spot_img
spot_img

ಹೊಸ ಪುಸ್ತಕ ಓದು: ವಚನ ಸಾಹಿತ್ಯ ಅಧ್ಯಯನ ಪರಂಪರೆ (ಪಿಎಚ್.ಡಿ. ಮಹಾಪ್ರಬಂಧ)

Must Read

ವಚನ ಸಾಹಿತ್ಯ ಅಧ್ಯಯನ ಪರಂಪರೆ (ಪಿಎಚ್.ಡಿ. ಮಹಾಪ್ರಬಂಧ)

ಲೇಖಕರು: ಡಾ. ಬಸವನಗೌಡ ಬಿರಾದಾರ
ಲೇಖಕರ ಮೊ: 8660657526

ಆತ್ಮೀಯರಾದ ಡಾ. ಬಿ. ಎಸ್. ಬಿರಾದಾರ ಅವರು ನಮ್ಮ ದಿನಮಾನದ ಯುವ ವಿದ್ವಾಂಸರಲ್ಲಿ ಒಬ್ಬರು. ವಚನ ಸಾಹಿತ್ಯವನ್ನು ಆಳವಾಗಿ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರು. ಕಳೆದ ಎರಡು ದಶಕಗಳಿಂದ ಅವರನ್ನು ತುಂಬ ಸಮೀಪದಿಂದ ನಾನು ನೋಡುತ್ತ ಬಂದವನು. ಹಾಗೇ ನೋಡಿದರೆ ನಾವಿಬ್ಬರೂ ಸಮಾನ ಮನಸ್ಕರು. ಅವರ ವಿದ್ಯಾಗುರುಗಳಾದ ಡಾ. ಬಿ. ಆರ್. ಹಿರೇಮಠ ಅವರು ನನ್ನನ್ನು ಒಬ್ಬ ಶಿಷ್ಯನಂತೆ ಕಂಡವರು. ನನ್ನ ಸಾಹಿತ್ಯಿಕ ಬೆಳವಣಿಗೆಯಲ್ಲಿ ಮಾರ್ಗದರ್ಶನ ಮಾಡಿದವರು. ಹೀಗಾಗಿ ಬಿ. ಆರ್. ಹಿರೇಮಠ ಅವರ ಜೀವನದ ಕೊನೆಯ ಘಟ್ಟದಲ್ಲಿ ಡಾ. ಬಿ. ಎಸ್. ಬಿರಾದಾರ ಅವರು ಶಿಷ್ಯರಾದುದು, ನಾನು ಅವರ ಸಂಪರ್ಕಕ್ಕೆ ಬಂದುದು ಒಂದು ಯೋಗಾಯೋಗ. ಗುಣಗ್ರಾಹಿಗಳಾಗಿದ್ದ ಡಾ. ಬಿ. ಆರ್. ಹಿರೇಮಠ ಅವರು ನಮ್ಮಂಥ ಯುವಕರಲ್ಲಿ ವಚನ ಸಾಹಿತ್ಯದ ಬಗೆಗೆ ಪ್ರೀತಿ ಒಡಮೂಡುವಂತೆ ಮಾಡಿದರು.

ಹೀಗಾಗಿ ನಮ್ಮಿಬ್ಬರ ಮೇಲೆ ಬಿ. ಆರ್. ಅವರ ಪ್ರಭಾವ ಆಗಿದೆ. ಡಾ. ಬಿರಾದಾರ ಅವರಂತೂ ಸರ್ ಅವರ ಮಾರ್ಗದರ್ಶನದಲ್ಲಿ “ವಚನ ಸಾಹಿತ್ಯ ಅಧ್ಯಯನ ಮತ್ತು ಪ್ರಕಟಣೆ ಪರಂಪರೆ” ಎಂಬ ವಿಷಯ ಕುರಿತು ಆಳವಾಗಿ ಅಧ್ಯಯನ ಮಾಡಿ ಕರ್ನಾಟಕ ವಿಶ್ವವಿದ್ಯಾಲಯದಿಂದ ೨೦೦೬ರಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದುಕೊಂಡರು.

