spot_img
spot_img

ಹೊಸ ಪುಸ್ತಕ ಓದು: ಸನ್ನಿಧಾನ (ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಒಡನಾಟದ ಕ್ಷಣಗಳು)

Must Read

- Advertisement -

ಸನ್ನಿಧಾನ (ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಒಡನಾಟದ ಕ್ಷಣಗಳು)

ಲೇಖಕರು: ಮಲ್ಲಿಕಾರ್ಜುನ ಹುಲಗಬಾಳಿ
ಪ್ರಕಾಶಕರು: ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು, ೨೦೨೦
ಬೆಲೆ : ೯೦ ರೂ.
(ಲೇಖಕರ ಸಂಪರ್ಕ ನಂ. ೯೯೪೫೧೧೯೫೨೮)


ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಅನೇಕ ಸಾಹಿತ್ಯ ದಿಗ್ಗಜರ ಪುಣ್ಯಭೂಮಿ ಎನಿಸಿದೆ. ತಮ್ಮಣ್ಣಪ್ಪ ಚಿಕ್ಕೋಡಿ ಅವರಂಥ ತ್ಯಾಗಮಯಿ ಜೀವಿಗಳ ಕರ್ಮಭೂಮಿ ಎನಿಸಿದೆ. ಇಂಥ ಊರಲ್ಲಿ ಸಾಹಿತ್ಯ ಸಂಸ್ಕೃತಿಗಳ ಉನ್ನತೀಕರಣಕ್ಕಾಗಿ ಶ್ರಮಿಸುತ್ತಿರುವ ವಿದ್ವಜ್ಜನರಲ್ಲಿ ಮಲ್ಲಿಕಾರ್ಜುನ ಹುಲಗಬಾಳಿ, ಜಯವಂತ ಕಾಡದೇವರ, ಬಿ. ಆರ್. ಪೊಲೀಸ್ ಪಾಟೀಲ ಅವರು ತಕ್ಷಣ ನೆನಪಿಗೆ ಬರುತ್ತಾರೆ. ಮಲ್ಲಿಕಾರ್ಜುನ ಹುಲಗಬಾಳಿ ಅವರು ಕಳೆದ ಐದು ದಶಕಗಳಿಂದ ಬರವಣಿಗೆಯಲ್ಲಿ ಅವ್ಯಾಹತವಾಗಿ ತೊಡಗಿಸಿಕೊಂಡವರು. ವಿಕ್ರಾಂತ ಭಾರತ ಎಂಬ ಪತ್ರಿಕೆಗೆ ಐವತ್ತು ವರ್ಷಗಳ ಕಾಲ ಅಂಕಣ ಬರಹ ಬರೆದ ಕೀರ್ತಿ ಅವರದು. ತಂದೆ ಆರ್. ಎಸ್. ಹುಲಗಬಾಳಿ ಅವರ ಹೆಸರಿನಲ್ಲಿ ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನವನ್ನು ಅಸ್ತಿತ್ವಕ್ಕೆ ತಂದು, ‘ಹುಲಗಬಾಳಿ ಪಾರಲೌಕಿಕ ಪ್ರಶಸ್ತಿ’ ಪ್ರದಾನ ಮಾಡುತ್ತ ಬಂದಿರುವ ಮಲ್ಲಿಕಾರ್ಜುನ ಹುಲಗಬಾಳಿ ಅವರಿಗೆ ಈಗ ೭೧ರ ತುಂಬು ಹರೆಯ. ಈ ವಯಸ್ಸಿನಲ್ಲಿಯೂ ಅವರದು ಬತ್ತದ ಉತ್ಸಾಹ. ಓದು ಬರಹಗಳಲ್ಲಿ ಆಸಕ್ತಿ ಉಳ್ಳವರು. ಇಂಥ ಹಿರಿಯರ ಮಾಗಿದ ಪರಿಪಕ್ವ ಅನುಭವದಿಂದ ಮೂಡಿಬಂದ ಮಹತ್ವದ ಕೃತಿ ‘ಸನ್ನಿಧಾನ’.

