ಬನವಾಸಿ: ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಬನವಾಸಿಯಲ್ಲಿ ಜಿಲ್ಲಾ ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾಟಾಚಾರದ ಕಾರ್ಯಕ್ರಮವಾಗಿ ಮಾರ್ಪಾಟಾಯಿತು. ಶಾಸಕರು ಬಂದು ಕಾದರೂ ಜಿಲ್ಲಾಧಿಕಾರಿ ಬಾರದ ಹಿನ್ನಲೆಯಲ್ಲಿ ಸಾರ್ವಜನಿಕರು ಜಿಲ್ಲಾ ಆಡಳಿತದ ಕಾರ್ಯವೈಖರಿಗೆ ಅಸಮಾಧಾನ ಹೊರ ಹಾಕಿದರು.
ಬನವಾಸಿಯ ಜಯಂತಿ ಪ್ರೌಢಶಾಲೆಯ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿತ್ತು. ಆದರೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಮಧ್ಯಾಹ್ನ 12-45 ಕ್ಕೆ ಬಂದ ಪರಿಣಾಮ ಎರಡೂವರೆ ಗಂಟೆ ವಿಳಂಬವಾಗಿ ಕಾರ್ಯಕ್ರಮ ಆರಂಭವಾಯಿತು.
ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಇದಾಗಿದ್ದರೂ ಕಂದಾಯ ಇಲಾಖೆಯು ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿತ್ತು. ಸಾವಿರಾರು ಜನರನ್ನು ಗಂಟೆಗಟ್ಟಲೇ ಕಾಯಿಸಿದರೂ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯನ್ನೂ ಸಹ ಮಾಡಿರಲಿಲ್ಲ. ಇದಕ್ಕೆ ಹಾಜಾರಾದ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೇ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಬನವಾಸಿಗೆ ಬಂದು 1 ಗಂಟೆಗೂ ಅಧಿಕ ಕಾಲ ಕಾಯುವಂತಾಯಿತು.
ಖುರ್ಚಿಯೂ ಇಲ್ಲ:
ಜನತಾ ದರ್ಶನ ಜಿಲ್ಲಾ ಮಟ್ಟದ್ದು ಎಂದು ತಿಳಿದಿದ್ದರೂ ಸಹ ಶಿರಸಿ ಉಪವಿಭಾಗ ಹಾಗೂ ತಾಲೂಕಾ ಕಂದಾಯ ಇಲಾಖೆಯಿಂದ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಅಹವಾಲು ಸಲ್ಲಿಸಲು ಬಂದ ನೂರಾರು ಜನರು ಬಿಸಿಲಿನ ಝಳದ ಮಧ್ಯೆ ನಿಂತು ಕೊಂಡು ಅಧಿಕಾರಿಗಳಿಗಾಗಿ ಕಾದರು. ಸಮರ್ಪಕವಾದ ಖುರ್ಚಿ ವ್ಯವಸ್ಥೆಯೂ ಮಾಡದ ಆಡಳಿತದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೇ ಕಾರ್ಯಕ್ರಮದ ಬ್ಯಾನರ್ ಮಧ್ಯಾಹ್ನ ವೇಳೆಗೆ ಕಟ್ಟಿದ್ದು ನಗೆಪಾಟಲೀಗಿಡಾಯಿತು. ಅದರಲ್ಲೂ ಜಿಲ್ಲಾ ಪೊಲೀಸ್ ಬರೆಯುವಲ್ಲಿ ‘ಜಲ್ಲಾ ಪೋಲಿಸ್ ‘ ಬರೆದಿರುವುದು ಸಾರ್ವಜನಿಕರ ಅಪಹಾಸ್ಯಕ್ಕೆ ಗುರಿಯಾಯಿತು.
ಸಭೆಗೆ ಕಾಟಾಚಾರಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಜನರ ಅಹವಾಲು ಸ್ವೀಕರಿಸಿದರು. ಮೊದಲು ಇಂಧನ ಉಳಿಸಲು ಬಸ್ಸಿನ ಮೂಲಕ ಕಾರವಾರದಿಂದ ಬಂದರೂ ಅವರ ಸರ್ಕಾರಿ ವಾಹನ ಮಾತ್ರ ಬಸ್ಸಿನ ಹಿಂದಗಡೆಯೇ ಬಂದಿತು. ಕಾರವಾರದ ಸಹಾಯಕ ಆಯುಕ್ತರ ವಾಹನವೂ ಬಂದಿತ್ತು. ಇದು ಯಾವ ರೀತಿ ಇಂಧನ ಉಳಿಕೆ ? ಎಂದು ಜನರು ಪ್ರಶ್ನಿಸಿದರು. ಈ ವೇಳೆ ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ವಿವಿಧ ಸ್ತರದ, ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಹಾಜಾರಿದ್ದರು.
ಬನವಾಸಿ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕಾರಣ ಶಾಸಕ ಶಿವರಾಮ ಹೆಬ್ಬಾರ್ ಅವರು ಜನತಾ ದರ್ಶನದ ಅಧ್ಯಕ್ಷತೆ ವಹಿಸಿದ್ದರು. ಅವರು ಸುಮಾರು 11 ಗಂಟೆಯ ವೇಳೆಗೆ ಬನವಾಸಿ ತಲುಪಿದ್ದರು. ಮೊದಲಿಗೆ ಬನವಾಸಿ ವೃತ್ತದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದರು. ನಂತರ ಲೊಕೊಪಯೋಗಿ ಇಲಾಖೆಯ ಪ್ರವಾಸಿ ಮಂದಿರಕ್ಕೆ ಹೋದರು. ಇಷ್ಟಾದರೂ ಸಹ ಶಾಸಕರಿಗೆ ಗೌರವ ತೋರದೇ ಜಿಲ್ಲಾಧಿಕಾರಿ ಮಧ್ಯಾಹ್ನ ೧ ಗಂಟೆಗೆ ಆಗಮಿಸಿದರು. ನಂತರ ಹೆಬ್ಬಾರ್ ಕಾರ್ಯಕ್ರಮಕ್ಕೆ ಆಗಮಿಸಿ ಕೆಲ ಹೊತ್ತಿನ ಬಳಿಕ ತೆರಳಿದರು. ಈ ರೀತಿ ಶಾಸಕರಿಗೆ ಅಗೌರವ ತೋರಿರುವುದು ಅವರ ಕಾರ್ಯಕರ್ತರ ಅಸಮಧಾನಕ್ಕೆ ಕಾರಣವಾಯಿತು.