spot_img
spot_img

ನಾಳೆಯಿಂದ ಒಂಬತ್ತು ದಿನಗಳ ಕಾಲ ಅಮ್ಮಲಜೇರಿ ಅವರ ಮನೆಯಲ್ಲಿ ನವರಾತ್ರಿ ವೈಭವ

Must Read

ವಿಶೇಷ ವರದಿ: ಗುರು ಅರಳಿಮರದ.

ಬಾಗಲಕೋಟ: ಮನೆಯ ಮುಂಬಾಗಿಲಿನಲ್ಲಿ ಕಂಗೊಳಿಸುತ್ತಿರುವ ನಾನಾ ಬಗೆಯ ವಿದ್ಯುತ್ ದೀಪಾಲಂಕಾರ,ತಳಿರು ತೋರಣ,ಮನೆಯ ಒಳಗಡೆ ಭವ್ಯವಾಗಿ ನಿರ್ಮಿಸಲಾಗಿರುವ ಮಂಟಪ ಇದೆಲ್ಲ ಕಂಡು ಬಂದಿದ್ದು ರಬಕವಿ-ಬನಹಟ್ಟಿ ತಾಲೂಕಿನ ರಾಂಪುರ ನಗರದಲ್ಲಿ ಹೌದು,ಮನೆಯಲ್ಲಿ ಏನು ವಿಶೇಷ ಅಂತೀರಾ..?

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಆಚರಿಸಲಾಗುವ ಶ್ರೀ ದೇವಿ ನವರಾತ್ರಿ ಉತ್ಸವಕ್ಕೆ ರಬಕವಿ ಬನಹಟ್ಟಿ ತಾಲೂಕಿನ ರಾಂಪುರದ ಅಮ್ಮಲಜೇರಿ ಅವರ ಮನೆಯಲ್ಲಿ ಹಾಕಲಾಗಿರುವ ಶ್ರೀ ದೇವಿ ಭವ್ಯ ಮಂಟಪ ಸಜ್ಜಾಗಿದೆ.

ಇದೇ ತಿಂಗಳ ಸಪ್ಟೆಂಬರ 26 ರಿಂದ ಆಕ್ಟೊಬರ್ 05 ರ ವರೆಗೆ ಅದ್ಧೂರಿಯಾಗಿ ಜರುಗಲಿರುವ ಶ್ರೀ ದೇವಿ ನವರಾತ್ರಿ ಉತ್ಸವದ ಶ್ರೀ ದೇವಿ ಮಹಾತ್ಮೆ ಪುರಾಣಕ್ಕೆ ರಾಂಪುರದ ಅಮ್ಮಲಜೇರಿ ಅವರ ಮನೆ ದೇವಸ್ಥಾನದಂತೆ ಸಜ್ಜಾಗಿದೆ.

ಸಪ್ಟೆಂಬರ 26ರ ಸೋಮವಾರದಂದು ಅಮ್ಮಲಜೇರಿ ಅವರ ಮನೆಯಲ್ಲಿ ನಿರ್ಮಿಸಲಾಗಿರುವ ಶ್ರೀ ದೇವಿ ಭವ್ಯ ಮಂಟಪದಲ್ಲಿ ಘಟಸ್ಥಾಪನೆ ನೆರವೇರಲಿದ್ದು,ಆಕ್ಟೊಬರ್ 05ರ ಬುಧವಾರದಂದು ಬನ್ನಿ ಮುಡಿಯುವ ಮೂಲಕ ಶ್ರೀ ದೇವಿ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ.ಶ್ರೀ ದೇವಿ ನವರಾತ್ರಿ ಉತ್ಸವದಲ್ಲಿ ಪ್ರತಿನಿತ್ಯ ಶ್ರೀ ಗುಡ್ಡಾಪುರದ ದಾನಮ್ಮ ದೇವಿಗೆ ವಿಶೇಷ ಪೂಜೆ,ವಿಶೇಷ ಅಲಂಕಾರ ಮತ್ತು ವಿಶೇಷ ನೈವೇದ್ಯ ನೆರವೇರಲಿದೆ.

