ಪುಸ್ತಕ ಪರಿಚಯ

0
191

ಜೀವನ ಚರಿತ್ರೆಗೆ ಮಾದರಿ-ಎಲ್. ಎಸ್. ಶಾಸ್ತ್ರಿಯವರ 
“ಕನ್ನಡ ಮರಾಠಿ ಸ್ನೇಹಸೇತು ಕೃ. ಶಿ. ಹೆಗಡೆ”

ಜೀವನ ಚರಿತ್ರೆಗಳು ಒಬ್ಬ ವ್ಯಕ್ತಿಯ ಜೀವನ- ಸಾಧನೆಗಳನ್ನು ಮಾತ್ರ ಹಿಡಿದಿಡುವುದಕ್ಕಿಂತ ಅಂದಂದಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಒಳನೋಟಗಳ ಚಿತ್ರಣಗಳನ್ನು ನೀಡುತ್ತಲೇ, ಸಂಬಂಧಿಸಿದ ವ್ಯಕ್ತಿಯು ತನ್ನ ಸುತ್ತಲಿನ ಜನಸಮುದಾಯದೊಂದಿಗೆ ಬೆರೆತು ತಾನು ಬೆಳೆಯುತ್ತಲೇ ಒಂದು ಪ್ರದೇಶದ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಇಡಿಯಾಗಿ ತೊಡಗಿಸಿಕೊಂಡ ಸಾರವತ್ತಾದ ಚರಿತ್ರೆಯಾಗಬೇಕು. ಹಾಗಾದಾಗ ಮಾತ್ರ ಆ ಜೀವನ ಚರಿತ್ರೆಗಳಿಗೆ ಉನ್ನತ ಸ್ಥಾನಮಾನವು ದೊರೆಯುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಮಾದರಿಯಾಗಿ ರಚನೆಗೊಂಡ ಕೃತಿಯೇ ಎಲ್. ಎಸ್. ಶಾಸ್ತ್ರಿಯವರ ” ಕನ್ನಡ ಮರಾಠಿ ಸ್ನೇಹಸೇತು ಕೃ. ಶಿ. ಹೆಗಡೆ” ಎಂಬ ಕೃತಿ.

ಚಿಕ್ಕೋಡಿ ತಾಲೂಕಿನ ಚಿಂಚಣಿ ಮಠವು ” ಕನ್ನಡ ಮಠ” ಎಂದೇ ಪ್ರಸಿದ್ಧವಾಗಿದ್ದು, ಆ ಮಠದ ಪೀಠಾಧಿಪತಿಗಳಾಗಿದ್ದ ಪ.ಪೂ. ಶ್ರೀ ಮನಿಪ್ರ ಅಲ್ಲಮಪ್ರಭು ಸ್ವಾಮೀಜಿಯವರು ಕನ್ನಡ ಮರಾಠಿ ಭಾಷಿಕರಲ್ಲಿ ಸಾಮರಸ್ಯವನ್ನು ಬೆಳೆಸಿ ಗಡಿಯನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಿದರು. ನಾಡು ನುಡಿಯ ಕುರಿತ ಅಪಾರ ಪ್ರೇಮವನ್ನು ಹೊಂದಿದ್ದ ಪೂಜ್ಯರ ಕನಸಿನ ಕೂಸಾಗಿ ಜನ್ಮ ತಳೆದುದೇ “ಕನ್ನಡ ಜಾಗೃತಿ ಪುಸ್ತಕ ಮಾಲೆ”. ಪ್ರೊ. ಚಂದ್ರಕಾಂತ ಪೊಕಳೆ ಹಾಗೂ ಡಾ. ಅನಿಲ ಕಮತಿಯವರ “ಸೀಮೆ” ಎಂಬ ಕೃತಿಯನ್ನು ೧೯೯೭ ರಲ್ಲಿ ಪ್ರಕಟಿಸಿ ಪ್ರಕಟಣಾ ಕ್ಷೇತ್ರದಲ್ಲಿ ಹೊಸದೊಂದು ಹೆಜ್ಜೆಯಿಟ್ಟ ಶ್ರೀಮಠವು ೨೦೨೩ ರ ರಾಜ್ಯೋತ್ಸವಕ್ಕೆ ಎಲ್. ಎಸ್. ಶಾಸ್ತ್ರಿಯವರು ರಚಿಸಿದ ಕೃ. ಶಿ. ಹೆಗಡೆ ಎಂಬ ಪುಸ್ತಕವನ್ನು ಪ್ರಕಾಶನದ ೫೧ ನೆಯ ಪುಷ್ಪವಾಗಿ ನೀಡಿರುವುದು ಅಭಿಮಾನದ ಸಂಗತಿ.

