ಗುರು ಲಿಂಗ ಜಂಗಮ (ಪಿಎಚ್.ಡಿ. ಮಹಾಪ್ರಬಂಧ)
ಲೇಖಕರು : ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ,
ಪ್ರಕಾಶನ : ಅರಿವು ಪ್ರಕಾಶನ, ಶಿವಮೊಗ್ಗ
ಮುದ್ರಣ : ೨೦೨೧ ಬೆಲೆ: ರೂ. ೩೦೦/-
(ಸ್ವಾಮೀಜಿ ಮೊ: 8095421985)
ಡಾ. ಶ್ರೀ ಬಸವಮರುಳಸಿದ್ಧ ಸ್ವಾಮೀಜಿ, ಬಸವಕೇಂದ್ರ ಶಿವಮೊಗ್ಗ ಅವರು ಕುವೆಂಪು ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿದ ಪಿಎಚ್.ಡಿ. ಸಂಶೋಧನಾ ಮಹಾಪ್ರಬಂಧ ‘ಗುರು ಲಿಂಗ ಜಂಗಮ’ ಈಗ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿರುವುದು ಸಂತೋಷದ ಸಂಗತಿಯಾಗಿದೆ.
೧೨ನೇ ಶತಮಾನದಲ್ಲಿ ಬಸವಾದಿ ಶಿವಶರಣರಿಂದ ಅಸ್ತಿತ್ವಕ್ಕೆ ಬಂದ ಲಿಂಗಾಯತ ಧರ್ಮದ ಅತ್ಯಂತ ಜನಪ್ರಿಯ ಪರಿಭಾಷೆಗಳೆಂದರೆ ಗುರು-ಲಿಂಗ-ಜಂಗಮ. ಈ ಮೂರೂ ಸಾಧಕನ ಬೆಳವಣಿಗೆಯ ಹಂತದಲ್ಲಿ ಅವಶ್ಯವಾಗಿ ಬೇಕಾದವುಗಳು. ಸಾಧಕನಿಗೆ ದೀಕ್ಷೆ ನೀಡುವವನೇ ಗುರು. ಗುರುವಿನಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದು, ಲಿಂಗ-ಜಂಗಮ ಒಂದೇ ಎಂದು ಪರಿಭಾವಿಸಿ ಬದುಕುವನೇ ನಿಜವಾದ ಸಾಧಕ ಎಂದು ಗುರುತಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅತ್ಯಮೂಲ್ಯವಾದ ಈ ಮೂರು ವಿಷಯಗಳನ್ನು ಕುರಿತು ಆಳವಾಗಿ ಅಧ್ಯಯನ ಮಾಡಿ, ಕೆಲವು ಹೊಸ ಹೊಳವುಗಳನ್ನು ನೀಡಿದ್ದಾರೆ ಪೂಜ್ಯ ಶ್ರೀ ಡಾ. ಬಸವಮರುಳಸಿದ್ಧ ಸ್ವಾಮೀಜಿಯವರು.
ಒಟ್ಟು ಏಳು ಅಧ್ಯಾಯಗಳಲ್ಲಿ ರೂಪಗೊಂಡ ಈ ಕೃತಿ ಓದುಗರಿಗೆ ಗುರು ಲಿಂಗ ಜಂಗಮ ಕುರಿತು ಒಂದು ಸ್ಪಷ್ಟವಾದ ಪರಿಕಲ್ಪನೆಯನ್ನು ಕಟ್ಟಿಕೊಡುತ್ತದೆ.
ಮೊದಲ ಅಧ್ಯಾಯ-ಪ್ರವೇಶಿಕೆಯಲ್ಲಿ ಗುರು ಲಿಂಗ ಜಂಗಮ ಪರಿಕಲ್ಪನೆಗಳ ಅಧ್ಯಯನವು ಯಾವ ತಳಹದಿಯ ಮೇಲೆ ಸಾಗುತ್ತದೆ ಎಂಬುದನ್ನು ದೃಢೀಕರಿಸಿದ್ದಾರೆ. ವಚನಗಳಲ್ಲಿ, ಮಧ್ಯಕಾಲೀನ ಕವಿಗಳಾದ ಹರಿಹರ, ಚಾಮರಸ, ಭೀಮಕವಿಗಳ ಕಾವ್ಯಗಳಲ್ಲಿ ಮತ್ತು ೧೫ನೇ ಶತಮಾನದಲ್ಲಿ ನೂರೊಂದು ವಿರಕ್ತರ ಕಾಲದಲ್ಲಿ ರೂಪುಗೊಂಡ ವಚನ ಸಂಕಲನಗಳಲ್ಲಿ ಮೂಡಿಬಂದ ಪರಿಕಲ್ಪನೆಗಳನ್ನು ಸ್ವಾಮೀಜಿಯವರು ವಿಶ್ಲೇಷಣೆಗೆ ಒಳಗು ಮಾಡಿದ್ದಾರೆ.