ಡಾ. ಬಿ. ಎಸ್. ಬಿರಾದಾರ ಅವರು ತಮ್ಮ ಪಿಎಚ್.ಡಿ. ಪದವಿಯನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸುತ್ತಿರುವುದು ಅದರ ಗುಣ-ಗಾತ್ರಕ್ಕೆ ನಿದರ್ಶನವೆನಿಸಿದೆ. ೬೦೦ ಪುಟಗಳನ್ನೂ ಮಿಕ್ಕಿದ ಈ ಮಹಾಪ್ರಬಂಧ ನಿಜವಾಗಿಯೂ ಇತ್ತೀಚಿನ ಒಂದು ಮಹತ್ವದ ಒಂದು ಶೋಧ ಕೃತಿಯಾಗಿದೆ. ಈ ಮಹಾಪ್ರಬಂಧದ ಒಂದು ಭಾಗವಾಗಿ ಪ್ರಕಟವಾಗುತ್ತಿರುವ “ವಚನ ಸಾಹಿತ್ಯ ಅಧ್ಯಯನ ಪರಂಪರೆ” ಹಲವು ದೃಷ್ಟಿಕೋನಗಳಿಂದ ಅತ್ಯಂತ ಮಹತ್ವದ ಕೃತಿಯಾಗಿದೆ.

ಏಳು ಅಧ್ಯಾಯಗಳಲ್ಲಿ ವಿಸ್ತಾರಗೊಂಡಿರುವ ಈ ಕೃತಿ, ವಚನ ಸಾಹಿತ್ಯದ ಕುರಿತು ಈ ವರೆಗೆ ನಡೆದ ಅಧ್ಯಯನ ಪರಂಪರೆಯ ಒಟ್ಟು ಇತಿಹಾಸವನ್ನು ಕಟ್ಟಿಕೊಡುತ್ತದೆ. ಮೊದಲ ಅಧ್ಯಾಯ ಪ್ರಸ್ತಾವನೆಯಲ್ಲಿ ಈ ಅಧ್ಯಯನ ಪರಂಪರೆ ಸಾಗಿ ಬಂದ ದಾರಿಯನ್ನು ಕುರಿತು ಗಂಭೀರವಾದ ಕೆಲವು ಒಳನೋಟಗಳನ್ನು ಕೊಟ್ಟಿದ್ದಾರೆ. ‘ಅಧ್ಯಯನ ಪರಂಪರೆ’ ದೃಷ್ಟಿಯಿಂದ ಈ ವರೆಗೂ ಯಾರೂ ಅಧ್ಯಯನ ಮಾಡದ ಸಂಗತಿಯನ್ನು ಎಲ್ಲ ಆಕರಗಳನ್ನು ಪರಿಶೀಲಿಸಿ ತಿಳಿಸುತ್ತ, ವೀರಣ್ಣ ರಾಜೂರ ಅವರ ಒಂದು ಲೇಖನ ಹೊರತು ಪಡಿಸಿ, ಯಾವುದೇ ಬರೆಹ ಈ ವಿಷಯದಲ್ಲಿ ನಡೆಯದಿರುವುದನ್ನು ಗಮನಿಸಿ, ಈ ಅಧ್ಯಯನಕ್ಕೆ ಮುಂದಾಗಿರುವ ಸಂಗತಿಯನ್ನು ಅತ್ಯಂತ ವಿನಮ್ರಭಾವದಿಂದ ಹೇಳುತ್ತಾರೆ.