ಶ್ರೀ ಮಲ್ಲಿಕಾರ್ಜುನ ಹುಲಗಬಾಳಿ ಅವರು ರಚಿಸಿದ ‘ಸನ್ನಿಧಾನ’ ಪುಸ್ತಕ ಗದುಗಿನ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳವರ ಘನ ವ್ಯಕ್ತಿತ್ವವನ್ನು ತಿಳಿಸುವ ಮಹತ್ವದ ಕೃತಿಯಾಗಿದೆ. ಶ್ರೀಗಳ ಜೊತೆಗಿನ ೪ ದಶಕಗಳ ಒಡನಾಟದ ಆಪ್ತ ಕ್ಷಣಗಳನ್ನು ತುಂಬ ಹೃದಯಸ್ಪರ್ಶಿಯಾಗಿ ಅಭಿವ್ಯಕ್ತಿಸಿದ್ದಾರೆ.

- Advertisement -

ಸ್ವಾಮಿಗಳು, ಮಠಗಳೆಂದರೆ ಅಷ್ಟಕಷ್ಟೇ ಇದ್ದ ಮಲ್ಲಿಕಾರ್ಜುನ ಅವರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು ಗದುಗಿನ ತೋಂಟದಾರ್ಯ ಶ್ರೀಗಳು. ಶ್ರೀಗಳವರ ಭಾಷಣಗಳನ್ನು ಕೇಳಿ ಪ್ರಭಾವಿತರಾದ ಅವರು ಶ್ರೀಗಳ ಸಾನ್ನಿಧ್ಯ ಸಂಪರ್ಕಕಕ್ಕೆ ಬಂದ ನಂತರ ಶ್ರೀಗಳ ಬಹುಮುಖ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಪ್ರಯತ್ನಿಸಿದರು. ಮಲ್ಲಿಕಾರ್ಜುನ ಅವರು ಬರೆದ ಅನೇಕ ಪತ್ರಿಕಾ ಬರಹಗಳನ್ನು ಓದಿ ಶ್ರೀಗಳು ತಕ್ಷಣ ಸ್ಪಂದಿಸುತ್ತಿದ್ದ ರೀತಿ ತುಂಬ ಅಪ್ಯಾಯಮಾನವಾಗಿತ್ತು.

ಶ್ರೀಗಳನ್ನು ಮೊದಲ ಬಾರಿಗೆ ಕಂಡಾಗ, ಮೊದಲ ಬಾರಿ ಅವರ ಭಾಷಣ ಕೇಳಿದಾಗ ರೋಮಾಂಚಿತವಾದ ಕ್ಷಣಗಳನ್ನು ಲೇಖಕರು ಅತ್ಯಂತ ಆಪ್ತವಾಗಿ ನಿರೂಪಿಸಿದ್ದಾರೆ. ಇನ್ನೂ ಹೇಳಬೇಕೆಂದರೆ ಶ್ರೀಗಳನ್ನು ಭೇಟಿಯಾಗಲು ಮೊದಲ ಸಲ ಗದುಗಿನ ತೋಂಟದಾರ್ಯಮಠಕ್ಕೆ ಹೋದಾಗ, ಶ್ರೀಗಳು ನೀಡಿದ ಆತಿಥ್ಯ ಕುರಿತು ಹೇಳುತ್ತ- ‘ನನಗೆ ಮಾಡಿದ ವ್ಯವಸ್ಥೆಯಂತೂ ಮಾವನ ಮನೆಗೆ ಹೊಸದಾಗಿ ಬಂದ ಅಳಿಯನಿಗೆ ಸಿಗುವ ಆತಿಥ್ಯ ನೆನಪಿಸುವಂತಿತ್ತು’ ಎಂದು ಬರೆಯುತ್ತಾರೆ. ತಮ್ಮ ಬರೆವಣಿಗೆಗೆ ಶ್ರೀಗಳು ಸದೃಢವಾದ ಆಸ್ತಿಭಾರವನ್ನು ಹಾಕಿದ್ದರೆಂದು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ.