ದೇವಿ ಆರಾಧಕರು ಹಾಗು ಖ್ಯಾತ ಜ್ಯೋತಿಷಿಗಳಾದ ಶ್ರೀ ಶಂಕರೆಪ್ಪ ಅಮ್ಮಲಜೇರಿ ಅವರು ಸೋಮವಾರದಿಂದ ಪ್ರತಿ ದಿನ ಸಂಜೆ 7.30 ರಿಂದ 9 ಘಂಟೆವರೆಗೆ ಸತತ ಒಂಬತ್ತು ದಿನಗಳ ಕಾಲ ಶ್ರೀ ದೇವಿ ಮಹಾತ್ಮೆ ಪುರಾಣ ಪಾರಾಯಣ ಮಾಡಲಿದ್ದಾರೆ.ಅಮ್ಮಲಜೇರಿ ಅವರ ಮನೆಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿ ಮಹಾತ್ಮೆ ಪುರಾಣ ಪಾರಾಯಣವು ಸುಮಾರು 54 ವರ್ಷಗಳಿಂದ ನಡೆದು ಬರುತ್ತಿರುವದು ಇಲ್ಲಿನ ವಿಶೇಷ.

ನವರಾತ್ರಿಯ ಒಂಬತ್ತು ದಿನಗಳ ಕಾಲ ಪ್ರತಿ ನಿತ್ಯ ಸಂಜೆ 6 ಗಂಟೆಯಿಂದ 7.30ರ ವರೆಗೆ ಶಿವಭಜನೆ ನಡೆಯಲಿದ್ದು,ದೇವಿ ಪಾರಾಯಣಕಾರರಾದ ಶ್ರೀ ಶಂಕರೆಪ್ಪ ಅಮ್ಮಲಜಜೇರಿ ಅವರಿಗೆ ರಾಂಪುರದ ಶ್ರೀ ನೀಲಕಂಠೆಶ್ವರ ಭಜನಾ ಮಂಡಳದವರಾದ ಸಹದೇವ ತಳವಾರ,ಮಹಾಲಿಂಗ ಗೋಲಬಾಂವಿ, ಮಲ್ಲಪ್ಪ ಹುಲಕುಂದ, ಗುರುಶಾಂತ ಮಾಳಗಿ,ಗುರಪ್ಪ ಮೂಲಿಮನಿ ತಬಲಾ ಹಾಗು ಹಾರ್ಮೋನಿಯಮಗೆ ಸಾಥ ನೀಡಲಿದ್ದಾರೆ.

ನವರಾತ್ರಿ ಉತ್ಸವದ ಸಂದರ್ಭದಲ್ಲಿ ಅಮ್ಮಲಜೇರಿ ಅವರ ಮನೆಗೆ ಬರುವ ಪ್ರತಿ ಭಕ್ತರು ದೀಪಕ್ಕೆ ಎಣ್ಣೆ ಹಾಕುವುದು ವಾಡಿಕೆ,ಅದರಂತೆಯೇ ಅಮ್ಮಲಜೇರಿ ಅವರ ಮನೆಯಲ್ಲಿ ಇರುವ ಬನ್ನಿ ಮರಕ್ಕೆ ಉಡಿ ತುಂಬುವದು ಸಹ ತಲತಲಾಂತರಗಳಿಂದ ನಡೆದು ಬಂದಿದೆ.ನವರಾತ್ರಿ ಉತ್ಸವದಲ್ಲಿ ಅಮ್ಮಲಜೇರಿ ಅವರ ಮನೆಯಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೆ ಪ್ರತಿದಿನ ನಿರಹಂಕಾರವಾಗಿ 9 ದಿನಗಳ ಕಾಲ ಉಪವಾಸ ವ್ರತ ಮಾಡುವರು,ಮಡಿ-ಹುಡಿಯಿಂದ ಪ್ರತಿದಿನ ಶ್ರೀ ದೇವಿ ಮಹಾತ್ಮೆ ಪುರಾಣದ ನಂತರ ಶ್ರೀ ಗುಡ್ಡಾಪುರ ದಾನಮ್ಮ ದೇವಿ ಪ್ರಿಯವಾದ ಹೂರಣದ ಹೋಳಿಗೆ,ಕುಂಬಳಕಾಯಿ ಪಲ್ಲೆ ನೈವೇದ್ಯ ಮಾಡುವುದು ವಿಶೇಷ.