ಎರಡನೆಯ ಅಧ್ಯಾಯದಲ್ಲಿ ವಚನ ಸಾಹಿತ್ಯದ ಸ್ವರೂಪ-ಉಗಮ-ಮಹತ್ವ ಕುರಿತು ಚರ್ಚಿಸಿದ್ದಾರೆ. ವಚನ ಸಾಹಿತ್ಯದ ಸ್ವರೂಪ ಮತ್ತು ಉಗಮದ ಕುರಿತು ವಿದ್ವಾಂಸರಲ್ಲಿ ಇಂದಿಗೂ ಭಿನ್ನಾಭಿಪ್ರಾಯಗಳಿವೆ. ಹೀಗಿದ್ದೂ ಡಾ. ಬಿರಾದಾರ ಅವರು ಈ ಎಲ್ಲ ವಿದ್ವಜ್ಜನರ ಅಭಿಪ್ರಾಯಗಳನ್ನು ಸೂಕ್ಷ್ಮವಾಗಿ ಗಮನಿಸಿ, ತಮ್ಮದೇ ಆದ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಜೇಡರ ದಾಸಿಮಯ್ಯನವರೇ ಆದ್ಯ ವಚನಕಾರ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಸಂಶೋಧನೆಯೆನ್ನುವುದು ಅಲ್ಪವಿರಾಮದಿಂದ ಪೂರ್ಣವಿರಾಮದೆಡೆಗೆ ಸಾಗುವ ಕ್ರಿಯೆಯೆಂದು ವಿದ್ವಾಂಸರು ಹೇಳುತ್ತಾರೆ. ಇಂದು ಮಂಡಿಸಲ್ಪಟ್ಟ ಅಭಿಪ್ರಾಯಗಳು ಮುಂದೆ ಬದಲಾಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ಹೀಗಿರುವಾಗ ತತ್ಕಾಲೀನ ಅಭಿಪ್ರಾಯವೂ ಅಷ್ಟೇ ಮಹತ್ವದ್ದು. ಡಾ. ಬಿರಾದಾರ ಅವರ ಪಿಎಚ್.ಡಿ. ಮುಗಿಯುವವರೆಗೂ ಜೇಡರ ದಾಸಿಮಯ್ಯನವರೇ ಆದ್ಯ ವಚನಕಾರ ಎಂಬ ನಿಲುವನ್ನು ಬಹುತೇಕ ಎಲ್ಲ ವಿದ್ವಾಂಸರೂ ಒಪ್ಪಿಕೊಂಡಿದ್ದರು. ಆದರೆ ೨೦೧೫ರಲ್ಲಿ ಡಾ. ಎಂ. ಚಿದಾನಂದಮೂರ್ತಿಯವರು ‘ದೇವರ ದಾಸಿಮಯ್ಯ-ಜೇಡರ ದಾಸಿಮಯ್ಯ’ ಎಂಬ ಪುಸ್ತಕದಲ್ಲಿ ಅವರಿಬ್ಬರೂ ಬೇರೆ-ಬೇರೆ. ಜೇಡರ ದಾಸಿಮಯ್ಯ ವಚನಗಳನ್ನು ರಚಿಸಿದವನು. ಆತ ಬಸವಣ್ಣನವರ ಸಮಕಾಲೀನ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಚಿದಾನಂದಮೂರ್ತಿ ಅವರ ಅಭಿಪ್ರಾಯವನ್ನು ಡಾ. ಎಂ. ಎಂ. ಕಲಬುರ್ಗಿ ಅವರೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈಗ ದಾಸಿಮಯ್ಯ ಆದ್ಯ ವಚನಕಾರ ಎಂಬ ವಾದ ಬಿದ್ದು ಹೋಗುತ್ತದೆ.

ವಚನಕಾರರ ವಚನಗಳಿಗೆ ಹೆಚ್ಚು ಮಹತ್ವ ಬಂದಿದ್ದು ಅವರ ವಚನಾಂಕಿತಗಳಿAದ. ವಚನಾಂಕಿತಗಳ ವಿಷಯವಾಗಿ ಡಾ. ಬಿರಾದಾರ ಅವರು ತಮ್ಮ ಈ ಕೃತಿಯಲ್ಲಿ ಹೊಸಬೆಳಕು ಚೆಲ್ಲಿದ್ದಾರೆ. ವಚನಾಂಕಿತಗಳನ್ನು ಬಳಸುವುದರ ಔಚಿತ್ಯವೇನು ಎಂಬುದನ್ನು ಸಾದಾರಪೂರ್ವಕ ವಿವರಿಸಿದ್ದಾರೆ.

