ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ಕನ್ನಡ ಸಾಹಿತ್ಯದಲ್ಲಿ ಅನುಭಾವ

ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ
ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦
ಮೊ: ೯೯೦೨೪೯೫೬೯೫


‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ ಮಹತ್ವದ ಗ್ರಂಥ. ಕನ್ನಡದಲ್ಲಿ ಈ ವರೆಗೆ ಉಪೇಕ್ಷೆಗೊಳಗಾಗಿದ್ದ ತತ್ವಪದಗಳನ್ನು-ತತ್ವಪದಕಾರರನ್ನು ಮುಖ್ಯನೆಲೆಯಲ್ಲಿ ಇಟ್ಟುಕೊಂಡು ನಡೆಸಿದ ಅನುಸಂಧಾನವಿದು. ಪಂಪನಿಂದ ಇಲ್ಲಿಯವರೆಗಿನ ಸಾವಿರಾರು ವರ್ಷಗಳ ಸುದೀರ್ಘ ಸಾಹಿತ್ಯಿಕ ಯಾತ್ರೆಯಲ್ಲಿ ಚಂಪೂ, ವಚನ, ರಗಳೆ, ಷಟ್ಪದಿ ಮೊದಲಾದ ಸಾಹಿತ್ಯ ಪ್ರಕಾರಗಳ ಜೊತೆಗೆ ‘ತತ್ವಪದ’ ಸಮೃದ್ಧಿವಾಗಿ ಬೆಳೆದು ಬಂದ ಸಾಹಿತ್ಯ ಪ್ರಕಾರವಾಗಿದೆ. ೧೬ನೇ ಶತಮಾನದ ನಿಜಗುಣ ಶಿವಯೋಗಿಗಳಿಂದ ತತ್ವಪದ ಸಾಹಿತ್ಯ ಒಂದು ಮೂರ್ತಸ್ವರೂಪ ಪಡೆಯಿತು. ನಿಜಗುಣರು ತತ್ವಪದಸಾಹಿತ್ಯದಲ್ಲಿ ‘ಕೈವಲ್ಯ’ದ ಒಂದು ‘ಪದ್ಧತಿ’ಯನ್ನು ರೂಪಿಸಿಕೊಟ್ಟರು. ಇದಕ್ಕೊಂದು ‘ಕಲ್ಪವಲ್ಲರಿ’ಯನ್ನು ಕಟ್ಟಿಕೊಟ್ಟವರು ಸರ್ಪಭೂಷಣ ಶಿವಯೋಗಿಗಳು, ಮುಪ್ಪಿನ ಷಡಕ್ಷರಿಗಳು ‘ಕೈವಲ್ಯ’ಕ್ಕೊಂದು ‘ದರ್ಪಣ’ ಜೋಡಿಸಿದರು. ಹೈದರಾಬಾದ ಕರ್ನಾಟಕದಲ್ಲಿ ಕಡಕೋಳ ಮಡಿವಾಳಪ್ಪ ಮೊದಲಾದವರಿಂದ ಈ ಪ್ರಕಾರ ಇನ್ನೂ ಸಮೃದ್ಧವಾಗಿ ಬೆಳೆದು ನಿಂತಿತು. ಹಾಗೇ ನೋಡಿದರೆ ಉತ್ತರ ಕರ್ನಾಟಕದಲ್ಲಿಯೇ ‘ತತ್ವಪದ’ಸಾಹಿತ್ಯವು ಇಂದಿಗೂ ಜೀವಂತವಾಗಿ ಉಳಿದು-ಬೆಳೆದು ಬಂದಿದೆ.

ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಎಂಬ ಪ್ರಸಾರೋಪನ್ಯಾಸ ಮಾಲೆಯಲ್ಲಿ ಒಂದು ಕಿರು ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ೧೯೬೨ರಲ್ಲಿ ಪ್ರಕಟಿಸಿದ್ದರು. ೧೯೬೩ರಲ್ಲಿ ‘ಶರಣರ ಅನುಭಾವ ಸಾಹಿತ್ಯ’ ಎಂಬ ವಿಷಯ ಕುರಿತು ಸಂಶೋಧನೆ ಮಾಡಿ ಪಿಎಚ್.ಡಿ. ಪದವಿ ಪಡೆದರು. ೧೯೬೫ರಲ್ಲಿ ಗುರುದೇವ ರಾನಡೆ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ‘ಕನ್ನಡ ಸಂತರ ಪರಮಾರ್ಥ ಪಥ’ ಎಂಬ ಉಪನ್ಯಾಸ ನೀಡಿ, ಇಂಗ್ಲಿಷ್-ಕನ್ನಡ ಉಭಯ ಭಾಷೆಗಳಲ್ಲಿ ಕೃತಿ ಪ್ರಕಟಿಸಿದರು. ಇತ್ತೀಚೆಗೆ ಡಾ. ಗುರುಲಿಂಗ ಕಾಪಸೆ ಅವರ ಅಭಿನಂದನ ಗ್ರಂಥ ‘ಅಂತರಂಗದ ರತ್ನ’ ಅನುಭಾವ ಸಾಹಿತ್ಯ ಕುರಿತು ವಿಶೇಷ ಲೇಖನಗಳನ್ನು ಒಳಗೊಂಡ ಪ್ರಮುಖ ಕೃತಿ ಪ್ರಕಟವಾಗಿದೆ. ನಾಡೋಜ ಡಾ. ಚೆನ್ನವೀರ ಕಣವಿ ಅವರ ಸಂಪಾದಕತ್ವದಲ್ಲಿ ಸಿದ್ಧಗಂಗಾ ಶ್ರೀಗಳ ೮೦ನೇ ಪಟ್ಟಾಧಿಕಾರ ಮಹೋತ್ಸವದ ಸವಿನೆನಪಿಗಾಗಿ ‘ಅನುಭಾವ ಪಥ’ ಎಂಬ ಬೃಹತ್ ಸಂಪುಟವನ್ನು ಪ್ರಕಟಿಸಲಾಗಿದೆ. ಅದರಲ್ಲಿ ೮೦ ಜನ ಅನುಭಾವಿಗಳ ಚರಿತ್ರೆಯನ್ನು ಮೊದಲಬಾರಿಗೆ ದಾಖಲಿಸಲಾಗಿದೆ. ಇವಿಷ್ಟು ಕನ್ನಡದಲ್ಲಿ ಅನುಭಾವ ಸಾಹಿತ್ಯ ಕುರಿತು ನಡೆದ ಪ್ರಮುಖ ಅಧ್ಯಯನಗಳು. ನಿಜಗುಣರು, ಸರ್ಪಭೂಷಣ ಶಿವಯೋಗಿ, ಬಾಲಲೀಲಾ ಮಹಾಂತ ಶಿವಯೋಗಿ, ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫ ಮೊದಲಾದವರ ಜೀವನ ಮತ್ತು ತತ್ವಪದ ಸಾಹಿತ್ಯ ಕುರಿತು ವಿಶ್ವವಿದ್ಯಾಲಯ ಮಟ್ಟದಲ್ಲಿ ಸಂಶೋಧನೆಗಳಾಗಿವೆ. ಇತ್ತೀಚೆಗೆ ಕರ್ನಾಟಕ ಸರಕಾರದ ಅನುದಾನದಲ್ಲಿ ಕನಕದಾಸ ಸಂಶೋಧನ ಕೇಂದ್ರದಿಂದ ಕರ್ನಾಟಕ ತತ್ವಪದ ಸಾಹಿತ್ಯ ಸಂಪುಟ ಯೋಜನೆಯಲ್ಲಿ ೩೨ ಸಂಪುಟಗಳು ಪ್ರಕಟಗೊಂಡಿವೆ. ಈಗ ೧೮ ಸಂಪುಟಗಳು ಪ್ರಕಟಣೆಯ ಹಂತದಲ್ಲಿವೆ. ಇಷ್ಟೆಲ್ಲ ಆದರೂ ಇನ್ನೂ ಕೆಲವು ತತ್ವಪದಕಾರರು ಅಜ್ಞಾತರಾಗಿಯೇ ಉಳಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ತತ್ವಪದಕಾರರು ಸಾಹಿತ್ಯ ಚರಿತ್ರೆಯಲ್ಲಿ ಸಿಗುತ್ತಾರೆ. ಅವರೆಲ್ಲರ ದಾಖಲೆಗಳು ಒಂದೆಡೆ ದೊರೆಯುವುದಿಲ್ಲ. ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿಯ ತತ್ವಪದಕಾರರ ಮೇಲೆ ಬೆಳಕು ಚೆಲ್ಲುವ ಕಾರ್ಯಗಳು ಕ್ವಚಿತ್ತಾಗಿ ನಡೆದಿವೆ. ಈ ಎಲ್ಲ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಒಂದು ವಿಶೇಷ ಪ್ರಯತ್ನವೆನಿಸಿದೆ- ಪ್ರಸ್ತುತ ‘ಕನ್ನಡ ಸಾಹಿತ್ಯದಲ್ಲಿ ಅನುಭಾವ’.

