎಸ್. ಬಿ. ಜೋಡಟ್ಟಿ ದುರ್ಗಪ್ಪ ದಾಸನ್ನವರ ಬಾಳಪ್ಪ ನಂದಿ, ಶಿವಕುಮಾರ,ಬಸಪ್ಪ ಹೆಬ್ಬಾಳ ಉಪಸ್ಥಿತರಿದ್ದರು.
ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ. ಚುಟುಕುಸಾಬ್ ಜಾತಗಾರ ಅವರಿಗೆ ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದ ವತಿಯಿಂದ ವಿಶೇಷ ಗೌರವ ಸತ್ಕಾರ ನೆರವೇರಿಸಲಾಯಿತು.
ವಿಠ್ಠಲ ಜೋಡಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸುರೇಶ ಲಂಕೆಪ್ಪನವರ ಸ್ವಾಗತಿಸಿದರು, ಅಪಾರ ಪ್ರಮಾಣದ ಜನರು ಪುಸ್ತಕ ಬಿಡುಗಡೆಗೆ ಸಾಕ್ಷೀಕರಿಸಿದರು.