ಮೂರನೆಯ ಅಧ್ಯಾಯದಲ್ಲಿ ವಚನ ಸಾಹಿತ್ಯದ ಧಾರ್ಮಿಕ ನೆಲೆಯ ಅಧ್ಯಯನ ಸಾಗಿದೆ. ಲಿಂಗಾಯತ ಮಠಗಳ-ಮಠಾಧೀಶರ ಸುಪರ್ದಿಯಲ್ಲಿ ಉಳಿದು ಬಂದ ವಚನ ಸಾಹಿತ್ಯವನ್ನು ಮುಖ್ಯವಾಗಿ ಪರಿಗಣಿಸಿದ್ದು ಧಾರ್ಮಿಕ ಪಠ್ಯವಾಗಿಯೇ. ವಚನಗಳೆಂದರೆ ವೇದ-ಆಗಮ-ಉಪನಿಷತ್ತುಗಳಂತೆ ಧಾರ್ಮಿಕ ವಿಚಾರಗಳನ್ನು ಪ್ರತಿಪಾದಿಸುವ ಸಾಹಿತ್ಯವೆಂದೇ ಗುರುತಿಸಲಾಗಿತ್ತು. ಹೀಗಾಗಿ ಧಾರ್ಮಿಕ ನೆಲೆಯ ಅಧ್ಯಯನವೇ ಹೆಚ್ಚು ನಡೆದದ್ದು ಗಮನಿಸುವ ಅಂಶ. ಈ ವಿಷಯವಾಗಿ ಡಾ. ಬಿರಾದಾರ ಅವರು ನೀಡಿರುವ ನಿರ್ಣಾಯಕ ನುಡಿಗಳು ತುಂಬ ಗಮನಾರ್ಹವಾಗಿವೆ-

ಧಾರ್ಮಿಕ ನೆಲೆಯಲ್ಲಿ ನಡೆದ ಅಧ್ಯಯನದಿಂದ ಕಂಡುಬರುವ ಸಂಗತಿಯೆAದರೆ ಕೆಲವರು ಸಾಂಪ್ರದಾಯಕವಾಗಿ ಸಮೀಕ್ಷಾ ಮಾದರಿಯಲ್ಲಿ ವಿವೇಚಿಸಿದ್ದಾರೆ. ಇನ್ನು ಕೆಲವರು ಶರಣರ ವಿಚಾರಗಳಲ್ಲಿರುವ ಹಲವು ನೂತನ ಸಂಗತಿಗಳನ್ನು ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಯಾವ ರೀತಿಯಲ್ಲಿ ಅಧ್ಯಯನ ಮಾಡಿದರೂ ಪ್ರಾಚೀನ ವೇದ, ಆಗಮ, ಉಪನಿಷತ್ತುಗಳನ್ನು ಬುನಾದಿಯಾಗಿ ಇಟ್ಟುಕೊಂಡು ಸಾಂಪ್ರದಾಯಿಕ ಸಿದ್ಧಾಂತಕ್ಕೆ ಶರಣರು ಹೇಗೆ ಸ್ಪಂದಿಸಿದರು, ಅವರು ಅದನ್ನೇ ಹೇಗೆ ಮುಂದುವರಿಸಿದರು ಎಂಬುದನ್ನು ಹಲವರು ಚರ್ಚಿಸಿದ್ದಾರೆ. ಒಂದು ಮಾತಂತೂ ಸ್ಪಷ್ಟ, ಇತರ ನೆಲೆಯಲ್ಲಿ ಹೇಗೆ ಇರಲಿ ಧಾರ್ಮಿಕ ನೆಲೆಯಲ್ಲಿ ಮಾತ್ರ ಶರಣರು ಪೂರ್ವದ ಮೀಮಾಂಸೆಗೆ ಸ್ವಲ್ಪಮಟ್ಟಿಗಾದರೂ ಋಣಿಯಾಗಿದ್ದಾರೆ ಎಂದೇ ಹೇಳಬೇಕು. ಕೆಲವು ಸಂದರ್ಭಗಳಲ್ಲಿ ಹಳೆಯದಕ್ಕೆ ಒಪ್ಪಿತವಾಗದಿದ್ದರೆ ಅದನ್ನು ಟೀಕಿಸಿದ್ದಾರೆ. ಸರ್ವಾದರಣೀಯವಾಗಿದ್ದರೆ ಅದನ್ನು ಗೌರವಪೂರ್ವಕವಾಗಿ ಸ್ವೀಕರಿಸಿದ್ದಾರೆ. ಶರಣರು ಮುಖ್ಯವಾಗಿ ಅನುಭಾವಿಗಳು.

