Homeಸುದ್ದಿಗಳುಪುಸ್ತಕ ಪರಿಚಯ

ಪುಸ್ತಕ ಪರಿಚಯ

ಪುಸ್ತಕದ ಹೆಸರು :- “ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ”

ಲೇಖಕರು :- ಮುರುಗೇಶ ಸಂಗಮ
(೯೪೪೯೪೩೭೬೦೪)
ಬೆಲೆ :- ೧೧೦

ನಮ್ಮ ಜ್ಞಾನ ವಿಸ್ತರವಾಗಬೇಕಾದರೆ ಪುಸ್ತಕ ಓದುವ ಹವ್ಯಾಸ ತೊಡಗಿಸಿಕೊಳ್ಳಬೇಕು. ಇದರಿಂದ ಪ್ರಪಂಚದ ಮತ್ತು ನಮ್ಮ ಸುತ್ತಮುತ್ತಲಿನ ವಿಷಯ ತಿಳಿಯುತ್ತದೆ. ಕಣ್ಣುಗಳು ಚಿಕ್ಕದಾಗಿದ್ದರೂ ಇಡೀ ಲೋಕವನ್ನೆಲ್ಲ ನೋಡುವ ಹಾಗೂ ಅನುಭವ ಪಡೆಯುತ್ತದೆ. ಹಾಗೇ “ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ” ಪುಸ್ತಕ ಓದಿದರೆ ಬಸವಣ್ಣನವರ ಹುಟ್ಟು ಹಾಗೂ ಅವರ ಜೀವನವನ್ನು ಲಿಖಿತˌ ಮತ್ತು ಮೌಲಿಕ ಮಾಹಿತಿಯೊಂದಿಗೆ ಚಿಕ್ಕದಾಗಿ ಚೊಕ್ಕವಾಗಿ ಆಧಾರಸಹಿತವಾಗಿ ನೀಡಿರುವುದು ಈ ಗ್ರಂಥದ ವಿಶೇಷವಾಗಿದೆ .

ಬಸವನಬಾಗೇವಾಡಿಯಲ್ಲಿರುವ ಬಸವಣ್ಣನವರ ಜನ್ಮಸ್ಥಳದಲ್ಲಿ ಬಸವ ಜನ್ಮಸ್ಮಾರಕ ನಿರ್ಮಾಣದ ಪ್ರಯತ್ನ ಮತ್ತು ಹೋರಾಟದ ಮಜಲುಗಳ ಬಗ್ಗೆ ವಿಸ್ತೃತ ವಿವರಗಳನ್ನೊಳಗೊಂಡ ಹೊತ್ತಿಗೆ ಓದುಗರ ಮನಮುಟ್ಟುತ್ತದೆ. ಪಟ್ಟಣದ ಇತಿಹಾಸ ಹಾಗೂ ಬಸವೇಶ್ವರರ ಜೀವನ ಚರಿತ್ರೆಯನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ ಲೇಖಕರು.

ಶ್ರೀ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಪರಿಶ್ರಮಿಸಿದವರಲ್ಲಿ ಅಗ್ರಗಣ್ಯರಾಗಿರುವ ದಿ.ರಾವಸಾಹೇಬ ಮಲ್ಲಪ್ಪ ಸಿಂಹಾಸನ ಅವರ ಪರಿಶ್ರಮ ಮೆಚ್ಚುವಂತದ್ದು. ಅವರ ಅನುಪಮ ಸೇವೆಯನ್ನು ಮನದುಂಬಿ ಸ್ಮರಿಸಿದ್ದಾರೆ ಲೇಖಕರು. ಅಂತಹ ಮೇರು ವ್ಯಕ್ತಿಗಳಾದ ಸಿಂಹಾಸನರ ಅನನ್ಯ ಸೇವೆ ಇಲ್ಲಿ ಸ್ಮರಣೀಯ. ಅಂದು ಕಲ್ಲು ಮಣ್ಣುಗಳಿಂದ ಕೂಡಿದ ದೇವಸ್ಥಾನ ಈಗ ಗ್ರಾನೈಟ್ ಕಲ್ಲುಗಳಿಂದ ಪುನರುಜ್ಜೀವನಗೊಂಡು ಕಂಗೊಳಿಸುತ್ತಿದೆ. ಹೀಗಾಗಿ ಈ ಪುಸ್ತಕದಿಂದ ಓದುಗರಿಗೆ ವಾಸ್ತವ ಸಂಗತಿ ತಿಳಿಯುವಂತಾಗಿರುವುದು ಸಂತಸದ ಸಂಗತಿ.
ಈ ಗ್ರಂಥದಲ್ಲಿ ಲೇಖಕರು ಪ್ರತಿಯೊಬ್ಬರ ಶಾಘ್ಲನೀಯ ಕಾರ್ಯದಕ್ಷತೆಯ ಬಗ್ಗೆ ಬರೆದಿದ್ದಾರೆ.

