ಸಿಂದಗಿ– ರಾಷ್ಟ್ರ ನಿರ್ಮಾಣವೆಂದರೆ ಗಗನ ಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡುವದಲ್ಲ ನಿಜವಾದ ಅರ್ಥದಲ್ಲಿ ರಾಷ್ಟ್ರ ನಿರ್ಮಾಣವೆಂದರೆ ಮೌಲ್ಯ ಪೂರ್ಣ ಪ್ರಜೆಗಳ ನಿರ್ಮಾಣ ಅದು ಶಿಕ್ಷಕನ ಮುಖ್ಯ ಕಾರ್ಯವಾಗಬೇಕು ಎಂದು ಮಕ್ಕಳ ಸಾಹಿತಿ ಪಂಡಿತ ಅವಜಿ ಹೇಳಿದರು.
ಅವರು ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡ ಬಿ.ಇಡಿ ಕೊನೆಯ ವರ್ಷದ ಪ್ರಶಿಕ್ಷಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನದ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯಾರ್ಥಿಯ ಹಾಗೆ ನಿರಂತರವಾಗಿ ಅಧ್ಯಯನ ಮಾಡುವವನು ಮಾತ್ರ ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ಶಿಕ್ಷಕನಾಗಲು ಸಾಧ್ಯ. ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕನನ್ನು ದೇವರಿಗೆ ಹೋಲಿಸಿದ್ದಾರೆ. ಆರೋಗ್ಯಕರ ಸಮಾಜ, ಆರ್ಥಿಕತೆಯ ಅಭಿವೃದ್ದಿಯಲ್ಲಿ ರಾಷ್ಟ್ರದ ಉನ್ನತೀಕರಣದಲ್ಲಿ ಶಿಕ್ಷಕ ಮತ್ತು ಶಿಕ್ಷಣದ ಪಾತ್ರ ಮುಖ್ಯವಾಗಿದೆ. ಶಿಕ್ಷಕರ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ ಅದನ್ನು ಪ್ರತಿ ಶಿಕ್ಷಕರು ಮತ್ತು ಶಿಕ್ಷಕರಾಗುವವರು ಶ್ರದ್ಧಾ ಭಕ್ತಿಯಿಂದ ಪೂರೈಸಲೆಬೇಕು ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಕಾಲಘಟ್ಟ ಬದಲಾವಣೆ ಆದ ಹಾಗೆ ಶಿಕ್ಷಕರು ತಮ್ಮ ಜ್ಞಾನವನ್ನು ವೃದ್ದಿಸಿಕೊಳ್ಳಬೇಕು. ಮಕ್ಕಳ ಮನ ಗೆದ್ದು ಪಾಠ ಮಾಡುವವನೆ ನಿಜವಾದ ಶಿಕ್ಷಕ. ಸ್ವಯಂ-ನಿಯಂತ್ರಣ,ಸ್ವಯಂ-ಶಿಸ್ತು ಮತ್ತು ಇತರರ ಬಗ್ಗೆ ಜವಾಬ್ದಾರಿಯುತವಾಗಿರಬೇಕು. ವಿದ್ಯಾರ್ಥಿಗಳ ಬಗ್ಗೆ ಗೌರವ ಮತ್ತು ಸಹಾನುಭೂತಿಯನ್ನು ಹೊಂದಿರಬೇಕು ಎಂದರು.
ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಮಕ್ಕಳಲ್ಲಿ ಸಂಸ್ಕಾರ ಕಡಿಮೆ ಆಗುತ್ತಿದೆ. ಸಂಸ್ಕಾರವಿದ್ದರೆ ಮಾತ್ರ ಎಲ್ಲವೂ ಲಭ್ಯವಾಗುತ್ತದೆ. ಶಿಕ್ಷಕರು ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರದ ಅರಿವು ಮೂಡಿಸುವುದು ಇಂದು ಅಗತ್ಯವಾಗಿದೆ ಎಂದರು.
ವೇದಿಕೆ ಮೇಲೆ ಪ್ರಾಚಾರ್ಯ ಜೆ.ಸಿ.ನಂದಿಕೋಲ, ಕಾರ್ಯಧ್ಯಕ್ಷ ದಾನಯ್ಯ ಮಠಪತಿ, ಪ್ರಧಾನ ಕಾರ್ಯದರ್ಶಿ ಸೋಮನಾಥ ಇದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಶರಣಬಸವ ಜೋಗೂರ, ಎನ್.ಬಿ.ಪೂಜಾರಿ, ಸುಧಾಕರ ಚವ್ಹಾಣ, ರೇವಣಸಿದ್ದ ಹಾಲಕೇರಿ, ಪ್ರಶಾಂತ ಕುಲಕರ್ಣಿ, ವಿದ್ಯಾ ಮೋಗಲಿ, ಚನ್ನು ಕತ್ತಿ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿ ಕಾಶೀಬಾಯಿ ಬಿರಾದಾರ ನಿರೂಪಿಸಿದರು, ನಾಜೀಯಾ ಮುಲ್ಲಾ ವಂದಿಸಿದರು.