- Advertisement -

ಹಿರಿಯ ವಿದ್ವಾಂಸರು, ಪ್ರಾಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ದಿನಾಂಕ 1-10-2020 ರಂದು ವಿಜಯಪುರದಲ್ಲಿ ಜರುಗಿದ ‘ಕನ್ನಡ ಸಾಹಿತ್ಯದಲ್ಲಿ ಅನುಭಾವ’ ಎಂಬ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳ ಸಂಕಲನವಿದು.

ತತ್ವಪದ ಸಾಹಿತ್ಯದಲ್ಲಿ ಅಡಗಿರುವ ಅನುಭಾವದ ಹಿರಿಮೆ-ಗರಿಮೆ, ಸತ್ಯ-ಸೌಂದರ್ಯ, ಅರ್ಥ-ಆಶಯ, ಅಂತರಂಗ-ಬಹಿರಂಗ, ಪ್ರಜ್ಞೆ-ಪ್ರಭಾವ, ಸರಳತೆ-ಸ್ಪಷ್ಟತೆ, ಅನುಭಾವ-ಅನುಸಂಧಾನಗಳನ್ನು ಈ ಕೃತಿಯಲ್ಲಿ ಎಲ್ಲ ಲೇಖನಗಳಲ್ಲಿ ಗುರುತಿಸಬಹುದು.