ತಮ್ಮ ಸತ್ಯಶೋಧನಾ ನೆಲೆಯಿಂದ ಎಲ್ಲವನ್ನು ಸತ್ಯದ ಓರೆಗಲ್ಲಿಗೆ ಹಚ್ಚಿ, ಉಜ್ಜಿ ನೋಡಿದರು. ಸತ್ಯವಾದದನ್ನು ಪುರಸ್ಕರಿಸಿದರು, ಅನ್ಯಾಯದಿಂದ ಕೂಡಿರುವುದನ್ನು ಕಟುವಾಗಿ ಟೀಕಿಸಿದರು. ಕೇವಲ ಸಿದ್ಧಾಂತ ರೂಪದಲ್ಲಿದ್ದ ಧರ್ಮವನ್ನು ಸ್ವತಹ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದಕ್ಕೆ ಪ್ರಾಯೋಗಿಕ ರೂಪವನ್ನು ಕೊಟ್ಟು ನಿತ್ಯನೂತನವನ್ನಾಗಿಸಿದರು. ಸಾರ್ವಕಾಲಿಕವೂ ಸರ್ವಾದರಣೀವು ಆಗುವಂತೆ ಮಾಡಿದರು. ಇದು ಶರಣರ ನಿಜವಾದ ಸಾಧನೆ.” ಡಾ. ಬಿರಾದಾರ ಅವರ ಈ ನುಡಿಗಳ ಅವರ ಅಧ್ಯಯನಶ್ರದ್ಧೆಗೆ-ನಿಶ್ಚಿತ ನಿಲುವಿಗೆ ಸಾಕ್ಷಿಯಾಗಿವೆ.

ಧಾರ್ಮಿಕತೆಯ ಜೊತೆಗೆ ತಾತ್ವಿಕ ನೆಲೆಯಲ್ಲಿಯೂ ಈವರೆಗೆ ನಡೆದ ಅಧ್ಯಯನವನ್ನು ಡಾ. ಬಿರಾದಾರ ಅವರು ತುಂಬ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ. ಜೀವ-ಜಗತ್ತು-ಈಶ್ವರ-ಮೋಕ್ಷ ಮೊದಲಾದ ತಾತ್ವಿಕ ದೃಷ್ಟಿಯಿಂದ ವಚನಗಳ ನಿಲುವು ಏನು ಎಂಬುದನ್ನು ಕೇವಲ ಬೆರಳಣಿಕೆಯ ವಿದ್ವಾಂಸರು ಅಧ್ಯಯನ ಮಾಡಿದ್ದಾರೆ ಎಂಬುದನ್ನು ಡಾ. ಬಿರಾದಾರ ಅವರು ಇಲ್ಲಿ ಖಚಿತವಾಗಿ ನಿರೂಪಿಸಿದ್ದಾರೆ.