ಅಳಿವಿನಂಚಿನಲ್ಲಿರುವ ಬಸವ ಜನ್ಮಸ್ಥಳದಲ್ಲಿ ಸ್ಮಾರಕ ನಿರ್ಮಾಣದ ಕೆಲಸವನ್ನು ಐ.ಎ.ಎಸ್ ಅಧಿಕಾರಿಗಳಾಗಿದ್ದ ಡಾ. ಎಸ್.ಎಂ. ಜಾಮದಾರ ಅವರ ಕಾರ್ಯಕ್ಷಮತೆಯಲ್ಲಿ ಚಿರಸ್ಥಾಯಿ ಕಟ್ಟಡವಾಗಿ ಲೋಕ ಸಮರ್ಪಣೆಯಾಯಿತು. ಈ ಸ್ಮಾರಕದಲ್ಲಿ ಬಸವೇಶ್ವರರ ಜನನದಿಂದ ಹಿಡಿದು ಐಕ್ಯದವರೆಗಿನ ಚಿತ್ರಮಾಹಿತಿ ಇರುವುದು ವಿಶಿಷ್ಟವೆನಿಸುತ್ತದೆ.

ಬಸವಣ್ಣನವರ ಇತಿಹಾಸ ದಾಖಲೆಗಳನ್ನು ದಾಖಲಿಸಿ ಬರೆದ ಅನೇಕ ಲೇಖಕರು, ಸಂಶೋಧಕರು ಇತಿಹಾಸಕರರು ನೀಡಿರುವ ಮಾಹಿತಿಗಿಂತಲೂ ಈ ಗ್ರಂಥ ವಿಭಿನ್ನವಾಗಿದ್ದು ˌ ಪುರಾಣˌ ಮಹಾಕಾವ್ಯಗಳಲ್ಲಿನ ಉಲ್ಲೇಖಗಳೂ ಇದರಲ್ಲಿವೆ. ಇದರ ಜೊತೆ ಬಸವನಬಾಗೇವಾಡಿ ಪಟ್ಟಣದಿಂದ ಅಣತಿ ದೂರದಲ್ಲಿರುವ ಹೋರಿಮಟ್ಟಿಗುಡ್ಡದ ಹಿನ್ನೆಲೆಯನ್ನೂ ಸಹ ಸುಂದರವಾಗಿ ವರ್ಣಿಸಿದ್ದಾರೆ. ಈ ಗುಡ್ಡದ ಜಾತ್ರೆ, ಶ್ರಾವಣಮಾಸದಲ್ಲಿ ಅದ್ದೂರಿಯಾಗಿ ಆಚರಣೆಯಾಗುತ್ತದೆ. ವರುಷದ ಬಸವಣ್ಣನ ಹೇಳಿಕೆ ಕೇಳಲು ಅನೇಕ ಕಡೆಗಳಿಂದ ಜನರು ಬರುವುದು ವಾಡಿಕೆ. ಹಾಗೆಯೆ ಪ್ರಕೃತಿಯ ವಿಹಂಗಮ ನೋಟದ ರಮಣೀಯತೆಯ ಕುರಿತು ಓದಿದಾಗ ಆ ಸ್ಥಳವನ್ನೊಮ್ಮೆ ನೋಡಬೇಕೆಂಬ ಕುತೂಹಲ ಹೆಚ್ಚುತ್ತದೆ.