ವಚನಕಾರರ ಪರಿಕಲ್ಪನೆಗಳು ಎಂಬ ಎರಡನೆಯ ಅಧ್ಯಾಯದಲ್ಲಿ ೧೨ನೇ ಶತಮಾನದಲ್ಲಿ ಹೊಸದಾಗಿ ರೂಪಗೊಂಡ ಲಿಂಗಾಯತ ಧರ್ಮವು ತನ್ನದೇ ಆದ ಪರಿಭಾಷೆ-ಪರಿಕಲ್ಪನೆಗಳನ್ನು ರೂಪಿಸಬೇಕಾಗಿತ್ತು. ಅದಕ್ಕಾಗಿ ಅಷ್ಟಾವರಣ-ಪಂಚಾಚಾರ-ಷಟ್ಸ್ಥಲ ಸಿದ್ಧಾಂತವನ್ನು ನಿರೂಪಿಸಿ, ಇವುಗಳ ತಾತ್ವಿಕ ನೆಲೆಗಟ್ಟಿನ ಮೇಲೆ ಲಿಂಗಾಯತಧರ್ಮದ ಸೌಧವು ರೂಪುಗೊಳ್ಳಬೇಕೆಂಬ ಆಶಯ ವಚನಕಾರರದಾಗಿತ್ತು. ಅಂತೆಯೆ ಈ ಅಧ್ಯಾಯದಲ್ಲಿ ಸ್ವಾಮೀಜಿ ಅವರು ಅಷ್ಟಾವರಣ-ಪಂಚಾಚಾರ-ಷಟ್ಸ್ಥಲಗಳ ಸಂಕ್ಷಿಪ್ತವಾಗಿಯಾದರೂ ಸಮಗ್ರವಾದ ಮಾಹಿತಿಯನ್ನು ನೀಡಿ ಉಪಕರಿಸಿದ್ದಾರೆ.
ವಚನಗಳಲ್ಲಿ ಗುರು ಲಿಂಗ ಜಂಗಮ ಎಂಬ ಮೂರನೆಯ ಅಧ್ಯಾಯದಲ್ಲಿ ಈ ವರೆಗೆ ಪ್ರಕಟಗೊಂಡ ೨೧ ಸಾವಿರ ವಚನಗಳನ್ನು ಸೂಕ್ಷö್ಮವಾಗಿ ಆಳವಾಗಿ ಅಧ್ಯಯನ ಮಾಡಿ, ಅಲ್ಲಿಯ ಸೂಕ್ತವಾದ ಯುಕ್ತವಾದ ವಚನಗಳನ್ನು ಆಯ್ದುಕೊಂಡು ವಿಶ್ಲೇಷಣೆ ಮಾಡಿರುವುದು ಸ್ವಾಮೀಜಿಯವರ ವಿಚಕ್ಷಣತೆಗೆ ಹಿಡಿದ ಕನ್ನಡಿಯಾಗಿದೆ. ಎಲ್ಲ ಶರಣರ ವಚನಗಳನ್ನು ತಲಸ್ಪರ್ಶಿಯಾಗಿ ಚಿಂತನೆ ಮಾಡಿ ಸೂಕ್ತವಾದ ನಿರ್ಣಯಕ್ಕೆ ಬರುತ್ತಾರೆ. ಗುರು ಶಬ್ದದ ವಿವರಣೆ, ಗುರು-ಶಿಷ್ಯ ಬಾಂಧವ್ಯ, ಗುರುವಿನಿಂದ ಪಡೆಯುವ ದೀಕ್ಷೆ ಮೊದಲಾದ ವಿಷಯ ವಿವೇಚನೆ ಜೊತೆಗೆ, ಅರಿವೇ ಗುರುವಾಗುವ ಪರಿಯನ್ನು ವಿವರಿಸಿದ್ದಾರೆ. ‘ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ’ ಎಂಬ ಅಲ್ಲಮನ ವಚನವನ್ನು ವರ್ತಮಾನದ ನೆಲೆಯಲ್ಲಿಯೂ ವಿಶ್ಲೇಷಣೆ ಮಾಡಿರುವುದು ಔಚಿತ್ಯಪೂರ್ಣವಾಗಿದೆ.