‌‌   ೮೧ ರ ಹರೆಯದ ಶಾಸ್ತ್ರಿಯವರದು ಬಹುಮುಖ ವ್ಯಕ್ತಿತ್ವ. ಹಿರಿಯ ಹಾಗೂ ನಿಷ್ಠಾವಂತ ಪತ್ರಕರ್ತರಾಗಿ ಪತ್ರಿಕಾ ರಂಗಕ್ಕೆ ಘನತೆ ಗೌರವ ತಂದುಕೊಟ್ಟಿರುವ ಶ್ರೀಯುತರು ತಮ್ಮ ನಿರಂತರ ಸಾಹಿತ್ಯ ಕೃಷಿಯ ಮೂಲಕ ೧೨೦ ಕ್ಕೂ ಮಿಗಿಲಾದ ಬೆಲೆಯುಳ್ಳ ಕೃತಿಗಳನ್ನು ಕನ್ನಡಕ್ಕೆ ಕೊಟ್ಟವರು. ಪ್ರಸ್ತುತ ಕೃ. ಶಿ. ಹೆಗಡೆಯವರನ್ನು ಹಿಂದಿನಿಂದಲೂ ಬಲ್ಲವರಾದ್ದರಿಂದ ಪುಣೆಯಲ್ಲಿ ನೆಲೆ ನಿಂತು ಮರಾಠಿ ಕನ್ನಡ ಸ್ನೇಹಸೇತುವಾಗಿ ಬೆಳೆದ ಅವರ ನಿಷ್ಕಾಮ ಜೀವನ ಸಾಧನೆಗಳನ್ನು ತುಂಬ ಆಪ್ತವಾಗಿ ಹಿಡಿದಿಟ್ಟ ಶ್ರೇಯಸ್ಸು ಶಾಸ್ತ್ರಿಯವರಿಗೇ ಸಲ್ಲಬೇಕು.

೮೮ ಪುಟಗಳ ಪ್ರಸ್ತುತ ಕೃತಿಯಲ್ಲಿ ಚಿಕ್ಕ ಚಿಕ್ಕ ಮೂವತ್ತು ಅಧ್ಯಾಯಗಳಿದ್ದು ಒಂದಕ್ಕಿಂತ ಒಂದು ಸ್ವಾರಸ್ಯಕರವಾಗಿದೆ. ಹೆಗಡೆಯವರ ಸಾಧನೆಗಳನ್ನು ತಿಳಿಸುತ್ತಲೇ ಮುಂಬಯಿ, ಪುಣೆ, ಹಾಗೂ ಸಮಸ್ತ ಮಹಾರಾಷ್ಟ್ರದ ಐತಿಹಾಸಿಕ ಹಿನ್ನೆಲೆ, ಅಪ್ಪಟ ಕನ್ನಡ ನೆಲವಾಗಿದ್ದರ ಕುರಿತ ಉಲ್ಲೇಖಗಳು, ಕನ್ನಡ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಿದ ಮರಾಠಿಗರ ಹೃದಯ ವೈಶಾಲ್ಯ, ಮುಂಬಯಿಯಲ್ಲಿ ಕನ್ನಡವು ಅಸ್ತಿತ್ವ ಪಡೆದುಕೊಂಡ ರೀತಿ, ಒಟ್ಟು ಕನ್ನಡಿಗರ ಸಂಖ್ಯೆ, ಕನ್ನಡ ಶಾಲೆಗಳ ಸಂಖ್ಯೆಯನ್ನು ಖಚಿತವಾಗಿ ನೀಡುವುದರ ಮೂಲಕ ಮಹಾರಾಷ್ಟ್ರ ಸರಕಾರವು ಕನ್ನಡ ಭಾಷೆಯ ಬೆಳವಣಿಗೆಗೆ, ಗುಣಮಟ್ಟದ ಪಠ್ಯಪುಸ್ತಕಗಳ ರಚನೆಗೆ ನೀಡಿದ ಪ್ರೇರಣೆಗಳನ್ನು ತುಂಬ ವಸ್ತು ನಿಷ್ಠವಾಗಿ ನೀಡಿದ ಲೇಖಕರ ಶ್ರಮ ಸಾರ್ಥಕವೆನಿಸುತ್ತದೆ.

