spot_img
spot_img

ಹೊಸ ಪುಸ್ತಕ ಓದು; ವಿಶ್ವವಂದ್ಯ ಬಸವಣ್ಣನವರು

Must Read

- Advertisement -

ವಿಶ್ವವಂದ್ಯ ಬಸವಣ್ಣನವರು

ಲೇ: ಎಲ್. ಎಸ್. ಶಾಸ್ತ್ರಿ
ಪ್ರ: ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ
ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೦

ಬಸವಣ್ಣನವರನ್ನು ಕುರಿತು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ನನ್ನ ಗುರುಗಳಾದ ಡಾ. ಎಸ್. ಆರ್. ಗುಂಜಾಳ ಅವರೊಂದಿಗೆ ನಾನು ಈ ಕುರಿತು ಒಂದು ‘ಬಸವ ಸಾಹಿತ್ಯ ವಾಹಿನಿ’ ಎಂಬ ಕೃತಿಯನ್ನೇ ಪ್ರಕಟಿಸಿದ್ದೆ. ಅದರಲ್ಲಿ ಬಸವಣ್ಣನವರನ್ನು ಕುರಿತು ಆಧುನಿಕ ವಿದ್ವಾಂಸರು ಜೀವನ ಚರಿತ್ರೆ, ನಾಟಕ, ಕತೆ, ಕಾದಂಬರಿ, ಕಾವ್ಯ ಮೊದಲಾದ ಪ್ರಕಾರಗಳಲ್ಲಿ ಬರೆದ ಕೃತಿಗಳ ಒಟ್ಟು ಪಕ್ಷಿನೋಟವನ್ನು ನೀಡುವ ಪ್ರಯತ್ನ ಮಾಡಲಾಗಿತ್ತು. ಬಸವಣ್ಣನವರ ಕುರಿತು ಬಂದ ಅತ್ಯುತ್ತಮ ಕೃತಿಗಳಲ್ಲಿ ಹೊಸ ಸೇರ್ಪಡೆಯಾಗುತ್ತಿದೆ, ಶ್ರೀ ಎಲ್.ಎಸ್.ಶಾಸ್ತ್ರಿ ಅವರ ‘ವಿಶ್ವವಂದ್ಯ ಬಸವಣ್ಣನವರು’.

ಬಸವಣ್ಣನವರ ಜೀವನ ಚರಿತ್ರೆಯನ್ನು ಚಾರಿತ್ರಿಕವಾಗಿ ಮೊಟ್ಟಮೊದಲು ಬರೆದವರು ಡಾ. ಫ.ಗು.ಹಳಕಟ್ಟಿಯವರು. ಅದು ಶಿವಾನುಭವ ಪತ್ರಿಕೆಯಲ್ಲಿ ೬೪ ಕಂತುಗಳಲ್ಲಿ ಪ್ರಕಟವಾಗಿತ್ತು. ಆದರೆ ಪುಸ್ತಕ ರೂಪದಲ್ಲಿ ಪ್ರಕಟವಾಗಲಿಲ್ಲವೆಂಬುದು ವಿಷಾದನೀಯ. ಈ ಹಿನ್ನೆಲೆಯಲ್ಲಿ ಪುಸ್ತಕ ರೂಪದಲ್ಲಿ ಮೊಟ್ಟ ಮೊದಲು ಚರಿತ್ರೆ ಬರೆದವರು ರಾಷ್ಟ್ರಧರ್ಮ ದ್ರಷ್ಟಾರ ಹರ್ಡೇಕರ ಮಂಜಪ್ಪನವರು. ೧೯೨೪ರಲ್ಲಿ ‘ಬಸವ ಚರಿತ್ರೆ’ ಬರೆಯುವ ಮೂಲಕ ಬಸವಣ್ಣನವರು ಒಬ್ಬ ಐತಿಹಾಸಿಕ ಚಾರಿತ್ರಿಕ ವ್ಯಕ್ತಿ ಎಂಬುದನ್ನು ಮೊದಲ ಸಲ ಪ್ರತಿಪಾದಿಸಿದರು. ನಂತರ ಅನೇಕ ವಿದ್ವಾಂಸರು ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತ ಬಂದರು.