ಲಿಂಗದ ಕುರಿತಾಗಿಯೂ ವಚನಗಳಲ್ಲಿ ಅಡಕವಾಗಿರುವ ಮೌಲಿಕ ಚಿಂತನೆಗಳನ್ನು ಆರಿಸಿ ತೆಗೆದಿರುವುದು ಸಾಗರವನ್ನು ಶೋಧಿಸಿ ಮುತ್ತು ರತ್ನಗಳನ್ನು ತೆಗೆದಂತಾಗಿದೆ. ವಿದ್ವಾಂಸರ ಅಭಿಪ್ರಾಯಗಳನ್ನು ಅಳೆದು ತೂಗಿ ನೋಡುವ ಗುಣದಿಂದ ಶ್ರೀಗಳ ಪ್ರಬಂಧ ಇನ್ನಷ್ಟು ಪರಿಪುಷ್ಟವಾಗಿ ಬೆಳೆದಿದೆ. ಡಾ. ಎಂ. ಎಂ. ಕಲಬುರ್ಗಿಯವರು ‘ಇಷ್ಟಲಿಂಗ’ ಎಂಬ ಲೇಖನ ಬರೆದು, ಇಷ್ಟಲಿಂಗವೆನ್ನುವುದು ಸ್ಥಾವರಲಿಂಗ ಸೂಚಿಸುವ ಪದ, ಆದ್ದರಿಂದ ಇಷ್ಟಲಿಂಗದ ಬದಲಾಗಿ ಆಯತಲಿಂಗ ಎಂದು ಕರೆಯಬೇಕೆಂದು ಹೇಳಿದ್ದರು. ಆದರೆ ಶ್ರೀಗಳು “ಕಲಬುರ್ಗಿಯವರ ಅಭಿಪ್ರಾಯ ತಾತ್ವಿಕವಾಗಿ ಸರಿಯೆನಿಸುತ್ತದೆ. ಹಾಗೆಂದು ಇಷ್ಟಲಿಂಗವನ್ನು ಆಯತಲಿಂಗವೆಂದೇ ಕರೆಯಬೇಕು ಎಂದು ತೀರ್ಮಾನಿಸಲೂ ಆಗದು. ಏಕೆಂದರೆ, ವಚನಕಾರರು ಬಳಸಿರುವ ಗುರು, ಲಿಂಗ, ಜಂಗಮ, ಮಂತ್ರ, ರುದ್ರಾಕ್ಷಿ ಮೊದಲಾದ ಪರಿಕಲ್ಪನೆಗಳು ಶೈವಮೂಲದಿಂದ ಬಂದವುಗಳಾಗಿವೆ, ಅವುಗಳಿಗೆ ಶೈವದಲ್ಲಿಯೂ ತಾತ್ವಿಕ ಅರ್ಥಗಳಿವೆ. ಆದರೆ ಈ ಎಲ್ಲ ಪರಿಕಲ್ಪನೆಗಳು ವಚನಕಾರರ ಪರಿಧಿಯಲ್ಲಿ ಹೊಸರೀತಿಯ ತಾತ್ವಿಕತೆಯನ್ನು ಪಡೆದುಕೊಂಡಿರುವುದನ್ನು ಗಮನಿಸಿದರೆ, ಇಷ್ಟಲಿಂಗ ಎಂಬ ಪದವೂ ಕೂಡಾ ವಚನಕಾರರ ಪರಿಕಲ್ಪನೆಯ ಲಿಂಗವಂದೇ ಪ್ರಸಿದ್ಧವಾಗಿರುವುದರಿಂದ ಇಷ್ಟಲಿಂಗ ಪದಬಳಕೆಯೇ ಸೂಕ್ತ ಎಂದು ಭಾವಿಸಬಹುದು’ (ಪು. ೯೭) ಎಂಬ ನಿರ್ಣಯಕ್ಕೆ ಬರುತ್ತಾರೆ.
ಶ್ರೀಗಳು ಇಷ್ಟಲಿಂಗವನ್ನು ಸಾಮಾಜಿಕ, ಧಾರ್ಮಿಕ ನೆಲೆಯಲ್ಲಿಯೂ ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ವರ್ತಮಾನದ ಸಂದರ್ಭದಲ್ಲಿ ಲಿಂಗಧಾರಿಗಳದೇ ಆದ ಒಂದು ಹೊಸ ಶ್ರೇಣೀಕೃತ ವ್ಯವಸ್ಥೆ ನಿರ್ಮಾಣವಾಗಿದೆ ಎಂಬ ವಿಚಾರಕ್ಕೆ ಶ್ರೀಗಳು ಉತ್ತರವಾಗಿ ‘ವಚನಕಾರರ ಆಶಯಗಳಲ್ಲಿ ಇಷ್ಟಲಿಂಗವು ಬಹಳ ಅರ್ಥಪೂರ್ಣವಾದ ತಾತ್ವಿಕ ಬದ್ಧತೆಯ ಸಂಕೇತವಾಗಿದೆ. ಆದ್ದರಿಂದ ಇಷ್ಟಲಿಂಗದ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ಈ ಶ್ರೇಣೀಕರಣಕ್ಕೆ ಅದನ್ನು ಧರಿಸಿದ ಇಂದಿನ ಜನರ ಅಜ್ಞಾನವನ್ನು ದೂರಬೇಕೇ ಹೊರತು ವಚನಕಾರರ ಆಶಯಗಳನ್ನು ಅನುಮಾನಿಸುವುದಲ್ಲ.” (ಪು. ೧೧೭) ಎಂಬ ಅಭಿಪ್ರಾಯ ನಿಜವೆನಿಸುತ್ತದೆ.
