ಮುಧೋಳ – ನಮ್ಮ ಗ್ರಾಮೀಣ ಸಂಸ್ಕೃತಿ ಪರಂಪರೆ ಭದ್ರವಾಗಿ ಉಳಿಯಬೇಕಾದರೆ ಪ್ರತಿಯೊಬ್ಬ ಮಗುವಿಗೆ.ಯುವಕ ಯುವತಿಯರಿಗೆ ನೈತಿಕವಾದ ಸುಸಂಸ್ಕಾರ ಕೊಡುವ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಡೆದ 102 ನೇ ರವಿವಾರದ ಸತ್ಸಂಗ ಕಾರ್ಯಕ್ರಮದ ಸನ್ನಿಧಾನ ಸ್ಥಾನದಿಂದ ಮಾತನಾಡುತ್ತಾ ಮಕ್ಕಳಲ್ಲಿ ಯುವಕರಲ್ಲಿ ಜಾತಿ ಮತ ಪಂಥ ಪಕ್ಷಗಳ ಭೇದ ಬುದ್ಧಿಯನ್ನು ತುಂಬದೆ ಸರ್ವರನ್ನ ಸಮಭಾವ ಸಮದೃಷ್ಟಿಯಿಂದ ಕಾಣುವುದನ್ನು ಕಲಿಸಬೇಕು. ಸರ್ವರನ್ನ ಪ್ರೀತಿಸುವ ಭಾವವನ್ನು ಬೆಳೆಸಬೇಕು ಎಂದರು.
ಮುಂದುವರೆದು ಮಾತನಾಡುತ್ತಾ, ತಾಯಿ ತಂದೆ ಗುರು ಹಿರಿಯರಲ್ಲಿ ಪ್ರೀತಿ, ನಾಡು ನುಡಿ ಕಲೆಗಳ ಮಹತ್ವ,ನಮ್ಮ ಆಚಾರ ವಿಚಾರ ಪರಂಪರೆ ಉಳಿಯಬೇಕಾದರೆ ಬುದ್ಧ ಬಸವ ಅಂಬೇಡ್ಕರರ ಸಂದೇಶಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವ ಅಶ್ಲೀಲ ಅಸಂಬದ್ಧ ಕಾರ್ಯಕ್ರಮಗಳಿಗೆ ಅವಕಾಶ ಕೊಡಬಾರದು. ಧರ್ಮ ರಕ್ಷಣೆಯಾದರೆ ನಾವು ರಕ್ಷಣೆ ಆದೇವು. ಧರ್ಮ ರಕ್ಷಣೆ ಮಾಡುವ ಕಾರ್ಯದಲ್ಲಿ ನಾವು ನಿರಂತರ ಪ್ರವೃತ್ತರಾಗಬೇಕೆಂದ ಶರಣಬಸವಶಾಸ್ತ್ರಿಗಳು ನಮ್ಮ ಕನ್ನಡ ನಾಡು ಶರಣರ ಬೀಡು, ಆಧ್ಯಾತ್ಮಿಕತೆಯ ಗೂಡು. ನಮ್ಮ ನೆಲ ಮೂಲ ಸಂಸ್ಕೃತಿಯ ಉಳಿವಿಗಾಗಿ ಯುವಕರು ಜಾಗ್ರತರಾಗಬೇಕು ಎಂದರು.
ಆಶ್ರಮದಲ್ಲಿ ಶ್ರೀ ಸಿದ್ಧಾರೂಢರ ಅಭಿಷೇಕ ಓಂಕಾರ ಭಜನೆ ಮುಂತಾದ ಕಾರ್ಯಕ್ರಮಗಳು ನಡೆದವು ಕುಮಾರ ಗುರುಪ್ರಸಾದ ಸ್ವಾಮೀಜಿ ಕಾರ್ಯಕ್ರಮ ನಿರ್ವಹಿಸಿದರು