- Advertisement -

ಲಿಂಗಾಯತ ವಿದ್ವಾಂಸರು ಬಸವಣ್ಣನವರನ್ನು ನೋಡುವ ದೃಷ್ಟಿಗಿಂತ, ಲಿಂಗಾಯತೇತರ ವಿದ್ವಾಂಸರು ನೋಡುವ ದೃಷ್ಟಿ ಒಂದು ದೃಷ್ಟಿಯಲ್ಲಿ ಕುತೂಹಲಕಾರಿಯಾಗಿದೆ ಎಂಬುದು ನನ್ನ ಅಂಬೋಣ. ೧೯೩೬ರಲ್ಲಿ ಪ್ರೊ. ಎಂ. ಆರ್. ಶ್ರೀನಿವಾಸಮೂರ್ತಿಗಳು ‘ಭಕ್ತಿಭಂಡಾರಿ ಬಸವಣ್ಣನವರು’ ಎಂಬ ಮಹತ್ವದ ಕೃತಿಯನ್ನು ಪ್ರಕಟಿಸಿದರು. ಪ್ರಾಯಶಃ ಬಸವಣ್ಣನವರ ಘನವ್ಯಕ್ತಿತ್ವನ್ನು ಸರ್ವಾಂಗ ಸುಂದರವಾಗಿ ನಿರೂಪಿಸಿದ ಮೊದಲ ಕೃತಿ ಎಂಬ ಹೆಗ್ಗಳಿಕೆ ಅದಕ್ಕಿದೆ. ಅ.ನ.ಕೃಷ್ಣರಾಯರು ಬಸವಣ್ಣನವರನ್ನು ಕುರಿತು ಒಂದು ಅಪರೂಪದ ನಾಟಕವನ್ನು ರಚಿಸಿರುವುದಲ್ಲದೆ, ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಎಂ. ಆರ್. ಶ್ರೀ, ಅ.ನ.ಕೃ, ದೇಜಗೌ, ರಂಗನಾಥ ದಿವಾಕರ ಮೊದಲಾದ ಲಿಂಗಾಯತೇತರ ವಿದ್ವಾಂಸರು ಬಸವಣ್ಣನವರ ಘನಮಹಿಮೆಯನ್ನು ಅತ್ಯಂತ ವಾಸ್ತವ ತಳಹದಿಯ ಮೇಲೆ ವಸ್ತುನಿಷ್ಠವಾಗಿ ನಿರೂಪಿಸಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್. ಎಸ್. ಶಾಸ್ತ್ರಿ ಅವರ ‘ವಿಶ್ವವಂದ್ಯ ಬಸವಣ್ಣನವರು’ ಕೃತಿಯನ್ನು ಅವಲೋಕಿಸಬೇಕು.

ಪ್ರೊ. ಎಂ. ಆರ್. ಶ್ರೀ ಅವರು ‘ಭಕ್ತಿಭಂಡಾರಿ ಬಸವಣ್ಣನವರು’ ಎಂಬ ಕೃತಿಯಲ್ಲಿ “ಬಸವೇಶ್ವರರು ಕೇವಲ ವೀರಶೈವರ ಇಲ್ಲವೆ ಕರ್ನಾಟಕದವರ ಸೊತ್ತಲ್ಲ, ಅವರು ಸಮಗ್ರ ಮಾನವ ಕೋಟಿಗೆ ಸಂಬಂಧ ಪಟ್ಟವರು. ಅವರು ಬೋಧಿಸಿದ ತತ್ವಗಳಿಗೆ ಜಾಗತಿಕ ಮಹತ್ವವಿದೆ.” ಎಂದು ಹೃದಯತುಂಬಿ ಹೇಳಿದ್ದರು. ಈ ಮಾತುಗಳಿಗೆ ಪೂರಕವೆಂಬಂತೆ ಎಲ್. ಎಸ್. ಶಾಸ್ತ್ರಿ ಅವರು ತಮ್ಮ ಕೃತಿಗೆ ‘ವಿಶ್ವವಂದ್ಯ ಬಸವಣ್ಣನವರು’ ಎಂಬ ಹೆಸರಿಟ್ಟಿರುವುದು ತುಂಬ ಔಚಿತ್ಯಪೂರ್ಣವಾದುದು.