ಗುರು-ಲಿಂಗದ ತರುವಾಯ ವಚನಗಳಲ್ಲಿ ನಿರೂಪಿತವಾದ ಜಂಗಮ ಪರಿಕಲ್ಪನೆಯನ್ನು ಶ್ರೀಗಳು ವಿವೇಚನೆಗೆ ಎತ್ತಿಕೊಂಡಿದ್ದಾರೆ. ಅಲ್ಲಮನ ವಚನವೊಂದರಲ್ಲಿ ಜಂಗಮನ ೯ ಲಕ್ಷಣಗಳನ್ನು ಗುರುತಿಸಿದ್ದಾರೆ. ಚಲನಶೀಲತೆಯೇ ಜಂಗಮದ ಲಕ್ಷಣವೆಂದು, ಜಂಗಮತ್ವ ಕೇವಲ ಜಾತಿಯಿಂದ ಬರುವುದಿಲ್ಲ, ಭಕ್ತರಾದವರೆಲ್ಲರೂ ಜಂಗಮರಾಗಬಹುದು ಎಂಬ ಶ್ರೀಗಳ ಆಲೋಚನೆ ಸಮುಚಿತವಾಗಿದೆ. ಜಂಗಮವೆಂದರೆ ವ್ಯಕ್ತಿಯಲ್ಲ, ಅದೊಂದು ವ್ಯಕ್ತಿತ್ವ, ಜಂಗಮಕ್ಕೆ ಭೇದಗಳಿಲ್ಲ, ಭಕ್ತ-ಜಂಗಮ ಸಂಬಂಧ ಮೊದಲಾದ ಪರಿಕಲ್ಪನೆಗಳನ್ನು ವಿಸ್ತರಿಸುತ್ತ ಜಂಗಮವೆಂದರೆ ಸಮಾಜ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸ್ಥಾವರ-ಜಂಗಮ, ಜಂಗಮ ಕಾಯಕ ಸಿದ್ಧಾಂತಗಳನ್ನು ತುಂಬ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.
ನಾಲ್ಕನೆಯ ಅಧ್ಯಾಯ-ಸೃಜನ ಕೃತಿಗಳಲ್ಲಿ ಗುರು ಲಿಂಗ ಜಂಗಮ ಎಂಬುದಾಗಿದ್ದು. ೧೨ನೇ ಶತಮಾನದಿಂದ ೧೮ನೇ ಶತಮಾನದವರೆಗೆ ವಚನಕಾರರ ವಸ್ತು ದರ್ಶನಗಳನ್ನಾಧರಿಸಿ ೫೮ ಕವಿಗಳಿಂದ ಸುಮಾರು ೬೨ ಕೃತಿಗಳು ರಚನೆಯಾಗಿವೆ. ಅವುಗಳಲ್ಲಿ ಅತ್ಯಂತ ಮಹತ್ವವಾದ ಹರಿಹರನ ರಗಳೆಗಳು, ಭೀಮಕವಿಯ ಬಸವಪುರಾಣ ಮತ್ತು ಚಾಮರಸನ ಪ್ರಭುಲಿಂಗಲೀಲೆ ಈ ಮೂರೂ ಕೃತಿಗಳನ್ನು ಆಧರಿಸಿ ಇವುಗಳಲ್ಲಿ ಪ್ರಸ್ತಾಪಿತವಾದ ಗುರು-ಲಿಂಗ-ಜಂಗಮ ಪರಿಕಲ್ಪನೆಗಳನ್ನು ಶೋಧಿಸುವ ಪ್ರಯತ್ನ ಮಾಡಿದ್ದಾರೆ.