ಅದಕ್ಕೆಂದೇ ಪ್ರಸ್ತುತ ಕೃತಿಯು ಕೇವಲ ಕೃ. ಶಿ. ಹೆಗಡೆಯವರ ಜೀವನ ಚರಿತ್ರೆಯಾಗದೆ ಕನ್ನಡ ಮರಾಠಿ ಭಾಷೆಗಳಲ್ಲಿರುವ ಗಾಢ ಸಂಬಂಧ, ಕರ್ನಾಟಕದ ಪಠ್ಯಪುಸ್ತಕಗಳಿಗಿಂತ ಮಹಾರಾಷ್ಟ್ರ ಸರಕಾರದವರು ಪ್ರಕಟಿಸಿದ ಕನ್ನಡ ಪಠ್ಯಪುಸ್ತಕಗಳು ಗುಣಮಟ್ಟದಲ್ಲಿ ಹೇಗೆ ಮುಂಚೂಣಿಯಲ್ಲಿ ನಿಲ್ಲುತ್ತವೆ, ಅದಕ್ಕೆ ಕಾರಣ ಏನು ಇತ್ಯಾದಿ ಅಂಶಗಳ ಮೇಲೂ ಬೆಳಕು ಚೆಲ್ಲುವ ಬೆಲೆಯುಳ್ಳ ಕೃತಿಯಾಗಿದೆ ಎಂದರೆ ಅತಿಶಯೋಕ್ತಿಯಾಗದು.

ಈ ಪುಟ್ಟ ಕೃತಿಗೆ ಶಾ. ಮಂ. ಕೃಷ್ಣರಾಯರ ಮುನ್ನುಡಿಯೂ ಇಡೀ ಕೃತಿಯ ಸಾರವನ್ನೇ ಎತ್ತಿ ತೋರಿಸಿದ್ದು, ಕೃತಿಕಾರರ ಶ್ರಮ, ಹೆಗಡೆಯವರ ಕರ್ತವ್ಯ ನಿಷ್ಠೆಯನ್ನು ಸೋದಾಹರಣವಾಗಿ ಉಲ್ಲೇಖಿಸಿ, ಕರ್ನಾಟಕ ಸರಕಾರವು ಇಂತಹ ವ್ಯಕ್ತಿಗಳನ್ನು, ಸಂಘಟನೆಗಳನ್ನು ಗುರುತಿಸದೇ ಇರುವ ಕುರಿತು ಖೇದ. ವ್ಯಕ್ತಪಡಿಸಿದ್ದು ಸೂಕ್ತವೆನಿಸುತ್ತದೆ.

