spot_img
spot_img

ರಾಷ್ಟ್ರೀಯ ಕ್ರೀಡಾ ದಿನ

Must Read

- Advertisement -

ಮೇಜರ್ ಧ್ಯಾನ್ ಚಂದ್ ರ ಜನ್ಮದಿನವಾದ ಆಗಸ್ಟ್‌ 29 ನ್ನು ಭಾರತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಎಂದು ಆಚರಿಸಲಾಗುತ್ತದೆ.

ಧ್ಯಾನ್ ಚಂದ್ ಅಪ್ಪಟ ದೇಶಭಕ್ತ, ಅಪ್ರತಿಮ ಹಾಕಿ ಆಟಗಾರ, ಸ್ವಾತಂತ್ರ್ಯ ಬರುವುದಕ್ಕಿಂತ
ಮುಂಚೆಯೇ ಭಾರತಕ್ಕೆ ಒಲಿಂಪಿಕ್ ನಲ್ಲಿ ಮೂರು ಬಾರಿ ಅಂದರೆ ಹ್ಯಾಟ್ರಿಕ್ ಗೋಲ್ಡ್ ಮೆಡಲ್ ಗಳನ್ನು ತಂದು ಕೊಟ್ಟ ತಾಯಿ ಭಾರತಿಯ ಹೆಮ್ಮೆಯ ಪುತ್ರ.

ಧ್ಯಾನ್ ಚಂದ್ ರು 1905 ಆಗಸ್ಟ್‌ 29 ರಂದು ಉತ್ತರ ಪ್ರದೇಶದ ಪ್ರಯಾಗದಲ್ಲಿ ಜನಿಸುತ್ತಾರೆ. ಇವರ ತಂದೆ ಸೋಮೇಶ್ವರದತ್ತ ರವರು ಭಾರತೀಯ ಸೈನ್ಯದಲ್ಲಿ ಹವಾಲ್ದಾರರು ಆಗಿದ್ದರಿಂದ ಪದೇ ಪದೇ ಬೇರೆಬೇರೆ ಕಡೆ ವರ್ಗಾವಣೆ ಆಗುತ್ತಿತ್ತು. ಆದ್ದರಿಂದ ಮಕ್ಕಳನ್ನು ಹೆಚ್ಚಾಗಿ ಓದಿಸಲಾಗಲಿಲ್ಲ. ಧ್ಯಾನ್ ಚಂದ್ ರು ಕೇವಲ ಮಾಧ್ಯಮಿಕ ಶಿಕ್ಷಣವನ್ನು ಮಾತ್ರ ಪಡೆಯುತ್ತಾರೆ.

- Advertisement -

ಕೊನೆಗೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನೆಲೆಸುತ್ತಾರೆ. ಕ್ರೀಡೆಗಳಲ್ಲಿ ಅತಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಧ್ಯಾನ್ ಚಂದ್ ರು ಕುಸ್ತಿಯಲ್ಲಿ ಯಾವಾಗಲೂ ಮಗ್ನರಾಗಿರುತ್ತಿದ್ದರು. ಆದರೆ ಅವರನ್ನು ಒಬ್ಬ ಕ್ರೀಡಾಪಟು ಅಂತ ಮಾಡಿದ್ದು ನಮ್ಮ ರಾಷ್ಟ್ರೀಯ ಕ್ರೀಡೆ “ಹಾಕಿ”. ಉತ್ತರಪ್ರದೇಶದ ಝಾನ್ಸಿಯಲ್ಲಿ ಹೆಚ್ಚಾಗಿ ಹಾಕಿ ಕ್ಲಬ್ ಗಳು ಇದ್ದುದ್ದರಿಂದ ಯಾವಾಗಲೂ ಹಾಕಿ ಪಂದ್ಯಾಟಗಳನ್ನು ನೋಡಿ-ನೋಡಿ ಹಾಕಿಯ ಬಗ್ಗೆ ಆಸಕ್ತಿ ಮೂಡಿ, ಹಾಕಿಯನ್ನು ತಮ್ಮ ನೆಚ್ಚಿನ ಆಟವಾಗಿಸಿಕೊಂಡರು.

1922 ರಲ್ಲಿ ಅಂದರೆ ತಮ್ಮ ಹದಿನಾರನೆಯ ವಯಸ್ಸಿನಲ್ಲಿಯೇ ಭಾರತೀಯ ಸೈನ್ಯಕ್ಕೆ ಸೇರುತ್ತಾರೆ. ಆ ಸಂದರ್ಭದಲ್ಲಿ ಭಾರತೀಯ ಸೈನ್ಯಗಳ ವಿವಿಧ ರೆಜಿಮೇಂಟ್ ಗಳ ನಡುವೆ ಹಾಕಿಯನ್ನು ಸ್ನೇಹಪರವಾದ ಟೂರ್ನಿಗಳನ್ನು ಪ್ರತಿ ವರ್ಷ ಆಯೋಜಿಸುತ್ತಿದ್ದರು. ಆಗ ಪಂಜಾಬಿನ ಹದಿನಾಲ್ಕನೇ ರೇಜಿಮೇಂಟ್ ನ ಪರವಾಗಿ ಆಡುತ್ತಿದ್ದ ಇವರ ಆಟದ ಸೊಬಗು, ನಿಖರತೆ, ವೈಶಿಷ್ಟ್ಯತೆ ಹಾಗು ಶ್ರದ್ದೆಯನ್ನು ಕಂಡು 1926 ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಆಯ್ಕೆ ಮಾಡುತ್ತಾರೆ.