ಶ್ರೀಗಳು ಪ್ರಾರಂಭಿಸಿದ ಲಿಂಗಾಯತ ಪುಣ್ಯಪುರುಷ ಮಾಲೆಗೆ ಮೊದಲ ಬಾರಿಗೆ ಪಾರಿಜಾತದ ಅಪ್ರತಿಮ ಕಲಾವಿದ ‘ಸವದಿ ಮಲ್ಲಯ್ಯನವರ’ ಕುರಿತು ಚರಿತ್ರೆ ಬರೆದ ಧನ್ಯತಾ ಭಾವ ಮಲ್ಲಿಕಾರ್ಜುನ ಅವರದು. ನಂತರ ದು.ನಿಂ.ಬೆಳಗಲಿ ಅವರ ಚರಿತ್ರೆಯನ್ನು ಈ ಮಾಲೆಗೆ ಬರೆದುಕೊಟ್ಟಿದ್ದಾರೆ. ಜಾತ್ರಾ ಸಂದರ್ಭದಲ್ಲಿ ಭಾಗವಹಿಸಿ ಪುಸ್ತಕ ಪರಿಚಯಗಳನ್ನು ಮಾಡಿಕೊಟ್ಟ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ.

- Advertisement -

ಮಲ್ಲಿಕಾರ್ಜುನ ಹುಲಗಬಾಳಿ ಅವರ ನೆನಪಿನ ಬುತ್ತಿ ವಿಸ್ತಾರವಾದುದು. ಶ್ರೀಗಳೊಂದಿಗೆ ಮಾತನಾಡಿದ ಪ್ರತಿಯೊಂದು ಸಂಗತಿಗಳನ್ನು ತುಂಬ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. ಒಂದು ದಿನ ಶ್ರೀಗಳಿಗೆ “ಅಜ್ಜಾರ, ತಾವು ಈ ಮಠದ ಪೀಠಕ್ಕ ಬಂದ ದಿನಾನೇ(೨೯ ಜುಲೈ ೧೯೭೪), ನಾನೂ ನೌಕರಿ ಸುರುಮಾಡೇನ್ರಿ’ ಅಂದೆ. ಪೂರ್ವನಿರ್ಧರಿತ ಎಂಬಂತೆ, ನಾನು ಅದೇ ದಿನ ಉಪನ್ಯಾಸಕ ವೃತ್ತಿ ಪ್ರಾರಂಭಿಸುವಂತಾಗಿತ್ತು. ಆಗ ಪೂಜ್ಯರು, ನನ್ನದೂ ಮತ್ತು ನಿಮ್ಮದು ಒಂದೇ ಉದ್ಯೋರ‍್ಯಪಾ, ನೀವು ಕಾಲೇಜದೊಳಗ ಮಕ್ಕಳಿಗೆ ಬೋಧನಾ ಮಾಡ್ತಿರಿ, ನಾನು ಮಠದಾಗ ಅದೇ ಕೆಲಸಾ ಭಕ್ತರ ಮುಂದೆ ಮಾಡ್ತಿನಿ, ಅಷ್ಟೆ’ ಎಂದು ಮುಗುಳ್ನಗೆ ಬೀರಿದರು. ತಾವು ಒಂದು ಸಂಸ್ಥಾನಮಠದ ಜಗದ್ಗುರುಗಳೆಂಬ ಹಮ್ಮು ಅವರಿಗೆ ಒಂದಿನೀತೂ ಇರಲಿಲ್ಲ.”(ಪು. ೭೨)

