ಹುಬ್ಬಳ್ಳಿ: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಕನಸಿನ ಕೂಸಾದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಆರಂಭವಾಗಿ ೧೦-೧೫ ವರ್ಷಗಳಾಗಿದ್ದರೂ ಇನ್ನೂ ಮುಗಿದಿಲ್ಲ. ವಿಚಿತ್ರವೆಂದರೆ ಮುಗಿಯದ ಹೆದ್ದಾರಿ ಕಾಮಗಾರಿಗೆ ನಾವು ಟೋಲ್ ತೆರಿಗೆ ಕಟ್ಟುತ್ತಿದ್ದೇವೆ!
ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ ಅಲ್ಲಲ್ಲಿ ಇನ್ನೂ ಕೆಲಸ ಮುಗಿದಿಲ್ಲ. ಈ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಹಿಡಿದ ಕಂಪನಿಗಳೆಲ್ಲ ದೊಡ್ಡ ದೊಡ್ಡ ಕಂಪನಿಗಳೆ ಆದರೂ ಇನ್ನೂ ಕೆಲಸ ಮುಗಿದಿಲ್ಲವಾದರೂ ಟೋಲ್ ಗೇಟ್ ಎಂಬ ಅಂಗಡಿ ತೆರೆದುಕೊಂಡು ಇವರು ನಡೆಸುತ್ತಿರುವ ಲೂಟಿ ನಿಂತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೇಂದ್ರ ಸರ್ಕಾರ ಕೂಡ ಕಣ್ಮುಚ್ಚಿ ಕುಳಿತಿದೆ. ಆದರೆ ಇಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಮಾತ್ರ ಸುಲಿಗೆ ಮಾಡಲಾಗುತ್ತಿದೆ.
ಹುಬ್ಬಳ್ಳಿಯ ನಂತರ ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಹಾಗೂ ಚತ್ರ ಎಂಬ ಎರಡು ಹಳ್ಳಿಗಳ ನಡುವೆ ಇರುವ ಹೆದ್ದಾರಿ ಕಾಮಗಾರಿ ಇನ್ನೂ ಮುಗಿದಿಲ್ಲ. ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿ ಕೆಲಸ ಶುರುವಾಗಿ ಹತ್ತು ವರ್ಷಗಳ ಮೇಲಾಯಿತು. ಇನ್ನೂ ಕೆಲಸ ಮುಗಿದಿಲ್ಲವೆಂದರೆ ಇದಕ್ಕಿಂತ ವಿಪರ್ಯಾಸ ಬೇರೆನಿದೆ ? ಅಲ್ಲದೆ ಈ ಅಪೂರ್ಣ ರಸ್ತೆಗೆ ಆವಾಗಿನಿಂದಲೇ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಮುಗಿಯದೆ ಇರುವ ರಸ್ತೆ ಕೆಲಸಕ್ಕೆ ನಾವೇಕೆ ತೆರಿಗೆ ಕಟ್ಟಬೇಕು ?
ಅಸಲಿಗೆ ಈ ಟೋಲ್ ಎಂಬುದೇ ಒಂದು ಮಹಾ ಲೂಟಿಯಾಗಿದೆ. ಕೆಲವು ೬೦ ಕಿ.ಮೀ. ಗೆ ಒಂದು ಇದ್ದರೆ ಕೆಲವು ಸಮೀಪವೇ ಇವೆ.
ಹುಬ್ಬಳ್ಳಿ-ಧಾರವಾಡ ಸಿಂಗಲ್ ರಸ್ತೆ:
ಇನ್ನು ಹುಬ್ಬಳ್ಳಿ ಧಾರವಾಡ ಮಧ್ಯದ ಹೆದ್ದಾರಿ ಸಿಂಗಲ್ ಆಗಿದೆ ! ಇಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಸಿಕ್ಕಪಟ್ಟೆ ಟ್ರಾಫಿಕ್ ಆಗುತ್ತದೆ ಆದರೂ ಈ ಎರಡು ನಗರಗಳ ನಡುವಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿಲ್ಲ. ಅದಕ್ಕೂ ಪ್ರಯಾಣಿಕರು ಟೋಲ್ ಕಟ್ಟಬೇಕು ! ಈ ರಸ್ತೆ ಯಾಕೆ ಅಗಲವಾಗುತ್ತಿಲ್ಲ ಎಂಬುದೇ ಪ್ರಶ್ನೆಯಾಗಿದೆ.
ಬೆಂಗಳೂರು ಮೈಸೂರು ನೈಸ್ ರಸ್ತೆ ಕೂಡ ಒಂದು ಹಗಲು ದರೋಡೆಯೆನ್ನಬಹುದು. ಇಲ್ಲಿನ ಹೊಸೂರು ರಸ್ತೆಯ ಟೋಲ್ ನಲ್ಲಿ ಕಾರುಗಳಿಗೆ ಅತಿ ಹೆಚ್ಚು ಅಂದರೆ ೨೧೦ ರೂ. ಟೋಲ್ ವಸೂಲು ಮಾಡುತ್ತಾರೆ ಆದರೆ ರಸ್ತೆಯ ಕಾಮಗಾರಿ ‘ಭರದಿಂದ ‘ ಸಾಗಿದೆ ! ರಾತ್ರಿ ಅಲ್ಲಿ ಹಾದು ಬರಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಚಾಲಕರು ಕಾರು ಚಾಲನೆ ಮಾಡಬೇಕು ! ಅಲ್ಲಲ್ಲಿ ತಗ್ಗು ತೆಗೆಯಲಾಗಿದೆ ಆದರೂ ಈ ರಸ್ತೆಗೆ ಭಾರೀ ಪ್ರಮಾಣದ ಟೋಲ್ ವಸೂಲಿ ಮಾಡಲಾಗುತ್ತಿದೆ.
ಮೊದಲೇ ಬೆಲೆಯೇರಿಕೆಗಳಿಂದ ಹೈರಾಣಾಗಿರುವ ಮಧ್ಯಮ ವರ್ಗದ ಕುಟುಂಬಗಳು ಈ ಟೋಲ್ ಎಂಬ ಹಗಲು ದರೋಡೆಯಿಂದ ಪಾರಾಗಬೇಕಾಗಿದೆ. ಹೆದ್ದಾರಿ ಪ್ರಾಧಿಕಾರವನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕಾಗಿದೆ.
ವರದಿ: ಉಮೇಶ ಬೆಳಕೂಡ, ಮೂಡಲಗಿ