ಶ್ರೀ ಶಾಸ್ತ್ರಿ ಅವರು ಕೃತಿಯ ಪ್ರಸ್ತಾವನೆಯಲ್ಲಿ ಪ್ರಸ್ತುತ ಸಾಮಾಜಿಕ ಸಂದರ್ಭಕ್ಕೆ ಅನ್ವಯಿಸುವ ಕೆಲವು ಮೌಲಿಕ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ. ಯಾರು ಜಾತಿಯ ವಿರುದ್ಧ ಹೋರಾಟ ಮಾಡಿದ್ದರೋ ಅಂಥ ಮಹಾನುಭಾವರನ್ನು ಜಾತಿಯ ಚೌಕಟ್ಟಿನಲ್ಲಿ ಬಂಧಿಸಿರುವುದು ಆಧುನಿಕ ಸಮಾಜದ ದುರಂತವೆಂದು ಅವರ ಭಾವನೆ. ಬಸವ-ಗಾಂಧಿ-ವಿವೇಕಾನಂದರಂಥ ಹಿರಿಯರನ್ನು ಅವರ ವಿಚಾರಗಳನ್ನು ಟೀಕಿಸುವ ಮಟ್ಟಕ್ಕೆ ನಾವು ಬೆಳೆದಿದ್ದೇವೆ. ಆದರೆ ಅಸ್ಪೃಶ್ಯತೆ, ಮೇಲು-ಕೀಳಿನ ಈ ವ್ಯವಸ್ಥೆ ಇನ್ನೂ ಬಲವಾಗುತ್ತ ಹೋಗುತ್ತಿದೆ ಎಂಬ ಕೊರಗು ಅವರದು. ಎಲ್. ಎಸ್. ಅವರು ಕೆಲವು ನಿಷ್ಠುರ ವಿಚಾರಗಳನ್ನು ತುಂಬ ಸ್ಪಷ್ಟವಾಗಿ ಇಲ್ಲಿ ಹೇಳಿದ್ದಾರೆ.

- Advertisement -

ಪ್ರಸ್ತುತ ಕೃತಿಯಲ್ಲಿ ಒಟ್ಟು ೨೨ ಅಧ್ಯಾಯಗಳಿವೆ. ಅನುಬಂಧದಲ್ಲಿ ವಚನಕಾರರ-ವಚನಾಂಕಿತಗಳ ವಿವರಣೆ ಇದೆ. ಪ್ರಾರಂಭದ ಅಧ್ಯಾಯದಲ್ಲಿ ೧೨ನೇ ಶತಮಾನದ ಧಾರ್ಮಿಕ-ಸಾಮಾಜಿಕ ಪರಿಸರ ಕುರಿತು ಸಮಗ್ರವಾದ ಸಂಕ್ಷಿಪ್ತ ವಿವರಣೆ ನೀಡಿದ್ದಾರೆ. ವೇದಕಾಲದಿಂದಲೂ ನಡೆದು ಬಂದ ವ್ಯವಸ್ಥೆಯ ಕುರಿತಾಗಿ ಕೆಲವು ಹೊಸ ವಿಚಾರಗಳನ್ನು ವಿವರಿಸಿದ್ದಾರೆ.

ಎರಡನೆಯ ಅಧ್ಯಾಯದಲ್ಲಿ ‘ಶೈವ ಸಿದ್ಧಾಂತ-ಶಿವೋಪಾಸನೆ’ ಬೆಳದು ಬಂದ ಇತಿಹಾಸವನ್ನು ಗುರುತಿಸಿದ್ದಾರೆ. ಇಲ್ಲಿ ಹರ್ಡೇಕರ ಮಂಜಪ್ಪನವರ ವಿಚಾರಗಳಿಗೆ ಹೆಚ್ಚು ಒತ್ತುಕೊಟ್ಟಂತೆ ಕಾಣುತ್ತದೆ. ೧೨ನೇ ಶತಮಾನದ ಪೂರ್ವದಲ್ಲಿ ವೀರಶೈವ ಇತ್ತು. ಆದರೆ ಅದಕ್ಕೊಂದು ಚಲನಶೀಲತೆಯನ್ನು ಕೊಟ್ಟು ಹೊಸಧರ್ಮವನ್ನಾಗಿ ರೂಪಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂಬ ಎಲ್. ಎಸ್. ಶಾಸ್ತ್ರಿ ಅವರ ಮಾತು ನಿಜಕ್ಕೂ ಅಕ್ಷರಶಃ ಸತ್ಯ.