ಡಾ. ಬಸವರಾಜ ಜಗಜಂಪಿ ಅವರ ‘ಕನ್ನಡ ಸಾಹಿತ್ಯದಲ್ಲಿ ಅನುಭಾವಿಗಳು’ ಮತ್ತು ಪ್ರೊ. ಬಿ. ಬಿ. ಡೆಂಗನವರ ಅವರು ಬರೆದ ‘ಕನ್ನಡ ಸಾಹಿತ್ಯದಲ್ಲಿ ಅನುಭಾವಿಗಳ ತತ್ತ್ವದರ್ಶನ’ ಈ ಎರಡೂ ಲೇಖನಗಳು ಮೇಲ್ನೊಟಕ್ಕೆ ಒಂದೇ ಆಶಯ ಹೊಂದಿದ್ದರು, ಅಭಿವ್ಯಕ್ತಿಯಲ್ಲಿ ವಿಭಿನ್ನವಾಗಿವೆ. ಡಾ. ಜಗಜಂಪಿಯವರು ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಘನಮಠ ನಾಗಭೂಷಣ ಶಿವಯೋಗಿ, ಕಡಕೋಳ ಮಡಿವಾಳಪ್ಪನವರು, ಶಿಶುನಾಳ ಶರೀಫರ ಕೆಲವು ಪದಗಳ ಉದಾಹರಣೆ ನೀಡುತ್ತ, ಅನುಭಾವ ಪರಂಪರೆಯನ್ನು ಪರಿಚಯಿಸಿದ್ದಾರೆ. ಪ್ರೊ. ಬಿ. ಬಿ. ಡೆಂಗನವರ ಅವರು ನಿಜಗುಣರ ಕೈವಲ್ಯ ಪದ್ಧತಿ ಮತ್ತು ಕಡಕೋಳ ಮಡಿವಾಳಪ್ಪನವರ ಪದಗಳನ್ನು ವಿಶ್ಲೇಷಿಸುತ್ತ- ‘ತತ್ತ್ವ ಸಾಹಿತ್ಯ ಜನಸಾಮಾನ್ಯರನ್ನು ಮುಟ್ಟಿ ಸಮಷ್ಟಿ ಮನಸ್ಸನ್ನು ಸುಸಂಸ್ಕೃತಗೊಳಿಸುವ ಒಂದು ಪ್ರಬಲ ಮಾಧ್ಯಮವಾಗಿ ಬೆಳೆದು ಜನಮನ ಸೂರೆಗೊಂಡಿದೆ’ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

ವೈ. ಎಂ. ಯಾಕೊಳ್ಳಿ ಅವರ ‘ಕೈವಲ್ಯ ಸಾಹಿತ್ಯಕ್ಕೆ ನಿಜಗುಣ ಶಿವಯೋಗಿಗಳ ಕೊಡುಗೆ’, ಎಂಬ ಲೇಖನದಲ್ಲಿ ನಿಜಗುಣರ ಷಟ್ ಶಾಸ್ತ್ತಕೃತಿಗಳನ್ನು ಆದ್ಯಂತವಾಗಿ ವಿವೇಚಿಸಿ, ನಿಜಗುಣರ ತಾತ್ವಿಕತೆಯ ಸ್ವರೂಪವನ್ನು ತಿಳಿಸಿಕೊಟ್ಟಿದ್ದಾರೆ. ವಾಯ್. ವಾಯ್. ಕೊಕ್ಕನವರ ಅವರ ‘ಅನುಭಾವ ಸಾಹಿತ್ಯದ ಸ್ವರೂಪ-ಲಕ್ಷಣ ಮತ್ತು ಧೋರಣೆಗಳು’ ಎಂಬ ಲೇಖನದಲ್ಲಿ ೨೦ ಜನ ಅನುಭಾವಿಗಳ ವಿವರಣೆಯೊಂದಿಗೆ, ಕನ್ನಡದಲ್ಲಿ ಅನುಭಾವ ಸಾಹಿತ್ಯ ಬೆಳೆದು ಬಂದ ಪರಿಯನ್ನು ವಿಶ್ಲೇಷಿಸಿದ್ದಾರೆ.

ಕೂಡಲೂರು ಬಸವಲಿಂಗ ಶರಣರು, ಸರ್ಪಭೂಷಣ ಶಿವಯೋಗಿಗಳು, ಬಾಲಲೀಲಾ ಮಹಾಂತ ಶಿವಯೋಗಿಗಳು ಮೊದಲಾದ ಶರಣ ಅನುಭಾವಿಗಳ ಕುರಿತು ಇಲ್ಲಿ ಗಂಭೀರ ಚಿಂತನೆಯ ಲೇಖನಗಳಿವೆ. ದಲಿತ ಪರಂಪರೆಯ ಚಲವಾದಿ ಚಂದಪ್ಪನ ತತ್ವಪದಗಳ ಕುರಿತು ಒಂದು ಲೇಖನವಿದೆ.