ಒಟ್ಟಾರೆ ಹೇಳಬೇಕೆಂದರೆ ಅನೇಕರು ಬಸವಣ್ಣನವರ ಬಗ್ಗೆ ಬರೆದಿದ್ದರೂ ಈ ಹೊತ್ತಿಗೆ ಆಕಾಶದ ನಕ್ಷತ್ರದಂತೆ ಮಿನುಗಿ ತನ್ನ ವೈಭವತೆಯನ್ನು ಹೊಂದಿರುವಂತೆ ಈ ಪುಸ್ತಕವು ಸಹ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ ಮತ್ತು ಅಮೂಲ್ಯವಾದ ಕೊಡುಗೆ ನೀಡುವ ಮೂಲಕ ಒಂದು ಆಕರ ಗ್ರಂಥವಾಗಿದೆ ಅಲ್ಲದೆ ಸಂಗ್ರಹ ಯೋಗ್ಯವಾಗಿದೆ. ಬಸವೇಶ್ವರರ ಜನ್ಮ ಹಾಗೂ ಅವರ ಜೀವನ ಚರಿತ್ರೆ ಮೇಲೆ ಹೊಸ ಬೆಳಕು ಚೆಲ್ಲಿದˌ ಉಪಯುಕ್ತವಾದ ಇತಿಹಾಸ ಹೊಂದಿರುವ ಸಂಶೋಧನಾ ಸ್ವರೂಪದ ಈ ಗ್ರಂಥ ಅಧ್ಯಯನನಿರತರಿಗೆ ಅಮೂಲ್ಯವಾದ ಪುಸ್ತಕ. ಈ ಕೃತಿ ಓದಿದರೆ ಸಾಕು ಬಸವೇಶ್ವರರು ಹಾಗೂ ಅವರ ಜನ್ಮಸ್ಥಳದ ಪೂರ್ಣ ಪರಿಚಯ ಲಭಿಸುತ್ತದೆ.
ಯಾರಿಗಾದರೂ ಈ ಕೃತಿ ಬೇಕಾದಲ್ಲಿ ಲೇಖಕರ ಜಂಗಮವಾಣಿಯನ್ನು ಸಂಪರ್ಕಿಸಬಹುದು.

ಇನ್ನು ಲೇಖಕರ ಬಗ್ಗೆ ಕಿರುಪರಿಚಯವೆಂದರೆ
ಬಸವನಬಾಗೇವಾಡಿಯ ಮುರುಗೇಶ ಸಂಗಮ ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಗ್ರಂಥಾಲಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದುˌ ಅದರ ಜೊತೆಗೇ ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಮೊದಲ ಕವನ ಸಂಕಲನ ಸಮ್ಮಿಲನ 2003ರಲ್ಲಿ ಲೋಕಾರ್ಪಣೆಗೊಂಡಿದ್ದುˌ ಹಿರಿಯ ಸಾಹಿತಿಗಳ ಮೆಚ್ಚುಗೆ ಗಳಿಸಿದೆ. ಉದಯ ರವಿ ಏಕಾಂಕ ನಾಟಕˌ ನ್ಯಾಯದ ತಕ್ಕಡಿ ಸಾಮಾಜಿಕ ನಾಟಕಗಳನ್ನು ರಚಿಸಿರುವ ಇವರ ಹನಿಹರವಿ ಚುಟುಕು ಸಂಕಲನˌ ಮುಸ್ಸಂಜೆ ಕವನ ಸಂಕಲನ ಪ್ರಕಟಣೆಗೆ ಸಿದ್ಧಗೊಂಡಿವೆ. 2023ರಲ್ಲಿ ಬಿಡುಗಡೆಯಾದ ಇವರ “ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ” ಕೃತಿ ಓದುಗರ ಪ್ರಶಂಸೆಗೆ ಪಾತ್ರವಾಗಿದೆ.

ಈಗಾಗಲೆ ರಾಜ್ಯ ಮತ್ತು ರಾಷ್ರ್ಟಮಟ್ಟದ ಪ್ರಶಸ್ತಿಗಳು ಲೇಖಕರ ಮುಡಿಗೇರಿವೆ. ಬಸವ ಜನ್ಮಭೂಮಿ ಪ್ರತಿಷ್ಠಾನ ಸ್ಥಾಪಿಸಿˌ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸುವುದರ ಜೊತೆಗೆ ಎಲೆಮರೆ ಕಾಯಿಯಂತೆ ಇರುವ ಸಾಧಕರ ಸೇವೆಯನ್ನು ಗುರುತಿಸಿ ಸತ್ಕರಿಸುವುದು ಶ್ಲಾಘನೀಯವಾದ ಕಾರ್ಯವಾಗಿದೆ. ಇವರು ಕನ್ನಡಮ್ಮನ ಸೇವೆಯಲ್ಲಿ ನಿರತರಾಗಿ ಸಾಹಿತ್ಯ ಸರಸ್ವತಿಯ ಆರಾಧಕರಾಗಿದ್ದಾರೆ.

ಇವರ ಕತೆˌ ಕವನˌ ಲೇಖನಗಳು ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ˌ ಧಾರವಾಡ ಆಕಾಶವಾಣಿಯಿಂದ ಕವನˌ ಭಾಷಣ ಭಿತ್ತರವಾಗಿವೆ. ಚಂದನ ದೂರದರ್ಶನ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದು.

✍️ ಪ್ರಿಯಾ ಪ್ರಾಣೇಶ ಹರಿದಾಸ
ವಿಜಯಪುರ

RELATED ARTICLES

Most Popular

error: Content is protected !!
Join WhatsApp Group