ಕೃತಿಯುದ್ದಕ್ಕೂ ಶ್ರೀಗಳ ಕ್ರಾಂತಿಕಾರಿ ಭಾಷಣ, ಅವರ ವಿಚಾರಗಳನ್ನು ತುಂಬ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. ಗೋಕಾಕ ಚಳುವಳಿಗೆ ಶ್ರೀಗಳು ಮಾಡಿದ ಭಾಷಣವೇ ಕಾರಣವೆಂಬುದನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ತಮ್ಮ ಆತ್ಮೀಯ ಪ್ರಾಧ್ಯಾಪಕ ಗೆಳೆಯರಿಗೆ ಆಡಳಿತ ಮಂಡಳಿಯವರು ನೀಡಿದ ಕಿರುಕಳಕ್ಕೆ ಪ್ರತಿಯಾಗಿ ಅಧ್ಯಾಪಕರಿಗೆ ಬೆಂಬಲವಾಗಿ ನಿಂತ ಶ್ರೀಗಳ ಅಂತಃಕರಣದ ಮಾನವೀಯ ಗುಣವನ್ನು ಎತ್ತಿ ತೋರಿದ್ದಾರೆ. ಕವಿ-ಸಾಹಿತಿಗಳ ಬಗ್ಗೆ ಶ್ರೀಗಳಿಗೆ ಇದ್ದ ಕಾಳಜಿ, ಪ್ರೀತಿಯ ಘಟನೆಗಳನ್ನು ವಿವರಿಸಿದ್ದಾರೆ. ದು.ನಿಂ.ಬೆಳಗಲಿ, ಬ.ಗಿ.ಯಲ್ಲಟ್ಟಿ ಮೊದಲಾದ ವಿದ್ವಾಂಸರಿಗೆ ಬೆನ್ನಹಿಂದಿನ ಶಕ್ತಿಯಾಗಿ ಶ್ರೀಗಳು ನಿಂತಿರುವ ವಿಷಯಗಳು ಇಲ್ಲಿವೆ.

ಒಟ್ಟಾರೆ, ನಾಲ್ಕು ದಶಕಗಳ ಕಾಲ ಶ್ರೀಗಳ ಬಗೆಗಿನ ತಮ್ಮ ಒಡನಾಟದ ಸಮಸ್ತ ಕ್ಷಣಗಳನ್ನು ಅತ್ಯಂತ ವಸ್ತುನಿಷ್ಠವಾಗಿ ಮಲ್ಲಿಕಾರ್ಜುನ ಹುಲಗಬಾಳಿ ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಜಯವಂತ ಕಾಡದೇವರ ಮುನ್ನುಡಿ ಕಬ್ಬಿಗೆ ಜೇನಿಟ್ಟಂತಾಗಿದೆ.‌‌ ಅನುಬಂಧದಲ್ಲಿ ಶ್ರೀಗಳ ಆಪ್ತ ಬಳಗದ ಶಿವನಗೌಡ ಗೌಡರ, ಶಶಿಧರ ತೋಡಕರ ಲಲಿತಾ ಹೊಸಪ್ಯಾಟಿ ಮೊದಲಾದವರ ಬರಹಗಳು ಅತ್ಯಂತ ಭಾವಪೂರ್ಣವಾಗಿವೆ. ಹುಲಗಬಾಳಿ ಸರ್ ಅವರು ನನ್ನಿಂದಲೂ ಒಂದು ಲೇಖನವನ್ನು ಬರೆಸಿ, ತಮ್ಮ ಕೃತಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತಾಪೂರ್ವಕ ಶರಣುಗಳನ್ನು ಸಲ್ಲಿಸುವೆ. ಒಟ್ಟಾರೆ ಗದುಗಿನ ಜಗದ್ಗುರು ಮಹಾಸನ್ನಿಧಿಯವರ ಕುರಿತು ಪ್ರಕಟವಾದ ಮೌಲಿಕ ಗ್ರಂಥಗಳಲ್ಲಿ ಇದೂ ಒಂದು. ಇಂತಹ ಮಹತ್ವದ ಕೃತಿ ರಚಿಸಿದ ಹುಲಗಬಾಳಿ ಸರ್ ಅವರಿಗೆ ವಂದನೆ ಅಭಿನಂದನೆಗಳು


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group