ಶರಣರ ಚರಿತ್ರೆಗಳನ್ನು ಮೊದಲು ಬರೆದ ಕವಿ ಹರಿಹರ. ಆತನನ್ನು ಮಹಾಕವಿಯೆಂದು ಗೌರವಿಸಲಾಗುತ್ತದೆ. ಭಕ್ತಿಯ ಸಿದ್ಧಾಂತವನ್ನು ಪ್ರಚುರಪಡಿಸುವ ಆವೇಶದಲ್ಲಿ ಹರಿಹರ ಶರಣರ ವ್ಯಕ್ತಿತ್ವಕ್ಕೆ ಧಕ್ಕೆ ಬರುವ ಕೆಲವು ಪ್ರಸಂಗಗಳನ್ನು ಹುಟ್ಟುಹಾಕಿದ ಎಂಬುದು ಶ್ರೀಗಳ ಅಭಿಪ್ರಾಯ. ಬಸವಣ್ಣನವರು ತಮ್ಮ ಮಡದಿಯನ್ನು ಜಂಗಮನೋರ್ವನಿಗೆ ಕಳಿಸಿದ ಪ್ರಸಂಗವನ್ನು ಶ್ರೀಗಳು ವಿಶ್ಲೇಷಣೆ ಮಾಡುತ್ತ, “ಹರಿಹರ ಚಿತ್ರಿಸಿದ ಮಾಯಿದೇವಿ ಪ್ರಸಂಗ, ಅವನು ಬಸವಣ್ಣನ ಜಂಗಮಪ್ರಾಣಿತ್ವವನ್ನು ಸ್ಥಿರೀಕರಿಸುವ ಭರದಲ್ಲಿ ಬಸವಣ್ಣನ ಹಾಗೂ ನೀಲಮ್ಮನ ವ್ಯಕ್ತಿತ್ವವನ್ನು ಹನನ ಮಾಡುತ್ತಿರುವನೆಂಬ ಅರಿವನ್ನು ಕಳೆದುಕೊಂಡಿದ್ದಾನೆ ಎನ್ನಬೇಕಾಗುತ್ತದೆ. ಇಂಥ ಪ್ರಸಂಗಗಳೇ ಮುಂದೆ, ಸಮಾಜದ ನಡುವೆ ಜಂಗಮ ವೇಷ ಧರಿಸಿಕೊಂಡು ಅನಾಚಾರ ನಡೆಸುವವರಿಗೆ ಸಮರ್ಥನೆ ಒದಗಿಸುವಂತಾದರೆ ಗತಿ ಏನು? ಆದ್ದರಿಂದ ಮಹಾಕವಿ ಆದರೇನಂತೆ, ಹರಿಹರ ಚಿತ್ರಿಸಿದ ಈ ಪ್ರಸಂಗ ತಿರಸ್ಕಾರ ಯೋಗ್ಯವೆಂದೇ ಅನಿವಾರ್ಯವಾಗಿ ಹೇಳಬಾಗುತ್ತದೆ” ಪು. ೧೫೫) ಶ್ರೀಗಳ ಅಭಿಪ್ರಾಯ ಯಥಾರ್ಥಯೋಗ್ಯವೆನಿಸುತ್ತದೆ.
ಹರಿಹರ ಶೈವಕವಿಯಾದ್ದರಿಂದ ಆತನಿಗೆ ಇಷ್ಟಲಿಂಗ-ಸ್ಥಾವರಲಿಂಗಗಳ ವ್ಯತ್ಯಾಸವೇ ಗೊತ್ತಿಲ್ಲವೆಂದು ಆತ ಭಕ್ತಿಯ ಬೆಳೆಯನ್ನು ಬೆಳೆಯಲು ಬೇಕಾದ ಪ್ರಸಂಗಗಳನ್ನು ಸೃಷ್ಟಿಮಾಡಿಕೊಂಡು ಕಾವ್ಯಗಳನ್ನು ರಚಿಸಿದ್ದಾನೆಂದು ಶ್ರೀಗಳು ಹೇಳುತ್ತಾರೆ.