ಖ್ಯಾತ ಜ್ಯೋತಿಷಿಗಳಾದ ಶ್ರೀ ಶಂಕರೆಪ್ಪ ಅಮ್ಮಲಜೇರಿ ಅವರು ಹೇಳುವಂತೆ ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ‘ವಿಜಯ ದಶಮಿ’, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ.ಪುರಾಣದ ಪ್ರಕಾರ ತಾಯಿ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. ಒಂಬತ್ತು ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ.
ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ,ಎರಡನೇ ದಿನ ಆಂದರೆ ಬಿದಿಗೆ ದಿನ ದೇವಜಾತ ದುರ್ಗಾಪೂಜಾ,ಮೂರನೇ ದಿನ ತದಿಗೆ ಮಹಿಷಾಸುರ ಮರ್ಧಿನಿ ದುರ್ಗಾಪೂಜಾ,ನಾಲ್ಕನೇ ದಿನ ಚತುರ್ದಶಿ ಶೈಲ ಜಾತಾ ದುರ್ಗಾಪೂಜಾ,ಐದನೇ ದಿನ ಪಂಚಮಿ ದೂಮೃಹಾ ದುರ್ಗಾಪೂಜಾ,ಆರನೇ ದಿನ ಶಷ್ಠಿ ಚಂಡ-ಮುಂಡ ಹಾ ದುರ್ಗಾಪೂಜಾ,ಏಳನೇ ದಿನ ಸಪ್ತಮಿ ರಕ್ತ ಬೀಜ ಹಾ ದುರ್ಗಾಪೂಜಾ,ಎಂಟನೇ ದಿನ ಅಷ್ಟಮಿ ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಠಮಿ),ಒಂಭತ್ತನೇ ದಿನ ಮಹಾನವಮಿ -ಶುಂಭ ಹಾ ದುರ್ಗಾಪೂಜಾ ಮಾಡಲಾಗುತ್ತದೆ.ಅಂದರೆ ಮಹಾಕಾಳಿ, ಮಹಾಲಕ್ಷ್ಮಿ,ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ.ನವರಾತ್ರಿಯಲ್ಲಿ ಸಪ್ತಮಿಗೆ ವಿಶೇಷ ಸ್ಥಾನವಿದೆ.ಸಪ್ತಮಿಯ ಮೂಲಾನಕ್ಷತ್ರದಂದು ಪುಸ್ತಕ, ಪವಿತ್ರಗ್ರಂಥಗಳನ್ನು,ಚಿನ್ನ,ಬೆಳ್ಳಿ ಪೂಜೆಗಿಡಲಾಗುತ್ತದೆ.ಹಾಗೂ ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ.

ನವರಾತ್ರಿಯಲ್ಲಿ ಚಾಮುಂಡೇಶ್ವರಿ,ದುರ್ಗಾದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು.ನವರಾತ್ರಿಯೆಂದರೆ ಒಂಭತ್ತು ದಿನಗಳಿಗೆ ಸೀಮಿತ ವಾಗಿದ್ದರೂ ಹತ್ತನೇ ದಿನ ವಿಜಯದಶಮಿ.ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ.ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು.ಅದು ವಿಜಯದಶಮಿಯ ದಿನ ಎಂಬ ನಂಬಿಕೆ ಇದೆ” ಎಂದು ವಿವರಿಸುತ್ತಾರೆ.

ನವರಾತ್ರಿ ವ್ರತವನ್ನು ಆಚರಿಸುವ ಪದ್ಧತಿ:
ಅಖಂಡ ದೀಪಪ್ರಜ್ವಲನೆ ಅಂದರೆ ನವರಾತ್ರಿಯ 9 ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸುವುದು, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾಠ, ದೇವಿಭಾಗವತ, ಬ್ರಹ್ಮಾಂಡಪುರಾಣದಲ್ಲಿನ ಲಲಿತೋಪಾಖ್ಯಾನವನ್ನು ಕೇಳುವುದು, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅವರವರ ಶಕ್ತಿಸಾಮರ್ಥ್ಯಕ್ಕನುಸಾರವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸಬೇಕು ಎನ್ನುತ್ತಾರೆ.
ದ್ವಾಪರಾಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ನಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರು. ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯಸಾಧಿಸಿದರು ಎಂದು ಹೇಳುತ್ತಾರೆ. ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದು ಕರೆಯುತ್ತಾರೆ ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ ಎಂದು ತಿಳಿಸುತ್ತಾರೆ.

ಆಕ್ಟೊಬರ್ 05ರ ಬುಧವಾರ ಮದ್ಯಾಹ್ನ 12 ಘಂಟೆಗೆ ಶ್ರೀ ದೇವಿ ಪುರಾಣ ಸಮಾಪ್ತಿ ಸಮಾರಂಭವೂ ವಿಜೃಂಭಣೆಯಿಂದ ಜರುಗಲಿದ್ದು,ತದನಂತರ ಅನ್ನಸಂತರ್ಪಣೆ ಕಾರ್ಯಕ್ರಮವಿದ್ದು,ಈ ಸತ್ಕಾರ್ಯಕ್ಕೆ ಭಕ್ತರೆಲ್ಲರೂ ಆಗಮಿಸಿ ಮಹಾ ಪ್ರಸಾದ ಸ್ವೀಕರಿಸಿ ಜಗನ್ಮಾತೆ ಶ್ರೀ ದೇವಿ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!