ಧ್ಯಾನ್ ಚಂದ್ ರು ಹಾಕಿಯ ದಂತಕಥೆಯೇ ಆಗಿದ್ದಾರೆ. ಆಗಿನ ಕಾಲದಲ್ಲಿ ಪುಟ್ಬಾಲ್ ನಲ್ಲಿ ಪೀಲೆ, ಕ್ರಿಕೆಟ್ ನಲ್ಲಿ ಡೊನಾಲ್ಡ್ ಬ್ರಾಡ್ಮನ್ ರವರ ಸಾಧನೆ ಎಂತಹದಿತ್ತೋ ಅಂಥಹ ಸಾಧನೆ ಇವರದು. 1926 ರಿಂದ 1948 ರ ವರಗೆ ಭಾರತೀಯ ತಂಡದಲ್ಲಿ ಫಾರ್ವರ್ಡ್ ಆಟಗಾರರಾಗಿ, ನಾಯಕರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 400 ಕ್ಕೂ ಹೆಚ್ಚಿನ ಗೋಲುಗಳನ್ನು ಗಳಿಸಿದ್ದಾರೆ.

- Advertisement -

1928 ರಲ್ಲಿ ನೆದರ್‌ಲ್ಯಾಂಡ್ ನ ಅಮ್ ಸ್ಟರ್ ಡಮ್ ನಲ್ಲಿ ನಡೆದ ಬೇಸಿಗೆ ಒಲಿಂಪಿಕ್, 1932 ರಲ್ಲಿ ಅಮೆರಿಕದ ಲಾಸ್ ಎಂಜಲೀಸ್ ನಲ್ಲಿ ಮತ್ತು 1936 ರಲ್ಲಿ ಜರ್ಮನಿಯ ಬರ್ಲಿನ್ ನಲ್ಲಿ ನಡೆದ ಮೂರು ಒಲಿಂಪಿಕ್ ಗಳಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಗೋಲ್ಡ್ ಮೆಡಲ್ ಗಳನ್ನು ತಂದು ಕೊಟ್ಟಿರುತ್ತಾರೆ.1936 ರಲ್ಲಿ ನಡೆದ ಬರ್ಲಿನ್ ಒಲಿಂಪಿಕ್ ನಲ್ಲಿ ಹಾಕಿಯಲ್ಲಿ ಭಾರತ ಮತ್ತು ಜರ್ಮನಿ ಫೈನಲ್ ಗೆ ಬಂದಿರುತ್ತದೆ. ಇದನ್ನು ಖುದ್ದು ನೋಡಲು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ ಹಿಟ್ಲರ್ ಬಂದಿರುತ್ತಾರೆ. ಧ್ಯಾನ್ ಚಂದ್ ರ ಆಟವನ್ನು ನೋಡಿದ ಹಿಟ್ಲರ್ “ಧ್ಯಾನ್ ಚಂದ್ ರ ಕೈಯಲ್ಲಿ ಇರುವುದು ಹಾಕಿ ದಂಡವೋ, ಅಥವಾ ಮಂತ್ರ ದಂಡವೋ” ಎಂದು ಉದ್ಗರಿಸುತ್ತಾರೆ. ಆ ಪಂದ್ಯವನ್ನು ಭಾರತ 8 – 1 ಗೋಲುಗಳಿಂದ ಜಯಗಳಿಸುತ್ತದೆ. ಪಂದ್ಯ ಮುಗಿದ ನಂತರ ಹಿಟ್ಲರ್ ಖುದ್ದಾಗಿ ಧ್ಯಾನ್ ಚಂದ್ ರನ್ನು ಭೇಟಿ ಮಾಡಿ “ನೀನು ನನ್ನ ದೇಶದ ಪರವಾಗಿ ಆಡುವುದಾದರೆ ನಿನಗೆ ಸಕಲ ಸವಲತ್ತುಗಳನ್ನು ಬಳುವಳಿಯಾಗಿ ನೀಡುತ್ತೇನೆ” ಎಂದಾಗ ಧ್ಯಾನ್ ಚಂದ್ ರು ನಮ್ರತೆಯಿಂದ ತಿರಸ್ಕರಿಸಿ, ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆ ಇದೆ ಎಂದು ದೇಶಪ್ರೇಮವನ್ನು ಸಾರುತ್ತಾರೆ.