ನಾಲ್ಕನೆಯ ಅಧ್ಯಾಯದಲ್ಲಿ ವಚನ ಸಾಹಿತ್ಯದ ಸಾಮಾಜಿಕ ನೆಲೆಯ ಅಧ್ಯಯನ ಮಾಡಿದ್ದಾರೆ. ವಚನಗಳಲ್ಲಿ ವರ್ಗಭೇದ, ಲಿಂಗಭೇದ ಸ್ತಿçÃಸಮಾನತೆಯ ಅಂಶಗಳು, ಸಮಾಜವಾದಿ ನಿಲುವು ಪ್ರತಿಪಾದಿಸುವ ಕೃತಿಗಳನ್ನು ಲೇಖನಗಳನ್ನು ತಮ್ಮ ಅಧ್ಯಯನದ ತೆಕ್ಕೆಗೆ ತೆಗೆದುಕೊಂಡು ಡಾ. ಬಿರಾದಾರ ಅವರು ಅನೇಕ ಮೌಲಿಕ ವಿಚಾರಗಳನ್ನು ತಿಳಿಸಿದ್ದಾರೆ. ಐದನೆಯ ಅಧ್ಯಾಯದಲ್ಲಿ ಸಾಹಿತ್ಯಿಕ ನೆಲೆಯ ಅಧ್ಯಯನ ಸಾಗಿದೆ. ಮುದ್ರಣಯುಗ ಪ್ರಾರಂಭವಾದ ನಂತರ ವಚನಗಳ ಪ್ರಕಟಣೆ ಶುರುವಾಯಿತು. ಪ್ರಾರಂಭದ ಘಟ್ಟದಲ್ಲಿ ವಚನಗಳನ್ನು ಶಾಸ್ತçವೆಂದು ಪರಿಗಣಿಸಿ ಪ್ರಕಟಿಸಲಾಗುತ್ತಿತ್ತು. ಅಂಬಿಗರ ಚೌಡಯ್ಯನ ವಚನಶಾಸ್ತç, ಡಾ. ಹಳಕಟ್ಟಿಯವರ ವಚನ ಶಾಸ್ತç ಸಾರ, ರಂಗನಾಥ ದಿವಾಕಾರ ಅವರ ವಚನ ಶಾಸ್ತç ರಹಸ್ಯ ಮೊದಲಾದ ಕೃತಿಗಳು ವಚನಗಳನ್ನು ‘ಶಾಸ್ತ್ರ’ ದೃಷ್ಟಿಯಿಂದ ಅಧ್ಯಯನ ಮಾಡಿದ್ದವು. ವಚನಗಳು ಕಾವ್ಯವೋ-ಶಾಸ್ತ್ರವೋ ಎಂಬುದರ ಕುರಿತು ಅನೇಕ ದಶಕಗಳ ಕಾಲ ನಮ್ಮ ವಿದ್ವಾಂಸರಲ್ಲಿ ಚರ್ಚೆ ನಡೆದ ಸಂಗತಿಯನ್ನು ಡಾ. ಬಿರಾದಾರ ಅವರು ಸವಿವವರವಾಗಿ ದಾಖಲಿಸಿದ್ದಾರೆ. ೧೯೬೦ರ ದಶಕದ ನಂತರ, ನವ್ಯ ಚಳುವಳಿ ಘಟ್ಟದಲ್ಲಿ ವಚನಗಳನ್ನು ಸಾಹಿತ್ಯವೆಂದು ಪರಿಗಣಿಸಿ ಅಧ್ಯಯನ ಮಾಡುವ ಪರಂಪರೆ ಪ್ರಾರಂಭವಾಯಿತು. ವಚನಗಳಲ್ಲಿ ಅಡಕವಾಗಿರುವ ಅಲಂಕಾರ-ರಸ-ಭಾಷೆ-ಲಯ-ಶೈಲಿ-ಛಂದಸ್ಸು ಕುರಿತು ಈ ವರೆಗೆ ನಡೆದ ಅಧ್ಯಯನದ ಒಟ್ಟು ಇತಿಹಾಸವನ್ನು ಗುರುತಿಸಿದ್ದಾರೆ. ಡಾ. ಬಿರಾದಾರ ಅವರ ಪಿಎಚ್.ಡಿ. ಅಧ್ಯಯನ ಮುಗಿದ ವರ್ಷವೇ ಗಿರಡ್ಡಿ ಗೋವಿಂದರಾಜು ಅವರ ‘ವಚನ ವಿನ್ಯಾಸ’ ಎಂಬ ಮೌಲಿಕ ಗ್ರಂಥವೊಂದು ಪ್ರಕಟವಾಯಿತು ಎಂಬುದು ಗಮನಿಸುವ ಅಂಶವಾಗಿದೆ.