ಪ್ರಥಮ ಅಧ್ಯಾಯದಲ್ಲಿ ಕರ್ನಾಟಕ ಮಹಾರಾಷ್ಟ್ರದ ಐತಿಹಾಸಿಕ ಹಿನ್ನೆಲೆಯನ್ನು ತಿಳಿಸಿದ ಶಾಸ್ತ್ರಿಯವರು ಹಳೆಗನ್ನಡ ಕಾವ್ಯ ಹಾಗೂ ಶಾಸನಗಳಲ್ಲಿ ಉಲ್ಲೇಖಿಸಿರುವ ಆಧಾರಗಳನ್ನಿಟ್ಟುಕೊಂಡು ಇತಿಹಾಸದ ಚಿತ್ರಣವನ್ನು ಕೊಡುತ್ತಲೇ ಚರಿತ್ರೆಗೆ ಉತ್ತಮ ವೇದಿಕೆಯನ್ನು ಸಿದ್ಧಪಡಿಸಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಕನ್ನಡವು ಹಂತ ಹಂತವಾಗಿ ಬೆಳೆದ ರೀತಿಯನ್ನು ಅಂಕಿಅಂಶಗಳ ಮೂಲಕ ದಾಖಲಿಸಿದ್ದಾರೆ. ಇಡೀ ಮಹಾರಾಷ್ಟ್ರದಲ್ಲಿ ಎಪ್ಪತ್ತು ಲಕ್ಷ ಕನ್ನಡಿಗರಿದ್ದರೆ ಮುಂಬಯಿ ಮಹಾನಗರದಲ್ಲಿಯೇ ಇಪ್ಪತ್ತು ಲಕ್ಷಕ್ಕೆ ಮಿಕ್ಕಿದ ಕನ್ನಡಿಗರು ನೆಲೆಸಿರುವ ವಿವರ ತಿಳಿಸಿ ಉರಿಲಿಂಗ ಪೆದ್ದಿ, ಕಾಳವ್ವೆ, ಸಿದ್ಧರಾಮ , ಗಜೇಶ ಮಸಣಯ್ಯನಂತವರು ಹುಟ್ಟಿ ಬೆಳೆದ ಕ್ಷೇತ್ರಗಳು ಸದ್ಯ ಮಹಾರಾಷ್ಟ್ರದಲ್ಲಿ ರುವ ಬಗ್ಗೆ ಉಲ್ಲೇಖಿಸುತ್ತಲೇ ನಮ್ಮ ಶರಣರು ಮತ್ತು ಮರಾಠಿ ಸಂತರ ಸಾಹಿತ್ಯದ ಸವಿಯನ್ನು ಸ್ಥಳೀಯರು ಆಸ್ವಾದಿಸುವ ಭಾಗ್ಯವನ್ನು ಪಡೆದು ಧನ್ಯರಾದ ಕುರಿತು ತುಂಬ ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾರೆ.

ಭಾಷಾವಾರು ಪ್ರಾಂತ ರಚನೆಯಾಗುವುದರ ಮೂಲಕ ಕರ್ನಾಟಕವು ಹಲವಾರು ಅಪ್ಪಟ ಕನ್ನಡ ಪ್ರದೇಶಗಳನ್ನು ಕಳೆದುಕೊಂಡಿದ್ದನ್ನು ದಾಖಲಿಸಿ, ಪ್ರತಿ ರಾಜ್ಯವೂ ಸ್ವಾಯತ್ತ ಪಠ್ಯಪುಸ್ತಕ ಮಂಡಳಿಯನ್ನು ರಚಿಸಿಕೊಳ್ಳಬೇಕಲ್ಲದೆ ಅವು ಸರಕಾರದ ಆಧೀನದಲ್ಲಿರದೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕೆಂಬ ಕೊಠಾರಿ ಆಯೋಗದ ಪ್ರಸ್ತಾಪ ಮಾಡುತ್ತ, ಮಹಾರಾಷ್ಟ್ರ ಪಠ್ಯಪುಸ್ತಕ ಸಂಸ್ಥೆಯು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿತ್ತಿರುವ ಕುರಿತು ಅಭಿಮಾನದ ಮಾತುಗಳನ್ನು ಹೇಳಿ , ಅಲ್ಲಿನ ಪಠ್ಯಪುಸ್ತಕಗಳ ಗುಣಮಟ್ಟದ ಕುರಿತು ಒದುಗರ ಗಮನ ಸೆಳೆಯುತ್ತಾರೆ.