೧೨ನೇ ಶತಮಾನದ ಪೂರ್ವದಲ್ಲಿ ಬಸವಾದಿ ಶಿವಶರಣರು ಆದ್ಯರೆಂದು ಕರೆದ ಪುರಾತನ ಕುರಿತು ಮೂರನೆಯ ಅಧ್ಯಾಯದಲ್ಲಿ ಕೆಲವು ಮಾತುಗಳನ್ನು ಹೇಳಿದ್ದಾರೆ. ಬಸವಣ್ಣನವರ ತರುವಾಯ ಈ ಶಿವಯೋಗಿಗಳ ಪರಂಪರೆ ಹೇಗೆಲ್ಲ ಬೆಳೆಯಿತ್ತೆಂದು ನಾಲ್ಕನೆಯ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಬಸವಣ್ಣನವರ ಜನನ-ಬಾಲ್ಯ, ಹೋರಾಟದ ಬದುಕು, ಸ್ವಭಾವ ವೈಶಿಷ್ಟ್ಯ, ಅನುಭವ ಮಂಟಪ, ಲಿಂಗಾಯತ ಧರ್ಮಲಕ್ಷಣಗಳು, ವಚನ ಸಾಹಿತ್ಯ, ಬೆಡಗಿನ ವಚನಗಳು, ಬಸವಣ್ಣನವರ ಆಯ್ದ ವಚನಗಳು, ವಚನಗಳಲ್ಲಿ ಸಾಹಿತ್ಯಿಕ ಮೌಲ್ಯ-ಕಾವ್ಯ ಸೌಂದರ್ಯ, ಬಸವಕಾಲೀನ ಶರಣರು ಮತ್ತು ಅವರ ಕಾಯಕ, ಅಲ್ಲಮಪ್ರಭು, ಚೆನ್ನಬಸವಣ್ಣ, ಹಡಪದ ಅಪ್ಪಣ್ಣ, ಕುಂಬಾರ ಗುಂಡಯ್ಯ-ಕಾಯಕದಿಂದ ಕೈಲಾಸಕ್ಕೆ, ೧೨ನೇ ಶತಮಾನದ ಶರಣೆಯರು, ಶೂನ್ಯಸಂಪಾದನೆ, ಶರಣ ಸಂದೇಶ, ಪರಿಣಾಮ-ಫಲಿತಗಳು ಇವಿಷ್ಟು ಕೃತಿಯಲ್ಲಿರುವ ಅಧ್ಯಾಯಗಳು. ಬಸವಣ್ಣನವರನ್ನು ಕೇಂದ್ರಭೂಮಿಕೆಯಲ್ಲಿಟ್ಟು ಶರಣಯುಗದ ಆಂದೋಲನವನ್ನು ಸೂಕ್ಷ್ಮದೃಷ್ಟಿಯಿಂದ ಪರಿಶೀಲಿಸುವ ಅವರ ಪರಿ ನಿಜಕ್ಕೂ ಅನನ್ಯವಾದುದು. ಪ್ರತಿಯೊಂದು ಅಧ್ಯಾಯವನ್ನು ಅಳೆದು ತೂಗಿ ನೋಡಿ ಬರೆದಿದ್ದಾರೆ. ಎಲ್ಲಿಯೂ ವಿವಾದಗಳಿಗೆ ಆಸ್ಪದ ರೀತಿಯಲ್ಲಿ ತುಂಬ ನಾಜೂಕಾಗಿ ವಿಷಯಗಳನ್ನು ಪ್ರತಿಪಾದಿಸಿದ್ದಾರೆ.

ಬಸವಣ್ಣನವರ ಜೀವನದ ಬಗೆಗೆ ಇನ್ನೂ ಕೆಲವು ಗೊಂದಲಗಳಿವೆ ಎಂಬುದನ್ನು ಅವರು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ತಾವು ಹೇಳಿದ್ದೇ ಇದಮಿತ್ಥಂ ಎಂಬ ಅಹಮಿಕೆಯು ಅವರಲ್ಲಿಲ್ಲ. ಈ ವರೆಗೆ ಬಂದ ಬಹುತೇಕ ಮಹತ್ವದ ಕೃತಿಗಳನ್ನು ತುಂಬ ಗಂಭೀರವಾಗಿ ಅವಲೋಕಿಸಿ ತಮ್ಮದೇ ಆದ ಹೊಸ ಹೊಳಹುಗಳನ್ನು ನೀಡಿದ್ದಾರೆ.

ಬಸವಣ್ಣನವರು ವಚನಕ್ರಾಂತಿಯನ್ನು ಮಾಡಿ, ಸೋತರು ಎಂದು ಡಾ.ಪ್ರಭುಶಂಕರ ಅವರಂಥ ಕೆಲವು ವಿದ್ವಾಂಸರ ಅಭಿಪ್ರಾಯಗಳನ್ನು ಎಲ್. ಎಸ್. ಶಾಸ್ತ್ರಿ ಅವರು ಅಲ್ಲಗಳೆಯುತ್ತಾರೆ. ಬಸವಣ್ಣನವರ ಕ್ರಾಂತಿ ಸೋಲಲಿಲ್ಲ, ಪರ್ಯಾಯವಾಗಿ ಆ ಕಾಲದ ಸಮಾಜ ಸೋತಿತು ಎಂಬ ನಿರ್ಣಯಕ್ಕೆ ಬರುತ್ತಾರೆ.