ಆರನೆಯ ಅಧ್ಯಾಯದಲ್ಲಿ ಇತರೆ ಅಧ್ಯಯನ ನೆಲೆಗಳ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ. ಮುಖ್ಯವಾಗಿ ಆರ್ಥಿಕ ನೆಲೆ, ರಾಜಕೀಯ ನೆಲೆ, ಶೈಕ್ಷಣಿಕ ನೆಲೆ, ಜಾನಪದೀಯ ನೆಲೆ, ಸಂಗೀತ ನೆಲೆ, ತೌಲನಿಕ ನೆಲೆ ಮೊದಲಾದ ವಿಷಯಗಳ ಕುರಿತು ವಸ್ತುನಿಷ್ಠವಾಗಿ ಚಿಂತಿಸಿದ್ದಾರೆ. ತೌಲನಿಕ ನೆಲೆಯಲ್ಲಂತೂ ಧರ್ಮ-ಧರ್ಮಗಳ ನಡುವೆ, ಶರಣರ ಮತ್ತು ಇತರ ದಾರ್ಶನಿಕರ ನಡುವೆ ನಡೆದ ತೌಲನಿಕ ಅಧ್ಯಯನ ಸಮೀಕ್ಷೆಯನ್ನು ಸಮಗ್ರವಾಗಿ ಮಾಡಿದ್ದಾರೆ. ವಚನ ಸಾಹಿತ್ಯ ಕುರಿತು ಪ್ರಕಟವಾದ ಪದಕೋಶ, ಶೂನ್ಯಸಂಪಾದನೆ, ಅನುಭವ ಮಂಟಪ ಮೊದಲಾದ ವಿಷಯಗಳ ಕುರಿತೂ ಡಾ. ಬಿರಾದಾರ ಅವರು ಅನೇಕ ಮಹತ್ವದ ಸಂಗತಿಗಳನ್ನು ದಾಖಲಿಸಿದ್ದಾರೆ.

ಏಳನೆಯ ಅಧ್ಯಾಯ-ಸಮಾರೋಪದಲ್ಲಿ ತಮ್ಮ ಒಟ್ಟು ಅಧ್ಯಯನದ ಫಲಿತಗಳನ್ನು ಕೊಟ್ಟಿದ್ದಾರೆ. ವಚನ ಸಾಹಿತ್ಯ ಅಧ್ಯಯನದ ವಿಷಯವಾಗಿ ಪ್ರಥಮ ಪ್ರಯೋಗಗಳ ಒಂದು ಪಟ್ಟಿಯನ್ನೇ ಕೊಟ್ಟಿರುವುದು ತುಂಬ ಔಚಿತ್ಯಪೂರ್ಣವಾದುದು. ಪ್ರಾಮಾಣಿಕ ಪ್ರಯತ್ನ, ದಣಿವರಿಯದ ದುಡಿಮೆ, ಶ್ರದ್ಧೆ-ನಿಷ್ಠೆ ಶಿಸ್ತುಗಳಿಂದ ತಲಸ್ಪರ್ಶಿಯಾಗಿ ಕರ್ಯಮಾಡುವ ವಿರಳ ವಿದ್ವಾಂಸರಲ್ಲಿ ಡಾ. ಬಿ. ಎಸ್. ಬಿರದಾರ ಅವರೂ ಒಬ್ಬರಾಗಿದ್ದಾರೆ ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಈ ದೃಷ್ಟಿಯಿಂದ ಡಾ. ಬಿರಾದಾರ ಅವರ ಸಂಶೋಧನೆಗೆ ಅಧಿಕೃತತೆ, ವ್ಯಾಪಕತೆ ಹಾಗೂ ವೈವಿಧ್ಯತೆ ಸಂಪ್ರಾಪ್ತವಾಗಿದೆ. ಆದುದರಿಂದ ಕನ್ನಡದಲ್ಲಿ ಇಂಥ ಗ್ರಂಥಗಳು ರಚನೆಯಾದಷ್ಟೂ ಕನ್ನಡ ಸಂಶೋಧನ ಕ್ಷೇತ್ರ ಹುಲುಸಾಗಿ ಬೆಳೆಯಲು ಸಾಧ್ಯವಾಗುತ್ತದೆ.