ಮಹಾರಾಷ್ಟ್ರದಲ್ಲಿರುವ ಏಳು ಭಾಷೆಗಳ ವಿದ್ಯಾರ್ಥಿಗಳಿಗಾಗಿಯೇ ಸ್ವತಂತ್ರವಾದ ಪಠ್ಯಪುಸ್ತಕಗಳನ್ನು ರೂಪಿಸಲು ಸ್ವಾಯತ್ತ ಸಮಿತಿಗಳನ್ನು ರಚಿಸಿದ್ದು, ನಮ್ಮ ಕೃ. ಶಿ. ಹೆಗಡೆಯವರು ಮಹಾರಾಷ್ಟ್ರ ರಾಜ್ಯ ಪಠ್ಯ ಪುಸ್ತಕ ಹಾಗೂ ಸಂಶೋಧನಾ ಮಂಡಳಿಯ ವಿಶೇಷ ಅಧಿಕಾರಿಯಾಗಿ , ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ಸ್ಥಾಪಕರಾಗಿ ಕೈಕೊಂಡ ಗಟ್ಟಿ ಕಾರ್ಯಗಳನ್ನು ವಿವರವಾಗಿ ಉಲ್ಲೇಖಿಸುತ್ತಲೇ ಮರಾಠಿಗರ ಮನವನ್ನು ಗೆದ್ದ ಅವರಲ್ಲಿ ಕನ್ನಡ ಪ್ರೇಮವನ್ನು ಬೆಳೆಸಿ ಎರಡೂ ಭಾಷೆಗಳ ಸ್ನೇಹ ಸೇತುವಾಗಿ ಬೆಳೆದ ಧೀರೋದಾತ್ತ ವ್ಯಕ್ತಿತ್ವವನ್ನು ತುಂಬ ಚೆನ್ನಾಗಿ ವಿವರಿಸಿದ್ದಾರೆ.

ಇವಿಷ್ಟು ಪೂರ್ವ ಪೀಠಿಕೆ ಯನ್ನು ಕಟ್ಟಿಕೊಟ್ಟ ಶಾಸ್ತ್ರಿಯವರು ೧೦ ನೆಯ ಅಧ್ಯಾಯದಿಂದ ಕೊನೆಯ ೩೦ ನೆಯ ಅಧ್ಯಾಯದತನಕ ಕೃ. ಶಿ. ಹೆಗಡೆಯವರ ಜನನ, ಕೌಟುಂಬಿಕ ಹಿನ್ನೆಲೆ, ೧೬ ಮಕ್ಕಳ ಅವಿಭಕ್ತ ಕುಟುಂಬದ ತೊಳಲಾಟ, ತಂದೆ ಶಿವರಾಮರ ಮನ ಗೆದ್ದು ಪದವಿ ಪಡೆದದ್ದು, ಅಷ್ಟರಲ್ಲೇ ಅಪ್ಪನನ್ನು ಕಳೆದುಕೊಂಡು ಬದುಕಿನ ದಾರಿ ಹುಡುಕುತ್ತ ಮುಂಬಯಿ ಮಹಾನಗರಕ್ಕೆ ತೆರಳಿ , ಕೆಲ ವರ್ಷ ಶಿಕ್ಷಕರಾಗಿ, ತದನಂತರ ಮಹಾರಾಷ್ಟ್ರ ರಾಜ್ಯ ಪಠ್ಯಪುಸ್ತಕ ಮಂಡಳಿಯ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ವಿಶೇಷ ಅಧಿಕಾರಿಯಾಗಿ, ನಂತರ ಎಂಟು ಭಾಷೆಗಳ ಪಠ್ಯ ಪುಸ್ತಕ ಮಂಡಳಿಯ ಸೂತ್ರಧಾರರಾಗಿ ಕೈಕೊಂಡ ಅವಿಸ್ಮರಣೀಯ ಸೇವೆಯನ್ನು ಉಲ್ಲೇಖಿಸುವ ಮೂಲಕ ಉದಯೋನ್ಮುಖರಿಗೆ ಪ್ರೇರಣೆ ನೀಡಿದಂತಾಗಿದೆ. ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ಸ್ಥಾಪನೆ, “ಪ್ರಗತ ಕನ್ನಡಕಲಿಕಾ ವರ್ಗ”ಗಳನ್ನು ಪ್ರಾರಂಭಿಸಿ ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಸ್ಮರಣೀಯ ಕಾರ್ಯವನ್ನು ಕೈಕೊಂಡ ಕುರಿತು ಲೇಖಕರು ಬೆಳಕು ಚೆಲ್ಲಿದ್ದಾರೆ.