1948 ರಲ್ಲಿ ಭಾರತೀಯ ತಂಡದಿಂದ ನಿವೃತ್ತಿಯನ್ನು ತಮ್ಮ 42 ನೇ ವಯಸ್ಸಿನಲ್ಲಿ ಪಡೆಯುತ್ತಾರೆ. ಇವರಂತೆಯೇ ಇವರ ಸಹೋದರರಾದ ರೂಪ್ ಸಿಂಗ್, ಮೂಲ್ ಸಿಂಗ್ ಹಾಗೂ ಪುತ್ರ ಅಶೋಕ್ ಕುಮಾರ್ ರವರು ಭಾರತದ ಹಾಕಿ ತಂಡದಲ್ಲಿ ಆಡಿ ರಾಷ್ಟ್ರದ ಗೌರವವನ್ನು ಕಾಪಾಡಿದ್ದಾರೆ.
ಧ್ಯಾನ್ ಚಂದ್ ರಿಗೆ ಭಾರತದಲ್ಲಿ ಪುತ್ಥಳಿ ಇರುವುದು ಒಂದು ವಿಶೇಷವಲ್ಲ. ಆದರೆ ಅವರ ಪುತ್ಥಳಿಯನ್ನು ಮೊದಲು ಸ್ಥಾಪಿಸಿದ್ದು ಆಸ್ಟ್ರೀಯಾ ದೇಶದ ವಿಯನ್ನಾದಲ್ಲಿ, ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಖ್ಯಾತಿ ಎಷ್ಟಿತ್ತು ಎಂದು ತಿಳಿಯುವುದು. ಧ್ಯಾನ್ ಚಂದ್ ರು ಭಾರತದ ಹಾಕಿಗೆ ಅಪೂರ್ವ ಕೊಡುಗೆ ನೀಡಿದ್ದರೂ ಅವರ ಜೀವಿತದ ಕೊನೆಯ ದಿನಗಳು ಸುಖಕರವಾಗಿರಲಿಲ್ಲ. ಅವರು ಆರ್ಥಿಕವಾಗಿ ಬಹಳ ಸೊರಗಿದ್ದರು. ಕ್ಯಾನ್ಸರ್ ಪೀಡಿತರಾಗಿದ್ದ ಇವರು ದೆಹಲಿಯ ಏಮ್ಸ್ ನಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ, ಇತರರಿಂದ ಯಾವುದೇ ನೆರವು ದೊರಕದೆ ಅವರನ್ನು ಜನರಲ್ ವಾರ್ಡ್‌ ನಲ್ಲಿಟ್ಟು ನೋಡಿಕೊಳ್ಳಲಾಯಿತು. ಕೊನೆಗೆ ದಿನಾಂಕ 03 ಡಿಸೆಂಬರ್ 1979 ರಲ್ಲಿ ನಿಧನರಾಗುತ್ತಾರೆ.
ಭಾರತೀಯ ಹಾಕಿ ತಂಡವು ಇಂದು ಒಲಿಂಪಿಕ್ ಗೆ ಅರ್ಹತೆಗೊಳ್ಳಲು ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಾಕಿ ಇಂಡಿಯಾವು ಕನಿಷ್ಠ ಪಕ್ಷ ವರ್ಷಕೊಮ್ಮೆ ಇವರನ್ನು ಸ್ಮರಿಸುತ್ತಿಲ್ಲ. ಭಾರತೀಯ ಯುವ ಜನಾಂಗ ಇವರ ಹುಟ್ಟು ಹಬ್ಬವನ್ನು ಆಚರಿಸುವ ಜೊತೆಗೆ ಅವರಲ್ಲಿದ್ದ ದೇಶಾಭಿಮಾನವನ್ನು ಬೆಳಸಿಕೊಳ್ಳಬೇಕು.
ಕ್ರೀಡಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಇವರನ್ನು ಕಂಡು ಇಡೀ ವಿಶ್ವವೇ ಇಂದು ಸ್ಮರಿಸುತ್ತಿದೆ. ಲಂಡನ್ನಿನ ಹಾಕಿ ಕ್ರೀಡಾಂಗಣಕ್ಕೆ ಇವರ ಹೆಸರನ್ನು ಇಡಲಾಗಿದೆ. ಇತ್ತೀಚೆಗೆ ಬ್ರಿಟಿಷ್ ಸಂಸತ್ತಿನಲ್ಲಿ ಧ್ಯಾನ್ ಚಂದ್ ರಿಗೆ ಗೌರವವನ್ನು ಸೂಚಿಸಿದ್ದಾರೆ.

ಭಾರತ ಸರ್ಕಾರ 1956 ರಲ್ಲಿ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದೆ. ದೆಹಲಿಯಲ್ಲಿ ಇವರ ಹೆಸರಿನಲ್ಲಿ ರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸಿದೆ. ಇವರ ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದೆ. ಇವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಘೋಷಿಸಿ, ಅಂದು ರಾಷ್ಟ್ರಪತಿಯವರಿಂದ ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ನೀಡಿದರೆ ನಮ್ಮ ರಾಜ್ಯದಲ್ಲಿ ರಾಜ್ಯಪಾಲರು ರಾಜ್ಯ ಮಟ್ಟದಲ್ಲಿ ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಡಾ. ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group