ಸಂಕಲನ ಕೃತಿಗಳಲ್ಲಿ ಗುರು ಲಿಂಗ ಜಂಗಮ ಎಂಬ ಐದನೆಯ ಅಧ್ಯಾಯದಲ್ಲಿ ಶ್ರೀಗಳು ಶೂನ್ಯಸಂಪಾದನೆ ಮತ್ತು ಲಿಂಗಲೀಲಾ ವಿಲಾಸ ಚಾರಿತ್ರ ಕೃತಿಗಳನ್ನು ಆಯ್ದುಕೊಂಡು ವಿವೇಚಿಸಿದ್ದಾರೆ. ವಿಜಯನಗರದ ಇಮ್ಮಡಿ ಪ್ರೌಢದೇವರಾಯನ ಕಾಲದಲ್ಲಿ ೨೬ ಕವಿಗಳಿಂದ ೬೫ಕ್ಕೂ ಹೆಚ್ಚು ವಚನ ಸಂಕಲನಗಳು ರಚನೆಯಾಗಿವೆ. ಅವುಗಳಲ್ಲಿ ಶ್ರೀಗಳು ಎರಡು ಸಂಕಲನಗಳನ್ನು ತಮ್ಮ ಅಧ್ಯಯನ ವ್ಯಾಪ್ತಿಗೆ ಒಳಗು ಮಾಡಿದ್ದಾರೆ. ಶೂನ್ಯಸಂಪಾದನೆಯAತೂ ಯುಗದ ಸೃಷ್ಟಿ. ಅದರಲ್ಲಿ ಸಿದ್ಧರಾಮನ ಲಿಂಗದೀಕ್ಷಾ ಪ್ರಸಂಗ, ನುಲಿಯ ಚಂದಯ್ಯನ ಲಿಂಗ ನಿರಾಕರಣ ಪ್ರಸಂಗಗಳು ಬರುತ್ತವೆ. ಹಾಗೆಯೇ ಕಲ್ಲುಮಠದ ಪ್ರಭುದೇವನ ‘ಲಿಂಗಲೀಲಾ ವಿಲಾಸ ಚಾರಿತ್ರ’ ಒಂದು ಅದ್ಭುತ ಸಂಕಲನ ಕೃತಿಯಾಗಿದೆ. ಇದರಲ್ಲಿ ಸಂಸ್ಕೃತ ಶ್ಲೋಕಗಳ ಸೇರ್ಪಡೆಯಾದ ವಿಷಯ, ಮತ್ತು ಪ್ರಭುದೇವನ ಸ್ಥಲತತ್ವ ನಿರ್ಣಯ ಕುರಿತು ಶ್ರೀಗಳು ಗಂಭೀರವಾಗಿ ಚರ್ಚಿಸಿದ್ದಾರೆ.
ಜಂಗಮದಿಂದ ಸ್ಥಾವರಕ್ಕೆ ಎಂಬ ಆರನೆಯ ಅಧ್ಯಾಯದಲ್ಲಿ ಯಾವ ಶರಣರು ಜಾತಿ-ವರ್ಗ-ವರ್ಣ ಲಿಂಗ ಭೇದರಹಿತ ಸಮಾಜ ನಿರ್ಮಾಣಕ್ಕೆ ಕಾರ್ಯತತ್ಪರರಾಗಿದ್ದರೋ ಅವರ ಅನುಯಾಯಿಗಳಿಂದ ಆ ತತ್ವಗಳು ಮತ್ತೆ ಜಡತ್ವವನ್ನು ಅಂದರೆ ಸ್ಥಾವರತ್ವವನ್ನು ಪಡೆದ ವಿಷಯವನ್ನು ಶ್ರೀಗಳು ತುಂಬ ಸಮಚಿತ್ತದಿಂದ ವ್ಯಾಖ್ಯಾನಿಸಿದ್ದಾರೆ. ಬ್ರಿಟಿಷ್ ಸರಕಾರ ೧೯ನೇ ಶತಮಾನದ ಆರಂಭ ಘಟ್ಟದಲ್ಲಿ ಜನಗಣತಿ ಮಾಡುವ ಸಂದರ್ಭದಲ್ಲಿ ನಡೆದ ಪ್ರಸಂಗಗಳನ್ನು ಶ್ರೀಗಳು ಇಲ್ಲಿ ಕೊಟ್ಟಿದ್ದಾರೆ. ವಾರದ ಮಲ್ಲಪ್ಪನವರು, ಶಿರಸಂಗಿ ಲಿಂಗರಾಜರು, ಅರಟಾಳ ರುದ್ರಗೌಡರು ಮೊದಲಾದವರು ಸಮಾಜ ಸಂಘಟನೆಯ ಕಾರ್ಯವನ್ನು ಮಾಡುವುದರ ಜೊತೆಗೆ ಒಗ್ಗೂಡಿಸುವ ಕಾರ್ಯವನ್ನು ಮಾಡಿದರು. ಆದರೂ ಜಾತಿಭೇದದ ಕವಲುಗಳು ಹೆಚ್ಚಾಗುತ್ತಲೇ ಬಂದ ಪರಿಯನ್ನು ಶ್ರೀಗಳು ಗುರುತಿಸಿದ್ದಾರೆ.
