ಅಶ್ವಯುಜ ಶುಕ್ಲ ಪ್ರತಿಪತ್ತಿನಿಂದ – ನವಮಿಯವರೆಗೆ, ಮಾಡುವ ನವರಾತ್ರಿ ಪೂಜೆಯ ಅಂಗವಾಗಿ ಹೋಮ, ಸರ್ವಮೂಲಾದಿ ಸಚ್ಛಾಸ್ತ್ರಪಾರಾಯಣ, ಮುಂತಾದವುಗಳನ್ನು ಮಾಡಬೇಕು. ಈ ನವರಾತ್ರಿಯಲ್ಲಿ ಮಾಡುವ ಮಂತ್ರಜಪ ಸ್ನಾನ-ದಾನ ಮುಂತಾದವುಗಳು ಒಂದೊಂದು ಅನಂತ ಫಲವನ್ನು ಕೊಡುತ್ತವೆ.
ದಧಾನ ಕರಪದ್ಮಾಭ್ಯಾಂ ಅಕ್ಷಮಾಲಾಕಮಂಡಲೂ |
ದೇವೀ ಪ್ರಸೀದತು ಮಹಿ ಬ್ರಹ್ಮಚಾರಿಣ್ಯನುತ್ತಮಾ ||
ಜಗಜ್ಜನನೀ ದುರ್ಗಾದೇವಿಯ ನವ ಶಕ್ತಿಯರಲ್ಲಿ ಎರಡನೆಯ ಸ್ವರೂಪವು ‘ಬ್ರಹ್ಮಚಾರಿಣಿ’ಯದ್ದಾಗಿದೆ. ಇಲ್ಲಿ ‘ ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದಾಗಿದೆ. ‘ಬ್ರಹ್ಮಚಾರಿಣೀ’ ಅರ್ಥಾತ್ ತಪಸ್ಸಿನ ಚಾರಿಣೀ – ತಪಸ್ಸನ್ನು ಆಚರಿಸುವವಳು. ‘ವೇದಸತ್ತ್ವಂ ತಪೋ ಬ್ರಹ್ಮ’ ವೇದ ಮತ್ತು ತಪಸ್ಸು‘ಬ್ರಹ್ಮ’ ಶಬ್ಧದ ಅರ್ಥವಾಗಿದೆ. ಬ್ರಹ್ಮಚಾರಿಣೀ ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಇವಳ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲು ಇರುತ್ತದೆ.
ಹಿಂದಿನ ಜನ್ಮದಲ್ಲಿ ಇವಳು ಹಿಮಾಲಯನ ಮನೆಯಲ್ಲಿ ಪುತ್ರಿಯಾಗಿ ಅವತರಿಸಿದಾಗ ನಾರದರ ಉಪದೇಶದಿಂದ ಇವಳು ಭಗವಾನ್ ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಅತಿಯಾದ ಕಠಿಣ ತಪಸ್ಸನ್ನು ಮಾಡಿದ್ದಳು. ಇಂತಹ ದುಷ್ಕರ ತಪಸ್ಸಿನ ಕಾರಣ ಇವಳನ್ನು ‘ತಪಶ್ಚಾರಿಣೀ’ ಅರ್ಥಾತ್ ಬ್ರಹ್ಮಚಾರಿಣೀ ಎಂಬ ಹೆಸರಿನಿಂದ ಕರೆಯಲಾಗಿದೆ. ಒಂದು ಸಾವಿರ ವರ್ಷ ಇವಳು ಕೇವಲ ಫಲ-ಮೂಲಗಳನ್ನು ತಿಂದು ಕಳೆದಿದ್ದಳು. ನೂರು ವರ್ಷಗಳವರೆಗೆ ಕೇವಲ ಎಲೆಗಳನ್ನು ತಿನ್ನುತ್ತಿದ್ದಳು. ಕೆಲವು ದಿನಗಳವರೆಗೂ ಕಠಿಣ ಉಪವಾಸವಿದ್ದು ತೆರೆದ ಆಕಾಶದ ಕೆಳಗೆ ಮಳೆ-ಬಿಸಿಲಿನ ಭಯಾನಕ ಕಷ್ಟಗಳನ್ನು ಸಹಿಸಿದಳು. ಈ ಕಠಿಣ ತಪಶ್ಚರ್ಯದ ಬಳಿಕ ಮೂರು ಸಾವಿರ ವರ್ಷಗಳವರೆಗೆ ಕೇವಲ ನೆಲದ ಮೇಲೆ ಉದುರಿಬಿದ್ದ ಬಿಲ್ವಪತ್ರಗಳನ್ನು ತಿಂದು ಅವಳು ಹಗಲು-ರಾತ್ರಿ ಭಗವಾನ್ ಶಂಕರನ ಆರಾಧನೆ ಮಾಡುತ್ತಿದ್ದಳು. ಇದಾದ ನಂತರ ಅವಳು ಒಣಗಿದ ಬಿಲ್ವಪತ್ರಗಳನ್ನು ತಿನ್ನುವುದನ್ನು ಬಿಟ್ಟು ಬಿಟ್ಟಳು. ಅನೇಕ ಸಾವಿರ ವರ್ಷಗಳವರೆಗೆ ಅವಳು ಆಹಾರ-ನೀರೂ ಸೇವಿಸದೆ ತಪಸ್ಸು ಮಾಡುತ್ತಾ ಇದ್ದಳು. ಎಲೆ(ಪರ್ಣ)ಗಳನ್ನೂ ತಿನ್ನುವುದನ್ನು ಬಿಟ್ಟ ಕಾರಣದಿಂದ ಅವಳ ಒಂದು ಹೆಸರು ‘ಅಪರ್ಣಾ’ ಎಂದಾಯಿತು.
ಅನೇಕ ಸಾವಿರ ವರ್ಷಗಳ ಈ ಕಠಿಣ ತಪಸ್ಸಿನ ಕಾರಣ ಬ್ರಹ್ಮಚಾರಿಣೀ ದೇವಿಯ ಆ ಪೂರ್ವಜನ್ಮದ ಶರೀರವು ತುಂಬಾ ಕ್ಷೀಣವಾಯಿತು. ಅವಳು ಅತ್ಯಂತ ಕೃಷಕಾಯಳಾಗಿದ್ದಳು. ಅವಳ ಈ ಸ್ಥಿತಿಯನ್ನು ಕಂಡು ತಾಯಿಯಾದ ಮೇನಾದೇವಿಯು ಅತಿ ದುಃಖಿತಳಾದಳು. ಅವಳು ಮಗಳನ್ನು ಆ ಕಠಿಣ ತಪಸ್ಸಿನಿಂದ ಹಿಂದಿರುಗಲು ಕರೆದಳು– ‘ಉ ಮಾ’ ಎಂದರೆ ‘ತಪಸ್ಸು ಬೇಡ ಮಗಳೇ’ ಎಂದು. ಅಂದಿನಿಂದ ದೇವೀ ಬ್ರಹ್ಮಚಾರಿಣಿಯ ಹಿಂದಿನ ಜನ್ಮದ ಒಂದು ಹೆಸರು ‘ಉಮಾ’ ಎಂದೂ ಆಗಿತ್ತು.