ಆದಿಲಶಾಹಿ, ಬಹುಮನಿ ಸುಲ್ತಾನರ ಆಳ್ವಿಕೆ ಕಾರಣವಾಗಿ ಕಲಬುರ್ಗಿ, ವಿಜಯಪುರ ಭಾಗಗಳಲ್ಲಿ ಕೆಲವರು ಮುಸ್ಲಿಂ ತತ್ವಪದಕಾರರು ಕನ್ನಡದಲ್ಲಿ ತತ್ವಪದಗಳನ್ನು ರಚಿಸಿದ್ದು ಗಮನಾರ್ಹ. ಅಂತಹ ಕೆಲವು ಮುಸ್ಲಿಂ ಸಂವೇದನೆಯ, ಕನ್ನಡ ಉಸಿರಿನ ತತ್ವಪದಕಾರರಾದ ಮೋಟ್ನಳ್ಳಿ ಹಸನಸಾಬ, ಶಿಶುನಾಳ ಶರೀಫರ ಕುರಿತ ಲೇಖನಗಳು ಇಲ್ಲಿವೆ. ಶರೀಫರನ್ನು ಕುರಿತು ಒಟ್ಟು ಏಳು ಲೇಖನಗಳು ಇಲ್ಲಿ ಪ್ರಕಟವಾಗಿವೆ.

ಕಲಬುರ್ಗಿ ಪ್ರದೇಶದ ಪ್ರಮುಖ ಅನುಭಾವಿ ಕಡಕೋಳ ಮಡಿವಾಳಪ್ಪ ತತ್ವಪದ ಸಾಹಿತ್ಯಕ್ಕೆ ಬಂಡಾಯದ ಸ್ಪರ್ಶ ನೀಡಿದವನು. ತಾನು ಬದುಕಿನಲ್ಲಿ ಅನುಭವಿಸಿದ ನೋವು-ಹತಾಶೆಗಳನ್ನು ತತ್ವಪದಗಳಲ್ಲಿ ಎರಕಹೊಯ್ದಿದ್ದಾನೆ. ಹೀಗಾಗಿ ಕಡಕೋಳ ಮಡಿವಾಳಪ್ಪ ಅನೇಕ ಜನ ಲೇಖಕರು ಗಮನಿಸುವ ಮುಖ್ಯ ತತ್ವಪದಕಾರನಾಗಿದ್ದಾನೆ. ಕಡಕೋಳ ಮಡಿವಾಳಪ್ಪನವರ ಜೀವನ ಮತ್ತು ತತ್ವಪದಗಳನ್ನು ಕುರಿತು ಎಸ್.ಪಿ. ಮದ್ರೇಕರ್, ಬಸವರಾಜ ಸಾಲವಾಡಗಿ, ದುಷ್ಯಂತ, ಪ್ರೀತಾ ರೆಡ್ಡಿ, ದೀಪಾ ಲಗಳಿ, ಜಕ್ಕವ್ವ ಕುಂಬಾರ, ಅಕ್ಷತಾ ಜಲವಾದಿ ಅವರು ಬರೆದ ಲೇಖನಗಳು ಗಮನ ಸೆಳೆಯುತ್ತವೆ.

ತತ್ವಪದ ರಚನೆ ಮಾಡದಿದ್ದರೂ ಅನುಭಾವಿ ಪರಂಪರೆಗೆ ತಮ್ಮ ನಡೆ ನುಡಿಗಳಿಂದ ಸಾಧನೆಯಿಂದ ಒಂದು ಘನತೆಯನ್ನು ತಂದುಕೊಟ್ಟ ಅನುಭಾವಿಗಳಾದ ಸಿದ್ಧಾರೂಢ ಮತ್ತು ಸೇವಾಲರ ಕುರಿತು ‘ಸಿದ್ಧಾರೂಢರು ಹಾಗೂ ಸಮಕಾಲೀನ ಸಮಕಾಲೀನ ಮಹಾತ್ಮರು’, ‘ಸಂತ ಸೇವಾಲಾಲ’ ಎಂಬ ಲೇಖನಗಳು ಇಲ್ಲಿ ಎಡೆಪಡೆದಿವೆ. ತ್ರಿಪದಿ ಬರೆದ ಸರ್ವಜ್ಞನ, ಕೀರ್ತನ ಬರೆದ ಪುರಂದರದಾಸರ ಕುರಿತು ತಲಾ ಒಂದೊಂದು ಲೇಖನಗಳಿವೆ.