ಈ ಮಹಾಪ್ರಬಂಧದ ಒಂದು ಮುಖ್ಯ ಭಾಗ ಟಿ.ಜಿ. ಸಿದ್ಧಪ್ಪಾರಾಧ್ಯರ ‘ಶೂನ್ಯಪೀಠದ ಪ್ರಭಾವ’ ಕೃತಿಯ ವಿಶ್ಲೇಷಣೆ. ಓ.ಎನ್. ಲಿಂಗಣ್ಣಯ್ಯ ಅವರು ‘ಶೂನ್ಯಸಿಂಹಾಸನ’ ಎಂಬ ಕೃತಿಯನ್ನು ರಚಿಸಿ, ಅದೊಂದು ಭೌತಿಕ ಸಿಂಹಾಸನವಲ್ಲ, ವ್ಯಕ್ತಿತ್ವದಿಂದ ಯಾರು ಬೇಕಾದರೂ ಶೂನ್ಯಸಿಂಹಾಸನಾಧೀಶ್ವರ ಆಗಬಹುದು ಎಂದು ಹೇಳಿದ್ದರು. ಅದಕ್ಕೆ ತದ್ವಿರುದ್ಧವಾಗಿ ಸಿದ್ಧಪ್ಪರಾಧ್ಯರು ‘ಶೂನ್ಯಪೀಠದ ಪ್ರಭಾವ’ ಎಂಬ ಕೃತಿ ರಚಿಸಿ, ಶೂನ್ಯಸಿಂಹಾಸನವು ಚಿತ್ರದುರ್ಗ ಮುರುಘಾಮಠಕ್ಕೆ ಮಾತ್ರ ಸೀಮಿತವೆಂದು ಹೇಳುತ್ತ, ಜಾತಿಯಿಂದ ಬಂದ ಜಂಗಮ ಮಾತ್ರ ಶ್ರೇಷ್ಠ, ಜಾತಿಯಿಂದ ಜಂಗಮರಲ್ಲದವರು ಎಂಥ ಮಠಾಧೀಶರಾದರೂ ಅವರಿಗೆ ಗೌರವ ಕೊಡಬಾರದು. ಸಿದ್ಧಗಂಗಾ, ಸುತ್ತೂರು, ಸಿರಿಗೆರೆ ಸ್ವಾಮಿಗಳು ನಿಜವಾದ ಜಂಗಮರೇ ಅಲ್ಲ, ಇವರ ದರ್ಶನದಿಂದ ಯಾರಿಗೂ ಯಾವ ಬಗೆಯ ಸತ್ಪರಿಣಾಮವೂ ಆಗುವುದಿಲ್ಲವೆಂದು ಪ್ರತಿಪಾದಿಸಿದ್ದಾರೆ. ಈ ವಿಚಾರವನ್ನು ಡಾ. ಬಸವ ಮರುಳಸಿದ್ಧ ಶ್ರೀಗಳು ತೀವ್ರವಾಗಿ ಖಂಡಿಸಿ, ಸಿದ್ಧಪ್ಪಾರಾಧ್ಯರ ಅಜ್ಞಾನವನ್ನು, ಆ ಕೃತಿಯನ್ನು ಮರುಮುದ್ರಿಸಿದ ಚಿತ್ರದುರ್ಗ ಮುರುಘಾಮಠದ ಈಗಿನ ಡಾ. ಶಿವಮೂರ್ತಿ ಮುರುಘಾ ಶರಣರ ಸ್ವಜಾತಿ ಪ್ರೇಮವನ್ನು ಆಕ್ಷೇಪಿಸಿದ್ದಾರೆ. ಈ ಕೃತಿಯ ಪ್ರಕಟಣೆ ಚಿತ್ರದುರ್ಗ ಬೃಹನ್ಮಠಕ್ಕೆ ಮಾಡಿದ ಮುಜುಗರವೆಂದೂ, ಇದೊಂದು ಕಳಪೆಮಟ್ಟದ ಕೃತಿಯೆಂದು ಸಾರಿದ್ದಾರೆ. ಜಾತಿಜಂಗಮತ್ವದ ಪರಮಾವಧಿ ಇಂದಿಗೂ ಮುನ್ನಲೆಯಲ್ಲಿರುವುದಕ್ಕೆ ೨೦೦೪ರಲ್ಲಿ ಇಳಕಲ್ಲ ಮಠದ ಉತ್ತರಾಧಿಕಾರಿ ನೇಮಕದಲ್ಲಿ ನಡೆದ ಗಲಾಟೆಯನ್ನು ಶ್ರೀಗಳು ಪ್ರಸ್ತಾಪಿಸಿದ್ದಾರೆ. ಯಾವ ಶರಣರು ಜಂಗಮತ್ವದಿಂದ ಸಮಾಜವನ್ನು ಕ್ರಿಯಾಶೀಲಗೊಳಿಸಿದ್ದರೋ, ಅವರ ವಾರಸುದಾರರೆನಿಸಿಕೊಂಡವರೇ ಜಂಗಮತ್ವದಿಂದ ಸ್ಥಾವರಕ್ಕೆ ಹೊರಟಿರುವ ವಿಪರ್ಯಾಸವನ್ನು ಶ್ರೀಗಳು ವಿಷಾದದಿಂದಲೇ ವಿವರಿಸಿದ್ದಾರೆ.
