ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ಗುರುನಗೌಡರ ಮಾತನಾಡಿ ಆಟಗಾರರ ಜೀವನದಲ್ಲಿ ಉತ್ತಮವಾದ ಆಹಾರದ ಸೇವನೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಕ್ರೀಡೆ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಕ್ರಿಯಾಶೀಲರಾಗಿರಲು ಸಹಕಾರಿಯಾಗಿದೆ ಎಂದು ಹೇಳಿದರು. ಧ್ಯಾನಚಂದ್ ಎಂಬ ಹೆಸರಿನಲ್ಲಿಯೇ ಕ್ರೀಡಾಸ್ಪೂರ್ತಿ ಅಡಗಿದ್ದು ಎಲ್ಲ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಧ್ಯಾನಚಂದ್ ಅವರ ಜೀವನ, ಸಾಧನೆ, ಕ್ರೀಡೆಗಳ ಮಹತ್ವದ ಕುರಿತು ವಿದ್ಯಾರ್ಥಿಗಳಾದ ಪೃಥ್ವಿ ಗರಗದ, ಚೇತನಾ ಗಡಾದ ಭಾಷಣ ಮಾಡಿದರು. ಶಾಲೆಯಲ್ಲಿ ಏರ್ಪಡಿಸಿದ ಕ್ರೀಡಾ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಗದೀಶ ನರಿ, ಶಿವಾನಂದ ಬಳಿಗಾರ, ರೇಖಾ ಸೊರಟೂರ, ಹೇಮಲತಾ ಪುರಾಣಿಕ, ವೀರೇಂದ್ರ ಪಾಟೀಲ, ಸುಮಂಗಲಾ ಹತ್ತರಕಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರ್ಮಲಾ ಸೊಗಲದ ನಿರೂಪಿಸಿದರು. ಜ್ಯೋತಿ ಹಿರೇಮಠ ಸ್ವಾಗತಿಸಿದರು. ಚೈತ್ರ ಹೂಲಿಮಠ ವಂದಿಸಿದರು.