ಈ ವಿಚಾರ ಸಂಕಿರಣ ವಿಜಯಪುರದಲ್ಲಿ ನಡೆದ ಕಾರಣ, ವಿಜಯಪುರ ಜಿಲ್ಲೆಯ ಹಲಸಂಗಿ ಗೆಳೆಯರ ಬಳಗದ ಮಧುರಚೆನ್ನರು ಇಲ್ಲಿಯ ಉಪನ್ಯಾಸಕರ ಗಮನ ಸೆಳೆದಿದ್ದಾರೆ. ಕನ್ನಡ ನವೋದಯ ಕಾಲಘಟ್ಟದಲ್ಲಿ ಅನುಭಾವ ಸಾಹಿತ್ಯವನ್ನು ಅತ್ಯಂತ ವಸ್ತುನಿಷ್ಠವಾಗಿ ಸಮೃದ್ಧವಾಗಿ ರಚಿಸಿದ ಕೀರ್ತಿ ಮಧುರಚೆನ್ನರಿಗೆ ಸಲ್ಲಬೇಕು. ೧೯೩೩ರಲ್ಲಿ ಪ್ರಕಟವಾದ ಅವರ ‘ನನ್ನ ನಲ್ಲ’ ಕನ್ನಡ ಆನುಭಾವಿಕ ಕಾವ್ಯ ಪ್ರಕಾರದ ಒಂದು ಗೌರಿಶಂಕರವೆಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ ಮಧುರಚೆನ್ನರ ಸಾಹಿತ್ಯ ಸಖ್ಯಯೋಗ ಹಾಗೂ ಅನುಭಾವದ ನೆಲೆಗಳು, (ಲಕ್ಷ್ಮಿ ಮೋರೆ), ಮಧುರಚೆನ್ನ (ಎಂ. ಬಿ. ಕೊಪ್ಪದ), ಅನುಭಾವ ಸಾಹಿತ್ಯಕ್ಕೆ ಹಲಸಂಗಿ ಗೆಳೆಯರ ಕೊಡುಗೆ (ಸುನಂದಾ ಪ್ರೇಮಸಿಂಗ) ಈ ಲೇಖನಗಳು ನಮ್ಮ ಗಮನ ಸೆಳೆಯುತ್ತವೆ.

ದಕ್ಷಿಣ ಕರ್ನಾಟಕದ ತತ್ವಪದಕಾರರಲ್ಲಿ ಪ್ರಮುಖನಾದ ಕೈವಾರ ನಾರಾಯಣಪ್ಪನವರ ಕುರಿತು ಮೂರು ಲೇಖನಗಳು ಇಲ್ಲಿ ಪ್ರಕಟಗೊಂಡಿವೆ. ಉತ್ತರ ಕರ್ನಾಟಕವನ್ನು ಹೊರತುಪಡಿಸಿದರೆ, ಕೈವಾರ ನಾರಾಯಣ ಒಬ್ಬನೇ ಇಲ್ಲಿಯ ಅಧ್ಯಯನದ ತೆಕ್ಕೆಗೆ ಒಳಪಟ್ಟಿದ್ದಾನೆ.