ಅವಳ ಈ ತಪಸ್ಸಿನಿಂದ ಮೂರೂ ಲೋಕಗಳಲ್ಲಿ ಹಾಹಾಕಾರ ಎದ್ದಿತು. ಎಲ್ಲಾ ದೇವತೆಗಳು, ಋಷಿಗಳು, ಸಿದ್ಧಗಣರೂ, ಮುನಿಗಳೂ, ಬ್ರಹ್ಮಚಾರಿಣೀ ದೇವಿಯ ಈ ತಪಸ್ಸನ್ನು ಅಭೂತಪೂರ್ವ ಪುಣ್ಯಕೃತ ಎಂದು ಹೇಳುತ್ತಾ ಅವಳನ್ನು ಹೊಗಳತೊಡಗಿದರು. ಕೊನೆಗೆ ಪಿತಾಮಹ ಬ್ರಹ್ಮದೇವರು ಆಕಾಶವಾಣಿಯಿಂದ ಅವಳನ್ನು ಸಂಬೋಧಿಸುತ್ತಾ ಮಧುರ ಸ್ವರದಿಂದ ಹೇಳಿದರು – “ಹೇ ದೇವಿ! ಇಂದಿನವರೆಗೆ ಯಾರೂ ಇಂತಹ ಕಠೋರ ತಪಸ್ಸು ಮಾಡಿರಲಿಲ್ಲ. ಇಂತಹ ತಪಸ್ಸು ನಿನ್ನಿಂದಲೇ ಸಂಭವಿಸಿದೆ. ನಿನ್ನ ಈ ಅಲೌಕಿಕ ಕಾರ್ಯದ ಹೊಗಳಿಕೆ ಎಲ್ಲೆಡೆ ನಡೆಯುತ್ತಾ ಇದೆ. ನಿನ್ನ ಮನೋ ಕಾಮನೆಯು ಎಲ್ಲ ವಿಧದಿಂದ ಪೂರ್ಣವಾದೀತು. ಭಗವಾನ್ ಚಂದ್ರಮೌಳಿ ಶಿವನು ನಿನಗೆ ಪತಿಯಾಗಿ ದೊರೆಯುವನು. ಈಗ ನೀನು ತಪಸ್ಸನ್ನು ಬಿಟ್ಟು ಮನೆಗೆ ಹಿಂತಿರುಗು. ಬೇಗನೇ ನಿನ್ನ ತಂದೆಯು ನಿನ್ನನ್ನು ಕರೆಯಲು ಬರುತ್ತಿರುವರು” ಎಂದರು.
ಜಗನ್ಮಾತೆ ದುರ್ಗೆಯ ಈ ಎರಡನೆ ಸ್ವರೂಪವು ಭಕ್ತರಿಗೆ ಹಾಗೂ ಸಿದ್ಧರಿಗೆ ಅನಂತ ಫಲವನ್ನು ಕೊಡುವಂತಹುದು. ಅವಳ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಇವುಗಳ ವೃದ್ಧಿಯಾಗುತ್ತದೆ. ಜೀವನದ ಕಠಿಣ ಸಂಘರ್ಷದಲ್ಲಿಯೂ ಅವನ ಮನಸ್ಸು ಕರ್ತವ್ಯ ಪಥದಿಂದ ವಿಚಲಿತವಾಗಲಾರದು. ಜಗಜ್ಜನನೀ ಬ್ರಹ್ಮಚಾರಿಣೀ ದೇವಿಯ ಕೃಪೆಯಿಂದ ಅವನಿಗೆ ಎಲ್ಲೆಡೆ ಸಿದ್ಧಿ ಮತ್ತು ವಿಜಯದ ಪ್ರಾಪ್ತಿ ಆಗುತ್ತದೆ. ನವರಾತ್ರಿ ಪೂಜೆಯ ಎರಡನೆಯ ದಿನ ಇವಳ ಸ್ವರೂಪದ್ದೇ ಉಪಾಸನೆ ಮಾಡಲಾಗುತ್ತದೆ. ಅಂದು ಸಾಧಕನ ಮನಸ್ಸು ‘ಸ್ವಾಧಿಷ್ಠಾನ’ ಚಕ್ರದಲ್ಲಿ ಸ್ಥಿತವಾಗುತ್ತದೆ. ಈ ಚಕ್ರದಲ್ಲಿ ನೆಲೆನಿಂತ ಮನಸ್ಸುಳ್ಳ ಯೋಗಿಯು ಅವಳ ಕೃಪೆ ಮತ್ತು ಭಕ್ತಿಯನ್ನು ಪಡೆದುಕೊಳ್ಳುತ್ತಾನೆ. ಮಾತೆ ಬ್ರಹ್ಮಚಾರಿಣಿ ದೇವಿಯು ಮಂಗಳ ಗ್ರಹವನ್ನು ನಿಯಂತ್ರಿಸುತ್ತಾಳೆ ಮತ್ತು ಶುದ್ಧ ಹೃದಯದಿಂದ ಪೂಜಿಸಿದರೆ ಯಾವುದೇ ಕೆಟ್ಟ ಪರಿಣಾಮಗಳನ್ನು ನಿವಾರಿಸುತ್ತಾಳೆ.