ಕೃ. ಶಿ. ಹೆಗಡೆಯವರು “ಮರಾಠಿ ಕನ್ನಡ ಸ್ನೇಹ ವರ್ಧನ ಕೇಂದ್ರ”ದ ಸೂತ್ರಧಾರಿಯಾಗಿ ಎರಡು ಮೂರು ದಶಕಗಳವರೆಗೆ ಕೈಕೊಂಡ ಸ್ಮರಣೀಯ ಕಾರ್ಯಗಳು, ಪಠ್ಯ ಪುಸ್ತಕ ರಚನೆ, ತದನಂತರ ತಮ್ಮ ಬದುಕನ್ನು ರೂಪಿಸುತ್ತಲೇ ಎಲ್ಲರಿಗೂ ಬೆಲ್ಲ ಸಕ್ಕರೆಯಾಗಿ , ಶ್ರಮವೇ ದೇವರು, ಸ್ವಂತ ಉದ್ಯೋಗ, ಹಿಮಾಲಯದ ಕರೆ ಇತ್ಯಾದಿ ೧೪ ಬೆಲೆಬಾಳುವ ಕೃತಿಗಳ ಮಾಹಿತಿಯನ್ನು ನೀಡಿದ್ದು ಉಪಯುಕ್ತವಾಗಿದೆ. ಅದೇ ರೀತಿ ಹೆಗಡೆಯವರ ವ್ಯಕ್ತಿತ್ವ , ಕಾರ್ಯದಕ್ಷತೆಯನ್ನು ಕುರಿತು ಗಣ್ಯರ ಅಭಿಪ್ರಾಯಗಳು, ಸಂದ ಗೌರವ, ಅವರ ಕಾರ್ಯವೈಖರಿ, ಕನ್ನಡ ಸೇವೆ ಇತ್ಯಾದಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಶಾಸ್ತ್ರಿಯವರು ಕನ್ನಡಿಗರಿಗೆ ಮಹದುಪಕಾರ ಮಾಡಿದ್ದಾರೆ. ಈ ಕೃತಿ ಕೇವಲ ಕೃಶಿಯವರ ಬದುಕಿನ ಸುತ್ತ ಗಿರಕಿ ಹೊಡೆಯದೇ, ಕನ್ನಡ ಮರಾಠಿ ಭಾಷಿಕರ ಮನವನ್ನು ಬೆಸೆಯುವ ಸೇತುವಾಗಿ ಪರಿಪೂರ್ಣ ರೂಪ ತಾಳಿದೆ ಎಂದರೆ ತಪ್ಪಲ್ಲ.

– ಡಾ. ಪಿ. ಜಿ. ಕೆಂಪಣ್ಣವರ
ಬೆಳಗಾವಿ