ಇಲ್ಲಿಯ ಕೆಲವು ಲೇಖಕರು ಅನುಭಾವಿಗಳ ಜೀವನ-ಸಾಧನೆಗೆ ಹೆಚ್ಚು ಗಮನ ಹರಿಸಿದ್ದಾರೆ. ಅನುಭಾವಿಗಳ ತತ್ವಪದಗಳ ಅನುಸಂಧಾನಕ್ಕೆ ಒಂದಿಷ್ಟು ಪ್ರಾಧಾನ್ಯತೆ ನೀಡಬಹುದಾಗಿತ್ತು. ಆದರೆ ಅವರು ತಮಗೆ ದೊರೆತಷ್ಟು ಸಾಮಗ್ರಿಯನ್ನು ಬಳಸಿಕೊಂಡು, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಲೇಖನಗಳನ್ನು ಬರೆಯಲು ಪ್ರಯತ್ನಿಸಿದ್ದಾರೆ.

ಡಾ. ಬಸವರಾಜ ಜಗಜಂಪಿ, ಪ್ರೊ. ಬಿ. ಬಿ. ಡೆಂಗನವರ, ಪ್ರೊ. ವಾಯ್. ಎಂ. ಯಾಕೊಳ್ಳಿ, ಪ್ರೊ. ಎಂ. ಬಿ. ಕೊಕ್ಕನವರ ಈ ಮೊದಲಾದ ಕೆಲವು ಹಿರಿಯ ವಿದ್ವಾಂಸರನ್ನು ಹೊರತುಪಡಿಸಿದರೆ, ಇಲ್ಲಿಯ ಬಹಳಷ್ಟು ಬರಹಗಾರರು ಸಾಹಿತ್ಯ ಕೃಷಿಯ ಪ್ರಾಥಮಿಕ ಹಂತದವರೂ ಇದ್ದಾರೆ. ಇನ್ನು ಕೆಲವರು ‘ಪದವೀಧರ’ರಿದ್ದಾರೆ, ಮತ್ತೆ ಕೆಲವರು ‘ಸ್ನಾತಕೋತ್ತರ ಪದವಿ’ಯವರೂ ಇದ್ದಾರೆ. ಒಟ್ಟಾರೆ, ಅವರೆಲ್ಲ ಬೆಳೆಯುತ್ತಿರುವ ಪ್ರತಿಭೆಗಳು. ಅವರ ಬರಹಗಳಲ್ಲಿ ಸಾಹಿತ್ಯ ಸೌಂದರ್ಯವನ್ನಾಗಲಿ, ವಿದ್ವತ್ತು-ವ್ಯಾಕರಣಗಳನ್ನಾಗಲಿ, ವಾಕ್ಯರಚನೆಯ ಶಿಸ್ತನ್ನಾಗಲಿ ನಿರೀಕ್ಷಿಸಬೇಕಾಗಿಲ್ಲ. ಅಲ್ಲಿ ಗಮನಿಸಬೇಕಾದುದು, ಅವರ ವಿಷಯ ಸಂಗ್ರಹದ ಸ್ಪಷ್ಟತೆ, ಅಭಿವ್ಯಕ್ತಿಯಲ್ಲಿ ಸಮಗ್ರತೆ. ಇಲ್ಲಿ ಅವರು ಬಳಸುವ ಭಾಷೆಗಿಂತ ಭಾವ ಮುಖ್ಯವಾಗಿದೆ. ಅವರ ಬದುಕು ಮತ್ತು ಅನುಭವ ಮಾಗಿದಂತೆ ಅವರಿಂದ ಇನ್ನೂ ಹೆಚ್ಚು ಚಿಕಿತ್ಸಕ ದೃಷ್ಟಿಯ ಬರಹಗಳು ಮೂಡಿಬರುತ್ತವೆ ಎಂಬ ಭರವಸೆ ನನ್ನದು. ಬರವಣಿಗೆಯನ್ನು ಎಲ್ಲ ಹಂತಗಳಲ್ಲಿ ಅವರು ದುಡಿಸಿಕೊಳ್ಳುತ್ತ ಹೋದಂತೆ, ಪ್ರಬುದ್ಧ ಬರಹಗಾರರಾಗುವ ಎಲ್ಲ ಲಕ್ಷಣಗಳನ್ನು ಅವರ ಬರಹಗಳಲ್ಲಿ ಕಾಣಬಹುದು.