ವಸ್ತುನಿಷ್ಠವಾದ ವಿವೇಚನೆ ಈ ಗ್ರಂಥದ ಇನ್ನೊಂದು ವೈಶಿಷ್ಟ್ಯ. ಖಚಿತತೆ, ಅಧಿಕೃತತೆಗಳು ಈ ಗ್ರಂಥದ ಮೂಲದ್ರವ್ಯವಾಗಿರುತ್ತವೆ. ವಿಷಯ ನಿರೂಪಣಾ ವಿಧಾನ ಅತ್ಯಂತ ಸರಳ ಮತ್ತು ನೇರವಾದುದಾಗಿದೆ. ಸತ್ವ ಹಾಗೂ ಸತ್ಯಪ್ರಮಾಣಗಳು ಈ ಗ್ರಂಥದ ಮೌಲಿಕತೆಯನ್ನು ಅಧಿಕಗೊಳಿಸಿವೆ. ಡಾ.ಬಿರಾದಾರ ಅವರು ಈ ಕೃತಿರಚನೆಯ ವಿಷಯ ಸಂಗ್ರಹದಲ್ಲಿ ತೋರಿದ ಸಹನೆ, ಸಂಯಮ, ವಹಿಸಿದ ಪರಿಶ್ರಮ, ಕಾಳಜಿ, ನಿರ್ವಹಿಸಿದ ಕಾರ್ಯವಿಧಾನ, ಕೈಕೊಂಡ ವೈವಿಧ್ಯಪೂರ್ಣವಾದ ವ್ಯಾಸಂಗಗಳು ಅನನ್ಯವಾಗಿವೆ. ಈ ಗ್ರಂಥದಲ್ಲಿ ವಚನ ಸಾಹಿತ್ಯದ ಪ್ರಯೋಜಕತೆ, ಗುಣಾತ್ಮಕತೆಯ ಗುಣಗಳು ಅಧಿಕವಾಗಿದ್ದು, ಇವು ಸಂಶೋಧಕರಿಗೆ ದಾರಿದೀಪವಾಗಿ, ನಂದಾದೀವಿಗೆಯಾಗಿ ಪ್ರಜ್ವಲಿಸುತ್ತಿವೆ. ಇದು ಈ ಗ್ರಂಥದ ಮತ್ತೊಂದು ವಿಶೇಷತೆಯಾಗಿದೆ. ಒಟ್ಟಾರೆ, ಡಾ.ಬಿ. ಎಸ್. ಬಿರಾದಾರ ಅವರ ಈ ಮಹಾಪ್ರಬಂಧ ವೈಶಿಷ್ಟ್ಯ ಪೂರ್ಣ ವಾಗಿದ್ದು, ಬಹುಮುಖ ಅಧ್ಯಯನಕ್ಕೆ ಗಂಗೋತ್ರಿಯೆನಿಸಿದೆ.

ತಮ್ಮ ಪಿಎಚ್.ಡಿ. ಪದವಿ ಪಡೆದು ಹದಿನಾರು ವರ್ಷಗಳ ನಂತರ ಈ ಕೃತಿಗಳನ್ನು ಪ್ರಕಟಿಸುತ್ತಿರುವ ಡಾ. ಬಿ. ಎಸ್. ಬಿರಾದಾರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವೆ. ಅಮೋಘವಾದುದನ್ನು ಸಾಧಿಸುವ ಅತುಲ ಸಾಮರ್ಥ್ಯ ಅವರಲ್ಲಿದೆ. ಅವರಿಂದ ವಚನ ಸಾಹಿತ್ಯದ ಈ ಅಧ್ಯಯನ ಪರ್ವ ಸದಾಕಾಲ ಹೀಗೆಯೇ ಮುಂದುವರಿಯಲಿ, ಆ ಮೂಲಕ ಕನ್ನಡ ಸಾರಸ್ವತ ಪ್ರಪಂಚ ಸಿರಿವಂತಗೊಳ್ಳಲಿ ಎಂದು ಆಶಿಸುವೆ.


ಪ್ರಕಾಶ ಗಿರಿಮಲ್ಲನವರ, ಬೆಳಗಾವಿ
ಮೊ: 9902130041

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!