ಕೊನೆಯ ಅಧ್ಯಾಯದಲ್ಲಿ ತಮ್ಮ ಮಹಾಪ್ರಬಂಧದ ಫಲಿತಗಳನ್ನು ನೀಡಿದ್ದಾರೆ. ಗುರು-ಲಿಂಗ-ಜAಗಮ ತತ್ವಗಳು ೧೨ನೇ ಶತಮಾನದಲ್ಲಿ ಉಮಗವಾಗಿದ್ದರೂ ವರ್ತಮಾನದಲ್ಲಿ ಅವುಗಳ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತಿಳಿಸಿದ್ದಾರೆ.
ಶ್ರೀಗಳು ಒಟ್ಟು ೧೪೨ ಆಕರ ಗ್ರಂಥಗಳನ್ನು ಅವಲೋಕಿಸಿದ್ದಾರೆ. ಜಂಗಮತ್ವದ ಇನ್ನಷ್ಟು ವಿವರಣೆಗಾಗಿ ಚೆನ್ನಮಲ್ಲಿಕಾರ್ಜುನರ ‘ಜಂಗಮಾಧಿಕ್ಯ’,(ಹುಬ್ಬಳ್ಳಿ ಮೂರುಸಾವಿರಮಠದ ಪ್ರಕಟಣೆ) ಹಿರೇಮಲ್ಲೂರ ಈಶ್ವರನ್ ಅವರ ‘ಜಂಗಮ’ (ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆ). ಸ್ವಾಮಿ ಲಿಂಗಾನಂದರ ‘ಜಂಗಮ ದರ್ಶನ’(ವಿಶ್ವಕಲ್ಯಾಣ ಮಿಷನ ಪ್ರಕಟಣೆ) ಈ ಮೂರೂ ಕೃತಿಗಳನ್ನು ಅವಲೋಕಿಸಬೇಕಾಗಿತ್ತು. ೧೯೦೮ರ ಮುಂಚೆ ಲಿಂಗಾಯತ ವಿರಕ್ತಮಠಗಳಿಗೆ ಭಕ್ತವರ್ಗದವರೇ ಸ್ವಾಮಿಗಳಾಗುತ್ತಿದ್ದರು ಎಂಬ ದೊಡ್ಡ ಪಟ್ಟಿಯನ್ನು ಸ್ವಾಮಿ ಲಿಂಗಾನಂದರು ತಮ್ಮ ಕೃತಿಯಲ್ಲಿ ನೀಡಿದ್ದಾರೆ, ಅಷ್ಟೇ ಏಕೆ ಜಾತಿಜಂಗಮತ್ವವನ್ನು ಪರಿಪೋಷಿಸುತ್ತಿರುವ ಮುರುಘಾಮಠದ ಪರಂಪರೆಯ ಅಥಣಿ ಗಚ್ಚಿನಮಠಕ್ಕೆ ಸ್ವತಃ ಮುರುಘೇಂದ್ರ ಶಿವಯೋಗಿಗಳೇ ಭಕ್ತವರ್ಗದ ‘ಸಿದ್ಧಲಿಂಗ’ರನ್ನು ಸ್ವಾಮಿಗಳನ್ನಾಗಿ ಮಾಡಿದ್ದು ಕಣ್ತೆರಿಸುವ ಘಟನೆಯಾಗಿದೆ. ಕೃತಿಯ ಮರುಮುದ್ರಣದಲ್ಲಿ ಇವಿಷ್ಟು ಅಂಶಗಳು ಸೇರ್ಪಡೆಯಾದರೆ ಔಚಿತ್ಯವೆನಿಸುತ್ತದೆ ಎಂಬುದು ನನ್ನ ಭಾವನೆ.
ಒಟ್ಟಾರೆ, ಶ್ರೀಗಳವರ ಸ್ವಾಧ್ಯಾಯ ಚಿಂತನೆಗಳಿಂದ ಇಲ್ಲಿಯ ವಿಚಾರಗಳಿಗೆ ಹೊಸ ಹೊಳವು ಪ್ರಾಪ್ತವಾಗಿದೆ. ಇತ್ತೀಚೆಗೆ ಬಂದ ಅತ್ಯುತ್ತಮ ಪಿಎಚ್.ಡಿ. ಮಹಾಪ್ರಬಂಧಗಳಲ್ಲಿ ಇದು ಒಂದಾಗಿದೆ. ಅಪಾರ ತಾಳ್ಮೆ-ಸಹನೆಯಿಂದ ವಿಷಯ ವಿವೇಚನೆ ಮಾಡಿದ ಶ್ರೀಗಳ ಅನುಪಮ ಪಾಂಡಿತ್ಯಕ್ಕೆ ನನ್ನ ನಮನಗಳು.
ಪ್ರಕಾಶ ಗಿರಿಮಲ್ಲನವರ
ಬೆಳಗಾವಿ