ಇಂದು ಓದುವ ಅಭಿರುಚಿ ಕಡಿಮೆಯಾಗಿದೆ. ಹೀಗಾಗಿ ಕೆಲವು ಲೇಖಕರು ಸಂಬಂಧಪಟ್ಟ ಹಿಂದೆ ಪ್ರಕಟವಾದ ಕೃತಿಗಳಿಂದ ಅನೇಕ ವಿಷಯಗಳನ್ನು ಯಥಾವತ್ತಾಗಿ ತೆಗೆದುಕೊಳ್ಳುವ ಒಂದು ಕೆಟ್ಟ ಪದ್ಧತಿ ಇಂದು ಹೆಚ್ಚಾಗುತ್ತಿದೆ. ಅವುಗಳನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ. ಆದರೂ ಲೇಖಕರು ಬೇರೊಬ್ಬರ ವಿಚಾರಗಳನ್ನು ಯಥಾವತ್ತಾಗಿ ತೆಗದುಕೊಂಡರೆ, ಅದು ಕೃತಿಚೌರ್ಯವಾಗುತ್ತದೆ ಎಂಬುದರ ಕನಿಷ್ಠ ಪರಿಜ್ಞಾನವಾದರೂ ಬೇಕಾಗುತ್ತದೆ. ಇಲ್ಲಿಯ ಎಲ್ಲ ಬರಹಗಳು ಇಂಥ ಅಪವಾದದಿಂದ ಮುಕ್ತವಾಗಿವೆ. ವಿದ್ಯಾರ್ಥಿಗಳು ತಮ್ಮ ಬುದ್ಧಿಸಾಮರ್ಥ್ಯದ ಇತಿಮಿತಿಯೊಳಗೆ ಹೇಳಬೇಕಾದುದನ್ನು ನೇರವಾಗಿ ಸ್ಪಷ್ಟವಾಗಿ ಹೇಳಿರುವುದು ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.

ಈ ಉಪನ್ಯಾಸಗಳನ್ನೆಲ್ಲ ಅಚ್ಚುಕಟ್ಟಾಗಿ ಸಂಗ್ರಹಿಸಿ, ಸಂಪಾದಿಸಿ, ಬರವಣಿಗೆಯನ್ನು ತಿದ್ದಿ ತೀಡಿ ಒಂದು ಮೂರ್ತರೂಪ ಕೊಟ್ಟು, ಕೃತಿ ಸರ್ವಾಂಗ ಸುಂದರವಾಗಿ ಪ್ರಕಟವಾಗುವಲ್ಲಿ ಶ್ರಮಿಸಿದ ಪ್ರೊ. ಬಿ. ಬಿ. ಡೆಂಗನವರ ಅವರ ಅರ್ಪಣಾ ಮನೋಭಾವದ ಸಂಪಾದನ ಶ್ರಮ-ಶ್ರದ್ಧೆಗೆ ವಂದನೆ-ಅಭಿನAದನೆಗಳು. ಕನ್ನಡದ ಅನುಭಾವ ಮಾರ್ಗ ಪ್ರಸ್ತುತ ಕೃತಿಯಲ್ಲಿ ಮಹಾಮಾರ್ಗವಾಗಿ ನಿಂತಿದೆ. ಸಮಸ್ತ ಕನ್ನಡಿಗರು ಈ ಮಹತ್ವದ ಕೃತಿಯನ್ನು ಆದರದಿಂದ, ಅಕ್ಕರೆಯಿಂದ ಬರಮಾಡಿಕೊಳ್ಳುವಂತಾಗಲಿ.


ಪ್ರಕಾಶ ಗಿರಿಮಲ್ಲನವರ
ಬೆಳಗಾವಿ

- Advertisement -
- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!