ಲಿಂಗಾಯತ ಧರ್ಮದ ಲಕ್ಷಣಗಳನ್ನು ಹೇಳುವಲ್ಲಿ ಎಲ್. ಎಸ್. ಶಾಸ್ತ್ರಿ ಅವರು ‘ಪಂಚಾಚಾರಗಳ’ ಕುರಿತು ಸಂಕ್ಷಿಪ್ತವಾಗಿಯಾದರೂ ಸಮೃದ್ಧವಾದ ವಿವರಣೆ ನೀಡುತ್ತಾರೆ. ಅನುಭವ ಮಂಟಪದ ವೈಶಿಷ್ಟ್ಯಗಳನ್ನು ಸಾರವತ್ತಾಗಿ ನಿರೂಪಿಸಿದ್ದಾರೆ. ಹೀಗೆ ಪ್ರತಿಯೊಂದು ಅಧ್ಯಾಯ ಓದುಗರಲ್ಲಿ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಕೌತುಕವನ್ನುಂಟು ಮಾಡುವ ಭಾಷೆಯನ್ನು ಬಳಸಿರುವುದು ಎಲ್. ಎಸ್. ಅವರ ಬರಹದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಬಸವಣ್ಣನವರ ಕುರಿತು ಬಂದ ಇತ್ತೀಚಿನ ಮಹತ್ವದ ಕೃತಿಗಳಲ್ಲಿ ಇದೂ ಒಂದಾಗಿದೆ. ಆಳವಾದ ಅಧ್ಯಯನ, ತಲಸ್ಪರ್ಶಿಯಾದ ಚಿಂತನೆಗಳಿಂದ ಈ ಕೃತಿ ಓದಗರ ಗಮನ ಸೆಳೆಯುತ್ತದೆ. ವೃತ್ತಿಯಿಂದ ಪತ್ರಕರ್ತರಾದ ಶ್ರೀ ಎಲ್. ಎಸ್. ಶಾಸ್ತ್ರಿ ಅವರು ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು. ನೂರಕ್ಕು ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಪ್ರಪಂಚವನ್ನು ಸಿರಿವಂತಗೊಳಿಸಿದವರು. ಅವರದು ಬಹುಮುಖ ಪ್ರತಿಭೆ, ಸಾಹಿತ್ಯದ ಎಲ್ಲ ಆಯಾಮಗಳಲ್ಲಿಯೂ ಅವರು ಕೃಷಿ ಮಾಡಿದ್ದಾರೆ. ಇತ್ತೀಚೆಗೆ ಶರಣ ಸಾಹಿತ್ಯವನ್ನು ಕುರಿತು ಒಂದಿಷ್ಟು ಕೃಷಿ ಮಾಡಿದ್ದಾರೆ. ಇದಕ್ಕೆ ತುರಾಯಿ ಎಂಬಂತೆ ‘ವಿಶ್ವವಂದ್ಯ ಬಸವಣ್ಣನವರು’ ಎಂಬ ಕೃತಿಯನ್ನು ರಚಿಸಿರುವುದು ಸಮಯೋಚಿತವಾಗಿದೆ.

ಶ್ರೀ ಎಲ್. ಎಸ್. ಶಾಸ್ತ್ರಿ ಅವರ ಈ ಮೌಲಿಕ ಕೃತಿಯನ್ನು ಸಮಸ್ತ ಲಿಂಗಾಯತ ಸಮಾಜದ ಅಭಿಮಾನಿಗಳು ಓದಬೇಕು, ಅದರಿಂದ ಬಸವಣ್ಣನವರ ನಿಜವಾದ ಘನವ್ಯಕ್ತಿತ್ವದ ಅರಿವಾಗುತ್ತದೆ ಎಂಬುದು ನನ್ನ ಆಶಯ.

ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯ ಮೂಲಕ ಪ್ರಕಟಿಸಿದವರು ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು. ಎಲ್. ಎಸ್. ಶಾಸ್ತ್ರಿ ಅವರ ಸಾಹಿತ್ಯಿಕ ಸಾಧನೆಯನ್ನು ಪತ್ರಿಕೋದ್ಯಮದ ಪ್ರಗತಿಯನ್ನು ಕಳೆದ ಮೂರು ದಶಕಗಳಿಂದ ಗಮನಿಸುತ್ತ ಬಂದ ಸ್ವಾಮೀಜಿಯವರು ಶಾಸ್ತಿçಯವರ ಈ ಕೃತಿಯನ್ನು ಪ್ರಕಟಿಸಿರುವುದು ಸಂತೋಷದ ಸಂಗತಿಯಾಗಿದೆ.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group